ಕೆಜಿಎಫ್-2 ರಿಲೀಸ್ ಬಗ್ಗೆ ಏನಂತಾರೆ ಪ್ರಶಾಂತ್ ನೀಲ್?

Published : Jan 18, 2019, 09:39 AM IST
ಕೆಜಿಎಫ್-2 ರಿಲೀಸ್ ಬಗ್ಗೆ ಏನಂತಾರೆ ಪ್ರಶಾಂತ್ ನೀಲ್?

ಸಾರಾಂಶ

ಸಿನಿಮಾ ಬಿಡುಗಡೆಯ ನಂತರ ಮೊದಲ ಬಾರಿಗೆ ‘ಕೆಜಿಎಫ್‌’ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಚಿತ್ರದ ನಾಯಕ ಯಶ್‌, ನಿರ್ದೇಶಕ ಪ್ರಶಾಂತ್‌ ನೀಲ್‌, ನಿರ್ಮಾಪಕ ವಿಜಯ್‌ ಕಿರಗಂದೂರು, ಅನಂತ್‌ನಾಗ್‌, ಅಚ್ಯುತ್‌ ಕುಮಾರ್‌ ಸೇರಿದಂತೆ ಇಡೀ ಚಿತ್ರತಂಡ ಹಾಜರಾಯಿತು. ಅದು 25 ದಿನಗಳ ಸಂಭ್ರಮವನ್ನು ಹೇಳಿಕೊಳ್ಳುವ ಸಂದರ್ಭ. ತಮ್ಮ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಎಲ್ಲರೂ ಮಾತಾದರು.

ಪ್ರಶಾಂತ್‌ ನೀಲ್‌: ಇಷ್ಟುದೊಡ್ಡ ಸಕ್ಸಸ್‌ ಕೊಟ್ಟಕನ್ನಡಿಗರಿಗೆ ಮೊದಲಿಗೆ ಕೋಟಿ ವಂದನೆಗಳು. ಇದು ನನ್ನ ಸಿನಿಮಾ ಅಲ್ಲ. ನಮ್ಮ ಮತ್ತು ನಿಮ್ಮೆಲ್ಲರ ಚಿತ್ರ. ನನ್ನ ಶಕ್ತಿ ಈ ಚಿತ್ರಕ್ಕಾಗಿ ದುಡಿದ ತಾಂತ್ರಿಕ ತಂಡ. ಅವರು ಇಲ್ಲದಿದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ. ಮೂರು- ನಾಲ್ಕು ವರ್ಷ ಒಂದು ದೊಡ್ಡ ತಂಡ ಸೇರಿಕೊಂಡು ಕೆಲಸ ಮಾಡಿದೆ. ಆದರೂ ನಾವು ಈಗ ಪಾರ್ಟ್‌ 1ನಲ್ಲಿ ಹೇಳುವುದು ಕೇವಲ ಅರ್ಧ ಕತೆಯನ್ನು ಮಾತ್ರ. ಪೂರ್ತಿ ಕತೆ ಗೊತ್ತಾಗಬೇಕು ಅಂದರೆ ಪಾರ್ಟ್‌ 2 ನೋಡಬೇಕು. ಆ ಕತೆ ದೊಡ್ಡ ಮಟ್ಟದಲ್ಲಿ ಹೇಳಲಿದ್ದೇವೆ.

ಯಶ್‌: ನನ್ನ ಪಾಲಿಗೆ ಇದು ಸಾರ್ಥಕ ಕ್ಷಣ. ಕನ್ನಡ ಚಿತ್ರವೊಂದಕ್ಕೆ ಇಷ್ಟುದೊಡ್ಡ ಮಟ್ಟದಲ್ಲಿ ಗೆಲುವು ಸಿಗುತ್ತದೆ ಅಂದರೆ ಅದು ನಮ್ಮ ಚಿತ್ರರಂಗದ ತಾಕತ್ತು. ಅದನ್ನು ದೇಶದ ಮಟ್ಟದಲ್ಲಿ ತೋರಿಸಿದ್ದೇವೆ. ಈ ಚಿತ್ರದಲ್ಲಿ ಮಾತ್ರವಲ್ಲ, ನನ್ನ ಹಲವು ಚಿತ್ರಗಳಲ್ಲಿ ಅನಂತ್‌ನಾಗ್‌ ಅವರೊಂದಿಗೆ ನಟಿಸಿದ್ದೇನೆ. ಧಾರಾವಾಹಿಗಳಿಂದಲೂ ಅವರ ಜತೆ ನನ್ನ ಒಡನಾಟವಿದೆ. ನನ್ನ ಪಾಲಿಗೆ ಅವರೇ ನಟನಾ ಶಾಲೆ. ಅವರನ್ನು ಗುರುಗಳಂತೆ ನೋಡಿ ಕಲಿತಿದ್ದೇನೆ. ಈ ಚಿತ್ರಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬರದ್ದೂ ಒಂದೊಂದು ಶ್ರಮ ಇದೆ. ಅವರೆಲ್ಲರ ಜತೆಗೆ ಇದೊಂದು ಅದ್ಭುತ ಪಯಣ.

