ಸ್ಟಾರ್ ಮಕ್ಕಳು ಸಿನಿ ದುನಿಯಾಕ್ಕೆ ಬರುತ್ತಿರುವುದು ಹೊಸದೇನಲ್ಲ. ಈಗಾಗಲೇ ಸಾಕಷ್ಟುನಟ-ನಟಿಯರ ಮಕ್ಕಳು ಪೋಷಕರಂತೆಯೇ ಕಲಾವಿದರಾಗಿ ಚಿತ್ರರಂಗಕ್ಕೆ ಬಂದಾಗಿದೆ. ಮತ್ತಷ್ಟುಮಂದಿ ಬರುತ್ತಲೂ ಇದ್ದಾರೆ. ಆದರೆ, ಬಾಲ್ಯದಲ್ಲೇ ಬಣ್ಣದ ಲೋಕಕ್ಕೆ ಬಂದ ಕೆಲವೇ ಕೆಲವು ಸ್ಟಾರ್ ಮಕ್ಕಳ ಸಾಲಿಗೆ ಈಗ ಹೊಸದಾಗಿ ಸೇರ್ಪಡೆ ಆಗಿದ್ದು ಹಿರಿಯ ನಟಿ ತಾರಾ ಪುತ್ರ ಶ್ರೀಕೃಷ್ಣ
ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ’ ಚಿತ್ರದ ಮೂಲಕ ತಾರಾ ಪುತ್ರ ಶ್ರೀಕೃಷ್ಣ ಬಣ್ಣದ ಲೋಕಕ್ಕೆ ಎಂಟ್ರಿ ಆಗುತ್ತಿದ್ದಾರೆ.
ಈ ಚಿತ್ರದಲ್ಲಿ ತಾರಾ ಕೂಡ ಇದ್ದಾರೆ. ತಾರಾ ಅವರದ್ದು ತಾಯಿ ಪಾತ್ರ. ಅವರ ಪುತ್ರ ಶ್ರೀಕೃಷ್ಣನದ್ದು ಮಗನ ಪಾತ್ರ. ತಾಯಿ-ಮಗ ಇಬ್ಬರೂ ತೆರೆ ಮೇಲೂ ತಾಯಿ-ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆನ್ನುವುದು ಇಲ್ಲಿನ ಮತ್ತೊಂದು ವಿಶೇಷ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ವೇಣು ಅವರೇ ಛಾಯಾಗ್ರಾಹಕ. ಸದ್ಯ ತಾರಾ ಮತ್ತು ಅವರ ಪುತ್ರ ಕೃಷ್ಣ ಅಭಿನಯದ ದೃಶ್ಯಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಅವರಿಬ್ಬರ ಪಾತ್ರಗಳಿಗೆ ಡಬ್ಬಿಂಗ್ ಕಾರ್ಯ ಶುರುವಾಗಿದೆ.
undefined
ಚಿತ್ರರಂಗಕ್ಕೆ ಕಾಲಿಟ್ಟ ತಾರಾ ಪುತ್ರ; ಕ್ಯಾಮೆರಾ ಹಿಂದೆ ತಂದೆ ಕೈಚಳಕ!
