
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ಖುಷ್ಬೂ, ತಮ್ಮ ಸಿನಿ ಪಯಣದ ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ 1980ರ ದಶಕದ ಕಲಾವಿದರ ಸ್ನೇಹ, ಸ್ಟಾರ್ ನಟರೊಂದಿಗಿನ ಒಡನಾಟ ಹಾಗೂ ಕೆಲವು ಪ್ರಮುಖ ಸಿನಿಮಾಗಳನ್ನು ಕೈಬಿಟ್ಟಿದ್ದರ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ತೆಲುಗಿನ ಹಲವು ಸ್ಟಾರ್ ನಟರ ಜೊತೆ ನಟಿಸಲು ಸಾಧ್ಯವಾಗದಿದ್ದುದಕ್ಕೆ ಕಾರಣವೇನು ಎಂಬುದನ್ನು ವಿವರಿಸಿದ್ದಾರೆ. ಅವರ ಈ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.
ಖುಷ್ಬೂಗೆ ಎಲ್ಲಿಲ್ಲದ ಸಂಭ್ರಮ!
1980ರ ದಶಕದಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಕಲಾವಿದರ ರೀ-ಯೂನಿಯನ್ ಕಾರ್ಯಕ್ರಮ ಎಂದರೆ ಖುಷ್ಬೂಗೆ ವಿಶೇಷ ಇಷ್ಟವಂತೆ. ಈ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿರುತ್ತಾರೆ. ಕಲಾವಿದರು ಯಾವ ಬಣ್ಣದ ಬಟ್ಟೆ ಧರಿಸುತ್ತಾರೆ, ಯಾವ ಹಾಡಿಗೆ ನೃತ್ಯ ಮಾಡುತ್ತಾರೆ, ಒಬ್ಬರನ್ನೊಬ್ಬರು ಹೇಗೆ ತಮಾಷೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಅಭಿಮಾನಿಗಳು ಕುತೂಹಲದಿಂದ ಗಮನಿಸುತ್ತಾರೆ ಎಂದು ಅವರು ಹೇಳಿದ್ದಾರೆ.
80ರ ದಶಕದ ಕಲಾವಿದರ ರೀ-ಯೂನಿಯನ್ ನಮಗೆಲ್ಲ ಬಹಳ ವಿಶೇಷ. ಆ ದಿನ ನಾವೆಲ್ಲರೂ ಮತ್ತೆ ಚಿಕ್ಕ ಮಕ್ಕಳಾಗಿಬಿಡುತ್ತೇವೆ. ಅಲ್ಲಿ ಯಾರೂ ದೊಡ್ಡ ಸ್ಟಾರ್, ಮೆಗಾ ಸ್ಟಾರ್ ಅಥವಾ ಸೂಪರ್ ಸ್ಟಾರ್ ಆಗಿರುವುದಿಲ್ಲ. ನಾವೆಲ್ಲರೂ ಶಾಲಾ ಸ್ನೇಹಿತರಂತೆ ಒಂದೆಡೆ ಸೇರಿ ಹರಟೆ ಹೊಡೆಯುತ್ತೇವೆ, ತಮಾಷೆ ಮಾಡುತ್ತೇವೆ, ಡ್ಯಾನ್ಸ್ ಮಾಡುತ್ತೇವೆ. ಆ ಅನುಭವವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಖುಷ್ಬೂ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, 'ಕ್ಲಾಸ್ ಆಫ್ 80s' ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ ಕೂಡ ಇದೆ.
ಅದರಲ್ಲಿ ಸುಮಾರು 36 ಮಂದಿ ಸದಸ್ಯರಿದ್ದು, ಪ್ರತಿದಿನ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತೇವೆ. ನಮ್ಮ ಜೀವನದ ಪ್ರತಿಯೊಂದು ವಿಚಾರವನ್ನೂ ಹಂಚಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಈ ರೀ-ಯೂನಿಯನ್ನಲ್ಲಿ ಹಿರಿಯ ನಟಿ ಭಾನುಪ್ರಿಯಾ ಏಕೆ ಭಾಗವಹಿಸುವುದಿಲ್ಲ ಎಂಬ ಪ್ರಶ್ನೆಗೂ ಖುಷ್ಬೂ ಉತ್ತರಿಸಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಅವರು ಒಂಟಿಯಾಗಿರಲು ಹೆಚ್ಚು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ.
