
ಬೆಂಗಳೂರು (ಆ. 06): ಅದು ಯಾವುದೇ ಭಾಷೆಯದ್ದಾಗಿದ್ದರೂ ಪರ್ವಾಗಿಲ್ಲ. ಒಳ್ಳೆಯ ಕತೆಯಾಗಿರಬೇಕು. ಅಂಥ ಕತೆಯಲ್ಲಿ ನಾನು ನಟಿಸಲು ಸಿದ್ಧ... - ಹೀಗೆ ಹೇಳಿದ್ದು ನಟ ಶಿವರಾಜ್‌ಕುಮಾರ್. ಅವರ ಈ ಮಾತು ‘ಕವಚ’ ಚಿತ್ರಕ್ಕೆ ಸಂಬಂಧಿಸಿದ್ದು. ಇದರ ಚಿತ್ರೀಕರಣ ಮುಗಿದೆ.
ಹೀಗಾಗಿ ಮಾಧ್ಯಮಗಳ ಮುಂದೆ ಬಂತು ಚಿತ್ರತಂಡ. ಇದು ಮಲಯಾಳಂನ ರೀಮೇಕ್. ತುಂಬಾ ವರ್ಷಗಳ ನಂತರ ರೀಮೇಕ್ ಚಿತ್ರದತ್ತ ಮುಖ ಮಾಡಿದ್ದ ಶಿವಣ್ಣ, ರೀಮೇಕ್ ಒಪ್ಪಿಕೊಂಡಿದ್ದಕ್ಕೆ ಈ ಮೇಲಿನಂತೆ ಕಾರಣ ಕೊಟ್ಟರು. ಓವರ್ ಟು ಶಿವಣ್ಣ. ನಾನೇ ರೂಲ್ಸ್ ಬ್ರೇಕ್ ಮಾಡಿದೆ ನಿಮಗೆ ಗೊತ್ತಿರುವಂತೆ ನಾನು ರೀಮೇಕ್ ಸಿನಿಮಾಗಳಲ್ಲಿ ನಟಿಸಲ್ಲ ಎಂದಿದ್ದೆ.
ನನ್ನ ಮಾತಿನ ಮೇಲೆ ಗಟ್ಟಿಯಾಗಿ ನಿಂತಿದ್ದೆ. ಆದರೂ ಸಾಕಷ್ಟು ರೀಮೇಕ್ ಸಿನಿಮಾಗಳು ನನ್ನ ಹುಡುಕಿಕೊಂಡು ಬರುತ್ತಿದ್ದವು. ಎಲ್ಲ ಚಿತ್ರಗಳನ್ನು ನಯವಾಗಿ ತಿರಸ್ಕರಿಸುತ್ತಿದ್ದೆ. ಹಲವು ಸಂದರ್ಭಗಳಲ್ಲಿ ನಾನು ಹಾಗೆ ತಿರಸ್ಕರಿಸಿದ ಸಿನಿಮಾಗಳು ಒಳ್ಳೆಯ ಕತೆಯನ್ನು ಒಳಗೊಂಡಿದ್ದವು. ಆದರೆ, ರೀಮೇಕ್‌ಗೆ ನನ್ನ ಮನಸು ಒಪ್ಪುತ್ತಿರಲಿಲ್ಲ.
ಯಾವಾಗ ನಾನು ಮೋಹನ್ ಲಾಲ್ ನಟನೆಯ ‘ಒಪ್ಪಂ’ ಚಿತ್ರ ನೋಡಿದನೋ ಕತೆ ನನ್ನ ಕಾಡಿತು. ಅದೇ ಸಂದರ್ಭದಲ್ಲಿ ಈ ಕತೆಯನ್ನು ಕನ್ನಡದಲ್ಲಿ ಮಾಡಬೇಕೆಂದು ನಿರ್ದೇಶಕ ಜಿ ವಿ ಆರ್ ವಾಸು ಮತ್ತವರ ತಂಡ ನನ್ನ ಬಳಿ ಬಂತು. ರೀಮೇಕ್ ಎನ್ನುವುದನ್ನು ಬದಿಗಿಟ್ಟರೆ ಕನ್ನಡಿಗರಿಗೆ ನನ್ನ ಮೂಲಕ ಒಳ್ಳೆಯ ಸಿನಿಮಾ ಸಿಗುತ್ತದೆ ಎಂದ ಮೇಲೆ ನನ್ನ ರೂಲ್ಸ್ ಅನ್ನು ನಾನೇ ಬ್ರೇಕ್ ಮಾಡುವುದರಲ್ಲಿ ತಪ್ಪಿಲ್ಲ ಅನಿಸುತು.
