
ಬೆಂಗಳೂರು (ಅ.3): ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಐತಿಹಾಸಿಕ ಸಿನಿಮಾ 'ಕಾಂತಾರ' (Kantara) ಹಾಗೂ ಅದರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ (Hombale Films) ನಡುವೆ ಎಲ್ಲವೂ ಸರಿಯಿಲ್ಲವೇ? ಹೀಗೊಂದು ಪ್ರಶ್ನೆ ಈಗ ಗಾಂಧಿನಗರದಿಂದ ಹಿಡಿದು ಸೋಷಿಯಲ್ ಮೀಡಿಯಾದಾದ್ಯಂತ ತೀವ್ರವಾಗಿ ಸದ್ದು ಮಾಡುತ್ತಿದೆ. ನಟ, ನಿರ್ದೇಶಕ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ (Rishab Shetty) ಹಾಗೂ ಭಾರತದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ನಡುವಿನ ಬಿರುಕು ಹಾಗೂ ವೈಮನಸ್ಯ ಈಗ ಬಹಿರಂಗವಾಗಿಯೇ ಪ್ರದರ್ಶನಗೊಳ್ಳಲು ಆರಂಭಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರ ನಡುವಿನ ಶೀತಲ ಸಮರವನ್ನು ನೆಟ್ಟಿಗರು 'COLDEST KANNADA EGO WAR' ಎಂದು ಬಣ್ಣಿಸುತ್ತಿದ್ದು, ಪೋಸ್ಟ್‌ಗಳ ಮೂಲಕವೇ ಇಬ್ಬರೂ ಪರಸ್ಪರ ಟಾಂಗ್ ಕೊಟ್ಟುಕೊಳ್ಳುತ್ತಿರುವುದು ಈಗ ಬಯಲಾಗಿದೆ.
ವಿವಾದದ ಕಿಡಿ ಹೊತ್ತಿಕೊಂಡದ್ದು ಕೆಲವು ದಿನಗಳ ಹಿಂದೆ ನಟ ರಿಷಬ್ ಶೆಟ್ಟಿ ಮಾಡಿದ ಪೋಸ್ಟ್‌ನಿಂದ. 'ಕಾಂತಾರ' ಸಿನಿಮಾ ತೆರೆಕಂಡು 4 ವರ್ಷ ಪೂರೈಸಿದ ಸಂಭ್ರಮದ ಕುರಿತು ರಿಷಬ್ ಶೆಟ್ಟಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು.
ಅದರಲ್ಲಿ, "ಕಾಂತಾರ ಬಿಗ್ ಸ್ಕ್ರೀನ್ ಮೇಲೆ ಬಂದು 4 ವರ್ಷಗಳಾದವು, ಉಳಿದದ್ದು ಇತಿಹಾಸ... ಇದು ನಾನು ಬರಿ ಮಾಡಿದ ಸಿನಿಮಾವಲ್ಲ, ನಾನು ಜೀವಿಸಿದ ಪ್ರಪಂಚ" ಎಂದು ಬರೆದುಕೊಂಡಿದ್ದರು. ಆದರೆ, ಈ ವಿಶೇಷ ಪೋಸ್ಟ್‌ನಲ್ಲಿ ರಿಷಬ್ ಶೆಟ್ಟಿ ಅವರು ತಮಗೆ ಜಾಗತಿಕ ವೇದಿಕೆ ಕಲ್ಪಿಸಿಕೊಟ್ಟ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ನ ಲೋಗೋವನ್ನು (Hombale Logo) ಪೋಸ್ಟರ್‌ನಿಂದ ಸಂಪೂರ್ಣವಾಗಿ ತೆಗೆದುಹಾಕಿದ್ದರು. ಅಷ್ಟೇ ಅಲ್ಲದೆ, ತಮ್ಮ ಬರವಣಿಗೆಯಲ್ಲಿ ಎಲ್ಲೂ ಹೊಂಬಾಳೆ ಫಿಲಂಸ್ ಸಂಸ್ಥೆಯನ್ನು ಟ್ಯಾಗ್ ಸಹ ಮಾಡದಿರುವುದು ಎಲ್ಲರ ಹುಬ್ಬೇರಿಸಿತ್ತು.