ಬೆಂಗಳೂರಿನ ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ಇತ್ತೀಚೆಗೆ ತಾರಾ ಮತ್ತು ಅವರ ಪುತ್ರ ಶ್ರೀ ಕೃಷ್ಣ ಇಬ್ಬರು ಡಬ್ಬಿಂಗ್ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪುಟಾಣಿ ಶ್ರೀಕೃಷ್ಣ , ಹರ್ಷದಿಂದಲೇ ಡಬ್ಬಿಂಗ್‌ನಲ್ಲಿ ಪಾಲ್ಗೊಂಡಿದ್ದನ್ನು ಕಂಡು ತಾರಾ ಫುಲ್‌ಖುಷ್ ಆಗಿದ್ದರು. ‘ಸಾಮಾನ್ಯವಾಗಿ ಅಷ್ಟುಚಿಕ್ಕ ಮಕ್ಕಳಿಗೆ ಭಾಷೆ ತೊಂದರೆ ಆಗುತ್ತೆ ಅಂತ, ಡಬ್ಬಿಂಗ್ ಆರ್ಟಿಸ್ಟ್ ನೆರವು ಪಡೆಯಲಾಗುತ್ತೆ. ಆದರೆ ಈತ ತಾನೇ ಡಬ್ಬಿಂಗ್ ಮಾಡಿದ್ದು ಅಚ್ಚರಿ ಎನಿಸಿತು. ಆತನ ಭಾಷೆ ಚೆನ್ನಾಗಿತ್ತು. ಹೇಳಿಕೊಟ್ಟಿದ್ದನ್ನು ಶುದ್ಧವಾಗಿ ಹೇಳುತ್ತಿದ್ದ. ಹಾಗಾಗಿ ನಿರ್ದೇಶಕರು ಧೈರ್ಯ ಮಾಡಿ, ಆತನಿಂದಲೇ ಡಬ್ಬಿಂಗ್ ಮಾಡಿಸಿದರು. ಅದೆಲ್ಲ ನೋಡಿದಾಗ ಸಂತೋಷದಿಂದ ಭಾವುಕಳಾದೆ’ಎನ್ನುತ್ತಾರೆ ತಾರಾ.
ಪುಟ್ಟಬಾಲಕನ ಪಾತ್ರ. ಅದಕ್ಕೆ ಸೂಕ್ತವಾದ ಬಾಲಕನನ್ನು ಹುಡುಕುವಾಗ ನಿರ್ಮಾಪಕರು ಆಯ್ಕೆ ಮಾಡಿಕೊಂಡಿದ್ದು ಶ್ರೀ ಕೃಷ್ಣ. ಪಾತ್ರಕ್ಕೆ ತಕ್ಕಂತೆ ಚಿತ್ರದಲ್ಲಿ ಸೊಗಸಾಗಿ ಅಭಿನಯಿಸಿದ್ದಾನೆ. ನಟನೆಯ ಬಗ್ಗೆ ಅತೀವ ಆಸಕ್ತಿಯಿದೆ. ಕಲೆ ರಕ್ತದಿಂದಲೇ ಬಂದಿದೆ. ಆತ ಭವಿಷ್ಯದ ಸ್ಟಾರ್ ಎನ್ನುವುದನ್ನು ಚಿತ್ರದಲ್ಲಿನ ತನ್ನ ಪಾತ್ರದ ಮೂಲಕ ತೋರಿಸಿದ್ದಾನೆ.- ಶಿವ ತೇಜಸ್, ನಿರ್ದೇಶಕ
ಪುಟಾಣಿ ಶ್ರೀಕೃಷ್ಣನಿಗೀಗ ಆರು ವರ್ಷ. ಅವರ ನಿವಾಸದ ಬಳಿಯಿರುವ ಕಾನ್ವೆಂಟ್ ಸ್ಕೂಲ್‌ನಲ್ಲಿ ಈಗಷ್ಟೇ ಫಸ್ಟ್ ಸ್ಟ್ಯಾಂಡರ್ಡ್ ವಿದ್ಯಾರ್ಥಿ. ಅಷ್ಟುಚಿಕ್ಕ ವಯಸ್ಸಿನಲ್ಲೇ ತಮ್ಮಂತೆಯೇ ಆತನನ್ನು ಸಿನಿ ಜಗತ್ತಿಗೆ ಪರಿಚಯಿಸುತ್ತಿದ್ದಾರೆ ನಟಿ ತಾರಾ. ‘ನಿಜಕ್ಕೂ ಇದಕ್ಕೆ ಕಾರಣ ನಾವಲ್ಲ. ಇಷ್ಟುಚಿಕ್ಕ ವಯಸ್ಸಿನಲ್ಲೇ ಆತನನ್ನು ಸಿನಿಮಾಕ್ಕೆ ಪರಿಚಯಿಸಬೇಕೆನ್ನುವ ಆಲೋಚನೆಯೂ ನಮಗಿರಲಿಲ್ಲ. ಆದರೂ ಇದು ಸಾಧ್ಯವಾಗಿದ್ದು ನಿರ್ಮಾಪಕರಾದ ಶಿವಾರ್ಜುನ್ ಹಾಗೂ ಮಂಜುಳಾ ಮೂಲಕ. ಈ ಚಿತ್ರದಲ್ಲಿ ನಾನು ತಾಯಿ ಪಾತ್ರ ಮಾಡಿದ್ದೇನೆ. ಹಾಗೆಯೇ ವೇಣು ಛಾಯಾಗ್ರಾಹಕರಾಗಿದ್ದಾರೆ. ಆ ತಾಯಿ ಪಾತ್ರಕ್ಕೆ ಒಬ್ಬ ಪುಟ್ಟಮಗ ಇರುತ್ತಾನೆ.
