
ಚಿತ್ರರಂಗದಲ್ಲಿ ನಾಯಕಿಯರಾಗಿ ಮಿಂಚುವ ಕಲಾವಿದರು ಕೆಲವೊಮ್ಮೆ ತೆರೆಯ ಹಿಂದೆಯೂ ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ. ಇದೀಗ 'ಕಣ್ಸನ್ನೆ ಬೆಡಗಿ' ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕೂಡ ಇಂತಹದ್ದೇ ಒಂದು ವಿಶೇಷ ಕೆಲಸದ ಮೂಲಕ ಗಮನ ಸೆಳೆದಿದ್ದಾರೆ. ದುಲ್ಕರ್ ಸಲ್ಮಾನ್ ಅಭಿನಯದ ‘ಆಕಾಶಂಲೋ ಓಕ ತಾರ’ (AOT) ಚಿತ್ರದ ಮಲಯಾಳಂ ವರ್ಷನ್‌ಗೆ ನಾಯಕಿಯ ಪಾತ್ರಕ್ಕೆ ಧ್ವನಿ ನೀಡಿರುವ ಪ್ರಿಯಾ ಅವರನ್ನು ಸ್ವತಃ ದುಲ್ಕರ್ ಸಲ್ಮಾನ್ ಮೆಚ್ಚಿಕೊಂಡಿದ್ದಾರೆ.
ನವೆಂಬರ್ 20, 2026ರಂದು ‘ಆಕಾಶಂಲೋ ಓಕ ತಾರ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬೆನ್ನಲ್ಲೇ, ದುಲ್ಕರ್ ಸಲ್ಮಾನ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಕೆಲಸವನ್ನು ಪ್ರಶಂಸಿಸಿದ್ದಾರೆ. ಪವನ್ ಸದಿನೇನಿ ನಿರ್ದೇಶನದ ಈ ಚಿತ್ರದಲ್ಲಿ ದುಲ್ಕರ್ ಜೊತೆಗೆ ಹೊಸ ಪ್ರತಿಭೆ ಸಾತ್ವಿಕಾ ವೀರವಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಕಲ್ಪನಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಲಯಾಳಂ ವರ್ಷನ್‌ನಲ್ಲಿ ಆ ಪಾತ್ರಕ್ಕೆ ಪ್ರಿಯಾ ಧ್ವನಿ ನೀಡಿದ್ದಾರೆ.
ಸಂದರ್ಶನದ ಧ್ವನಿ ಮೆಚ್ಚಿ ಪ್ರಿಯಾಗೆ ಒಲಿದ ಅವಕಾಶ!
ಈ ಸಿನಿಮಾದ ಮಲಯಾಳಂ ಡಬ್ಬಿಂಗ್ ತಂಡ ಹಾಗೂ ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ವೇಫೇರರ್ ಫಿಲ್ಮ್ಸ್, ಪ್ರಿಯಾ ಅವರಿಗೆ ಈ ಅವಕಾಶ ನೀಡಲು ಒಂದು ವಿಶೇಷ ಕಾರಣವಿದೆ. ಸಂದರ್ಶನಗಳಲ್ಲಿ ಪ್ರಿಯಾ ಅವರ ಧ್ವನಿಯಲ್ಲಿದ್ದ ಸಹಜವಾದ ಆತ್ಮೀಯತೆ, ಮುಗ್ಧತೆ ಮತ್ತು ಮೃದು ಸ್ವಭಾವವನ್ನು ಗಮನಿಸಿದ ತಂಡಕ್ಕೆ ಅದು ಕಲ್ಪನಾ ಪಾತ್ರಕ್ಕೆ ಸೂಕ್ತವೆನಿಸಿತ್ತು. ಹೀಗಾಗಿ ಮಲಯಾಳಂ ವರ್ಷನ್‌ನಲ್ಲಿ ನಾಯಕಿಯ ಪಾತ್ರಕ್ಕೆ ಧ್ವನಿ ನೀಡುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು.
ವಿಶೇಷವೆಂದರೆ, ಸಿನಿಮಾ ಬಿಡುಗಡೆಯಾಗುವವರೆಗೂ ಪ್ರಿಯಾ ತಮ್ಮ ಈ ಕೆಲಸದ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿರಲಿಲ್ಲ. ಅವರ ಕುಟುಂಬದವರು ಮತ್ತು ಆಪ್ತ ಸ್ನೇಹಿತರಿಗಷ್ಟೇ ಈ ವಿಚಾರ ತಿಳಿದಿತ್ತು. ಆದರೆ ಸಿನಿಮಾ ಚಿತ್ರಮಂದಿರಗಳಿಗೆ ಬಂದ ಬಳಿಕ ಪ್ರೇಕ್ಷಕರು ಅವರ ವಿಭಿನ್ನ ಧ್ವನಿಯನ್ನು ಗುರುತಿಸಲು ಆರಂಭಿಸಿದ್ದಾರೆ.
ಸಾಮಾನ್ಯವಾಗಿ ನಾಯಕಿಯರ ಪಾತ್ರಗಳಿಗೆ ಅವರೇ ಡಬ್ಬಿಂಗ್ ಮಾಡುವುದು ಅಥವಾ ಪ್ರತ್ಯೇಕ ಡಬ್ಬಿಂಗ್ ಕಲಾವಿದರ ಧ್ವನಿ ಬಳಸುವುದು ಚಿತ್ರರಂಗದಲ್ಲಿ ಸಾಮಾನ್ಯ. ಆದರೆ ಮತ್ತೊಬ್ಬ ಕಲಾವಿದೆಯ ಪಾತ್ರಕ್ಕೆ ಜನಪ್ರಿಯ ನಟಿಯೊಬ್ಬರು ಧ್ವನಿ ನೀಡಿರುವುದು ಈ ಚಿತ್ರದ ವಿಶೇಷತೆಗಳಲ್ಲಿ ಒಂದಾಗಿದೆ. ಪ್ರಿಯಾ ಅವರ ಈ ಪ್ರಯತ್ನ ಪಾತ್ರಕ್ಕೆ ಮತ್ತಷ್ಟು ಸಹಜತೆ ಮತ್ತು ಭಾವನಾತ್ಮಕ ಆಳವನ್ನು ನೀಡಿದೆ.
ಇನ್ನು ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ದುಲ್ಕರ್ ಸಲ್ಮಾನ್ ಅವರು ಇನ್‌ಸ್ಟಾಗ್ರಾಂ ಮೂಲಕ ಪ್ರಿಯಾ ಅವರನ್ನು ಬಹಿರಂಗವಾಗಿ ಅಭಿನಂದಿಸಿರುವುದು ಅವರ ಕೆಲಸಕ್ಕೆ ಮತ್ತಷ್ಟು ಮನ್ನಣೆ ತಂದಿದೆ. ನಾಯಕಿಯಾಗಿ ಮಾತ್ರವಲ್ಲದೆ, ತೆರೆಯ ಹಿಂದಿನ ಕಲಾವಿದೆಯಾಗಿಯೂ ತಮ್ಮ ಪ್ರತಿಭೆಯನ್ನು ತೋರಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಈ ಹೊಸ ಪ್ರಯತ್ನ ಇದೀಗ ಗಮನ ಸೆಳೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.