
ಮಲಯಾಳಂ ಚಿತ್ರರಂಗದ ವಿವಾದಾತ್ಮಕ ಫಿಲ್ಮ್ ಕ್ರಿಟಿಕ್ ಸಂತೋಷ್ ವಾರ್ಕೆ ಬಗ್ಗೆ ಬಹುತೇಕರಿಗೆ ಪರಿಚಯವಿದೆ. ಸಿನಿಮಾಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ವ್ಯಂಗ್ಯಭರಿತ ಹಾಗೂ ವಿವಾದಾತ್ಮಕ ವಿಮರ್ಶೆಗಳನ್ನು ನೀಡುತ್ತಾ ಮಲಯಾಳಂನಲ್ಲಿ ಜನಪ್ರಿಯರಾಗಿರುವ ಅವರು, ಮೋಹನ್‌ಲಾಲ್ ನಟನೆಯ ‘ಆರಟ್ಟು’ ಸಿನಿಮಾದ ವಿಮರ್ಶೆ ಮೂಲಕ ಒಂದೇ ಕ್ಷಣದಲ್ಲಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದರು.
ಅಲ್ಲಿಂದ ಬಳಿಕ ಅವರನ್ನು ಅಭಿಮಾನಿಗಳು ‘ಆರಟ್ಟು ಅಣ್ಣನ್’ ಎಂದೇ ಕರೆಯಲು ಆರಂಭಿಸಿದರು. ಯೂಟ್ಯೂಬ್‌ನಲ್ಲಿನ ಅವರ ವಿಡಿಯೋಗಳು ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹರಿದಾಡುವ ಮೀಮ್ಸ್‌ಗಳು ಕೂಡ ಸಖತ್ ಜನಪ್ರಿಯ. ಇದೀಗ ಇದೇ ಸಂತೋಷ್ ವಾರ್ಕೆ ಮಲಯಾಳಂ ನಟಿ ಮಮಿತಾ ಬೈಜು ಬಗ್ಗೆ ಮಾಡಿರುವ ಕಾಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.
ನಟಿ ಮಮಿತಾ ಬೈಜುವನ್ನೇ ಮದುವೆಯಾಗಬೇಕು
ಮಮಿತಾ ಬೈಜು ಮೇಲಿನ ತಮ್ಮ ಪ್ರೀತಿಯನ್ನು ಸಂತೋಷ್ ವಾರ್ಕೆ ಫೇಸ್‌ಬುಕ್ ಪೋಸ್ಟ್ ಮೂಲಕ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ನಟಿಯನ್ನು ಮದುವೆಯಾಗುವ ಆಸೆ ಇದೆ ಎಂದು ಹೇಳಿಕೊಂಡಿರುವ ಅವರು, ತಮ್ಮ ಪೋಸ್ಟ್‌ನಲ್ಲಿ ತಮ್ಮದೇ ಶೈಲಿಯಲ್ಲಿ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ನನಗೆ ಮಮಿತಾ ಬೈಜು ಎಂದರೆ ತುಂಬಾ ಇಷ್ಟ. ನಾನು ಆಕೆಯನ್ನು ಮದುವೆಯಾಗಲು ಬಯಸುತ್ತೇನೆ. ಆಕೆ ನಟಿಸಿರುವ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಸಿನಿಮಾವನ್ನು ಈಗ ಮೂರನೇ ಬಾರಿ ನೋಡುತ್ತಿದ್ದೇನೆ.
