
ಬೆಂಗಳೂರು (ಮಾ. 09): ಆಕೆ ಕ್ಯಾಬರೆ ನಟಿ! ಹಾಗಂತ ಆಕೆಯನ್ನು ಹೀಗಳೆಯುವ ಕಾಲವೊಂದಿತ್ತು. ಆಕೆಯನ್ನು ಆ ವೃತ್ತಿಗೆ ತಳ್ಳಿದ್ದು ಗಂಡಸೇ ಆದರೂ, ಆಕೆಗೆ ಚಿತ್ರರಂಗದಲ್ಲಾಗಲೀ, ಹೊರಗಾಗಲೀ ಅಂಥ ಗೌರವ ಇರಲಿಲ್ಲ. ಮೊಟ್ಟ
ಮೊದಲ ಬಾರಿಗೆ ಆ ಕುರಿತು ಗಟ್ಟಿಯಾಗಿ ಮಾತಾಡಿದವರು ಶಕೀಲಾ.
ಶಕೀಲಾ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರಿಣಿ ಅನ್ನಿಸಿಕೊಂಡಿದ್ದವರು. ಎರಡು ಸಿನಿಮಾ ಮಾಡಿ ಸೋತ ನಿರ್ಮಾಪಕ, ಮೂರನೇ ಚಿತ್ರಕ್ಕೆ ಶಕೀಲಾ ಮೊರೆ ಹೋಗುತ್ತಿದ್ದ. ಶಕೀಲಾ ಕಾಲ್‌ಶೀಟ್'ಗಾಗಿ ಕಾಯುತ್ತಿದ್ದ. ಶಕೀಲಾ ನಟಿಸಲು ಒಪ್ಪಿಕೊಂಡರೆ ಸಾಕು, ಆತ ಕೋಟ್ಯಧೀಶನಾಗುತ್ತಿದ್ದ. ಅಂಥ ಶಕೀಲಾ ತಮ್ಮ ಬಾಲ್ಯ, ಯೌವನ ಮತ್ತು ಚಿತ್ರೋದ್ಯಮದ ಜೀವನದ ಕುರಿತು ಬರೆದರು. ಅವರ ಆತ್ಮಚರಿತ್ರೆ ಹೊರಬಂತು. ಅದು ಅನೇಕ ಭಾಷೆಗಳಿಗೆ ಅನುವಾದಗೊಂಡಿತು. ಕನ್ನಡಕ್ಕೂ ಬಂತು. ಶಕೀಲಾ ಎಂಬ ಎಲ್ಲರ ಕಣ್ಮಣಿಯ ಆತ್ಮದಲ್ಲೊಂದು ನಂದಿಸಲಾರದ ನೋವಿದೆ ಅನ್ನುವುದು ಜಗತ್ತಿಗೆ ಗೊತ್ತಾಯಿತು. ಕ್ರಮೇಣ ಕಾಲ ಬದಲಾಯಿತು. ಸಿಲ್ಕ್‌ಸ್ಮಿತಾ ಎಂಬ ಮಾದಕತೆಗೆ ರೂಪಕವಾಗಿದ್ದ ನಟಿಯ ಕುರಿತು ಸಿನಿಮಾ ಬಂತು. ಅದರಲ್ಲಿ ವಿದ್ಯಾಬಾಲನ್ ನಟಿಸಿದರು. ಇದೀಗ, ಶಕೀಲಾ ಬದುಕನ್ನಿಟ್ಟುಕೊಂಡು ಸಿನಿಮಾ ಮಾಡಲು ಇಂದ್ರಜಿತ್ ಲಂಕೇಶ್ ಮುಂದಾಗಿದ್ದಾರೆ.
ಅದರಲ್ಲಿ ಶಕೀಲಾ ಬದುಕಿನ ಸಂಕಟಗಳೂ ಸಂಭ್ರಮಗಳೂ ಇರಲಿವೆ ಎನ್ನುತ್ತಿದ್ದಾರೆ. ರಿಚಾ ಛಡ್ಡಾ ಶಕೀಲಾ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಶಕೀಲಾ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಭಾಷೆಯಿಲ್ಲದ ಚಿತ್ರಗಳ ನಟಿ. ವಯಸ್ಕರಿಗೆ ಮಾತ್ರ ಚಿತ್ರಗಳಲ್ಲಿ ರಾರಾಜಿಸಿದವರು. ಶಕೀಲಾ ಅಭಿಮಾನಿಗಳು ಖಂಡಾಂತರದಲ್ಲೆಲ್ಲ ಇದ್ದಾರೆ ಎಂಬ ನಂಬಿಕೆಗೆ ಸಾಕ್ಷಿಯಾಗಿ ಅವರ ಚಿತ್ರಗಳ ವಿಡಿಯೋ ಕ್ಯಾಸೆಟ್ಟುಗಳು ಅದ್ದೂರಿ ಬೆಲೆಗೆ ಮಾರಾಟ ಆಗುತ್ತಿದ್ದವು. ಶಕೀಲಾ
ಜೀವನ ಸಿನಿಮಾ ಆಗುತ್ತಿದೆ!
ಇಂದ್ರಜಾಲಕ್ಕೆ ಸಿಲುಕಲಿರುವ ಒಂದು ಕಾಲದ ಸುಳಿಮಿಂಚು ಅಷ್ಟೇ ಅಲ್ಲ, ಶಕೀಲಾ ಆ ಜನಪ್ರಿಯತೆಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದನ್ನೂ ಹೇಳಿಕೊಂಡಿದ್ದಾರೆ. ಮಹಿಳಾ ದಿನದಂದು ಇಂದ್ರಜಿತ್ ಈ ಸಿನಿಮಾ
ಘೋಷಿಸಿದ್ದಾರೆ. ಹಾಗೆ ನೋಡಿದರೆ ಇದು ಇಂದ್ರಜಿತ್ ಪಾಲಿಗೆ ಹಳೆಯ ಸಿನಿಮಾ. 2015 ರಲ್ಲೇ ಈ ಸಿನಿಮಾ ಮಾಡುವುದಾಗಿ ಅವರು ಹೇಳಿಕೊಂಡಿದ್ದರು.
ಈ ಮೂರು ವರ್ಷಗಳಲ್ಲಿ ಹೆಣ್ಮಕ್ಕಳ ಸ್ಥಾನಮಾನ ಬದಲಾಗಿದೆ. ವಿದ್ಯಾಬಾಲನ್ ನಟಿಸುವ ಮೂಲಕ ಸಿಲ್ಕ್ ಸ್ಮಿತಾ ಪಾತ್ರಕ್ಕೊಂದು ಘನತೆ ತಂದುಕೊಟ್ಟಿದ್ದಾರೆ. ಸನ್ನಿಲಿಯಾನ್ ಭಾರತಕ್ಕೆ ಬಂದು ಘನಗಂಭೀರ
ಮಾತುಗಳನ್ನು ಆಡುತ್ತಿದ್ದಾರೆ. ಅಂಥ ಹೊತ್ತಲ್ಲಿ ಬರುತ್ತಿರುವ ಶಕೀಲಾ ಕುರಿತ ಸಿನಿಮಾ ಆಕೆಯ ಕುರಿತು ಅನೇಕರ ಮನಸ್ಸಿನಲ್ಲಿರುವ ಅಭಿಪ್ರಾಯಗಳನ್ನು ಬದಲಾಯಿಸಿಕೊಳ್ಳಲು ನೆರವಾದರೆ, ಅದೇ ಸಾರ್ಥಕತೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.