
ಹುಬ್ಬಳ್ಳಿ (ಆ. 04): ಲಂಡನ್‌ನಲ್ಲಿನ ವ್ಯಾಕ್ಸ್ ಮ್ಯೂಸಿಯಂ (ಮೇಡಂ ಟುಸ್ಸಾಡ್ಸ್) ಬಗ್ಗೆ ಎಂದಾದರೂ ಕೇಳಿರಬಹುದು. ವಿಶ್ವ ಖ್ಯಾತಿಯ ಮ್ಯೂಸಿಯಂ ಇದು. ವಿಶ್ವದ ಪ್ರಮುಖ ನಟರು, ಖ್ಯಾತನಾಮರದ್ದೆಲ್ಲ ಇಲ್ಲಿ ಮೇಣದ (ವ್ಯಾಕ್ಸ್) ಮೂರ್ತಿಗಳಿವೆ.
ಪ್ರಧಾನಿ ನರೇಂದ್ರ ಮೋದಿ, ನಟಿ ಐಶ್ವರ್ಯ ರೈ, ನಟ ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್ ನಟ ನಟಿಯರದ್ದೆಲ್ಲ ಇಲ್ಲಿ ಮೂರ್ತಿಗಳಿವೆ. ಅವುಗಳನ್ನೆಲ್ಲ ನೋಡುವುದೇ ಒಂದು ದೊಡ್ಡ ಭಾಗ್ಯ. ಇಂಥದ್ದೊಂದು ಮಾದರಿಯ ಮ್ಯೂಸಿಯಂ ಭಾರತದಲ್ಲಿ, ಅದೂ ಕರ್ನಾಟಕದಲ್ಲಿ ನಿರ್ಮಾಣಗೊಳ್ಳಲಿದೆ!.
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನಲ್ಲಿ ಇದೇ ಮಾದರಿಯ ಮ್ಯೂಸಿಯಂ ತಲೆ ಎತ್ತಲಿದೆ. ಆದರೆ, ಎಲ್ಲ ರಂಗದ ಖ್ಯಾತನಾಮರ ಪ್ರತಿಮೆಗಳು ಇಲ್ಲಿರುವುದಿಲ್ಲ. ಬದಲಾಗಿ ಕನ್ನಡ ಚಿತ್ರರಂಗದ ಇತಿಹಾಸ ಸಾರುವ ಮ್ಯೂಸಿಯಂ ಇದಾಗಿರಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ದೇಶದಲ್ಲೇ ಮಾದರಿ ಮ್ಯೂಸಿಯಂ ಇದಾಗಲಿದೆ.
ಯಾರಿದರ ರೂವಾರಿ?:
ಶಿಗ್ಗಾವಿ ತಾಲೂಕಿನ ಗೊಟಗೋಡಿಯ ರಾಕ್ ಗಾರ್ಡನ್‌ನ ಶಿಲ್ಪಕಲಾ ಗ್ರಾಮ, ಮಹಾರಾಷ್ಟ್ರದ ಕೋಲ್ಲಾಪುರದ ಕನೇರಿ ಮಠದಲ್ಲಿ ಸಿದ್ದಗೇರಿ ಮ್ಯೂಸಿಯಂ ಸಿದ್ಧಪಡಿಸುವ ಜವಾಬ್ದಾರಿ ಹೊತ್ತು ಅತ್ಯದ್ಭುತ ಎನ್ನುವಂತೆ ಮಾಡಿ ಸೈ ಎನಿಸಿಕೊಂಡಿರುವ ರಾಕ್ ಗಾರ್ಡನ್ ರೂವಾರಿ ಟಿ.ಬಿ.ಸೊಲಬಕ್ಕನವರ ಅವರ ಪುತ್ರ ಶಿಲ್ಪ ಕಲಾಕಾರ ರಾಜ್‌ಹರ್ಷ ಸೊಲಬಕ್ಕನವರ ಈ ಮ್ಯೂಸಿಯಂ ಮಾಡಲು ನಿರ್ಧರಿಸಿದ್ದಾರೆ.
ಉಳಿದ ಮ್ಯೂಸಿಯಂ ಹಾಗೂ ಶಿಲ್ಪಕಲಾ ಗ್ರಾಮಗಳಲ್ಲಿ ಬರೀ ಕಲಾಕೃತಿಗಳನ್ನು ಮಾಡಿಕೊಡುವ ಜವಾಬ್ದಾರಿ ಹೊತ್ತಿದ್ದ ಇವರು ಇದೀಗ ಸ್ಯಾಂಡಲ್‌ವುಡ್ ಮ್ಯೂಸಿಯಂಗೆ ತಾವೇ ಬಂಡವಾಳ ಹೂಡುತ್ತಿದ್ದಾರೆ. ಇದಕ್ಕಾಗಿ ರಾಕ್‌ಗಾರ್ಡನ್ ಹಿಂದೆ ಇರುವ ಶಿಗ್ಗಾವಿ ತಾಲೂಕಿನ ದುಂಡಸಿ ಬಳಿ 25 ಎಕರೆ ಜಮೀನು ಖರೀದಿಸಿದ್ದಾರೆ. ಇನ್ನೆರಡ್ಮೂರು ತಿಂಗಳ ಬಿಟ್ಟು ಮ್ಯೂಸಿಯಂನ ಕೆಲಸ ಶುರು ಮಾಡಲಿದ್ದಾರೆ. ಸದ್ಯ ಇದಕ್ಕಾಗಿ ದಾಖಲೆಗಳನ್ನು ಸರಿಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.
