
ಬೆಂಗಳೂರು (ಅ. 10): ಯಶ್ ಅಭಿನಯದ ಬಹು ನಿರೀಕ್ಷೆಯ ‘ಕೆಜಿಎಫ್’ ಚಿತ್ರದ ಬಿಡುಗಡೆಯ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ. ಈ ಹಿಂದೆ ಅಂದುಕೊಂಡಂತೆ ಸಿನಿಮಾ ನಂ.16 ಕ್ಕೆ ತೆರೆಗೆ ಬರಬೇಕಿತ್ತು.
ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡುವುದಕ್ಕಾಗಿಯೇ ದಿನ ನಿಗದಿ ಮಾಡಿದ್ದ ಚಿತ್ರತಂಡ ಟೈಟಲ್ ಘೋಷಣೆಗೆ ಭಾರಿ ಬಿಲ್ಡಪ್ ನೀಡಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಬಿಡುಗಡೆಯ ದಿನಾಂಕವನ್ನು ಇದ್ದಕ್ಕಿದ್ದಂತೆ ಮುಂದೂಡಲಾಗಿದೆ.
ಸದ್ಯ ಈಗ ಬರುತ್ತಿರುವ ಮಾಹಿತಿಯಂತೆ ಡಿ. 21 ಅಥವಾ 28 ರಂದು ಕೆಜಿಎಫ್ ತೆರೆಗೆ ಬರಲಿದೆ. ಈ ದಿನಾಂಕಗಳು ಕೂಡ ಇನ್ನೂ ಅಂತಿಮವಾಗಿಲ್ಲ. ಆದರೂ ಚಿತ್ರತಂಡ ಡಿಸೆಂಬರ್ ಕೊನೆಯ ವಾರದಲ್ಲಿ ಬರುವುದಕ್ಕೆ ನಿರ್ದೇಶಿಸಿದೆ.
ಯಶ್ ಅವರಿಗೆ ಡಿಸೆಂಬರ್ ತಿಂಗಳು ಲಕ್ಕಿ. ಆ ಕಾರಣಕ್ಕೆ ಅದೇ ತಿಂಗಳು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂಬುದು ಒಂದು ವಾದವಾದರೆ, ‘ಕೆಜಿಎಫ್’ಗೆ ಇನ್ನೊಂದಿಷ್ಟು ಚಿತ್ರೀಕರಣ ಬಾಕಿ ಇದೆ. ಆದರೆ, ಮತ್ತೊಂದು ಕಡೆ ಯಶ್ ಅವರು ‘ಮೈ ನೇಮ್ ಈಸ್ ಕಿರಾತಕ’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡ ಕಾರಣ ಬಾಕಿ ಉಳಿದಿರುವ ಚಿತ್ರೀಕರಣ ಮಾಡುವುದಕ್ಕೆ ಆಗಲಿಲ್ಲ. ಹೀಗಾಗಿ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ ಎಂಬುದು ಮತ್ತೊಂದು ಸುದ್ದಿ.
ದರ್ಶನ್ ಅವರ ಅಭಿನಯದ ‘ಯಜಮಾನ’ ಅಥವಾ ‘ಕುರುಕ್ಷೇತ್ರ’ ಈ ಎರಡರಲ್ಲಿ ಯಾವುದಾದರೂ ಒಂದು ಸಿನಿಮಾ ಡಿಸೆಂಬರ್ ಕೊನೆಯ ವಾರ ತೆರೆಗೆ ಬರುವ ಸಾಧ್ಯತೆಗಳಿದ್ದವು. ಈಗ ಬಂದಿರುವ ಮಾಹಿತಿಯಂತೆ ಈ ಎರಡೂ ಸಿನಿಮಾಗಳು ಡಿಸೆಂಬರ್‌ನಲ್ಲಿ ತೆರೆಗೆ ಬರುವುದಿಲ್ಲ. ಹೀಗಾಗಿ ಕೆಜಿಎಫ್ ಚಿತ್ರವನ್ನು ಡಿಸೆಂಬರ್‌ನಲ್ಲಿ ತೆರೆಗೆ ತರುವುದಕ್ಕೆ ಹೊರಟಿದೆ ಚಿತ್ರತಂಡ ಎನ್ನಲಾಗುತ್ತಿದೆ.
ಆದರೂ ದೊಡ್ಡ ಸಿನಿಮಾ ಪದೇ ಪದೇ ಬಿಡುಗಡೆಯ ದಿನಾಂಕವನ್ನು ಮುಂದೂಡುತ್ತಿರುವುದರಿಂದ ಚಿತ್ರದ ಸುತ್ತ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಇದಕ್ಕೆಲ್ಲ ಬಿಡುಗಡೆಯ ದಿನವೇ ಉತ್ತರ ಸಿಗಲಿದೆ ಅನಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.