
‘ಅಮ್ಮನ ಮನೆ’ ಎನ್ನುವ ಟೈಟಲ್ ಜೊತೆಗೆ ಸಂಕ್ರಾಂತಿ ಹಬ್ಬ ಕೂಡ ಸೇರಿದ್ದ ಕಾರಣ ಇಡೀ ಕಾರ್ಯಕ್ರಮದಲ್ಲಿ ಸಂಭ್ರಮವೊಂದು ಮನೆ ಮಾಡಿತ್ತು. ಅಮ್ಮನ ಮನೆಗೆ ಬಂದ ಮಹಿಳೆಯರನ್ನು ಬರಿಗೈನಲ್ಲಿ ವಾಪಸ್ ಕಳುಹಿಸದೇ ಬಾಗಿನ ನೀಡುವ ಸಂಪ್ರದಾಯದಂತೆ ಅಲ್ಲಿಯೂ ಬಂದಿದ್ದ ಎಲ್ಲಾ ಮಹಿಳೆಯರಿಗೆ ಬಾಗಿನ ನೀಡಿ ಹರಸಿದ್ದು ವಿಶೇಷವಾಗಿತ್ತು.
ಭಾವುಕರಾದ ರಾಘಣ್ಣ
‘ಅಮ್ಮನ ಮನೆ’ ಹೆಸರಿನಲ್ಲೇ ಅಮ್ಮ ಇರುವ ಹಾಗೆ ರಾಘಣ್ಣ ತಮ್ಮ ಜೀವನದಲ್ಲಿ ಬಂದಿರುವ ತಾಯಿ ಸ್ವರೂಪಿಗಳನ್ನು ನೆನೆದು ಭಾವುಕರಾದರು. ‘ಈ ಟೀಸರ್ ಅನ್ನು ನಮ್ಮ ತಾಯಿ ಬಿಡುಗಡೆ ಮಾಡಿದರೆ ನನಗೆ ಖುಷಿಯಾಗುತ್ತಿತ್ತು. ಅವರು ಇಂದು ನಮ್ಮೊಂದಿಗಿಲ್ಲ. ಆದರೂ ನಮ್ಮ ಅತ್ತೆ (ನಾಗಮ್ಮ) ಕೂಡ ನಮಗೆ ತಾಯಿ ಸಮಾನ. ನಾನು ಚಿಕ್ಕಂದಿನಿಂದಲೂ ಅವರ ಮಡಿಲಲ್ಲೇ ಆಡಿ ಬೆಳೆದವನು. ಅವರು ಒಂದು ಟೀಸರ್ ಬಿಡುಗಡೆ ಮಾಡಲಿ. ನನಗೆ ಮತ್ತೊಬ್ಬ ತಾಯಿಯಾಗಿ ಇರುವುದು ನನ್ನ ಮಡದಿ ಮಂಗಳ. ನನ್ನ ಸುಖ-ದುಃಖದಲ್ಲಿ ಅವಳು ಭಾಗಿಯಾಗಿ ನನ್ನನ್ನು ಮಗನಂತೆ ಸಲುಹಿದ್ದಾಳೆ ಅವಳು ಮತ್ತೊಂದು ಟೀಸರ್ ಬಿಡುಗಡೆ ಮಾಡಲಿ, ನಾನು ಮುಂದೇನಾಗುತ್ತೋ ಎಂದು ಚಿಂತೆ ಮಾಡುತ್ತಿದ್ದಾಗ ನನಗೆ ಧೈರ್ಯ ತುಂಬಿ, ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ್ದು ನನ್ನ ಭಾವಿ ಸೊಸೆ ಶ್ರೀದೇವಿ. ಅವರು ಮಗದೊಂದು ಟೀಸರ್ ಬಿಡುಗಡೆ ಮಾಡಿದರೆ ಚೆನ್ನ’ ಎಂದು ರಾಘಣ್ಣ ಕೊಂಚ ಭಾವುಕರಾಗಿಯೇ ತಮ್ಮ ಮನದಾಸೆ ಹೇಳಿಕೊಂಡರು. ಅದೇ ಪ್ರಕಾರ ಕಾರ್ಯಕ್ರಮ ನಡೆಯಿತು.
ಬೆನ್ನು ತಟ್ಟಿದ ಸೋದರರು
ಇನ್ನುಳಿದ ಹಾಡು ಮತ್ತು ಟೀಸರ್‌ಗಳನ್ನು ಸಹೋದರರಾದ ಪುನೀತ್ ರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ (ಮೈಸೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ) ರಿಲೀಸ್ ಮಾಡಿ ಸಹೋದರನಿಗೆ ಶುಭಾಶಯ ಹೇಳಿದರು.
ಚಿತ್ರದ ಶೀರ್ಷಿಕೆಗೆ ತಕ್ಕಂತೆಯೇ ಸಿನಿಮಾದಲ್ಲಿ ಮೂವರು ತಾಯಂದಿರ ಪಾತ್ರ ಇದೆಯಂತೆ. ‘ಅಮ್ಮ, ಮಡದಿ ಮತ್ತು ಮಗಳ ನಡುವೆ ಒಬ್ಬ ವ್ಯಕ್ತಿಯ ಜೀವನ ಹೇಗೆ ಸಮತೋಲನದಿಂದ ಸಾಗುತ್ತದೆ ಎಂಬುದನ್ನು ತೆರೆಯ ಮೇಲೆ ತಂದಿದ್ದೇವೆ. ಪ್ರೇಕ್ಷಕರು ಅವರವರ ತಾಯಂದಿರ ಜತೆಯೇ ಕುಳಿತು ಈ ಸಿನಿಮಾ ನೋಡಿದರೆ ಹೆಚ್ಚು ಇಷ್ಟವಾಗುತ್ತದೆ’ ಎಂದರು ರಾಘಣ್ಣ. ಚಿತ್ರದ ನಿರ್ದೇಶನ ಮಾಡಿರುವ ನಿಖಿಲ್ ಮಂಜು ಮಾತನಾಡಿ, ಹಿರಿಯ ನಟರೊಂದಿಗೆ ಕೆಲಸ ಮಾಡಿದ್ದು ದೊಡ್ಡ ಅನುಭವ ನೀಡಿತು. ತಾಯಿಯ ಮಹತ್ವವನ್ನು ಹೇಳುವಂತಹ ಚಿತ್ರ ಇದಾಗಲಿದೆ ಎಂದು ಹೇಳಿದರು. ಆತ್ಮಶ್ರೀ ಮತ್ತು ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮಾನಸಿ ಸುಧೀರ್, ರೋಹಿಣಿ ನಾಗೇಶ್, ಕುಮಾರಿ ಶೀತಲ್, ಸುಚೇಂದ್ರ ಪ್ರಸಾದ್, ತಬಲಾ ನಾಣಿ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.