ಏನೇನು ಇರಲಿದೆ?:
‘ಮೂಕಿ ಟು ಟಾಕಿ’ ಎಂದೇ ನಾಮಾಂಕಿತಗೊಂಡು ಸಿದ್ಧಗೊಳ್ಳಲಿರುವ ಈ ಮ್ಯೂಸಿಯಂ ಕನ್ನಡ ಚಿತ್ರರಂಗದ ಸಮಗ್ರತೆ ಸಾರಲಿದೆ. ಹಿಂದೆ ಮೂಕಿ ಚಿತ್ರ ಪ್ರಾರಂಭವಾದಾಗಿನಿಂದ ಈವರೆಗೆ ಚಿತ್ರರಂಗದಲ್ಲಿ ಯಾರಾರಯರು ಖ್ಯಾತನಾಮರು ಶ್ರಮಿಸಿದ್ದಾರೆ ಅವರದ್ದೆಲ್ಲ ಶಿಲ್ಪ ಕಲಾಕೃತಿಗಳು ಇಲ್ಲಿ ರಾರಾಜಿಸಲಿವೆ. ಮೇಕಪ್‌ಮ್ಯಾನ್, ಕ್ಯಾಮರಾಮ್ಯಾನ್, ಲೈಟ್‌ಬಾಯ್, ನಟ, ನಟಿಯರು, ಸಂಗೀತ ನಿರ್ದೇಶಕರು, ಹಿನ್ನೆಲೆ ಗಾಯಕರು, ಸಾಹಿತ್ಯಕಾರರ ಕಲಾಕೃತಿಗಳು ನಿರ್ಮಾಣವಾಗಲಿವೆ.
ಉದ್ದೇಶವೇನು?
ಈ ಮ್ಯೂಸಿಯಂ ಮಾಡುವ ಮುಖ್ಯ ಉದ್ದೇಶ ಕನ್ನಡ ಚಿತ್ರರಂಗದ ಬಗ್ಗೆ ಸಮಗ್ರ ಮಾಹಿತಿಯನ್ನು ಒಂದೆಡೆ ನೀಡುವುದು. ಎಲ್ಲೆಡೆ ಬರೀ ನಟ-ನಟಿರಿಗೆ ಪ್ರಚಾರ ಸಿಗುತ್ತದೆ. ಆದರೆ, ಕನ್ನಡ ಚಿತ್ರರಂಗವೆಂದರೆ ಬರೀ ನಟ-ನಟಿಯರಷ್ಟೇ ಅಲ್ಲ, ಅನ್ನುವುದನ್ನು ತಿಳಿಸಲಾಗುತ್ತದೆ. ಕೆಲವರು ಮುಖ್ಯವಾಹಿನಿಗೆ ಬರುವುದೇ ಇಲ್ಲ.
ಅಂಥವರೆನ್ನೆಲ್ಲ ಜಗತ್ತಿಗೆ ಪರಿಚಯಿಸುವುದು. ಕನ್ನಡ ಚಿತ್ರರಂಗವನ್ನು ಒಂದೆಡೆ ಕಟ್ಟಿಕೊಡುವುದೇ ಇದರ ಮುಖ್ಯ ಉದ್ದೇಶ ಎಂದು ಟಿ.ಬಿ.ಸೊಲಬಕ್ಕನವರ ತಿಳಿಸುತ್ತಾರೆ. ಈ ಮ್ಯೂಸಿಯಂ ಮುಗಿದ ಬಳಿಕ ಬಾಲಿವುಡ್‌ನ ಮ್ಯೂಸಿಯಂ ಮಾಡುವ ಯೋಚನೆಯನ್ನೂ ಹೊಂದಿದ್ದಾರೆ.
ಕನ್ನಡಚಿತ್ರರಂಗವನ್ನು ಒಂದೆಡೆ ಕಟ್ಟಿಕೊಡುವ ಕೆಲಸ ಈವರೆಗೂ ಎಲ್ಲಿಯೂ ಆಗಿಲ್ಲ. ಅದನ್ನು ಈ ಮೂಸಿಯಂ ಮೂಲಕ ಪೂರ್ಣಗೊಳಿಸುವ ಸಣ್ಣ ಪ್ರಯತ್ನ ನಮ್ಮದು. ಇದರೊಂದಿಗೆ ಉತ್ತರ ಕರ್ನಾಟಕದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದೇ ಮ್ಯೂಸಿಯಂನ ಮುಖ್ಯ ಉದ್ದೇಶ.
-ಟಿ.ಬಿ.ಸೊಲಬಕ್ಕನವರ, ಮಾಲೀಕರು, ಶಿಲ್ಪಕಲಾ ಕುಟೀರ
ಲಂಡನ್‌ನಲ್ಲಿರುವ ವ್ಯಾಕ್ಸ್ ಮಾದರಿಯ ಮ್ಯೂಸಿಯಂ ಇದಾಗಲಿದೆ. ಹಾಗಂತ ಬರೀ ವ್ಯಾಕ್ಸ್‌ನಿಂದ ಮಾತ್ರ ಕಲಾಕೃತಿ ಸಿದ್ಧಪಡಿಸುವುದಿಲ್ಲ. ಸಿಮೆಂಟ್, ಎಫ್‌ಆರ್‌ಪಿ, ವ್ಯಾಕ್ಸ್ ಹೀಗೆ ಎಲ್ಲ ಬಗೆಯ ಕಲಾಕೃತಿಗಳು ಇಲ್ಲಿರಲಿವೆ. ಈ ಮ್ಯೂಸಿಯಂಗಾಗಿ ಜಮೀನು ಖರೀದಿಸಿದ್ದೇವೆ. ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಿದ್ದೇವೆ.
-ರಾಜ್‌ಹರ್ಷ ಸೊಲಬಕ್ಕನವರ, ಮ್ಯೂಸಿಯಂ ತಯಾರಿಸಲು ಮುಂದಾದ ಶಿಲ್ಪ ಕಲಾಕಾರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.