ಸುಜಯ್ ಶಾಸ್ತ್ರಿ ನಿರ್ದೇಶನದ, ಟಿಆರ್ ಚಂದ್ರಶೇಖರ್ ನಿರ್ಮಾಣದ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ನಿನ್ನೆಯೇ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ನಾಯಕ ರಾಜ್ ಬಿ ಶೆಟ್ಟಿಜತೆ ಮಾತುಕತೆ.
ರಾಜೇಶ್ ಶೆಟ್ಟಿ
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ಒಪ್ಪಿಕೊಳ್ಳಲು ಏನು ಕಾರಣ?
undefined
- ಈ ಸಿನಿಮಾದ ಕತೆಯಲ್ಲಿ ಯಾವುದೂ ಸೀರಿಯಸ್ ಇಲ್ಲ. ಎಲ್ಲವೂ ತಮಾಷೆ. ಇಂಥದ್ದೊಂದು ಕಾಮಿಡಿ ಪಾತ್ರವನ್ನು ನಾನು ಇದುವರೆಗೆ ಟ್ರೈ ಮಾಡಿಲ್ಲ. ಹಾಗಾಗಿ ಒಂದು ಸಲ ಪ್ರಯತ್ನ ಮಾಡೋಣ ಅನ್ನಿಸಿತು. ಇಂಥದ್ದೊಂದು ಚಿತ್ರ ಚಿತ್ರೋದ್ಯಮದ ಅಗತ್ಯ ಕೂಡ.
- ಇದೊಂದು ಕಂಪ್ಲೀಟ್ ಎಂಟರ್‌ಟೇನ್‌ಮೆಂಟ್ ಸಿನಿಮಾ. ಸ್ಪೂಫ್ ಕಾಮಿಡಿ ಅಂತ ನಾವು ಕರೀತೀವಿ. ಗಂಭೀರ ವಿಚಾರಗಳನ್ನು, ಗಂಭೀರ ಸಿನಿಮಾ ದೃಶ್ಯಗಳನ್ನು ತಮಾಷೆ ಮಾಡುವುದು ಅದರ ಗುಣ.
ಗುಬ್ಬಿ ಪಾತ್ರ ಯಾಕೆ ವಿಶೇಷ?
ಅವನಿಗೆ ಅವನು ಹೀರೋ ಅಲ್ಲ ಅಂತ ಗೊತ್ತಿದೆ. ಅದೇ ಈ ಚಿತ್ರದ ಹೀರೋನ ಹೆಚ್ಚುಗಾರಿಕೆ. ಎಲ್ಲರಂತೆ ಗುಬ್ಬಿಯೂ ಒಬ್ಬ. ಅವನು ಸಿನಿಮೀಯ ಘಟನೆಗಳಲ್ಲಿ ಸಿಲುಕಿಕೊಳ್ಳುತ್ತಾನೆ ಮತ್ತು ಸಾಮಾನ್ಯನಂತೆ ಇರುತ್ತಾನೆ. ಒಬ್ಬ ಸಾಮಾನ್ಯ ತರುಣ ಅಸಾಮಾನ್ಯ ಘಟನೆಗಳಿಗೆ ಸಿಲುಕಿಕೊಂಡಾಗ ಆಗುವ ಅನಾಹುತಗಳ ಸಂಕಲನ ಈ ಸಿನಿಮಾ. ಕತೆ ತುಂಬಾ ಸರಳವಾಗಿದೆ. ಆದರೆ ಅಷ್ಟೇ ತಮಾಷೆಯಾಗಿದೆ.
ನಟನಾಗಿದ್ದಾಗ ಕದ್ದು ನೋಡಿ ಸಿನಿಮಾ ಮೇಕಿಂಗ್ ಕಲಿತೆ: ಸುಜಯ್ ಶಾಸ್ತ್ರಿ
ನಟ ಸುಜಯ್ ಶಾಸ್ತ್ರಿ ಇಲ್ಲಿ ನಿರ್ದೇಶಕ. ಅವರ ಮೊದಲ ಸಿನಿಮಾ. ನಿಮ್ಮನ್ನೆಲ್ಲಾ ನಿಭಾಯಿಸಿದ ರೀತಿ ಹೇಗಿತ್ತು?
ಒಳ್ಳೆಯ ನಟನಿಗೆ ಒಳ್ಳೆಯ ನಟನಾ ವಾತಾವರಣ ಕಟ್ಟಲು ಗೊತ್ತಿರುತ್ತದೆ. ಒಬ್ಬ ನಟನಿಗೆ ಹೀಗೇ ಇರಬೇಕು ಅಂದ್ರೆ ಕಷ್ಟ. ತಪ್ಪು ಮಾಡಲು ಬಿಟ್ಟಾಗಲೇ ಹೊಸತೇನನ್ನಾದರೂ ಮಾಡಲು ಸಾಧ್ಯವಾಗುತ್ತದೆ. ಸುಜಯ್ ನಮಗೆ ಒಂದು ಒಳ್ಳೆಯ ವಾತಾವರಣ ಕೊಟ್ಟರು. ತಪ್ಪು ಮಾಡಲು ಅವಕಾಶ ನೀಡಿದರು. ಅದು ಅವರ ಹೆಚ್ಚುಗಾರಿಕೆ. ಅದರ ಪರಿಣಾಮ ಸ್ಕ್ರೀನಲ್ಲಿ ಕಾಣುತ್ತದೆ.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡಲು ರೆಡಿಯಾಗಿದ್ದಾರೆ ರಾಜ್ ಬಿ ಶೆಟ್ಟಿ
ಈ ಸಿನಿಮಾದಲ್ಲಿ ನಿಮಗೆ ಲವ್ವು, ಹಾಡು, ನರ್ತನ ಏನಾದರೂ ಇದೆಯೋ?
ಲವ್ವು ಅಂತಲ್ಲ. ಡಾನ್ಸು ಯಾರಾದರೂ ಮಾಡಿದರೆ ನಾನು ಕುಳಿತು ನೋಡಬಹುದಷ್ಟೇ.
ನಿಮ್ಮ ನಿರ್ದೇಶನದ ಸಿನಿಮಾ ಯಾವಾಗ? ಏನ್ ನಡೀತಾ ಇದೆ ಜೀವನದಲ್ಲಿ?
ಸದ್ಯಕ್ಕೆ ಮಂಗಳೂರು- ಬೆಂಗಳೂರು ಅಂತ ಓಡಾಡಿಕೊಂಡಿದ್ದೇನೆ. ನನ್ನ ನಿರ್ದೇಶನದ ಚಿತ್ರದ ಸ್ಕಿ್ರಪ್ಟ್ ಸಿದ್ಧವಾಗಿದೆ. ಇನ್ನೂ ಕೆಲಸ ಬಾಕಿ ಇದೆ.