ದೈವ ನರ್ತಕರಿಗೆ ಸರ್ಕಾರವೇಕೆ 2 ಸಾವಿರ ನೀಡಬೇಕು: ಬಿಟಿ ಲಲಿತಾ ನಾಯಕ್‌!

By Santosh NaikFirst Published Nov 5, 2022, 4:37 PM IST
Highlights

ಕಾಂತಾರ ಚಿತ್ರದ ಬಗ್ಗೆ ತಮ್ಮ ತಮ್ಮ ರೀತಿಯಲ್ಲಿ ವಿಶ್ಲೇಷಣೆ ಮಾಡುವುದು ಇನ್ನೂ ನಿಂತಿಲ್ಲ. ಚೇತನ್‌ ಅಹಿಂಸಾ ಚಿತ್ರದಲ್ಲಿ ಹೇಳಿರುವ ವಿಚಾರದ ಬಗ್ಗೆ ಮಾತನಾಡಿದ ಬಳಿಕ ಮಾಜಿ ಸಚಿವೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಬಿಟಿ ಲಲಿತಾ ನಾಯಕ್‌ ಕೂಡ ಚಿತ್ರದಲ್ಲಿ ತೋರಿಸಿರುವ ಅಂಶಗಳು ಹಾಗೂ ನಿರ್ದೇಶದ ರಿಷಬ್‌ ಶೆಟ್ಟಿ ಕುರಿತಾಗಿ ಮಾತನಾಡಿದ್ದಾರೆ.