80ರ ದಶಕದ ಗ್ರೂಪ್ನಲ್ಲಿ ಯಾರೆಲ್ಲ ಇದ್ದಾರೆ?
ಈ ಸ್ನೇಹಿತರ ಬಳಗದಲ್ಲಿ ಸುಹಾಸಿನಿ, ಪೂರ್ಣಿಮಾ ಭಾಗ್ಯರಾಜ್, ಲಿಸ್ಸಿ, ರಾಜ್ ಕುಮಾರ್ ಸೇತುಪತಿ, ರೆಹಮಾನ್, ಪ್ರಭು, ಸತ್ಯರಾಜ್, ಲಾಲ್, ಚಿರಂಜೀವಿ, ಪೂನಂ ಧಿಲ್ಲೋನ್, ಜಾಕಿ ಶ್ರಾಫ್, ಸಂಜಯ್ ದತ್, ಮೋಹನ್ ಲಾಲ್, ರಜನಿಕಾಂತ್ ಸೇರಿದಂತೆ ಹಲವು ಖ್ಯಾತ ಕಲಾವಿದರಿದ್ದಾರೆ ಎಂದು ಖುಷ್ಬೂ ತಿಳಿಸಿದ್ದಾರೆ. ಆದರೆ ಮಮ್ಮುಟ್ಟಿ ಮತ್ತು ಕಮಲ್ ಹಾಸನ್ ಈ 80ರ ದಶಕದ ಕಲಾವಿದರ ಗ್ರೂಪ್ನ ಭಾಗವಾಗಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
ರಾಧಿಕಾ, ಶರತ್ ಕುಮಾರ್, ಖುಷ್ಬೂ, ಪೂರ್ಣಿಮಾ ಭಾಗ್ಯರಾಜ್ ಹಾಗೂ ಸುಹಾಸಿನಿ ಸೇರಿದಂತೆ ಕೆಲವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಒಟ್ಟಾಗಿಯೇ ಇರುತ್ತಾರಂತೆ. ಮೊದಲೇ ಪ್ಲ್ಯಾನ್ ಮಾಡಿಕೊಂಡು ಕಾರ್ಯಕ್ರಮಗಳಿಗೆ ತೆರಳುತ್ತೇವೆ ಎಂದು ಹೇಳಿದ್ದಾರೆ. ವೆಂಕಟೇಶ್, ನಾಗಾರ್ಜುನ, ನರೇಶ್ ಹಾಗೂ ಜಯಸುಧಾ ಅವರೂ ಈ ಸ್ನೇಹಿತರ ಬಳಗದ ಭಾಗವಾಗಿದ್ದಾರೆ ಎಂದು ಖುಷ್ಬೂ ನೆನಪಿಸಿಕೊಂಡಿದ್ದಾರೆ.
ವೆಂಕಟೇಶ್ ಅವರಿಂದಲೇ ತೆಲುಗು ಚಿತ್ರಕ್ಕೆ ಅವಕಾಶ ಸಿಕ್ಕಿತ್ತು!