ನಮ್ಮಿಬ್ಬರ ನಡುವೆ ವಯಸ್ಸಿನ ಅಂತರ ಇರಬಹುದು. ಆದರೆ ನಾನು ಆಕೆಯ ಮೋಡಿಗೆ ಒಳಗಾಗಿದ್ದೇನೆ. ಆಕೆಯನ್ನು ಮದುವೆಯಾಗಬೇಕು ಎಂಬ ಆಸೆ ಇದೆ. ಇನ್ಮುಂದೆ ನನ್ನ ಜೀವನದಲ್ಲಿ ಮಮಿತಾ ಹೊರತುಪಡಿಸಿ ಬೇರೆ ಯಾವುದೇ ಮಹಿಳೆಗೆ ಜಾಗವಿಲ್ಲ. ನಾನು ಆಕೆಯನ್ನು ಅಷ್ಟು ಇಷ್ಟಪಡುತ್ತೇನೆ ಎಂದು ಸಂತೋಷ್ ವಾರ್ಕೆ ಪೋಸ್ಟ್ ಮಾಡಿದ್ದಾರೆ. ಸದ್ಯ ಸಂತೋಷ್ ವಾರ್ಕೆ ಅವರ ಈ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
ಈ ಹಿಂದೆ ನಿತ್ಯಾ ಮೆನನ್ ಬಗ್ಗೆಯೂ ಇದೇ ರೀತಿ ಹೇಳಿದ್ದರು!
ಇದು ಸಂತೋಷ್ ವಾರ್ಕೆ ಇದೇ ಮೊದಲ ಬಾರಿಗೆ ನಟಿಯೊಬ್ಬರ ಬಗ್ಗೆ ಈ ರೀತಿಯ ಹೇಳಿಕೆ ನೀಡುತ್ತಿರುವುದೇನಲ್ಲ. ಈ ಹಿಂದೆ ನಟಿ ನಿತ್ಯಾ ಮೆನನ್ ಅವರನ್ನೂ ಮದುವೆಯಾಗಬೇಕು ಎಂದು ಅವರು ಹೇಳಿಕೊಂಡಿದ್ದರು. ಈ ವಿಚಾರದ ಬಗ್ಗೆ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ನಿತ್ಯಾ ಮೆನನ್ ಮಾತನಾಡಿ, ಸಂತೋಷ್ ವಾರ್ಕೆ ಹಲವು ವರ್ಷಗಳಿಂದ ತಮ್ಮನ್ನು ಮದುವೆಯಾಗುವುದಾಗಿ ಹೇಳುತ್ತಾ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದರು.
ಸುಮಾರು ಆರು ವರ್ಷಗಳಿಗೂ ಹೆಚ್ಚು ಕಾಲ ತಮ್ಮನ್ನು ಹಿಂಬಾಲಿಸಿದ್ದರು ಹಾಗೂ ಸುಮಾರು 30 ವಿವಿಧ ಫೋನ್ ನಂಬರ್‌ಗಳಿಂದ ಕರೆ ಮಾಡಿ ಕಿರಿಕಿರಿ ಮಾಡುತ್ತಿದ್ದರು ಎಂದು ನಿತ್ಯಾ ಮೆನನ್ ಹೇಳಿಕೊಂಡಿದ್ದರು. ಆದರೆ ಈ ಆರೋಪಗಳನ್ನು ಸಂತೋಷ್ ವಾರ್ಕೆ ಬಳಿಕ ತಳ್ಳಿಹಾಕಿದ್ದರು.
ಇನ್ನು ಮಮಿತಾ ಬೈಜು ಸದ್ಯ ಮಲಯಾಳಂ ಚಿತ್ರರಂಗದಲ್ಲಿ ಸಖತ್ ಫಾರ್ಮ್‌ನಲ್ಲಿದ್ದಾರೆ. ‘ಪ್ರೇಮಲು’ ಸಿನಿಮಾದ ಮೂಲಕ ಭಾರೀ ಜನಪ್ರಿಯತೆ ಪಡೆದ ನಟಿ, ಬಳಿಕ ‘ಡ್ಯೂಡ್’, ‘ಜನ ನಾಯಗನ್’, ‘ವಿಶ್ವನಾಥ್ ಅಂಡ್ ಸನ್ಸ್’, ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಿಟ್ ಸಿನಿಮಾಗಳ ಮೂಲಕ ಬ್ಯಾಕ್ ಟು ಬ್ಯಾಕ್ ಸದ್ದು ಮಾಡುತ್ತಿರುವ ಮಮಿತಾ ಬೈಜು, ಸದ್ಯದ ಜನಪ್ರಿಯ ಯುವ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಸಂತೋಷ್ ವಾರ್ಕೆ ಅವರ ಹೇಳಿಕೆ ವೈರಲ್ ಆಗಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.