ಹೊಸಬರ ‘ಗಿಣಿ ಹೇಳಿದ ಕಥೆ’ಗೆ ಬಿಡುಗಡೆಯ ಭಾಗ್ಯ ದೊರಕಿದೆ. ಥಿಯೇಟರ್ ಸಿಗದೆ ಮುಂದಕ್ಕೆ ಹೋಗಿತ್ತು. ಈಗ ಚಿತ್ರದ ನಾಯಕ ಕಂ ನಿರ್ಮಾಪಕ ದೇವ್ ರಂಗಭೂಮಿ, ತಮ್ಮ ಮೊದಲ ಚಿತ್ರದ ಬಿಡುಗಡೆಯ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಓವರ್ ಟು ದೇವ್ ರಂಗಭೂಮಿ.
ಗಿಣಿಗೆ ಬಿಡುಗಡೆಯ ಭಾಗ್ಯ
ನಮ್ಮ ಚಿತ್ರ ಎರಡು ವಾರಗಳ ಹಿಂದೆಯೇ ತೆರೆಗೆ ಬರಬೇಕಿತ್ತು. ಪರಭಾಷೆ ಚಿತ್ರಗಳ ಅಬ್ಬರದಲ್ಲಿ ಕನ್ನಡ ಒಂದು ಸಿನಿಮಾ ತೆರೆಗೆ ಬರುವುದಕ್ಕೆ ಎಷ್ಟುಕಷ್ಟಎಂಬುದನ್ನು ಸ್ವತಃ ನಾನೇ ಅನುಭವಿಸಿದ್ದೇನೆ. ನಮ್ಮ ಊರಿನಲ್ಲೇ ನಮ್ಮ ಕನ್ನಡ ಚಿತ್ರಗಳಿಗೆ ಈ ಗತಿ ಬರಬಾರದಿತ್ತು. ಇಡೀ ಉದ್ಯಮ ಈ ಬಗ್ಗೆ ಯೋಚಿಸಿಬೇಕಿದೆ. ಆದರೆ, ನಮ್ಮ ‘ಗಿಣಿ ಹೇಳಿದ ಕಥೆ’ ಕೊನೆಗೂ ಬಿಡುಗಡೆ ಆಗುತ್ತಿದೆ. ಕಷ್ಟವಾದರೂ ಪ್ರೀತಿಯಿಂದ ಮಾಡಿರುವ ಸಿನಿಮಾ. ಹೀಗಾಗಿ ಚಿತ್ರದ ಹೆಸರಿನಷ್ಟೇ ಇಡೀ ಸಿನಿಮಾ ಆಪ್ತವಾಗಿರುತ್ತದೆ.
ತಮಾಷೆ ನೆರಳಿನಲ್ಲಿ ಗಂಬೀರ ಕತೆ
ಈ ಚಿತ್ರದಲ್ಲಿ ನಾನು ನಾಯಕ, ನಿರ್ಮಾಪಕನಾಗುವ ಜತೆ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಬರೆದಿದ್ದೇನೆ. ಇದನ್ನು ನಾಗರಾಜ್ ಉಪ್ಪುಂದ ನಿರ್ದೇಶಿಸಿದ್ದಾರೆ. ತಪ್ಪಾಗಿರುವ ವಿಚಾರಗಳನ್ನು ಗಂಬೀರವಾಗಿ ಹೇಳಿದರೆ ಅದರ ಪರಿಣಾಮವೇ ಬೇರೆ ಆಗುತ್ತದೆ. ಅದನ್ನೇ ತಮಾಷೆಯಾಗಿ ಹೇಳಿದರೆ ಹೇಗಿರುತ್ತದೆ? ಅದರಲ್ಲೂ ಈ ವಿಚಾರಗಳನ್ನು ಒಂದು ಗಿಣಿ ಹೇಳಿದರೆ ಹೇಗಿರುತ್ತದೆ ಎನ್ನುವ ಕುತೂಹಲದಲ್ಲಿ ಹುಟ್ಟಿಕೊಂಡಿರುವ ಕತೆ ಇದು. ಹೀಗಾಗಿ ಪ್ರೇಕ್ಷಕರು ಗಿಣಿ ಹೇಳುವ ಕಥೆಗೆ ಕಾಯುತ್ತಾರೆ. ಪಾತ್ರಧಾರಿಗಳು ಗಿಣಿ ಹೇಳಿದಂತೆ ಸಾಗುತ್ತಾರೆ. ಮನರಂಜನೆ ಜತೆ ಜತೆಗೆ ಈಗಿನ ಜನರೇಷನ್‌ನ ಜೀವನ ಸಂದೇಶವನ್ನು ಈ ಚಿತ್ರದ ಮೂಲಕ ಹೇಳಿದ್ದೇನೆ.
ನಾನೇ ಯಾಕೆ ಹೀರೋ ಆದೆ?
