
ಬೆಂಗಳೂರು (ಅ. 09): ಸಹಿಪ್ರಾ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಸಿನಿಮಾ ಚಿತ್ರೀಕರಣಗೊಂಡಿದ್ದು ಮಂಜೇಶ್ವರ ಮತ್ತು ಮಂಗಳೂರು ಮಧ್ಯ ಭಾಗದಲ್ಲಿರುವ ಕೈರಂಗಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.
ಈ ಕನ್ನಡ ಶಾಲೆ ಮುಚ್ಚುವ ಭೀತಿ ಎದುರಿಸುತ್ತಿತ್ತು. ಇದೀಗ ಆ ಶಾಲೆಯನ್ನು ರಿಷಬ್ ಶೆಟ್ಟಿ ದತ್ತು ಪಡೆದುಕೊಂಡಿದ್ದಾರೆ. ಮಾದರಿ ಶಾಲೆಯನ್ನಾಗಿ ರೂಪಿಸುವ ಕನಸು ಹೊತ್ತಿದ್ದಾರೆ. ರಿಷಬ್ ಶೆಟ್ಟಿ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದ ವೇಳೆಯಲ್ಲಿ 42 ಮಂದಿ ವಿದ್ಯಾರ್ಥಿಗಳಿದ್ದರು.
ಆ ವರ್ಷ ಕೆಲವು ಮಂದಿ ಏಳನೇ ತರಗತಿ ಪಾಸಾಗಿ ಈಗ 25 ಮಂದಿ ವಿದ್ಯಾರ್ಥಿಗಳು ಉಳಿದುಕೊಂಡಿದ್ದರು. ವಿಪರ್ಯಾಸವೆಂದರೆ ಒಂದನೇ ತರಗತಿಗೆ ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಕೊಳ್ಳುವುದನ್ನು ನಿಲ್ಲಿಸಲಾಗಿತ್ತು. ಬೇರೆ ದಾರಿಯೇ ಇಲ್ಲದೆ ಕೆಲವೇ ವರ್ಷಗಳಲ್ಲಿ ಈ ಶಾಲೆಯನ್ನು ಮುಚ್ಚಬೇಕಾಗುತ್ತಿತ್ತು. ಇಂಥಾ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ತನ್ನ ಪ್ರೀತಿಯ ಶಾಲೆಯನ್ನು ಉಳಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಕನ್ನಡ ಶಾಲೆ ಉಳಿಸಿ ಆಂದೋಲನದ ರೂವಾರಿ ಅನಿಲ್ ಶೆಟ್ಟಿಯವರ ಜೊತೆಗೂಡಿ ರಿಷಬ್ ಈ ಶಾಲೆಯನ್ನು ವಿಭಿನ್ನ ರೂಪಿಸಲಿದ್ದಾರೆ. ಕನ್ನಡ ಶಾಲೆ ಉಳಿಸಿ ಆಂದೋಲನದ ಕಾರ್ಯಕರ್ತರು ಈಗಾಗಲೇ ಎರಡು ಕನ್ನಡ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ. ಮತ್ತೊಂದಷ್ಟು ಕನ್ನಡ ಶಾಲೆ ಉಳಿಸಲು ಪ್ರಯತ್ನ ಪಡುತ್ತಿದ್ದಾರೆ. ಈ ಹಂತದಲ್ಲಿ ರಿಷಬ್ ಅವರ ಜೊತೆಯಾಗಿ ಮಾದರಿ ಕೆಲಸ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ರಿಷಬ್ ಶೆಟ್ಟಿ ಹೇಳಿದ ಮಾತುಗಳು ಇಲ್ಲಿವೆ
- ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಸಿಗಬೇಕು ಅನ್ನುವುದು ನನ್ನ ನಿಲುವು. ಅದಕ್ಕಾಗಿ ಕನ್ನಡ ಶಾಲೆ ಉಳಿಯಬೇಕು.
- ಚಿತ್ರೀಕರಣ ನಡೆಸುತ್ತಿದ್ದಾಗ 42 ಮಂದಿ ಇದ್ದರು. ಅವರನ್ನು ಚಿತ್ರದ ಹಾಡಿನಲ್ಲಿ ತೋರಿಸಿದ್ದೇವೆ. ಈಗ ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚುವ ಸ್ಥಿತಿ ಇದೆ.
- ನಾನು ಕನ್ನಡ ಶಾಲೆಯಲ್ಲಿ ಓದಿದವನು. ಅದರ ಜೊತೆಗೆ ಈ ಶಾಲೆ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಶಾಲೆ. ಹಾಗಾಗಿ ಈ ಶಾಲೆ ದತ್ತು ಪಡೆಯಲು ನಿರ್ಧರಿಸಿದ್ದೇನೆ.
- ಮತ್ತೆ ಈ ಶಾಲೆಯನ್ನು ಹೊಸತಾಗಿ ರೂಪಿಸುವ ಆಲೋಚನೆ ಇದೆ. ಪ್ರೀ ಸ್ಕೂಲ್ ಆರಂಭಿಸಬೇಕು. ಮಕ್ಕಳನ್ನು ಶಾಲೆಗೆ ಕರೆತರಲು ವಾಹನ ವ್ಯವಸ್ಥೆ ಮಾಡಿಸಬೇಕು.
-ಹೊಸ ಥರ ಪೇಂಟ್ ಮಾಡಿಸಿ ಕ್ರಿಯೇಟಿವ್ ಆಗಿ ರೂಪಿಸಬೇಕು.
- ಇದೆಲ್ಲಾ ಒಬ್ಬನಿಂದ ಆಗುವ ಕೆಲಸ ಅಲ್ಲ. ಈ ಶಾಲೆಯಲ್ಲಿ ಓದಿದವರೆಲ್ಲಾ ಮುಂದೆ ಬಂದರೆ ಚೆಂದ. ಈ ಶಾಲೆಯನ್ನು ಮಾದರಿಯಾಗಿ ಮಾಡಿದರೆ ಬೇರೆ ಊರಲ್ಲಿ ಬೇರೆಯವರು ಈ ಥರದ ಪ್ರಯತ್ನ ಮಾಡುತ್ತಾರೆ ಅನ್ನುವ ಆಸೆ
ನನ್ನದು.
- ಅ.18 ರಂದು ನಮ್ಮ ಚಿತ್ರತಂಡ ಆ ಶಾಲೆಯಲ್ಲಿ ನಡೆಯುವ ಶಾರದೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ.
- ಅವತ್ತು ಆ ಶಾಲೆಯ ಮಕ್ಕಳ ಪೋಷಕರಲ್ಲಿ ನೆರವು ನೀಡಲು ಕೇಳಿಕೊಳ್ಳುತ್ತೇನೆ. ಕನ್ನಡ ಶಾಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.