ರಿಷಬ್ ಶೆಟ್ಟಿ ಅವರ ಈ ನಡೆಗೆ ಪ್ರತಿಯಾಗಿ ಹೊಂಬಾಳೆ ಫಿಲಂಸ್ ಕೂಡ ಸುಮ್ಮನೆ ಕುಳಿತುಕೊಳ್ಳಲಿಲ್ಲ. ರಿಷಬ್ ಪೋಸ್ಟ್ ಬೆನ್ನಲ್ಲೇ 'ಕಾಂತಾರ ಚಾಪ್ಟರ್ 1' (Kantara Chapter 1) ಸೃಷ್ಟಿಸಿದ ಸಂಚಲನದ 1 ವರ್ಷದ ಸಂಭ್ರಮದ ಪೋಸ್ಟ್ ಒಂದನ್ನು ಹೊಂಬಾಳೆ ಫಿಲಂಸ್ ಹಂಚಿಕೊಂಡಿದೆ.
ಆದರೆ, ಈ ಪೋಸ್ಟರ್‌ನಲ್ಲಿ ಸಿನಿಮಾದ ನಾಯಕ ಹಾಗೂ ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಅವರ ಯಾವುದೇ ಚಿತ್ರವಾಗಲಿ ಅಥವಾ ಅವರ ಹೆಸರನ್ನಾಗಲಿ ಹೊಂಬಾಳೆ ಬಳಸಿರಲಿಲ್ಲ. ಬದಲಾಗಿ, ಅತ್ಯಂತ ಸಾರ್ಕಾಸ್ಟಿಕ್ (Sarcastic) ಶೈಲಿಯಲ್ಲಿ '1 YEAR OF Divine Blockbuster #KantaraChapter1' ಎಂದು ಬರೆದು, ಆರ್ಭಟಿಸುವ ಬೃಹತ್ 'ಹುಲಿ'ಯ (Tiger) ಫೋಟೋವನ್ನು ಮಾತ್ರ ಹಾಕಿ ಪೋಸ್ಟ್ ಮಾಡಿದೆ. ಜೊತೆಗೆ ರಿಷಬ್ ಶೆಟ್ಟಿ ಅವರನ್ನು ಯಾವುದೇ ರೀತಿಯಲ್ಲಿ ಟ್ಯಾಗ್ ಮಾಡದೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಒಂದೆಡೆ ಕಾಂತಾರ ಸಿನಿಮಾದ ಲೋಗೋ ತೆಗೆದು ನಿರ್ಮಾಣ ಸಂಸ್ಥೆಯನ್ನು ನಿರ್ಲಕ್ಷಿಸಿದ ರಿಷಬ್ ಶೆಟ್ಟಿ, ಇನ್ನೊಂದೆಡೆ ಸಿನಿಮಾದ ರೂವಾರಿಯ ಚಿತ್ರವನ್ನೇ ಪೋಸ್ಟರ್‌ನಿಂದ ಹೊರಗಿಟ್ಟು ಕೇವಲ ಹುಲಿ ಚಿತ್ರ ಹಾಕಿ ತಿರುಗೇಟು ನೀಡಿದ ಹೊಂಬಾಳೆ ಫಿಲಂಸ್! ಈ ಎರಡೂ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಚಿತ್ರರಂಗದ ವಿಶ್ಲೇಷಕರು ಹಾಗೂ ಅಭಿಮಾನಿಗಳು, ಇಬ್ಬರ ನಡುವೆ ಇಗೋ (Ego) ಸಮರ ತೀವ್ರಗೊಂಡಿರುವುದು ಸ್ಪಷ್ಟ ಎಂದು ಅಭಿಪ್ರಾಯಪಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.