ಹುಬ್ಬಳ್ಳಿ (ನ.5): ಕಾಂತಾರ ಚಿತ್ರದ ಬಗ್ಗೆ ತಮ್ಮದೇ ರೀತಿಯ ವಿಮರ್ಶೆ ಮಾಡುವ ಪರಿಪಾಠ ಇನ್ನೂ ನಿಂತಿಲ್ಲ. ನಾನು ಕಂಡ, ನನ್ನ ಕರಾವಳಿಯ ಜನರ ನಂಬಿಕೆಯ ಅಂಶ  ಎಂದು ಚಿತ್ರದ ನಿರ್ದೇಶದ ರಿಷಬ್‌ ಶೆಟ್ಟಿ ಹೇಳಿದ್ದರೂ, ಅವರು ಚಿತ್ರದಲ್ಲಿ ತೋರಿಸಿರುವ ದೈವ ಹಾಗೂ ಭೂತಾರಾಧನೆಯ ಬಗ್ಗೆ ಎಡಪಂಥೀಯರು ತಮ್ಮದೇ ಆದ ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಟ ಚೇತನ್‌ ಕರಾವಳಿ ಭಾಗದ ಭೂತಾರಾಧನೆ ಬಗ್ಗೆ ಹೇಳಿದ್ದಕ್ಕೆ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದು ಮಾತ್ರವಲ್ಲದೆ, ದೂರು ಕೂಡ ದಾಖಲಾಗಿತ್ತು. ಚಿತ್ರರಂಗದಲ್ಲೂ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಈಗ ಅದರ ಸಾಲಿಗೆ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್‌ ಕೂಡ ಸೇರಿದ್ದಾರೆ. ಸಾಮಾಜಿಕ ಕಾರ್ಯಕರ್ತೆ, ರಾಜಕಾರಣಿ, ಲೇಖಕಿ, ಚಲನಚಿತ್ರ ನಟಿ ಹಾಗೂ ಕರ್ನಾಟಕದ ಕನ್ನಡ, ಸಂಸ್ಕೃತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯೂ ಕೂಡ ಆಗಿದ್ದ ಬಿಟಿ ಲಿಲಿತಾ ನಾಯಕ್‌, ಭೂತಾರಾಧನೆಯ ಸಮಯದಲ್ಲಿ ದೈವ ಬರೋದು ಸತ್ಯ ಅಲ್ಲವೇ ಅಲ್ಲ. ದೈವ ನರ್ತಕ ಚೀರಾಡುವುದರ ಹಿಂದೆ ಬೇರೆಯದೇ ಕಾರಣವಿದೆ ಎಂದು ಹೇಳಿದ್ದಾರೆ. ಆದರೆ, ಈ ಚಿತ್ರದ ಸ್ಫೂರ್ತಿಯೊಂದಿಗೆ ಸರ್ಕಾರ ಕೂಡ ದೈವ ನರ್ತಕರಿಗೆ 2 ಸಾವಿರ ರೂಪಾಯಿ ಸಹಾಯಧನ ನೀಡುವ ತೀರ್ಮಾನ ಮಾಡಿರುವುದು ತಪ್ಪು ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಕುರಿತಾಗಿ ಮಾತನಾಡಿದ ಅವರು, ಕಾಂತಾರ ಚಿತ್ರ ವೀಕ್ಷಿಸಲು ಬಹಳ ಬುದ್ಧಿವಂತಿಕೆ ಬೇಕು. ಇನ್ನು ಭೂತಾರಾಧನೆಯ ಸಮಯದಲ್ಲಿ ದೇವರು ಬರುತ್ತಾರೆ ಅನ್ನೋದೆಲ್ಲಾ ಸುಳ್ಳು. ದೈವ ನರ್ತಕರು ಓಹೋ ಎಂದು ಚೀರಾಟ ಮಾಡುವುದು ಕುಣಿಯುವುದರ ಹಿಂದೆ ಬೇರೆಯದೇ ಆದ ಕಾರಣವಿದೆ. ಅವರ ಮೇಲೆ ದೇವರು ಬಂದಾಗ ಮಾಡುವ ವರ್ತನೆ ಇದಲ್ಲ ಎಂದಿದ್ದಾರೆ. ಕಾಂತಾರ ಚಿತ್ರ ಕಾಡಿನ ಜನರ ನೋವಿನ ಕಥೆ. ಜಮೀನ್ದಾರ ಪದ್ಧತಿಯ ಮೂಲಕ ಅವರನ್ನು ಒಕ್ಕಲೆಬ್ಬಿಸಲು ನೋಡಿದರು. ಅವರಿಗೆ ಕೊಡಬಾರದ ಚಿತ್ರಹಿಂಸೆಗಳನ್ನೆಲ್ಲಾ ನೀಡಿದರು. ಕೊನೆಗೆ ತಮ್ಮ ಉಳಿವಿಗಾಗಿ ಹಾಗೂ ನ್ಯಾಯಕ್ಕಾಗಿ ಸರ್ಕಾರದ ಮೊರೆ ಹೋದರು. ಅವರಿಂದಲೂ ಕೂಡ ನ್ಯಾಯ ಸಿಗದೇ ಇದ್ದಾಗ, ತಮ್ಮ ನೋವನ್ನು ಈ ರೀತಿ ಚೀರಾಡುವ ಮೂಲಕ ಹೊರಹಾಕಿದರು. ಅದನ್ನೇ ಈಗ ದೈವ ಎಂದು ನಂಬುತ್ತಿದ್ದಾರೆ ಎಂದು ವಿವಾದಿತವಾಗಿ ಮಾತನಾಡಿದ್ದಾರೆ.

ಇನ್ನು ನಿರ್ದೇಶದ ರಿಷಬ್‌ ಶೆಟ್ಟಿ ಕುರಿತಾಗಿ ಅನುಕಂಪದಿಂದ ಅವರು ಮಾತನಾಡಿದ್ದಾರೆ. ರಿಷಬ್‌ ಏನಾದರೂ ಚಿತ್ರದಲ್ಲಿ ಹೇಳಿರುವ ವಿಚಾರವನ್ನು ನೇರವಾಗಿ ಹೇಳಿದ್ದರೆ, ಖಂಡಿತವಾಗಿ ಜನರಿಂದ ಹೊಡೆಸಿಕೊಳ್ಳುತ್ತಿದ್ದರು. ಹಾಗಾಗಿ ಈ ಮಾರ್ಗ ಅನುಸರಿಸಿದ್ದಾನೆ. ರಿಷಭ್‌ ಹೇಳಿರುವ ವಿಚಾರವನ್ನು ನೇರವಾಗಿ ತಿಳಿಸಿದ್ದರೆ, ನಮ್ಮ ಮೂರ್ಖ ಜನರು ಥಿಯೇಟರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸುತ್ತಿದ್ದರು. ಅಷ್ಟರ ಮಟ್ಟಿಗೆ ನಮ್ಮ ಜನರ ತಲೆಕೆಟ್ಟಿದೆ. ಸದ್ಯವನ್ನು ನೇರವಾಗಿ ಹೇಳಿದ್ರೆ ಅವರು ಖಂಡಿತವಾಗಿ ಸಾಯುತ್ತಾರೆ. ಇದು ಅವರಿಗೆ ಬೇಕಿಲ್ಲ. ಅದಕ್ಕಾಗಿ ಬುದ್ಧಿವಂತಿಕೆಯಿಂದ ಈ ಚಿತ್ರ ಮಾಡಿದ್ದಾನೆ ಎಂದಿದ್ದಾರೆ.

