
ತಮಿಳು ಖ್ಯಾತ ನಟ ಕಮಲ್ ಹಾಸನ್ (Kamal Haasan) ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಗೊತ್ತೇ ಇದೆ. ಚೆನ್ನೈನಲ್ಲಿ ನಡೆದ ಇವೆಂಟ್ನಲ್ಲಿ ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು, ಕನ್ನಡ ಭಾಷೆ ಹುಟ್ಟಿದ್ದೇ ತಮಿಳಿನಿಂದ ಎಂದಿದ್ದರು ಕಮಲ್ ಹಾಸನ್. ಈ ಮಾತಿಗೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಭಾಷೆಗಳ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲದ ನಟ ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದಾರೆ.
ನಟ ಕಮಲ್ ಹಾಸನ್ ಮಾತಿಗೆ ಕನ್ನಡದ ಹಿರಿಯ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿಕೆ ತಪ್ಪು ಎಂದ ಸುಮಲತಾ 'ಭಾಷೆಯ ಬಗ್ಗೆ ಮಾತನಾಡೋವಾಗ ಯೋಚಿಸಿ ಮಾತನಾಡಬೇಕು. ನಾವ್ಯಾರು ಪಂಡಿತರಲ್ಲ, ಯಾವ ಭಾಷೆಯಿಂದ ಯಾವ ಭಾಷೆ ಅಂತ ಹೇಳೋಕೆ ಬರಲ್ಲ. ಸೀನಿಯರ್ ನಟರಾಗಿ ಯೋಚಿಸಿ ಮಾತನಾಡಬೇಕು.
ಯಾರೊಬ್ಬರ ಹೇಳಿಕೆಯಿಂದ ಕನ್ನಡದ ಘನತೆ ಕಡಿಮೆ ಆಗಲ್ಲ' ಎಂದಿದ್ದಾರೆ.
ಜೊತೆಗೆ, 'ಕನ್ನಡದ ಭಾಷೆಗೆ ಅದರದ್ದೆ ಆದ ಘನತೆ ಇದೆ. ಅಪಮಾನ ಮಾಡೋದು ಸರಿಯಲ್ಲ. ಹೇಳಿಕೆ ನೀಡೋವಾಗ ಎಚ್ಚರಿಕೆಯಿಂದ ನೀಡಬೇಕು. ಯಾವ ಭಾಷೆಯಿಂದ ಯಾವ ಭಾಷೆ ಬಂದಿದೆ ಅನ್ನೊದು ಯಾರಿಗು ತಿಳಿದಿಲ್ಲ. ಕನ್ನಡಕ್ಕೆ ಅಪಮಾನವಾದರೆ ಕನ್ನಡಿಗರು ಸಹಿಸಲ್ಲ. ರಾಜಕಾರಣಿಗಳು ಈ ಬಗ್ಗೆ ಮಾತನಾಡಬಾರದು ಅನ್ನೋದು ಅವರವರ ಅಭಿಪ್ರಾಯ' ಎಂದು ಹೇಳಿಕೆ ನೀಡುವ ಮೂಲಕ ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಅವಮಾನ ಮಾಡಿದ್ದು ತಪ್ಪು ಎಂದಿದ್ದಾರೆ.
ಇನ್ಜು ಈ ಬಗ್ಗೆ ನಿನ್ನೆ ಕನ್ನಡದ ಹಿರಿಯ ನಟ ಶ್ರೀನಾಥ್ ಅವರು ರಿಯಾಕ್ಟ್ ಮಾಡಿದ್ದಾರೆ. ಕಮಲ್ ಹಾಸನ್ ಗೆ ತಿರುಗೇಟು ಕೊಟ್ಟು ಹಿರಿಯ ನಟ ಶ್ರೀನಾಥ್ ಮಾತನ್ನಾಡಿದ್ದಾರೆ. 'ಕನ್ನಡ ಎಲ್ಲಿಂದಲೂ ಹುಟ್ ಬೇಕಾಗಿಲ್ಲ, ಅದು ಎಲ್ಲಿಂದ ಹುಟ್ಟಬೇಕೋ ಅಲ್ಲಿಂದ ಹುಟ್ಟಿದೆ. ಬೇಕಾದಷ್ಟು ಭಾಷೆನ ಬೆಳಸಿದೆ ಕನ್ನಡ.
ಅದು ಎಲ್ಲಿಂದ ಹುಟ್ಟಿತ್ತು ಎಂಬುದು ಕನ್ನಡಿಗರಿಗೆ ಗೊತ್ತಿದೆ, ಅದನ್ನು ಬೆರೆಯವರಿಂದ ತಿಳ್ಕೊಬೇಕಾಗಿಲ್ಲ . ಯಾವ ವ್ಯಕ್ತಿನೂ 'ನಾನು ಗ್ರೇಟ್' ಅಂದ್ಕೋಬಾರ್ದು, 'ನಾವು' ಅಂತ ಅಂದ್ಕೋಬೇಕು. ನನ್ನ ಭಾಷೆ ಬಗ್ಗೆ ನನಗೆ ಹೆಮ್ಮೆ ಇದೆ, ನಮ್ಮ ಭಾಷೆ ಬಗ್ಗೆ ಯಾರೋ ಬೇರೆಯವರು ಬಂದು ಹೇಳ್ಬೇಕಾಗಿಲ್ಲ, ನಮ್ಮ ಭಾಷೆ ಬಗ್ಗೆ ನಮಗೆ ಗೊತ್ತಿದೆ' ಎಂದಿದ್ದಾರೆ ನಟ ಶ್ರೀನಾಥ್.