ಅನಂತ್‌ನಾಗ್‌: ನಿರ್ದೇಶಕರು ನನ್ನ ಬಳಿ ಮೊದಲು ಬಂದಿದ್ದು ಟೀಸರ್‌ಗೆ ಧ್ವನಿ ಬೇಕು ಅಂತ. ಆ ಮೇಲೆ ಚಿತ್ರದಲ್ಲಿ ನನಗಾಗಿಯೇ ಅವರೊಂದು ಪಾತ್ರ ಮಾಡಿದ್ದಾರೆಂದು ತಿಳಿದು, ಕತೆ ಕೇಳಿ ಒಪ್ಪಿ ಸಿನಿಮಾದಲ್ಲಿ ನಟಿಸಿದೆ. ಡಬ್ಬಿಂಗ್‌ ಮಾಡುವಾಗ ತೆರೆ ಮೇಲೆ ಮೇಕಿಂಗ್‌ ನೋಡಿ ಅಚ್ಚರಿ ಆಯಿತು. ಡೇವಿಡ್‌ ಲೀನ್‌ ಸಿನಿಮಾದಂತೆ ಕಂಡಿತು. ಇದೊಂದು ಭಯಾನಕವಾಗಿ ಹಿಟ್‌ ಆಗುವ ಸಿನಿಮಾ ಅಂದುಕೊಂಡೆ. ತುಂಬಾ ವರ್ಷಗಳ ನಂತರ ನನ್ನ ಪಾತ್ರಕ್ಕೆ ನಾನೇ ಹಿಂದಿಯಲ್ಲಿ ಡಬ್‌ ಮಾಡಿದ್ದು ಅದ್ಭುತ ಅನುಭವ. ಯಶ್‌, ನನಗೆ ಧಾರಾವಾಹಿಗಳಿಂದಲೂ ಗೊತ್ತು. ಒಂದೇ ಬಾರಿಗೆ ಹತ್ತು ಮೆಟ್ಟಿಲು ಹತ್ತಿಬಂದ ನಟ.

ವಿಜಯ್‌ ಕಿರಗಂದೂರು: ಈ ಚಿತ್ರದ ಗೆಲುವು ಎಲ್ಲರಿಗೂ ಸೇರುತ್ತದೆ. ಇನ್ನೂ ಹಲವು ಕಡೆ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ, ರಜನಿಕಾಂತ್‌ ಅವರ ‘ಪೆಟ್ಟ’, ಅಜಿತ್‌ ‘ವಿಸ್ವಾಸಂ’ ಹಾಗೂ ತೆಲುಗಿನ ಎರಡು ದೊಡ್ಡ ಸಿನಿಮಾಗಳು ಬಂದಿದ್ದರಿಂದ ಸ್ಕ್ರೀನ್‌ಗಳು ಕಡಿಮೆ ಆಗಿವೆ. ಇನ್ನೂ ಕೆಜಿಎಫ್‌ 100 ಕೋಟಿ ಗಳಿಸಿದೆ, 200 ಕೋಟಿ ಕ್ಲಬ್‌ ಸೇರಿದೆ ಎನ್ನುತ್ತಿದ್ದಾರೆ. ಇದ್ಯಾವುದು ಅಧಿಕೃತವಲ್ಲ. ಹೀಗಾಗಿ ನಮ್ಮ ಚಿತ್ರದ ಹೆಸರಿನಲ್ಲಿ ಓಡಾಡುತ್ತಿರುವ ಬಾಕ್ಸ್‌ಪೀಸ್‌ ಕಲೆಕ್ಷನ್‌ ಸುದ್ದಿಗಳಿಗೂ ನಮ್ಮ ಚಿತ್ರತಂಡಕ್ಕೂ ಸಂಬಂಧವಿಲ್ಲ.

ಶ್ರೀನಿಧಿ ಶೆಟ್ಟಿ: ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಮುಂದಿನ ಭಾಗದಲ್ಲಿ ನನ್ನ ಪಾತ್ರ ದೊಡ್ಡ ಮಟ್ಟದಲ್ಲಿ ಇರುತ್ತದಂತೆ ಎಂದು ನಿರ್ದೇಶಕರು ಹೇಳಿದ್ದಾರೆ. ಹೀಗಾಗಿ ಪಾರ್ಟ್‌ 2ಗೆ ಎದುರು ನೋಡುತ್ತಿದ್ದೇನೆ.

ಚಿತ್ರದ ನಟರಾದ ಅಚ್ಯುತ್‌ ಕುಮಾರ್‌, ರಾಮ್‌, ಅವಿನಾಶ್‌, ವಿನಯ್‌, ತಾರಕ್‌ ಪೊನ್ನಪ್ಪ, ಹರೀಶ್‌ ರಾಯ್‌, ಅರ್ಚನಾ ಹಾಗೂ ಛಾಯಾಗ್ರಾಹಕ ಭುವನ್‌ ಗೌಡ ಕೂಡ ಹಾಜರಿದ್ದು ಚಿತ್ರದ ಯಶಸ್ಸಿನ ಕುರಿತು ಮಾತನಾಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್