‘ದಿ ವಿಲನ್‌’ ವಿರುದ್ಧ ಶಿವಣ್ಣ ಅಭಿಮಾನಿಗಳು ಕೆಂಡ

By Web DeskFirst Published Oct 20, 2018, 9:05 AM IST
Highlights

‘ದಿ ವಿಲನ್‌’ ಚಿತ್ರದಲ್ಲಿನ ‘ಅವ್ನಾ, ಇವ್ನಾ’ ಎನ್ನುವ ವಿವಾದ ತೀವ್ರಗೊಂಡಿದೆ. ಚಿತ್ರ ತೆರೆ ಕಂಡ ಬೆನ್ನಲ್ಲೇ ನಿರ್ದೇಶಕ ಪ್ರೇಮ್‌ ವಿರುದ್ಧ ಶಿವರಾಜ್‌ ಕುಮಾರ್‌ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. 

ಬೆಂಗಳೂರು :  ಬಹುನಿರೀಕ್ಷಿತ ‘ದಿ ವಿಲನ್‌’ ಚಿತ್ರದಲ್ಲಿನ ‘ಅವ್ನಾ, ಇವ್ನಾ’ ಎನ್ನುವ ವಿವಾದ ತೀವ್ರಗೊಂಡಿದೆ. ಚಿತ್ರ ತೆರೆ ಕಂಡ ಬೆನ್ನಲ್ಲೇ ನಿರ್ದೇಶಕ ಪ್ರೇಮ್‌ ವಿರುದ್ಧ ಶಿವರಾಜ್‌ ಕುಮಾರ್‌ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಪಾತ್ರವನ್ನು ಚಿತ್ರಿಸಿರುವ ರೀತಿಯೇ ಸರಿಯಿಲ್ಲ ಎನ್ನುವ ಆರೋಪದ ಜತೆಗೆ ಚಿತ್ರದ ಸನ್ನಿವೇಶವೊಂದರಲ್ಲಿ ಶಿವರಾಜ್‌ ಕುಮಾರ್‌ ಅವರನ್ನು ಸುದೀಪ್‌ ಹೊಡೆಯುವ ದೃಶ್ಯ ತಮಗೆ ನೋವುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಶಿವರಾಜ್‌ ಕುಮಾರ್‌ ಅಭಿಮಾನಿಗಳ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟ ಸುದೀಪ್‌, ಚಿತ್ರದಲ್ಲಿರುವ ದೃಶ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಬಿಡುಗಡೆಗೂ ಮುನ್ನ ‘ದಿ ವಿಲನ್‌’ ಚಿತ್ರದ ವಿವಾದ ಶುರುವಾಗಿದ್ದೇ ಇಬ್ಬರು ಸ್ಟಾರ್‌ಗಳ ಪಾತ್ರದ ಕುರಿತು. ಚಿತ್ರದಲ್ಲಿ ವಿಲನ್‌ ಯಾರು ಅನ್ನೋದು ಆ ವಿವಾದದ ಹಿಂದಿನ ಕಾರಣವಾಗಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ಇಬ್ಬರು ಸ್ಟಾರ್‌ಗಳ ಅಭಿಮಾನಿಗಳ ನಡುವೆ ಪರಸ್ಪರ ವಾಕ್‌ ಸಮರವೇ ನಡೆದಿತ್ತು. ಕೊನೆಗೆ ಶಿವರಾಜ್‌ ಕುಮಾರ್‌ ಅವರೇ ಎಂಟ್ರಿ ಆಗಿ ಅಭಿಮಾನಿಗಳ ವರ್ತನೆಗೆ ಸಿಟ್ಟಾಗಿದ್ದರು. ಸಿನಿಮಾವನ್ನು ಸಿನಿಮಾದ ರೀತಿಯಲ್ಲೇ ನೋಡ್ಬೇಕು, ಅವ್ನಾ ಇವ್ನಾ ಅನ್ನೋದು ಸರಿಯಲ್ಲ. ಅದೇ ವಿವಾದವನ್ನು ತಂದು ಚಿತ್ರಮಂದಿರದಲ್ಲಿ ಜಗಳ ಮಾಡಿದರೆ ತಾವು ಚಿತ್ರಮಂದಿರಕ್ಕೆ ಕಾಲಿಡುವುದಿಲ್ಲ ಎಂದಾಗ ಆ ವಿವಾದ ಕೊಂಚ ತಣ್ಣಗಾಗಿತ್ತು. ಈಗ ಚಿತ್ರ ತೆರೆ ಕಂಡ ಬೆನ್ನಲ್ಲೇ ಆ ವಿವಾದ ಮತ್ತೆ ಶುರುವಾಗಿದೆ.

