ಸಂದರ್ಶನ: ಕೆಜಿಎಫ್ ಪಾತ್ರದ ಗುಟ್ಟು ಬಿಟ್ಟುಕೊಟ್ಟ ನಾಯಕಿ

By Kannadaprabha NewsFirst Published Nov 19, 2018, 9:02 AM IST
Highlights

ಮಾಡೆಲ್  ಲೋಕದಲ್ಲಿ ಚಿತ್ರರಂಗಕ್ಕೆ ಬಂದಿರುವ ಮತ್ತೊಬ್ಬ ನಟಿ ಶ್ರೀನಿಧಿ ಶೆಟ್ಟಿ. ಮಂಗಳೂರು ಮೂಲ. ಬೆಳೆದಿದ್ದು ಬಾಂಬೆ ಅಂಗಳದಲ್ಲಿ. ಓದಿದ್ದು ಬೆಂಗಳೂರಿನಲ್ಲಿ. ಮಾಡೆಲಿಂಗ್ ಕನಸು ಕಂಡು ಈಡೇರಿಸಿಕೊಂಡಿದ್ದು ಕೂಡ ಇದೇ ಸಿಲಿಕಾನ್ ಸಿಟಿಯಲ್ಲಿ. ಈಗ ಬೆಳ್ಳಿತೆರೆ ಮೇಲೆ ರಾರಾಜಿಸುವ ಈಕೆಯ ಕನಸಿಗೆ ವೇದಿಕೆಯಾಗಿರುವುದು ‘ಕೆ.ಜಿ.ಎಫ್’ ಸಿನಿಮಾ. ಮೊದಲ ನಟನೆಯ ಟ್ರೇಲರ್ ಬಿಡುಗಡೆ ಮಾಡಿಕೊಂಡ ಶ್ರೀನಿಧಿ ಶೆಟ್ಟಿ ಜತೆಗಿನ ಮಾತುಗಳು ಇಲ್ಲಿವೆ.

ನೀವು ಕೆಜಿಎಫ್ ಚಿತ್ರಕ್ಕೆ ಆಯ್ಕೆ ಆಗಿದ್ದು ಹೇಗೆ?

ನನ್ನ ನಾಯಕಿಯಾಗಿ ಮಾಡಿದ್ದು ಮಾಡೆಲಿಂಗ್ ಜಗತ್ತು. ಮಿಸ್ ಇಂಡಿಯಾ ಕೀರಿಟ ತೊಟ್ಟ ನನ್ನ ಫೋಟೋಗಳನ್ನು ಪತ್ರಿಕೆಗಳಲ್ಲಿ ನೋಡಿದ ನಿರ್ದೇಶಕರು ಆಡಿಷನ್‌ಗೆ ಕರೆದರು. ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಆಡಿಷನ್ಗೆ ಹೋದವಳಿಗೆ ಚಿತ್ರದಲ್ಲಿ ನಾಯಕಿ ಆಗುವ ಅದೃಷ್ಟ ಸಿಕ್ಕಿತು.

ಸಿನಿಮಾಗಳಲ್ಲಿ ನಟಿಯಾಗಬೇಕೆಂದೇ ಮಾಡೆಲಿಂಗ್ ಸೇರಿಕೊಂಡಿದ್ದಾ?

ಹೌದು, ಚಿತ್ರನಟಿಯಾಗಬೇಕೆಂಬುದು ನನ್ನ ಗುರಿಯಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕು. ಎಲ್ಲರು ನನ್ನ ನೋಡಬೇಕು ಎಂಬುದು ನನ್ನ ಆಸೆ. ಅದಕ್ಕೆ ಸೂಕ್ತ ವೇದಿಕೆ ಎಂದರೆ ಸಿನಿಮಾ. ಹೀಗಾಗಿ ಮಾಡೆಲಿಂಗ್‌ನಲ್ಲಿ ಒಂದು ಹಂತಕ್ಕೆ ಗುರುತಿಸಿಕೊಂಡ ಮೇಲೆ ಚಿತ್ರರಂಗಕ್ಕೆ ಹೋಗುವ ನಿರ್ಧಾರ ಮೊದಲೇ ಮಾಡಿಕೊಂಡಿದ್ದೆ. ನನ್ನ ನಿರ್ಧಾರ ಜಾರಿಯಾಗಿದ್ದು, ಆಕಸ್ಮಿಕವಾಗಿ ಸಿಕ್ಕ ‘ಕೆಜಿಎಫ್’ ಚಿತ್ರದಿಂದ.

