ಸ್ಟಾರ್‌ಗಳು ಇಲ್ಲದಿದ್ದರೂ ಹೊಸಬರ ಚಿತ್ರಗಳು ಹೊಸತನದೊಂದಿಗೆ ಕುತೂಹಲ ಹುಟ್ಟಿಸುತ್ತವೆ ಎನ್ನುವುದಕ್ಕೀಗ ‘ದೇವರು ಬೇಕಾಗಿದ್ದಾರೆ’ ಹೆಸರಿನ ಚಿತ್ರವೂ ಸಾಕ್ಷಿ.
ಮಂಗಳವಾರವಷ್ಟೇ ಈ ಚಿತ್ರದ ಅಧಿಕೃತ ಟ್ರೇಲರ್ ಹೊರ ಬಂದಿದೆ. ಟ್ರೇಲರ್ ತುಂಬಾ ವಿಭಿನ್ನವಾಗಿದೆ. ಹಾಗೆಯೇ ಚಿತ್ರದ ಮೇಲೆ ಸಾಕಷ್ಟು ಭರವಸೆ ಹುಟ್ಟಿಸುತ್ತಿದೆ. ಅದು ಹೊರ ಬಂದ ಕೆಲವೇ ಗಂಟಗಳಲ್ಲಿ ಸೋಷಲ್ ಮೀಡಿಯಾ ಮೂಲಕ ವೈರಲ್ ಆಗಿದ್ದು, ನೋಡುಗರಿಂದ ಅಪಾರ ಮೆಚ್ಚುಗೆ ದೊರೆತಿದೆ.
ವಿಶೇಷವಾಗಿ ಟ್ರೇಲರ್ ಮೇಕಿಂಗ್ನ ತಾಂತ್ರಿಕ ಅಂಶ, ಪಾತ್ರಗಳ ಪರಿಚಯ, ಕತೆಯ ಬಗೆಗಿನ ಕುತೂಹಲದ ಕುರಿತು ಚಿತ್ರತಂಡಕ್ಕೆ ಸಾಕಷ್ಟು ಪ್ರಶಂಸೆ ಸಿಕ್ಕಿದೆಯಂತೆ. ಆ ಮೂಲಕ ‘ದೇವರು ಬೇಕಾಗಿದ್ದಾರೆ ’ಎನ್ನುವ ಹೊಸಬರ ಚಿತ್ರತಂಡಕ್ಕೀಗ ಗೆಲುವಿನ ಬಹುದೊಡ್ಡ ಭರವಸೆ ಮೂಡಿದೆ.
ಇದು ಕೆಂಜ ಚೇತನ್ ಕುಮಾರ್ ನಿರ್ದೇಶನದ ಚಿತ್ರ. ಈ ಹಿಂದೆ ಇವರು ‘ಪ್ರೇಮ ಗೀಮ ಜಾನೆದೊ’ ಹೆಸರಿನ ಚಿತ್ರ ನಿರ್ದೇಶಿಸಿದ್ದರು. ಇದೀಗ ಅವರಿಗೆ ‘ದೇವರು ಬೇಕಾಗಿದ್ದಾರೆ’ ಎರಡನೇ ಚಿತ್ರ. ಅವರ ಪ್ರಕಾರ ಒಂದು ಸಿನಿಮಾದ ಪ್ರಚಾರಕ್ಕೆ ಟ್ರೇಲರ್ ಅನ್ನೋದು ಆಹ್ವಾನ ಪತ್ರಿಕೆ ಇದ್ದಂತೆ. ‘ ನಾವೆಲ್ಲ ಹೊಸಬರು. ಇಲ್ಲಿ ಸ್ಟಾರ್ ಎನ್ನುವವರು ಯಾರು ಇಲ್ಲ. ಹಾಗಾಗಿ ನಮಗೆ ಟ್ರೇಲರ್ ಕೂಡ ಅತೀ ಮುಖ್ಯ. ಅದನ್ನು ಎಷ್ಟು ವಿಭಿನ್ನವಾಗಿ, ವಿಶೇಷವಾಗಿ ತೋರಿಸಬೇಕೆನ್ನುವುದನ್ನು ಗಮನಲ್ಲಿಟ್ಟುಕೊಂಡು ಈ ಟ್ರೇಲರ್ ಲಾಂಚ್ ಮಾಡಿದ್ದೆವು. ನಿರೀಕ್ಷೆಯಂತೆ ಅದು ನೋಡುಗರಿಗೆ ಇಷ್ಟವಾಗಿದೆ. ವಿಶೇಷವಾಗಿ ಅದರ ತಾಂತ್ರಿಕತೆ, ಪಾತ್ರಗಳ ಪರಿಚಯ ಬಗೆ ಹಾಗೂ ಕತೆಯ ಬಗೆಗಿನ ಕುತೂಹಲ ಬಗ್ಗೆ ಮಾನಾಡುತ್ತಿದ್ದಾರೆ. ಇದು ನಮಗೆ ಮತ್ತಷ್ಟು ನಂಬಿಕೆ ಹುಟ್ಟುವಂತೆ ಮಾಡಿದೆ’ ಎನ್ನುತ್ತಾರೆ ಚೇತನ್ ಕುಮಾರ್. ಹಿರಿಯ ನಟ ಶಿವರಾಂ, ಬಾಲ ನಟ ಅನೂಪ್, ಪ್ರಸಾದ್ ವಸಿಷ್ಠ, ಸತ್ಯನಾಥ್ ಮತ್ತಿತರರು ಚಿತ್ರದಲ್ಲಿದ್ದಾರೆ.