
ಬೆಂಗಳೂರು (ಅ. 10): ಐಶಾನಿ ಶೆಟ್ಟಿ ಹಾಗೂ ಪ್ರಖ್ಯಾತ್ ಪರಮೇಶ್ ನಟನೆಯ ‘ನಡುವೆ ಅಂತರವಿರಲಿ’ ಚಿತ್ರಕ್ಕೆ ಹೊಸ ವಿವಾದವೊಂದು ಸುತ್ತಿಕೊಳ್ಳುವ ಅಪಾಯಗಳು ಕಾಣುತ್ತಿವೆ. ಅದಕ್ಕೆ ಕಾರಣ ಚಿತ್ರದ ಕ್ಲೈಮ್ಯಾಕ್ಸ್.
ಈಗ ತೆರೆಕಂಡು ನೋಡುಗರಿಂದ ಮೆಚ್ಚುಗೆ ಗಳಿಸುತ್ತಿರುವ ಈ ಚಿತ್ರವನ್ನು ನಿರ್ದೇಶಿಸಿರುವುದು ರವೀನ್. ಮೊದಲ ಪ್ರಯತ್ನದಲ್ಲೇ ಅತ್ಯಂತ ಆಪ್ತವಾದ, ಭಾವುಕ ಚಿತ್ರವೊಂದನ್ನು ಕಟ್ಟಿಕೊಟ್ಟಿದ್ದಾರೆ. ಈ ಜನರೇಷನ್‌ಗೆ ಇಂಥ ಸಿನಿಮಾ ಮತ್ತು ಕತೆ ಅಗತ್ಯ ಎನ್ನುವಷ್ಟರ ಮಟ್ಟಿಗೆ ಈ ಸಿನಿಮಾ ಪ್ರೇಕ್ಷಕರಿಂದ ಹೊಗಳಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಇದು ತಮಿಳಿನ ರೀಮೇಕ್ ಚಿತ್ರ ಎಂಬುದು ಬಹುತೇಕರಿಗೆ ಗೊತ್ತಿಲ್ಲ.
ಚಿತ್ರತಂಡ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ, 2013 ರಲ್ಲಿ ಬಂದ ತಮಿಳಿನ ‘ಅದಲಾಲ್ ಕಾದಲ್ ಸೆವೇರೈ’ ಎನ್ನುವ ಚಿತ್ರದ ರೀಮೇಕು. ಅಧಿಕೃತವಾಗಿ ಹೇಳಿಕೊಂಡಿಲ್ಲ ಎನ್ನುವುದು ಬಿಟ್ಟರೆ ರೀಮೇಕ್ ಮಾಡುವುದರಲ್ಲಿ ಮಾಡಿದ್ದರಲ್ಲಿ ತಪ್ಪಿಲ್ಲ ಬಿಡಿ ಎನ್ನುವವರು ಇಲ್ಲಿ ಕೇಳಿ.
‘ನಡುವೆ ಅಂತರವಿರಲಿ’ ಚಿತ್ರವನ್ನು ನೋಡಿದ ಪ್ರತಿಯೊಬ್ಬರು ಮೆಚ್ಚಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಹಾಡು ಮತ್ತು ಮಗು ಎಪಿಸೋಡ್‌ಗಳು. ಐದು ನಿಮಿಷ ಕಾಲ ಹಾಡಿನೊಂದಿಗೆ ಬರುವ ಮಗುವಿನ ದೃಶ್ಯಗಳನ್ನು ಇಷ್ಟೊಂದು ಗಾಢವಾಗಿ ತೋರಿಸುವುದಕ್ಕೆ ನಿರ್ದೇಶಕರು ಎಷ್ಟು ಕಷ್ಟಪಟ್ಟಿರಬೇಕು ಎನ್ನುವ ಉದ್ಗಾರ ಬರುತ್ತದೆ.
ಆದರೆ, ಈ ಐದು ನಿಮಿಷದ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಂಡಿರುವ ಮಗು ಮತ್ತು ದೃಶ್ಯಗಳು ಹಾಗೂ ಹಾಡಿನ ರಿದಂ ಎಲ್ಲವನ್ನೂ ಯಥವತ್ತಾಗಿ ಕಟ್ ಆ್ಯಂಡ್ ಪೇಸ್ಟ್ ಮಾಡಲಾಗಿದೆ.
ಮೂಲ ತಮಿಳು ಚಿತ್ರದ ದೃಶ್ಯಗಳನ್ನೇ ನೇರವಾಗಿ ಕನ್ನಡದ ಚಿತ್ರಕ್ಕೆ ಅಂಟಿಸಿ ಸಿನಿಮಾ ಮುಗಿಸಿದ್ದಾರೆ. ಇದು ರೀಮೇಕ್ ಚಿತ್ರ ಎಂದು ಹೇಳಿಕೊಂಡಿಲ್ಲ, ರೀಮೇಕ್ ಹೆಸರಿನಲ್ಲಿ ಚಿತ್ರದ ನಿಜವಾದ ಶಕ್ತಿ ಎನಿಸಿಕೊಂಡಿರುವ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಹೊಸದಾಗಿ ಚಿತ್ರೀಕರಣ ಮಾಡುವ ಬದಲು ತಮಿಳು ಚಿತ್ರದ ದೃಶ್ಯಗಳನ್ನೇ ಜೋಡಿಸಿ ಅದಕ್ಕೊಂದು ಕನ್ನಡ ಸಾಹಿತ್ಯದ ಹಾಡು ರಚಿಸಿದ್ದಾರೆ.
ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚಿಕೊಳ್ಳುತ್ತಿರುವ ಹಿಂದೆಯೇ ‘ನಡುವೆ ಅಂತರವಿರಲಿ’ ಚಿತ್ರ ತಂಡದ ಮೇಲೆ ಮೂಲ ಚಿತ್ರದಿಂದ ಎತ್ತಿ ಕಟ್ ಆ್ಯಂಡ್ ಪೇಸ್ಟ್ ಮಾಡಿಕೊಂಡಿರುವ ಅರೋಪ ಬರುತ್ತಿದೆ. ಕನ್ನಡ ಚಿತ್ರದ ಕ್ಲೈಮ್ಯಾಕ್ಸ್ ಕ್ರೆಡಿಟ್ಟು ಮೂಲ ತಮಿಳು ನಿರ್ದೇಶಕರಿಗೋ, ಕನ್ನಡ ನಿರ್ದೇಶಕರಿಗೋ? ಇದಕ್ಕೆ ಚಿತ್ರತಂಡ ಏನು ಹೇಳುತ್ತೆ?.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.