ಎರಡು ವರ್ಷ ಈ ಸಿನಿಮಾದಿಂದ ನೀವು ಕಲಿತಿದ್ದೇನು? ಈ ಚಿತ್ರ ನಿಮಗೆ ಒಡ್ಡಿದ ಸವಾಲು ಏನು?

ಕೆಜಿಎಫ್ ಸಿನಿಮಾ ನನಗೆ ಒಂದು ಪಾಠ, ಕೆಜಿಎಫ್ ಸೆಟ್ ನನಗೆ ಸ್ಕೂಲ್ ಇದ್ದಂತೆ. ಇನ್ನೂ ಸವಾಲು ಅನಿಸಿದ್ದು, ಅನುಭವಿ ನಟ ಯಶ್ ಮುಂದೆ ನಿಂತಾಗ. ಅವರು ಸಿಂಗಲ್ ಟೇಕ್ ಆರ್ಟಿಸ್ಟ್. ನಾನು ಪದೇ ಪದೇ ಟೇಕ್ ತೆಗೆದುಕೊಳ್ಳುತ್ತೇನೆಯೇ ಎನ್ನುವ ಭಯ ಕಾಡಿತು. ಆದರೆ, ಯಶ್ ಮತ್ತು ನಿರ್ದೇಶಕ ಪ್ರಶಾಂತ್ ಅವರು ಜತೆಗೆ ನಿಂತರು. ಹೀಗಾಗಿ ಸವಾಲನ್ನು ಸುಲಭಕ್ಕೆ ಗೆದ್ದೆ.

ಮೊದಲ ಸಿನಿಮಾ ನಿಮಗೆ ಉಳಿಸಿರುವ ಮರೆಯಲಾಗದ ಖುಷಿ ಏನು?

ಐದು ಭಾಷೆಗೆ ನಾನು ಪರಿಚಯವಾಗುತ್ತಿರುವುದು. ಈ ಅವಕಾಶ ಎಷ್ಟು ಮಂದಿಗೆ ಸಿಗುತ್ತೋ ಇಲ್ವೋ! ನನಗೆ ಸಿಕ್ಕಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹೀಗೆ ಐದು ಭಾಷೆಗಳಿಗೆ ಹೋಗುತ್ತಿದ್ದೇನೆ. ಒಬ್ಬ ನಟಿಗೆ ಇದಕ್ಕಿಂತ ಖುಷಿ ಮತ್ತೊಂದಿಲ್ಲ.

ಕೆಜಿಎಫ್ ಚಿತ್ರದಲ್ಲಿ ನೀವು ಡಾನ್ ಮಗಳು, ಹೀರೋ ಸುಪಾರಿ ತೆಗೆದುಕೊಂಡು ನಿಮಗಾಗಿ ಕೆಜಿಎಫ್‌ಗೆ ಬರುತ್ತಾರಂತೆ ಹೌದಾ?

ಹ್ಹ ಹ್ಹ ಹ್ಹ... ಸೂಪರ್ ಕತೆ. ಆದರೆ, ನೀವು ಹೇಳೋ ಈ ಕತೆ ಚಿತ್ರದಲ್ಲಿ ದೆಯೋ ಇಲ್ವೋ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು. ನನಗೂ ನನ್ನ ಪಾತ್ರದ ಬಗ್ಗೆ ಹೇಳಿಕೊಳ್ಳಬೇಕೆಂದು ಆಸೆ ಇದೆ. ನಿರ್ದೇಶಕರು ಅನುಮತಿ ಕೊಟ್ಟಿಲ್ಲ.

ಚಿತ್ರಕ್ಕೆ ಆಯ್ಕೆ ಆದಾಗ ನಿಮಗಿದ್ದ ಅಭಿಪ್ರಾಯ, ಚಿತ್ರದ ಟ್ರೇಲರ್ ಬಂದ ಮೇಲೆ ಅನಿಸಿದ್ದೇನು?