ಈ ಬೆನ್ನಲ್ಲೇ, ನಟ ಕಮಲ್ ಹಾಸನ್ ಅವರು ಕೇರಳದ ತಿರುವನಂತಪುರಂ ನಲ್ಲಿ ನಡೆಯುತ್ತಿರುವ ಥಗ್ ಲೈಫ್ ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತ 'ನಾನು ಕ್ಷಮೆ ಕೇಳೋದಿಲ್ಲ' ಎಂದಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಕಮಲ್ ಹಾಸನ್ ಅವರಿಗೆ ಅಲ್ಲಿ ಪ್ರಶ್ನೆ ಎದುರಾಗಿದೆ. ಆ ಬಗ್ಗೆ ಮಾತನಾಡುತ್ತ ನಟ ಕಮಲ್ ಹಾಸನ್ 'ಕ್ಷಮೆ ಕೇಳುವಂಥದ್ದು ನಾನೇನು ಹೇಳಿಲ್ಲ' ಎಂದಿದ್ದಾರೆ ಕಮಲ್ ಹಾಸನ್..!
ಚೆನ್ನೈನಲ್ಲಿ ನಡೆದ ಇವೆಂಟ್ನಲ್ಲಿ ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂದಿದ್ದರು ಕಮಲ್ ಹಾಸನ್. ಕರ್ನಾಟಕದಲ್ಲಿ ಕಮಲ್ ಹಾಸನ್ ವಿರುದ್ದ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೆ ಅಲ್ಲ, ಕ್ಷಮೆ ಕೇಳದೇ ಹೋದರೇ ಥಗ್ ಲೈಫ್ ಚಿತ್ರದ ಬಿಡುಗಡೆಗೆ ಅನುಮತಿ ಇಲ್ಲ ಎಂದು ಕೂಡ ಸಂಘಟನೆಗಳು ಹೇಳಿವೆ. ಆದರೆ, ಈ ಬೆನ್ನಲ್ಲೇ ನಟ ಕಮಲ್ ಹಾಸನ್ ಇದೀಗ ಹೇಳಿರುವ ಹೇಳಿಕೆ ಭಾರೀ ಮುಖ್ಯವಾಗಿದೆ.
ಥಗ್ ಲೈಫ್ ಸಿನಿಮಾ ಇದೇ ಜೂನ್.5 ರಂದು ಬಿಡುಗಡೆಗೆ ಸಜ್ಜಾಗಿದೆ. ನಾನು ತಪ್ಪು ಮಾಹಿತಿ ಹೇಳಿಲ್ಲ.. ಇತಿಹಾಸಕಾರರು ಹೇಳಿದ್ದನ್ನೇ ಹೇಳಿದ್ದೇನೆ. ತಮಿಳುನಾಡು ಎಂಥಾ ರಾಜ್ಯ ಎಂದರೆ ಎಲ್ಲಾ ಭಾಷಿಕರಿಗೂ ಗೌರವ ಕೊಟ್ಟಿದೆ. ಒಬ್ಬ ರೆಡ್ಡಿ ತಮಿಳುನಾಡು ಮುಖ್ಯಮಂತ್ರಿ ಆಗಿದ್ದರು, ಒಬ್ಬ ಕನ್ನಡ ಅಯ್ಯಂಗಾರ್ ಮಹಿಳೆ ತಮಿಳುನಾಡು ಸಿಎಂ ಆಗಿದ್ದರು. ರಾಜಕಾರಣಿಗಳಿಗೆ ಬಾಷೆಯ ಬಗ್ಗೆ ಮಾತನಾಡುವ ಅಧಿಕಾರ ಇಲ್ಲ.
ಕನ್ನಡಿಗರು ನನಗೆ ಅತೀವ ಪ್ರೀತಿ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಸಮಸ್ಯೆ ಆದಾಗ ಕನ್ನಡಕ್ಕೆ ಕರೆದು ಕೆಲಸ ಕೊಟ್ಟಿದ್ದಾರೆ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ..‘ಪ್ರೀತಿಯಲ್ಲಿ ಕ್ಷಮೆಯ ಮಾತು ಬರುವುದಿಲ್ಲ..' ಎಂದಿದ್ದಾರೆ ನಟ ಕಮಲ್ ಹಾಸನ್. ಕಮಲ್ ಹಾಸನ್ ಹೇಳಿಕೆಗೆ ಕನ್ನಡದ ನಟರಾದ ಜಗ್ಗೇಶ್ ಹಾಗೂ ಶ್ರೀನಾಥ್ ಅವರು ವಿರೋಧ ವ್ಯಕ್ತಪಡಿಸಿ ಮಾತನ್ನಾಡಿದ್ದು ಈವರೆಗೆ ದಾಖಲಾಗಿದೆ. ಹಾಗೇ, ಕನ್ನಡದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೂಡ ಕಮಲ್ ಮಾತಿಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.