ಆ ಪಾತ್ರಕ್ಕೆ ಸೂಕ್ತವಾದ ಬಾಲಕ ಬೇಕು ಅಂತ ಹುಡುಕಾಡುತ್ತಿದ್ದಾಗ, ನಿರ್ಮಾಪಕರಾದ ಶಿವಾರ್ಜುನ್ ಒಂದು ದಿನ ಮನೆಗೆ ಬಂದು ನಿಮ್ಮ ಮಗನ ಆ ಪಾತ್ರಕ್ಕೆ ಸೂಕ್ತ ಅಂದುಬಿಟ್ಟರು. ಆತನಿಂದ ಒಂದು ಪಾತ್ರ ಮಾಡಿಸೋಣ,ಆತ ಚೆನ್ನಾಗಿ ಆ್ಯಕ್ಟ್ ಮಾಡ್ತಾನೆ ಅಂತೆಲ್ಲ ಒತ್ತಾಯಿಸಿದರು. ಆದರೆ ಆತ ಆ್ಯಕ್ಟ್ ಮಾಡ್ತಾನೆ ಅಂತ ನಮಗೆ ನಂಬಿಕೆಯೇ ಇರಲಿಲ್ಲ. ಏನೋ ಅವರ ಒತ್ತಾಯಕ್ಕೆ ಆಗಲಿ ಬಿಡಿ ಅಂದೆವು. ಆದರೂ ಭಯ ಇತ್ತು. ಯಾಕಂದ್ರೆ ವೇಣು ಮತ್ತು ನಾನು ಆ ಚಿತ್ರದಲ್ಲೇ ಇದ್ದೆವು. ಆ ಸಲಿಗೆಯಲ್ಲಿ ಎಲ್ಲಿ ಆತ ಅಲಕ್ಷ್ಯ ಮಾಡುತ್ತಾನೋ ಎನ್ನುವ ಆತಂಕ. ಕೊನೆಗೆ ಸೆಟ್‌ಗೆ ಹೋಗಿ, ಆತನನ್ನು ಕ್ಯಾಮೆರಾ ಮುಂದೆ ನಿಲ್ಲಿಸಿದಾಗ ನಾವಿಬ್ಬರು ಶಾಕ್. ಪಾತ್ರಕ್ಕೆ ತಕ್ಕಂತೆ ಹೇಳಿಕೊಟ್ಟಿದ್ದನ್ನು ಚೆನ್ನಾಗಿ ಅಭಿನಯಿಸಿದ್ದಾನೆ. ಅಷ್ಟೇ ಲವಲವಿಕೆಯಲ್ಲಿ ಡಬ್ಬಿಂಗ್ ಕೂಡ ಮಾಡುತ್ತಿದ್ದಾನೆ ’ ಅಂತ ಸಂತಸ ವ್ಯಕ್ತಪಡಿಸುತ್ತಾರೆ ತಾರಾ.