ನಟ ಯಶ್ ಹೀರೋ. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ. ನಾನು ಯಶ್ ಅಭಿಮಾನಿ. ಅದೇ ರೀತಿ ಉಗ್ರಂ ಚಿತ್ರಕ್ಕೂ ಬಿಗ್ ಫ್ಯಾನ್. ಇಡೀ ಟೀಮ್, ಸೂಪರ್. ತಂಡವನ್ನು ಗಮನದಲ್ಲಿಟ್ಟುಕೊಂಡೇ ನಾನು ನಾಯಕಿ ಆಗುವ ತಯಾರಿ ಮಾಡಿಕೊಂಡೆ. ಕೇವಲ ಒಂದು ಸಿನಿಮಾ ಅಂತ ಶುರುವಾಗಿ ಅದು ಪಂಚ ಭಾಷೆಗಳಿಗೆ ಹೋಗಿ, ಒಂದು ಭಾಗದಲ್ಲಿ ಮಾಡಬೇಕಿದ್ದ ಕತೆ ಎರಡು ಚಾಪ್ಟರ್‌ಗಳಾಗಿ, ಬೇರೆ ಬೇರೆ ಭಾಷೆಯವರು ನಮ್ಮ ಚಿತ್ರದ ಬಗ್ಗೆ ಮಾತನಾಡುವಂತೆ ಮಾಡಿದ ಟ್ರೇಲರ್ ಬಂದ ಮೇಲೆ ಚಿತ್ರದ ಕುರಿತು ನಾನು ಏನು ಹೇಳೋದು? ಪ್ರೇಕ್ಷಕರಷ್ಟೆ ನಾನು ಕುತೂಹಲ ಮತ್ತು ನಿರೀಕ್ಷೆಯಲ್ಲಿ ಚಿತ್ರಕ್ಕಾಗಿ ಕಾಯುತ್ತಿದ್ದೇನೆ.  ಸಿನಿಮಾ ನಾಯಕಿಯಾಗಿ ಟ್ರೇಲರ್ ಬಿಡುಗಡೆಯಾಗುವ ತನಕ

ನೀವು ಎಲ್ಲೂ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಬೇಸರ ಉಂಟಾ?

ಅಯ್ಯೋ ಖಂಡಿತ ಇಲ್ಲ. ಹಾಗೆ ನೋಡಿದರೆ ಪ್ರತಿಯೊಬ್ಬ ಕಲಾವಿದರಿಗೆ ತಾವು ಮಾಡುವ ಸಿನಿಮಾ ಮೂಲಕ ಪ್ರಚಾರ ಸಿಗಬೇಕೆಂದು ಬಯಸುತ್ತಾರೆ. ಅದು ತಪ್ಪಲ್ಲ. ಆದರೆ, ನಮ್ಮ ದೃಷ್ಟಿ ಕೋನವೇ ಬೇರೆ. ನನ್ನ ಪಾತ್ರ ಮಾತ್ರವಲ್ಲ, ಯಾರ ಪಾತ್ರವೂ ಹೊರಗೆ ಬಂದಿಲ್ಲ. ಯಶ್ ಹೇಳಿದಂತೆಯೇ ಇಲ್ಲಿ ಯಾರೂ ಪ್ರಮುಖರಲ್ಲ. ಕತೆಯೇ ಹೀರೋ. 

ಆಡಿಷನ್ ಮುಗಿದ ಮೇಲೆ ವರ್ಕ್ ಶಾಪ್ ಮಾಡಿದ್ರು. ಪೂರ್ವ ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದು. ಕತೆ ಕೆಜಿಎಫ್ ಆಗಿರಬಹುದು. ನನ್ನದು ಇಲ್ಲಿ ಬೆಂಗಳೂರಿನ ಹುಡುಗಿ ಪಾತ್ರ. ಕಳೆದ ಎಂಟು ವರ್ಷಗಳಿಂದ ನಾನು ಬೆಂಗಳೂರಿನಲ್ಲಿದ್ದೇನೆ. ನಾನು ಪಾತ್ರಕ್ಕೆ ಕನೆಕ್ಟ್ ಆಗಿದ್ದೇನೆ.

click me!