ಶಿವಣ್ಣಂಗೆ ಪ್ರೇಮ್‌ ಅನ್ಯಾಯ:

ಚಿತ್ರದಲ್ಲಿ ನಿರ್ದೇಶಕ ಪ್ರೇಮ್‌ ಅವರು ಶಿವರಾಜ್‌ ಕುಮಾರ್‌ ಅವರಿಗೆ ಸರಿಯಾದ ಪಾತ್ರ ನೀಡಿಲ್ಲ. ಚಿತ್ರದಲ್ಲಿ ಅದೊಂದು ರೀತಿಯ ಅತಿಥಿ ಪಾತ್ರದಂತಿದೆ. ಜತೆಗೆ ಪಾತ್ರದ ಅವಧಿ ಕಡಿಮೆ ಇದೆ. ಇಬ್ಬರೂ ಸ್ಟಾರ್‌ ನಟರು. ಸಮನಾದ ಪ್ರಾಮುಖ್ಯತೆ ಎರಡೂ ಪಾತ್ರಗಳಿಗೆ ಇರಬೇಕಿತ್ತು. ಉದ್ದೇಶಪೂರ್ವಕವಾಗಿಯೇ ನಿರ್ದೇಶಕ ಪ್ರೇಮ್‌ ಈ ರೀತಿ ಮಾಡಿದ್ದಾರೆ. ಜತೆಗೆ ಶಿವರಾಜ್‌ ಕುಮಾರ್‌ ಅವರಿಗೆ ಸುದೀಪ್‌ ಅವರಿಂದ ಹೊಡೆಸುವಂತಹ ಸನ್ನಿವೇಶ ಸೃಷ್ಟಿಸಿದ್ದು ತಪ್ಪು. ಈ ರೀತಿ ಮಾಡಿ ಅಭಿಮಾನಿಗಳ ಮನಸ್ಸು ನೋಯಿಸಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಶಿವರಾಜ್‌ ಕುಮಾರ್‌ ಅಭಿಮಾನಿಗಳು ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರ ಮುಂದೆ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ ಮೂರು ಗಂಟೆಗೆ ನರ್ತಕಿ ಚಿತ್ರಮಂದಿರದ ಎದುರು ಜಮಾಯಿಸಿದ ಅಭಿಮಾನಿಗಳು ಚಿತ್ರಮಂದಿರದ ಒಳಗಡೆ ಪ್ರವೇಶಿಸಿ ಪ್ರತಿಭಟಿಸಲು ಮುಂದಾದರು. ಆದರೆ ಅಲ್ಲಿ ಪ್ರತಿಭಟನೆ ನಡೆಸಲು ಉಪ್ಪಾರಪೇಟೆ ಪೊಲೀಸರು ಅನುಮತಿ ನಿರಾಕರಿಸಿ, ಚಿತ್ರಮಂದಿರಕ್ಕೆ ಬಿಗಿಭದ್ರತೆ ಒದಗಿಸಿದ ಪರಿಣಾಮ, ಶಿವರಾಜ್‌ ಕುಮಾರ್‌ ಅಭಿಮಾನಿಗಳು ರಸ್ತೆಯಲ್ಲಿ ನಿಂತು ಪ್ರತಿಭಟಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೊನ್ನೇಗೌಡ ಮಾತನಾಡಿ, ಶಿವರಾಜ್‌ ಕುಮಾರ್‌ ಅವರ ಒಳ್ಳೆಯತನವನ್ನು ಪ್ರೇಮ್‌ ದುರುಪಯೋಗ ಪಡಿಸಿಕೊಂಡಿದ್ದಾರೆ. ಅವರಿಗೆ ಅತಿ ಕಡಿಮೆ ಅವಧಿಯ ಪಾತ್ರ ನೀಡಿ ಅವಮಾನಿಸಿದ್ದಾರೆ. ಜತೆಗೆ ಚಿತ್ರದ ಒಂದು ಸನ್ನಿವೇಶದಲ್ಲಿ ಶಿವರಾಜ್‌ ಕುಮಾರ್‌ ಅವರಿಗೆ ಸುದೀಪ್‌ ಕಡೆಯಿಂದ ಹೊಡೆಯುವಂತೆ ಮಾಡಿ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾರೆ. ತಕ್ಷಣವೇ ಚಿತ್ರದಲ್ಲಿನ ಆ ದೃಶ್ಯವನ್ನು ತೆಗೆದುಹಾಕಬೇಕು. ಎರಡು ದಿವಸದಲ್ಲಿ ಈ ಕೆಲಸ ಮಾಡದಿದ್ದರೆ, ನಿರ್ದೇಶಕ ಪ್ರೇಮ್‌ ನಿವಾಸದೆದುರು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಚಿತ್ರ ತೆರೆ ಕಂಡ ಮೊದಲ ದಿನ ಗುರುವಾರ ಸಂಜೆಯಿಂದಲೇ ಶಿವರಾಜ್‌ ಕುಮಾರ್‌ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಪ್ರೇಮ್‌ ವಿರುದ್ಧ ಕಿಡಿಕಾರಿದ್ದರು. ಪ್ರೇಮ್‌ ಅನಗತ್ಯ ವಿವಾದ ಹುಟ್ಟು ಹಾಕುವಂತೆ ಮಾಡುತ್ತಾರೆ. ಅವರಿಗೆ ಯಾರಿಗೆ ಎಂತಹ ಪಾತ್ರ ನೀಡಬೇಕೆನ್ನುವ ಕನಿಷ್ಠ ಜ್ಞಾನ ಇಲ್ಲ ಅಂತಲೂ ಅಭಿಮಾನಿಗಳು ಆರೋಪಿಸಿದ್ದರು.