ಶಿವಾರ್ಜುನ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಶಿವಾರ್ಜುನ ಚಿತ್ರಕ್ಕೆ ಶಿವ ತೇಜಸ್ ನಿರ್ದೇಶಕ. ಸದ್ಯ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಇದೇ ತಿಂಗಳ ಕೊನೆಗೆ ಚಿತ್ರದ ಬಾಕಿ ಇರುವ ಹಾಡಿನ ಭಾಗದ ಚಿತ್ರೀಕರಣ ನಡೆಯಲಿದೆ. ಇದರ ನಡುವೆಯೇ ಚಿತ್ರತಂಡ ಡಬ್ಬಿಂಗ್ ಕಾರ್ಯಗಳಿಗೂ ಚಾಲನೆ ನೀಡಿದೆ. ಬಹುತೇಕ ಚಿತ್ರೀಕರಣ ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆದಿದೆ. ಅಲ್ಲಿಗೂ ಚಿತ್ರೀಕರಣಕ್ಕಾಗಿಯೇ ತಾರಾ ಅವರು ಪುತ್ರ ಶ್ರೀಕೃಷ್ಣನ ಜತೆಗೆ ಹೋಗಿ ಬಂದಿದ್ದಾರಂತೆ. ಚಿತ್ರದಲ್ಲಿ ತಾರಾ ಜತೆಗಲ್ಲದೆ ಚಿರಂಜೀವಿ ಅವರ ಜತೆಗೂ ಹೆಚ್ಚು ಸಮಯ ಕಾಣಿಸಿಕೊಳ್ಳಲಿದ್ದಾನಂತೆ ಪುಟಾಣಿ ಶ್ರೀಕೃಷ್ಣ.
ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಮಕ್ಕಳ ಹವಾ
ಸ್ಟಾರ್ ನಟಿಯರ ಪೈಕಿ ಇತ್ತೀಚೆಗೆ ಪ್ರಿಯಾಂಕಾ ಉಪೇಂದ್ರ ಪುತ್ರಿ ಐಶ್ವರ್ಯ ‘ದೇವಕಿ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿ ಆಗಿದ್ದು ಸಾಕಷ್ಟುಸುದ್ದಿ ಆಗಿತ್ತು. ಮತ್ತೊಂದೆಡೆ ಸುಧಾರಾಣಿ ಪುತ್ರಿ ಹಾಗೂ ಮಾಲಾಶ್ರೀ ಪುತ್ರಿ ಕೂಡ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆನ್ನುವ ಸುದ್ದಿ ಹರಿದಾಡುತ್ತಿವೆ. ಈ ಮಧ್ಯೆ ನಟಿ ತಾರಾ ಪುತ್ರ ಪುಟಾಣಿ ಶ್ರೀ ಕೃಷ್ಣ ‘ಶಿವಾರ್ಜುನ’ ಚಿತ್ರದ ಮೂಲಕ ಸಿನಿ ದುನಿಯಾಕ್ಕೆ ಪರಿಚಯವಾಗುತ್ತಿದ್ದಾನೆ. ಸಿನಿಮಾ ಆಸಕ್ತಿ ಬಗ್ಗೆ ಕೇಳಿದರೆ, ಅಮ್ಮನೇ ಕಾರಣ ಎನ್ನುವ ಶ್ರೀಕೃಷ್ಣನಿಗೆ ಯಶ್ ಅಂದ್ರೆ ತುಂಬಾ ಇಷ್ಟ. ಧ್ರುವ ಸರ್ಜಾ ಅವರ ಹಾಗೆ ಫೈಟಿಂಗ್ ಮಾಡ್ಬೇಕು ಎನ್ನುತ್ತಾನೆ. ಮುಂದೆ ಏನಾಗ್ತೀಯಾ ಅಂದ್ರೆ, ದೊಡ್ಡ ಹೀರೋ ಆಗ್ತೀನಿ ಎನ್ನುವ ಉತ್ತರ ಶ್ರೀಕೃಷ್ಣನದ್ದು.