ಕಾಂತಾರಾ ಚಿತ್ರ ಕುರಿತು ವಿವಾದಾತ್ಮಕ ಹೇಳಿಕೆ, ನಟ ಚೇತನ್ ವಿರುದ್ಧ ಬೆಂಗಳೂರಿನಲ್ಲಿ FIR!

ರಾಜಕೀಯ ಕಾರಣಕ್ಕೆ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರಲಿಲ್ಲ: ಇದೇ ವೇಳೆ, ನಾನು ರಾಜಕೀಯವಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರಲ್ಲಿಲ್ಲ. ಭೂಮಿ ಸಮಸ್ಯೆ ಬಗ್ಗೆ ವಿವರಣೆ ನೀಡಲು ರಾಹುಲ್ ಗಾಂಧಿ ಭೇಟಿ ಮಾಡಿದ್ದೆ. ಈ ವೇಳೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ಒಂದಿಷ್ಟು ಹೆಜ್ಜೆ ಹಾಕಿದೆ ಅಷ್ಟೇ. ಆದರಲ್ಲಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಬಿಟಿ ಲಲಿತಾ ನಾಯಕ್‌ಗೆ ಕೊಲೆ ಬೆದರಿಕೆ ಪತ್ರ, ಟಾರ್ಗೆಟ್ ಲಿಸ್ಟ್‌ನಲ್ಲಿ ಮಾಜಿ ಸಿಎಂ ಹೆಸರು!

ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗಕ್ಕೆ ವಿರೋಧ: ಅಂಕೋಲಾ-ಹುಬ್ಬಳಿ ರೈಲು ಮಾರ್ಗ ನಿರ್ಮಾಣಕ್ಕೆ ನನ್ನ ವಿರೋಧವಿದೆ. ಅಭಿವೃದ್ಧಿ ಹೆಸರಿನಲ್ಲಿ ಕಾಡು ಕಡಿಯುವುದು ಸರಿಯಲ್ಲ‌. ಉದ್ಯೋಗ ಸೃಷ್ಟಿಸಲು ಅಭಿವೃದ್ಧಿ ಮಾಡಲು ರೈಲು ಮಾರ್ಗ ಒಂದೆ ಪರಿಹಾರವಲ್ಲ ಎಂದು ಅವರು ಹೇಳಿದ್ದಾರೆ.

ಜನತಾ ಪಕ್ಷ ಮರುಸ್ಥಾಪನೆ: ಸದ್ಯ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ದೇಶವನ್ನು ಅಭಿವೃದ್ಧಿ ಮಾಡುವ ಬದಲು ತಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತಿವೆ. ಖಾಸಗೀಕರಣದ ಮೂಲಕ ಜನರ ಆಸ್ತಿ ಮಾರಾಟ ಮಾಡಲಾಗುತ್ತಿದೆ. ಕೋಮುವಾದನ್ನು ಯುವಕರ ಮನಸ್ಸಿನಲ್ಲಿ ಬಿತ್ತಿ ಅವರು ಭವಿಷ್ಯವನ್ನು ಹಾಳು ಮಾಡಲಾಗುತ್ತಿದೆ. ಹಣ, ಹೆಂಡದ ಮೂಲಕ ಚುನಾವಣೆಯಲ್ಲಿ ಗೆದ್ದು ಈ ರೀತಿಯಾಗಿ ವರ್ತನೆ ಮಾಡುತ್ತಿದೆ. ಹೀಗಾಗಿ ಇದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಜನತಾ ಪಕ್ಷವನ್ನು ಮರು ಸ್ಥಾಪನೆ ಮಾಡಲಾಗಿದ್ದು. ಈ ಬಾರಿ 224 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ನಿಲ್ಲುತ್ತಿದ್ದಾರೆ ಎಂದರು.
 

click me!