ಚಿತ್ರ ವಿಮರ್ಶೆ: ಅದೃಷ್ಟದಾಟದ ಅದೃಶ್ಯ ಸೂತ್ರ ‘ಕಿಸ್ಮತ್’!

By Kannadaprabha NewsFirst Published Nov 24, 2018, 9:27 AM IST
Highlights

ಕಿಸ್ಮತ್ ಎಂದರೆ ಹಣೆಬರಹ ಎಂದು. ಹಾಗಾಗಿ ಅಮೆರಿಕಾದಲ್ಲಿ ಬಿಟ್ಟ ಹೂಸು ಬೆಂಗಳೂರಿನ ವಿಜಯ್‌ನ ಕಿಸ್ಮತ್ ಅನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದರ ಸುತ್ತಲೇ ಚಿತ್ರ ಸುತ್ತು ಹಾಕುತ್ತದೆ. 

ದೂರದ ಅಮೆರಿಕಾದಲ್ಲಿ ನಡೆಯುವ ಪಾರ್ಟಿಯೊಂದರಲ್ಲಿ ಬಹುರಾಷ್ಟ್ರೀಯ ಕಂಪನಿಯ ಮಾಲೀಕ ಹೂಸೊಂದನ್ನು ಬಿಡುತ್ತಾನೆ. ಇದೇ ಕಾರಣಕ್ಕೆ ತನಗೆ ಅವಮಾನ ಆಯಿತು ಎಂದು ಅವನ ಹೆಂಡತಿ ಡೈವೋರ್ಸ್ ನೀಡುತ್ತಾಳೆ. ಒಂದು ಹೂಸಿನಿಂದ ಇಷ್ಟೆಲ್ಲಾ ಆಯಿತಲ್ಲ ಎಂದು ಮಾಲೀಕ ತನ್ನ ಆಸ್ತಿಯನ್ನೆಲ್ಲಾ ದಾನ ಮಾಡುತ್ತಾನೆ. ಆ ಕಂಪನಿಯನ್ನು ನಂಬಿಕೊಂಡಿದ್ದ ಇತರ ಕಂಪನಿಗಳು, ಷೇರುದಾರರು ನಷ್ಟ ಅನುಭವಿಸುತ್ತಾರೆ. ಸಾಕಷ್ಟು ಮಂದಿ ಕೆಲಸ ಕಳೆದುಕೊಳ್ಳುತ್ತಾರೆ. ಹಾಗೆ ಕೆಲಸ ಕಳೆದುಕೊಂಡವರಲ್ಲಿ ಒಬ್ಬ ನಾಯಕ ವಿಜಯ್. 

ಇದನ್ನು ಓದಿದರೆ ಇಂಟರೆಸ್ಟಿಂಗ್ ಸುದ್ದಿ ಎನ್ನಿಸುತ್ತದೆ ಅಲ್ಲವೇ. ಆದರೆ ಇದನ್ನೇ ಇಟ್ಟುಕೊಂಡು ಕಾಮಿಡಿ, ಸಸ್ಪೆನ್ಸ್, ಇಂಟರೆಸ್ಟಿಂಗ್ ಸಿನಿಮಾ ಮಾಡಬಹುದು ಎಂದು ಮಲೆಯಾಳಂನ ‘ನೇರಂ’ ನೋಡಿದರೆ ಗೊತ್ತಾದೀತು. ಇದನ್ನೇ ವಿಜಯ ರಾಘವೇಂದ್ರ ತಾವೇ ನಾಯಕನಾಗಿ, ನಿರ್ದೇಶನಕನಾಗಿ ನಿರ್ಮಾಣದಜವಾಬ್ದಾರಿಯನ್ನೂ ಹೊತ್ತುಕೊಂಡು ಕನ್ನಡಕ್ಕೆ ತಂದಿದ್ದಾರೆ. ಅದು ‘ಕಿಸ್ಮತ್’ ಮೂಲಕ.

ಕಿಸ್ಮತ್ ಎಂದರೆ ಹಣೆಬರಹ ಎಂದು. ಹಾಗಾಗಿ ಅಮೆರಿಕಾದಲ್ಲಿ ಬಿಟ್ಟ ಹೂಸು ಬೆಂಗಳೂರಿನ ವಿಜಯ್‌ನ ಕಿಸ್ಮತ್ ಅನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದರ ಸುತ್ತಲೇ ಚಿತ್ರ ಸುತ್ತು ಹಾಕುತ್ತದೆ. ಮೈ ತುಂಬಾ ಬಂಗಾರ ಹಾಕಿಕೊಂಡು ಬರುವ ಸಣ್ಣ ಮೀಸೆಯ ಬಡ್ಡಿ ಭದ್ರ ವ್ಯವಹಾರದಲ್ಲಿ ಪಕ್ಕಾ. ಭದ್ರನಿಂದ ಬಜಾವ್ ಆಗುವುದು ಸಾಧ್ಯವೇ ಇಲ್ಲದ ಮಾತು. ಕಷ್ಟ ಎಂದು ಬಂದವರಿಗೆ ದುಡ್ಡು ಕೊಡುತ್ತಾನೆ. ಬಡ್ಡಿ ಸಮೇತ ಅಸಲು ಕೊಡಲು ಆಗದೇ ಇದ್ದವರ ರಕ್ತ ಹೀರುತ್ತಾನೆ ಈ ಭದ್ರ. ಹಾಗಾಗಿ ಚಿತ್ರವನ್ನು ಸಾಲ ಕೊಟ್ಟವನ ಅಟ್ಟಹಾಸ, ಸಾಲ ಪಡೆದವರ ವನವಾಸ ಎಂದು ಸರಳವಾಗಿ ಒಂದೇ ಸಾಲಿನಲ್ಲಿ ಹೇಳಿಬಿಡಬಹುದು.

ಚಿತ್ರ: ಕಿಸ್ಮತ್

ತಾರಾಗಣ: ವಿಜಯ ರಾಘವೇಂದ್ರ,ಸಂಗೀತಾ ಭಟ್, ಸಾಯಿ ಕುಮಾರ್, ಚಿಕ್ಕಣ್ಣ

ನಿರ್ದೇಶನ: ವಿಜಯ ರಾಘವೇಂದ್ರ

ನಿರ್ಮಾಣ: ಸ್ಪಂದನ ವಿಜಯರಾಘವೇಂದ್ರ

ರೇಟಿಂಗ್: ***

click me!