ನಟ ಶಿವ ರಾಜ್‌ಕುಮಾರ್‌ರನ್ನು ಚಿತ್ರರಂಗಕ್ಕೆ ಪರಿಚಯಿಸಿದ ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ!

Published : Oct 04, 2026, 08:16 AM IST
Singeetham Srinivasa Rao

ಸಾರಾಂಶ

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ವಯೋಸಹಜ ಕಾಯಿಲೆಯಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಡಾ. ರಾಜ್‌ಕುಮಾರ್ ಅವರ 200ನೇ ಚಿತ್ರ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದರು. ಶಿವರಾಜ್‌ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಬೆಂಗಳೂರು/ಚೆನ್ನೈ (ಅ.04): ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ, ಚಿತ್ರಕಥೆಗಾರ ಸಿಂಗೀತಂ ಶ್ರೀನಿವಾಸ ರಾವ್ (94) ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ನಿಧನರಾಗಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅದ್ಭುತ ಸಿನಿಮಾಗಳನ್ನು ನೀಡಿ ಪ್ರೇಕ್ಷಕರ ಮನಗೆದ್ದಿದ್ದರು.

ಕನ್ನಡ ಚಿತ್ರರಂಗ ಮತ್ತು ವರನಟ ಡಾ. ರಾಜ್‌ಕುಮಾರ್ ಕುಟುಂಬದೊಂದಿಗೆ ಸಿಂಗೀತಂ ಅವರದ್ದು ಅವಿನಾಭಾವ ನಂಟು. 1970ರಲ್ಲಿ ರಾಷ್ಟ್ರಪ್ರಶಸ್ತಿ ಪಡೆದ 'ಸಂಸ್ಕಾರ' ಚಿತ್ರಕ್ಕೆ ಕಾರ್ಯಕಾರಿ ನಿರ್ದೇಶಕರಾಗಿದ್ದ ಅವರು, 1982ರಲ್ಲಿ ಡಾ. ರಾಜ್‌ ಅಭಿನಯದ 'ಹಾಲು ಜೇನು' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ 'ಚಲಿಸುವ ಮೋಡಗಳು', 'ಎರಡು ನಕ್ಷತ್ರಗಳು', 'ಶ್ರಾವಣ ಬಂತು', 'ಜ್ವಾಲಾಮುಖಿ', 'ಭಾಗ್ಯದ ಲಕ್ಷ್ಮೀ ಬಾರಮ್ಮ' ಹಾಗೂ ಡಾ. ರಾಜ್‌ಕುಮಾರ್ ಅವರ ಐತಿಹಾಸಿಕ 200ನೇ ಚಿತ್ರ 'ದೇವತಾ ಮನುಷ್ಯ' ಸೇರಿದಂತೆ ಸತತ ಏಳು ಸೂಪರ್ ಹಿಟ್ ಚಿತ್ರಗಳನ್ನು ರಾಜ್‌ಕುಮಾರ್ ಜೊತೆ ನೀಡಿದ ಅಪರೂಪದ ಹೆಗ್ಗಳಿಕೆ ಇವರದ್ದು.

ಶಿವರಾಜ್‌ಕುಮಾರ್ ಅವರನ್ಮು ಚಿತ್ರರಂಗಕ್ಕೆ ಪರಿಚಯ ಮಾಡಿದ ನಿರ್ದೇಶಕ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ 'ಆನಂದ್' ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ 'ಚಿರಂಜೀವಿ ಸುಧಾಕರ್' ಚಿತ್ರಗಳಿಗೂ ಇವರೇ ಸಾರಥ್ಯ ವಹಿಸಿದ್ದರು. ಕೇವಲ ನಿರ್ದೇಶನವಷ್ಟೇ ಅಲ್ಲದೆ, 'ಭಾಗ್ಯದ ಲಕ್ಷ್ಮೀ ಬಾರಮ್ಮ' ಮತ್ತು 'ಸಂಯುಕ್ತ' ಚಿತ್ರಗಳಿಗೆ ಸಂಗೀತ ನೀಡಿದ್ದ ಸಿಂಗೀತಂ, 'ಶ್ರುತಿ ಸೇರಿದಾಗ', 'ಬೆಳ್ಳಿಯಪ್ಪ ಬಂಗಾರಪ್ಪ' ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಬಹುತೇಕ ಚಿತ್ರಗಳಿಗೆ ಆಧಾರಸ್ತಂಭವಾಗಿದ್ದ ಇವರು, ಮೂರು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಅಗಲಿಕೆಗೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಂತಾರ ಜಟಾಪಟಿ: ಪೋಸ್ಟರ್‌ನಿಂದ ನಿರ್ಮಾಣ ಸಂಸ್ಥೆಯ ಲೋಗೋ ಹಾರಿಸಿದ ರಿಷಬ್, ನಾಯಕನ ಫೋಟೋನೇ ಹಾಕದೆ ಟಾಂಗ್ ಕೊಟ್ಟ ಹೊಂಬಾಳೆ
Amruthadhaare Serial: ಭೂಮಿಕಾಗೆ ಪ್ರಜ್ಞೆ ಬಂದಾಯ್ತು! ಶಕುಂತಲಾ ನಿಂತ ನೆಲವೇ ಕುಸಿದೋಯ್ತು