ಶಿವಣ್ಣ ದಡ್ಡ​ನಾ? ​ಕಿಚ್ಚ ಸುದೀಪ್‌ ಪ್ರಶ್ನೆ!
ದಾವ​ಣ​ಗೆರೆ: ನಟ ಶಿವರಾಜ್‌ ಕುಮಾರ್‌ ದಡ್ಡರಲ್ಲ. ಅವರು ಪೂರ್ಣ ಪ್ರಮಾಣದಲ್ಲಿ ಕತೆ ಕೇಳಿಯೇ ಪಾತ್ರ ಒಪ್ಪಿಕೊಂಡಿರುತ್ತಾರೆ. ಅಭಿಮಾನಿಗಳು ಸಿನಿಮಾವನ್ನು ಸಿನಿಮಾದ ರೀತಿಯಲ್ಲೇ ನೋಡಲಿ ಎಂದು ನಟ ಸುದೀಪ್‌ ಅವರು ‘ದಿ ವಿಲನ್‌’ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಹರಿ​ಹರ ತಾ.ರಾಜ​ನ​ಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಶುಕ್ರ​ವಾರ ಭೇಟಿ ನೀಡಿದ್ದ ವೇಳೆ ಸುದ್ದಿ​ಗಾ​ರ​ರೊಂದಿಗೆ ಸುದೀಪ್‌ ಮಾತ​ನಾ​ಡಿ​ದ​ರು. ಸುಮಾರು 35-40 ವರ್ಷ​ದಿಂದ ಸಿನಿಮಾರಂಗದಲ್ಲಿರುವ ಶಿವಣ್ಣ ಸಿನಿಮಾ ಕಥೆ​ಯನ್ನು ಕೇಳಿ​ಕೊಂಡೇ ಸಿನಿ​ಮಾಗೆ ಒಪ್ಪಿ​ಕೊಂಡಿ​ದ್ದಾರೆ. ಸಿನಿ​ಮಾ​ದಲ್ಲಿ ಸುದೀಪ್‌ ಶಿವ​ಣ್ಣಗೆ ಹೊಡೆ​ಯುವ ಸೀನ್‌ ಬೇಡ​ವೆಂದರೆ ಶಿವಣ್ಣ ಚಿತ್ರದ ನಿರ್ದೇ​ಶಕ ಪ್ರೇಮ್‌ಗೆ ಹೇಳಿ ತೆಗೆ​ಸಲಿ. ಸಿನಿ​ಮಾ​ದಲ್ಲಿ ಸನ್ನಿ​ವೇ​ಶಕ್ಕೆ ತಕ್ಕಂತೆ ಪಾತ್ರ​ವಿದೆ. ಅಲ್ಲದೇ, ಕಥೆ​ಯಲ್ಲಿ ತಾಯಿಗೆ ವಾಗ್ದಾನ ಮಾಡಿ​ರು​ತ್ತಾರೆ. ಹಾಗಾಗಿ ಶಿವಣ್ಣ ಕೈ ಎತ್ತು​ವು​ದಿಲ್ಲ. ಅಭಿ​ಮಾ​ನಿ​ಗಳು ಸಿನಿ​ಮಾ​ವನ್ನು ಸಿನಿಮಾ ಆಗಿ ಮಾತ್ರ ನೋಡಲಿ ಎಂದು ಮನವಿ ಮಾಡಿದರು.