ಮುಂದೆಯೂ ಹೀಗೆ ರಾಜಿಯಾಗುವೆ ನಾನು ಹಾಕಿಕೊಂಡ ರೀಮೇಕ್ ವಿರುದ್ಧದ ಈ ಗಡಿರೇಖೆ ಮುರಿದಿದ್ದು ಕೇವಲ ‘ಕವಚ’ ಚಿತ್ರಕ್ಕೆ ಮಾತ್ರವಲ್ಲ. ಮುಂದೆಯೂ ಈ ರೂಲ್ಸ್ ಬ್ರೇಕ್ ಜಾರಿಯಲ್ಲಿರುತ್ತದೆ. ಯಾವುದೇ ಭಾಷೆಯ ಚಿತ್ರವಾಗಿರಬಹುದು. ಅದರಲ್ಲಿ ನಾನು ನಟಿಸುತ್ತೇನೆ. ಆದರೆ, ಷರತ್ತುಗಳು ಅನ್ವಯಿಸುತ್ತವೆ. ಕತೆ ತುಂಬಾ ಭಿನ್ನವಾಗಿರಬೇಕು. ದೊಡ್ಡ ಸ್ಟಾರ್ ನಟ ಕಾಣಿಸಿಕೊಳ್ಳಬೇಕು ಎನ್ನುವುದಕ್ಕೆ ಮಾತ್ರ ಯಾವುದ್ಯಾವುದೋ ಕತೆ ತಂದರೆ ನಾನು
ಮಾಡಲ್ಲ.
ಒಬ್ಬ ನಟನಾಗಿ ನನಗೆ ಆ ಕತೆ ಹೇಗೆ ಕಾಡುತ್ತದೋ ಅದೇ ರೀತಿ ಕನ್ನಡ ಪ್ರೇಕ್ಷಕರಿಗೂ ಆ ಕತೆ ತಮ್ಮ ಭಾಷೆಯಲ್ಲಿ ಸಿಗಬೇಕು ಎನ್ನುವ ಬೇಡಿಕೆ ಇರಬೇಕು. ಪ್ರತಿಯೊಬ್ಬರಿಗೂ ಮನ ಮುಟ್ಟುವಂತಹ ಕತೆಯಾಗಿದ್ದರೆ ಮಾತ್ರ ನಾನು ರೀಮೇಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಒಪ್ಪಿಕೊಳ್ಳುತ್ತೇನೆ. ನಿರ್ದೇಶಕ ಪಿ ಶೇಷಾದ್ರಿ ಜತೆ ಸಿನಿಮಾ ಈಗಷ್ಟೆ ಕವಚ ಮುಗಿಸಿರುವೆ. ದಿ ವಿಲನ್ ಚಿತ್ರ ತೆರೆಗೆ ಸಿದ್ದವಾಗಿದೆ. ರುಸ್ತುಂ, ದ್ರೋಣ ಚಿತ್ರಗಳು ಶೂಟಿಂಗ್ ಸೆಟ್‌ನಲ್ಲಿವೆ. ಇದರ ಜತೆಗೆ ಮೂರು ಕತೆಗಳನ್ನು ಕೇಳಿದ್ದೇನೆ. ಆ ಪೈಕಿ ನಿರ್ದೇಶಕ ಪಿ ಶೇಷಾದ್ರಿ ಅವರು ಹೇಳಿದ ಕತೆ ತುಂಬಾ ಚೆನ್ನಾಗಿದೆ.
ಎಲ್ಲವೂ ಅದಕ್ಕೊಂಡಂತೆ ಆದರೆ ಪಿ ಶೇಷಾದ್ರಿ ಜತೆ ಸಿನಿಮಾ ಮಾಡುವುದು ಖಚಿತ. ಹೊಸ ರೀತಿಯ ಕತೆಯನ್ನು ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ನನಗೂ ಪಿ ಶೇಷಾದ್ರಿ ಅವರಂತಹ ನಿರ್ದೇಶಕರ ಜತೆ ಕೆಲಸ ಮಾಡುವ ಆಸೆ ಇದೆ. ಹೀಗಾಗಿ ಅವರ ಕತೆ ಬಗ್ಗೆ ಯೋಚಿಸುತ್ತಿದ್ದೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.