
ಆ್ಯಪಲ್‌ಗೂ ಆ್ಯಪಲ್ ಕೇಕ್‌ಗೂ ಇರುವ ವ್ಯತ್ಯಾಸವೇ, ಈ ಚಿತ್ರದ ಟೈಟಲ್‌ಗೂ ಸಿನಿಮಾದ ಕತೆಗೂ ಇರುವ ವ್ಯತ್ಯಾಸ. ಟೈಟಲ್ ಕೇಳಿದಾಕ್ಷಣ ಇದೇನು ಆ್ಯಪಲ್ ಕೇಕ್‌ಗೆ ಸಂಬಂಧಿಸಿದ ಚಿತ್ರವೇ ಅಂತಂದುಕೊಂಡು ಸಿನಿಮಾ ನೋಡಲು ಹೋದರೆ ನಿಮ್ಮ ಊಹೆಯೇ ಇಲ್ಲಿ ಉಲ್ಟಾ. ಆ್ಯಪಲ್ ಕೇಕ್ ಅನ್ನೋದು ಇಲ್ಲಿ ಸಿಂಬಾಲಿಕ್ ಮಾತ್ರ. ಸೋತು ಗೆದ್ದಾಗ ಬದುಕು ಸಿಹಿ ಎನ್ನುವುದು ಈ ಚಿತ್ರದ ಒನ್‌ಲೈನ್ ಸ್ಟೋರಿ. ಅದನ್ನೇ ಆ್ಯಪಲ್ ಕೇಕ್ ಹೆಸರಲ್ಲಿ ತೆರೆಗೆ ತಂದಿದ್ದಾರೆ ನಿರ್ದೇಶಕರು. ಆದ್ರೆ, ಈ ಕೇಕ್ ನೋಡುವುದಕ್ಕೆ ಮಾತ್ರ ಇಷ್ಟ , ಸವಿಯುವುದಕ್ಕೆ ಬಲು ಕಷ್ಟ.
ಆ ಮೂರು ಕತೆಗಳು ಪ್ರತ್ಯೇಕ ದಾರಿಯಲ್ಲಿ ಸಾಗುತ್ತವೆ. ಕ್ಸೈಮ್ಯಾಕ್ಸ್ ಅವೆಲ್ಲವೂ ಒಂದೇ ದಾರಿಯಲ್ಲಿ ಸಂದಿಸಿ, ಗಾಂಧಿನಗರದ ವಾಸ್ತವತೆಯನ್ನು ತೆರೆದಿಡುತ್ತವೆ. ಆದರೂ ಇಲ್ಲಿ ಪ್ರಧಾನವಾಗಿ ಕಾಣುವುದು ನಿರ್ದೇಶಕರಾಗಲು ಚಿತ್ರೋದ್ಯಮಕ್ಕೆ ಬಂದು ಸಹಾಯಕ ನಿರ್ದೇಶಕರಾದ ನಾಲ್ವರು ಯುವಕರ ಬದುಕಿನ ಕತೆ. ಒಬ್ಬೊಬ್ಬರಿಗೂ ಒಂದೊಂದು ಹಿನ್ನೆಲೆಯಿದೆ. ಆದರೂ ನಿರ್ದೇಶಕರಾಗ ಬೇಕೆಂದು ಬಂದ ಅವರದು ಹುಚ್ಚು ಸಾಹಸದ ಪಯಣ. ಅವರೆಲ್ಲ ಇಲ್ಲಿ ಏಳು -ಬೀಳು, ಮಾನ-ಅವಮಾನ ಅನುಭವಿಸಿ, ಕೊನೆಗೆ ಅವುಗಳನ್ನೇ ಸವಾಲು ಆಗಿ ಸ್ವೀಕರಿಸಿ, ಹೇಗೆ ಸೋತು ಗೆಲ್ಲುತ್ತಾರೆನ್ನುವುದು ಚಿತ್ರ. ಆರಂಭದಿಂದ ಅಂತ್ಯದವರೆಗೂ ಚಿತ್ರ ಗಾಂಧಿನಗರದ ನಿರ್ಮಾಪಕರ ಮನಸ್ಥಿತಿಗಳು, ಸಿನಿಮಾ ಮಾಡುವ ಅವರ ಆಸಕ್ತಿಯ ಹಿಂದಿನ ಕಾರಣಗಳು, ನಿರ್ದೇಶಕರಾಗಲೇಬೇಕೆಂದು ಪರದಾಡುವ ಆ ನಾಲ್ವರ ಸಾಹಸಗಳನ್ನೇ ಚಿತ್ರ ಪರಿಚಯಿಸುತ್ತಾ ಹೋಗುತ್ತದೆ. ಹಾಗಂತ ಗಾಂಧಿನಗರದ ಕತೆಯಾಗಲಿ, ಸಿನಿಮಾದೊಳಗಡೆಯೂ ಸಿನಿಮಾ ಜಗತ್ತಿನ ಸಾಹಸದ ಕತೆ ಹೇಳುವ ಪರಿಯಾಗಲಿ ಹೊಸದಲ್ಲ. ಹತ್ತು ಹಲವು ಸಿನಿಮಾಗಳು ಈ ಕತೆ ಹೇಳಿವೆ. ಗಾಂಧಿನಗರದ ಮತ್ತೊಂದು ಮುಖವನ್ನು ಮುಖವನ್ನು ಬೆತ್ತಲು ಮಾಡಿವೆ. ಅದರಲ್ಲಿ ಇದು ಕೂಡ ಒಂದು. ಆದರೂ ಇಲ್ಲಿ ಹೊಸತೆಂದು ಕಾಣುವುದು ಅವಮಾನವನ್ನು ಸವಾಲು ಆಗಿ ಗೆದ್ದ ಸ್ನೇಹಿತರು, ತಮ್ಮದೇ ಜಾಣತನ, ಪ್ರಾಮಾಣಿಕತೆಯಿಂದ ನಿರ್ಮಾಪಕರನ್ನು ಹೇಗೆ ಒಪ್ಪಿಸಿ, ಸಿನಿಮಾ ಮಾಡುತ್ತಾರೆನ್ನುವುದು. ಸಿನಿಮಾ ಮಂದಿ ಕೇಳಿದ ಕತೆಗಳು, ನೋಡಿದ ಘಟನೆಗಳು, ಅನುಭವಿಸಿದ ನೋವುಗಳೇ ಚಿತ್ರದ ಕಥಾರೂಪ. ತೆರೆ ಆಚೆ ಹೀಗೆಲ್ಲ ಇರುತ್ತೆ ಅಂತ ನೋಡುಗನಿಗೆ ಮುಟ್ಟಿಸುವ ಪ್ರಯತ್ನ ಇದಾಗಿದ್ದರೂ, ಸಿನಿಮಾವಾಗಿ ಅದು ರುಚಿಸುವುದು, ರಂಜಿಸುವುದು ಬಲು ಕಷ್ಟ.
ನಿರ್ದೇಶಕ ರಂಜಿತ್, ನಿರ್ಮಾಪಕರಾದ ಅರವಿಂದ್, ವಿಜಯ್ ಶಂಕರ್ ಹಾಗೂ ಕೃಷ್ಣ ಅಣಗಿ ಈ ಚಿತ್ರ ದ ನಾಯಕರು. ತಮ್ಮದೇ ಅನುಭವದಂತಿದ್ದ ಪಾತ್ರಗಳಿಗೂ ಜೀವ ತುಂಬಲು ಹರ ಸಾಹಸ ಪಟ್ಟಿದ್ದಾರೆ. ಸಿನಿಮಾದೊಳಗಡೆಯ ಸಿನಿಮಾದ ನಾಯಕಿ ಆಗಿ ನಟಿ ಶುಭ ರಕ್ಷಾ ಪಾತ್ರವಾಗಿ ಕಾಣಿಸಿಕೊಂಡಿದ್ದು ಬಿಟ್ಟರೆ, ಅವರ ಪಾತ್ರ ನೆನಪಲ್ಲಿ ಉಳಿಯುವುದು ಕಷ್ಟ. ಏನೋ ಹೇಳಬೇಕೆನ್ನುವ ರಂಜಿತ್ ಕುಮಾರ್ ಅವರ ಕತೆಯ ಕಾಳಜಿ ಮೇಲ್ನೋಟಕ್ಕೆ ಕಂಡರೂ ಬಿಗಿಹಿಡಿತ ವಿಲ್ಲದ ನಿರೂಪಣೆ ತಾಳ ತಪ್ಪಿರುವುದು ಹಲವು ದೃಶ್ಯಗಳಲ್ಲಿ ಕಾಣುತ್ತದೆ. ಮತ್ತಷ್ಟು ಟ್ರಿಮ್ ಮಾಡಲು ಸಾಕಷ್ಟ ಅವಕಾಶಗಳಿದ್ದರೂ ಸಂಕಲನಕಾರ ಉದಾರತೆ, ಪ್ರೇಕ್ಷಕರಲ್ಲಿ ನಿದ್ದೆ ಬೋರು ಎನಿಸುತ್ತದೆ. ಹಾಗೆ ನೋಡಿದರೆ ನಿರಂಜನ್ ಬಾಬು ಛಾಯಾಗ್ರಹಣ ಆ ಬೇಸರ ದೂರ ಮಾಡುತ್ತದೆ. ಒಟ್ಟಿನಲ್ಲಿ ಹೇಳೋದಾದರೆ, ಪುರುಸೊತ್ತಿನಲ್ಲೊಂದು ಸಿನಿಮಾ ಮಾಡೋಣ ಅಂತಲೋ ಗಾಂಧಿನಗರದೊಳಗಿನ ಕೆಲ ಧೋರಣೆ ಬಯಲು ಮಾಡಿಬೇಕೆನ್ನುವ ಕಾರಣಕ್ಕೋ ತರಾತುರಿಯಲ್ಲಿ ಸಿನಿಮಾ ಮಾಡಿದ ಹಾಗಿದೆ ಇಲ್ಲಿನ ಕುಸುರಿ ಕೆಲಸ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.