ಸಿನಿಮಾನಾ ಸಿನಿಮಾ ರೀತಿಯಲ್ಲೇ ನೋಡಿ ಎಂಬುದು ಅಭಿಮಾನಿಗಳಿಗೆ ನನ್ನ ಮನವಿ. ಫೈಟ್‌ ದೃಶ್ಯದಲ್ಲಿ ಶಿವರಾಜ್‌ಕುಮಾರ್‌ ಅವರಿಗೆ ಸುದೀಪ್‌ ಅವರಿಂದ ಹೊಡೆಸಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುವುದು ತಪ್ಪು. ಪಾತ್ರಕ್ಕಾಗಿ ನಾವು ಹಾಗೆ ಮಾಡಿಸಿದ್ದೇವೆ. ಶಿವಣ್ಣನನ್ನು ರಾಕ್ಷಸನಂತೆ ತೋರಿಸಲಾಗದು. ಆ ಪಾತ್ರ ಒಳ್ಳೆಯತನದಲ್ಲೇ ಗೆಲ್ಲಬೇಕು. ಅವರ ಇಮೇಜ್‌ ಹಾಳು ಮಾಡಬಾರದು. ಆ ಕಾರಣಕ್ಕೆ ಇಲ್ಲಿ ಇಬ್ಬರು ಹೊಡೆದಾಡುವುದು ಬೇಡ ಅಂದುಕೊಂಡಿದ್ದು. ಈ ವಿಚಾರದಲ್ಲಿ ಶಿವಣ್ಣನ ಅಭಿಮಾನಿಗಳಿಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತಿದ್ದೇನೆ.

- ಪ್ರೇಮ್‌, ನಿರ್ದೇಶಕ

click me!