ರಂಗಭೂಮಿಯ ಹಿನ್ನೆಲೆಯಿಂದ ಬಂದವನು ನಾನು. ಆದರೂ ನಾನು ಹೀರೋ ಆಗುವಂಥ ಮುಖವಲ್ಲ. ಆದರೆ, ಚಿತ್ರದ ಕತೆಗೆ ಒಂದು ಸಾದಾ ಸೀದಾ ನಾರ್ಮಲ್ ಮುಖ ಬೇಕಿತ್ತು. ಹೀರೋ ಹಾಸ್ಯ ನಟರಿಂದ ಏಟು ತಿನ್ನೋ ಸಂದರ್ಭ ಬಂದರೂ ಹಿಂದೇಟು ಹಾಕೋದಿಲ್ಲ. ಆ ಪಾತ್ರ ಪ್ರೇಕ್ಷಕರ ಪಾಲಿಗೆ ತಮ್ಮ ನಡುವಿನದ್ದೇ ಅನಿಸಬೇಕು. ಕಥೆಯ ಸಮಯ ಸಂದರ್ಭಗಳೇ ನಾಯಕನ ಪಾತ್ರಕ್ಕೆ ಹೀರೋ ಇಮೇಜು ತಂದು ಕೊಡುತ್ತವೆ. ಈ ಕಾರಣಕ್ಕೆ ನಾನೇ ಹೀರೋ ಆದೆ.
ಕತೆಯ ವಿಶೇಷತೆಗಳು
ಈ ಚಿತ್ರ ಸಾಕಷ್ಟುವಿಶೇಷತೆಗಳನ್ನು ಒಳಗೊಂಡಿದೆ. ಆ ಪೈಕಿ ಇಲ್ಲಿ ಬರುವ ಗಿಣಿಯ ಪ್ರೇಮಕತೆ. ಜತೆಗೆ ನಾಯಕಿಯಿಂದ ಅಂತರ ಕಾಯ್ದುಕೊಂಡೇ ಪ್ರೀತಿಸುವ ನಾಯಕನ ಪಾತ್ರ. ಅಂದರೆ ರೆಗ್ಯೂಲರ್ ಚಿತ್ರಗಳ ಬೇಲಿ ದಾಟಿರುವ ಪ್ರೇಮದ ಪರಿ ಇಲ್ಲಿದೆ. ಹತ್ತಿರದ್ದರೂ ದೂರ ನಿಂತೇ ಪ್ರೀತಿಸೋ ಮನಸುಗಳ ಪಿಸು ಮಾತುಗಳಿವೆ. ಹಳ್ಳಿ ಸೊಗಡಿನಲ್ಲೇ ಸಾಗುವುದು ‘ಗಿಣಿ ಹೇಳಿದ ಕಥೆ’ಯ ಪ್ರಧಾನ ಲಕ್ಷಣ. ಇದರ ನಾಯಕನ ಮನಸ್ಥಿತಿಯೂ ಅದಕ್ಕೆ ಪೂರಕವಾಗಿಯೇ ಇರುತ್ತೆ. ಹತ್ತಿರ ಇದ್ದರೂ ನಾಯಕಿಯ ನಡುವೆ ಒಂದು ಅಂತರ ಕಾಯ್ದುಕೊಂಡೇ ಪ್ರೀತಿಸೋದು ಚಿತ್ರದ ಹೈಲೈಟ್. ಚಿತ್ರದುದ್ದಕ್ಕೂ ಒಂದು ಸಾರಿಯೂ ನಾಯಕ, ನಾಯಕಿಯನ್ನು ಮುಟ್ಟೋದಿಲ್ಲ. ಆದರೆ ಅದೊಂದು ಸಲ ಮುಟ್ಟೋ ಸಂದರ್ಭ ಬರುತ್ತೆ. ಅದರ ಪರಿಣಾಮ ಏನಾಗುತ್ತೆ ಅನ್ನೋದು ಕೂಡಾ ಈ ಚಿತ್ರದ ಟ್ವಿಸ್ಟುಗಳಲ್ಲೊಂದು.
ಪ್ರೀತಿಭಾವಂತರ ತಂಡ ಇಲ್ಲಿದೆ
ಮೊದಲ ನಿರ್ದೇಶನವಾದರೂ ನಾಗರಾಜ್ ಉಪ್ಪುಂದ ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. ಸಂಗೀತಕ್ಕೆ ಹಿತನ್ ಹಾಸನ್ ಮಾಡಿದ್ದಾರೆ. ಹಾಡುಗಳು ಕೇಳುವಂತಿವೆ. ಬಹುತೇಕ ರಂಗಭೂಮಿ ಕಲಾವಿದರೇ ನಟಿಸಿದ್ದಾರೆ. ಯುವ ಪ್ರತಿಭೆಗಳಾದ ರಾಜನೇಸರ ಹಾಗೂ ಪ್ರದ್ಯುಮ್ನ ನರಹಳ್ಳಿ ಬರೆದಿರುವ ಹಾಡು ಹಿಟ್ ಆಗಿದೆ. ನಾಗರಾಜ್ ಉಪ್ಪುಂದ ಅವರೇ ನಿರ್ದೇಶನದ ಜತೆಗೆ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಕಲನ ಕಾರ ರವಿಚಂದ್ರ ಕುಮಾರ್ ಅವರು ಇಲ್ಲೂ ಸಂಕಲನ ಮಾಡಿದ್ದಾರೆ. ಹೀಗೆ ಪ್ರತಿಭಾವಂತರ ತಂಡವೇ ಈ ಚಿತ್ರಕ್ಕೆ ದುಡಿದೆ.