ಖುಷ್ಬೂ ತಮ್ಮ ಮೊದಲ ತೆಲುಗು ಸಿನಿಮಾ 'ಕಲಿಯುಗ ಪಾಂಡವರು' (1986) ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟ ವೆಂಕಟೇಶ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ, ಈ ಸಿನಿಮಾಕ್ಕೆ ವೆಂಕಟೇಶ್ ಅವರೇ ತಮ್ಮ ಹೆಸರನ್ನು ಶಿಫಾರಸು ಮಾಡಿದ್ದರಂತೆ. ವೆಂಕಟೇಶ್ ಜೊತೆಗಿನ ಚಿತ್ರೀಕರಣದ ದಿನಗಳ ನೆನಪುಗಳು ಇಂದಿಗೂ ಹಸಿರಾಗಿವೆ ಎಂದು ಖುಷ್ಬೂ ಹೇಳಿದ್ದಾರೆ. ಆದರೆ ಬಾಲಕೃಷ್ಣ ಮತ್ತು ಚಿರಂಜೀವಿಯಂತಹ ತೆಲುಗಿನ ಸ್ಟಾರ್ ನಟರ ಜೊತೆ ಅವರು ಯಾಕೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಗೂ ತಮ್ಮ ವೃತ್ತಿಜೀವನದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
ನಾನು 1986ರಲ್ಲಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟೆ. 1987ರಲ್ಲಿ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಲು ಆರಂಭಿಸಿದೆ. 1988ರ ವೇಳೆಗೆ ತಮಿಳು ಚಿತ್ರರಂಗದಲ್ಲಿ ತುಂಬಾ ಬ್ಯುಸಿಯಾದೆ. ಆಗ ಚಿತ್ರರಂಗದ ಕೇಂದ್ರ ಚೆನ್ನೈನಲ್ಲಿತ್ತು. ನಂತರ ತೆಲುಗು ಚಿತ್ರರಂಗ ಹೈದರಾಬಾದ್ಗೆ ಸ್ಥಳಾಂತರವಾಯಿತು. ಆದರೆ ನಾನು ಚೆನ್ನೈನಲ್ಲೇ ಉಳಿದುಕೊಂಡೆ. ಮತ್ತೆ ಸ್ಥಳಾಂತರವಾಗಲು ನನಗೆ ಇಷ್ಟವಿರಲಿಲ್ಲ. ಹೀಗಾಗಿ ತೆಲುಗಿನಿಂದ ಬಂದ ಹಲವು ಅವಕಾಶಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಖುಷ್ಬೂ ಹೇಳಿದ್ದಾರೆ.
ಅಷ್ಟೇ ಅಲ್ಲ, ತೆಲುಗಿನ ಜನಪ್ರಿಯ ಸಿನಿಮಾ 'ಚಂಟಿ'ಯಲ್ಲೂ ನಟಿಸುವ ಅವಕಾಶ ಬಂದಿತ್ತಂತೆ. ಆದರೆ ಆ ಸಿನಿಮಾವನ್ನು ಒಪ್ಪಿಕೊಂಡಿದ್ದರೆ, ತಮಿಳಿನಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಸಿನಿಮಾಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಆಗ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದ ಕಾರಣ ಆ ಅವಕಾಶವನ್ನು ಕೈಬಿಡಬೇಕಾಯಿತು ಎಂದು ಖುಷ್ಬೂ ವಿವರಿಸಿದ್ದಾರೆ.
ಇನ್ನು ತಮಿಳು ಚಿತ್ರರಂಗದಲ್ಲಿ ನಾನು ಆಗಲೇ ನೆಲೆ ಕಂಡುಕೊಂಡಿದ್ದೆ. ಹೀಗಾಗಿ ಅಲ್ಲಿನ ಸಿನಿಮಾಗಳನ್ನು ಬಿಟ್ಟು ಬೇರೆ ಅವಕಾಶಗಳನ್ನು ಒಪ್ಪಿಕೊಳ್ಳುವುದು ಕಷ್ಟವಾಗಿತ್ತು. ಅದಕ್ಕಾಗಿಯೇ 'ಚಂಟಿ' ಸಿನಿಮಾವನ್ನೂ ಕೈಬಿಡಬೇಕಾಯಿತು ಎಂದು ಹೇಳಿದ್ದಾರೆ. ಹೀಗೆ, ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಖುಷ್ಬೂ, ತಮ್ಮ ವೃತ್ತಿಜೀವನದ ಹಿಂದೆ ನಡೆದ ಹಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಸ್ಟಾರ್ ನಟರ ಜೊತೆ ನಟಿಸಲು ಸಾಧ್ಯವಾಗದಿದ್ದುದರ ಹಿಂದಿನ ಕಾರಣವನ್ನು ತಿಳಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.