ಟ್ರೇಲರ್‌ನಿಂದಲೇ ಸದ್ದು ಮಾಡುತ್ತಿದೆ ಅನುಕ್ತಾ ಸಿನಿಮಾ | ಸಿಕ್ಕಾಪಟ್ಟೆ ಡಿಫರೆಂಟಾಗಿದೆ ಈ ಸಿನಿಮಾ | ಕರಾವಳಿಯ ಭೂತಾರಾದನೆಯ ಕಥೆಯನ್ನು ಒಳಗೊಂಡಿದೆ ಈ ಚಿತ್ರ
ಬೆಂಗಳೂರು (ಜ. 31): ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನದ ಅನುಕ್ತ ಬಿಡುಗಡೆಗೆ ಅಣಿಗೊಂಡಿದೆ. ವರ್ಷಾರಂಭದಲ್ಲಿಯೇ ಪರಿಶುದ್ಧ ಕನ್ನಡ ಶೀರ್ಷಿಕೆಯಿಂದ, ಟ್ರೈಲರ್‍ನಿಂದ ಸದ್ದು ಮಾಡುತ್ತಿರೋ ಈ ಚಿತ್ರದ ಪ್ರತೀ ವಿದ್ಯಮಾನಗಳತ್ತಲೂ ಪ್ರೇಕ್ಷಕರು ದೃಷ್ಟಿ ನೆಟ್ಟಿದ್ದಾರೆ. ಆದರೆ ಪ್ರೇಕ್ಷಕರ ಮನಸಲ್ಲಿಯೇ ಅದೆಷ್ಟೋ ಪ್ರಶ್ನೆಗಳು ಗೂಡು ಕಟ್ಟಿಕೊಂಡಿವೆ.
ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರವನ್ನು ಹರೀಶ್ ಬಂಗೇರ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕವೇ ಇದೊಂದು ಥ್ರಿಲ್ಲರ್ ಕಥಾನಕ ಹೊಂದಿರೋ ಸಿನಿಮಾ ಎಂಬ ಸುಳಿವೂ ಕೂಡಾ ಸಿಕ್ಕಿದೆ. ಇದರೊಂದಿಗೇ ತುಳುನಾಡ ಪರಂಪರೆಯ ಭೂತ ಕೋಲದ ಮುದವೂ ಇಲ್ಲಿದೆ ಎಂಬುದೂ ಜಾಹೀರಾಗಿದೆ.
ಥಿಯೇಟರ್ ಹೊಕ್ಕ ಪ್ರತೀ ಪ್ರೇಕ್ಷಕರನ್ನೂ ಅಚ್ಚರಿಗೊಳಿಸುವಂಥಾ ಸಾಲು ಸಾಲು ವಿಚಾರಗಳು ಈ ಚಿತ್ರದಲ್ಲಿವೆಯಂತೆ. ಕನ್ನಡದ ಮಟ್ಟಿಗೆ ಬೇರೆಯದ್ದೇ ಬಗೆಯ ಕಥೆ, ನಿರೂಪಣೆ ಮತ್ತು ದೃಶ್ಯ ವೈಭವ ಹೊಂದಿರೋ ಈ ಸಿನಿಮಾದ ಶೀರ್ಷಿಕೆಯ ಅರ್ಥವೇ ಹೇಳದಿರುವುದು. ಹಾಗೆಂದ ಮೇಲೆ ಹೇಳಲಾಗದಂಥಾದ್ದೇನೋ ಗಹನವಾದ ಸಂಗತಿಗಳನ್ನ ಖಂಡಿತಾ ಈ ಚಿತ್ರ ಒಳಗೊಂಡಿದೆ.