ತುಂಬಾ ದಿನಗಳ ನಂತರ ನಟಿ ರಾಧಿಕಾ ಕುಮಾರಸ್ವಾಮಿ ಇಲ್ಲಿ ಮಾತನಾಡಿದ್ದಾರೆ. ಅವರ ನಟನೆಯ ನಾಲ್ಕು ಚಿತ್ರಗಳು ತೆರೆಗೆ ಸಜ್ಜಾಗುತ್ತಿವೆ. ಅಘೋರಿ ಪಾತ್ರಕ್ಕೆ ಅವರ ತಯಾರಿ, ದಮಯಂತಿಯ ಗುಟ್ಟು, ಮುಂದಿನ ಹೋಮ್ ಬ್ಯಾನರ್‌ನಲ್ಲಿ ಮೂಡುವ ಚಿತ್ರದ ಬಗ್ಗೆ ಅವರು ಇಲ್ಲಿ ಮಾತನಾಡಿದ್ದಾರೆ
ಆರ್ ಕೇಶವಮೂರ್ತಿ
ಚಿತ್ರರಂಗಕ್ಕೆ ತುಂಬಾ ಅಪರೂಪ ಆಗಿದ್ದೀರಲ್ಲ ಯಾಕೆ?
undefined
ಹಾಗೇನು ಇಲ್ಲ. ಒಂದೆರಡು ತಿಂಗಳು ಬೆಂಗಳೂರಿನಲ್ಲಿ ಇರಲಿಲ್ಲ. ನಮ್ಮೂರಿನಲ್ಲಿದ್ದೆ. ನಮ್ಮ ತಂದೆ ತೀರಿಕೊಂಡ ಮೇಲೆ ಅಲ್ಲೇ ಇದ್ದು ಒಂದಿಷ್ಟುಕಾರ್ಯಗಳು ಮಾಡಬೇಕಿತ್ತು. ಮನೆಯಲ್ಲಿ ಶೋಕ ಇದ್ದಾಗ ನಾನು ಇಲ್ಲಿ ಸಿನಿಮಾಗಳಲ್ಲಿ ಸುದ್ದಿ ಮಾಡಿಕೊಂಡಿದ್ದರೆ ಆಗಲ್ವಲ್ಲ!
ನಿಮ್ಮ ಸಿನಿಮಾಗಳು ತೆರೆಗೆ ಬರುವುದಕ್ಕೆ ಈ ಗ್ಯಾಪ್ ಕಾರಣವಾಯಿತೇ?
ಸದ್ಯಕ್ಕೆ ನನ್ನ ನಟನೆಯ ನಾಲ್ಕು ಸಿನಿಮಾಗಳು ಇವೆ. ಎಲ್ಲವನ್ನೂ ಬಹುತೇಕ ಚಿತ್ರೀಕರಣ ಮುಗಿಸಿ ಕೊಟ್ಟಿದ್ದೇನೆ. ಆದರೆ, ‘ಭೈರಾದೇವಿ’ ಮಾತ್ರ ನನ್ನ ಪಾತ್ರದ ಕೆಲವು ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ‘ಕಾಂಟ್ರಾಕ್ಟ್’, ‘ರಾಜೇಂದ್ರ ಪೊನ್ನಪ್ಪ’ ಹಾಗೂ ‘ದಮಯಂತಿ’ ಚಿತ್ರಗಳಿಗೆ ಶೂಟಿಂಗ್ ಮುಗಿದಿದೆ. ನನ್ನ ಪಾತ್ರದ ಚಿತ್ರೀಕರಣ ಬಾಕಿ ಇಲ್ಲ.
ಅರ್ಜುನ್ ಸರ್ಜಾ ಜೊತೆ ಕಾಂಟ್ರಾಕ್ಟ್ ಮಾಡಿಕೊಂಡಿದ್ದಾರೆ ರಾಧಿಕಾ ಕುಮಾರಸ್ವಾಮಿ
ಯಾವ ಸಿನಿಮಾ ಮೊದಲು ಬರುತ್ತದೆ?
ನನ್ನ ಬ್ಯಾನರ್‌ನ ಹೊರತಾಗಿರುವ ಮೂರು ಚಿತ್ರಗಳು ಯಾವಾಗ ತೆರೆಗೆ ಬರುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ‘ಭೈರಾದೇವಿ’ ಬೇರೆಯದ್ದೇ ಆದ ಸಿನಿಮಾ. ಸಾಕಷ್ಟುಸಮಯ ಬೇಕು. ತುಂಬಾ ನಿರೀಕ್ಷೆ ಇಟ್ಟುಕೊಂಡು ಮಾಡಿರುವ ಸಿನಿಮಾ. ಡಬ್ಬಿಂಗ್, ಸಿಜಿ, ಹಾರರ್ ಕೆಲಸ ನಡೆಯುತ್ತಿದೆ. ಜತೆಗೆ ನನ್ನ ಪಾತ್ರದ ನಾಲ್ಕೈದು ದಿನ ಚಿತ್ರೀಕರಣ ಬಾಕಿ ಇದೆ.
ಯಾಕೆ ನಿಮಗೆ ಈ ಸಿನಿಮಾ ಮಹತ್ವ ಅನಿಸುತ್ತಿದೆ?
ನಾಯಕಿಯರು ಅಂದರೆ ಗ್ಲಾಮರ್ ಪಾತ್ರ ಮಾಡುವವರು. ತೆರೆ ಮೇಲೆ ನೋಡಕ್ಕೆ ಚೆನ್ನಾಗಿ ಕಾಣಬೇಕು ಎಂದುಕೊಳ್ಳುತ್ತೇವೆ. ಆದರೆ, ಮೊದಲ ಬಾರಿಗೆ ಅಘೋರಿ ಪಾತ್ರ ಮಾಡಿದ್ದೇನೆ. ಮಹಿಳಾ ಅಘೋರಿಗಳು ಇದ್ದಾರೆ ಅಂತ ನನಗೇ ಗೊತ್ತಿದ್ದೇ ನಿರ್ದೇಶಕ ಶ್ರೀಜೈ ಬಂದು ಕತೆ ಹೇಳಿದಾಗ. ಹೀಗಾಗಿ ತುಂಬಾ ಎಕ್ಸೈಟ್ ಆಗಿ ಕತೆ ಕೇಳಿ ಒಪ್ಪಿಕೊಂಡ ಸಿನಿಮಾ. ಮೊದಲ ಬಾರಿಗೆ ಆ್ಯಕ್ಷನ್ ದೃಶ್ಯಗಳಲ್ಲಿ ನಟಿಸಿದ್ದೇನೆ. ನಾನು ಇಲ್ಲಿ ರೆಗ್ಯುಲರ್ ರಾಧಿಕಾ ಅಲ್ಲ.
ಭೈರಾದೇವಿ ಚಿತ್ರದ ಪಾತ್ರಕ್ಕೆ ನಿಮ್ಮ ತಯಾರಿ ಹೇಗಿತ್ತು?
ಕತೆ ಕೇಳಿದ ಮೇಲೆ ಚಿತ್ರದಲ್ಲಿ 7 ಗೆಟಪ್‌ಗಳು ಬರುತ್ತವೆ. ಸ್ಮಶಾನದಲ್ಲಿ ಶೂಟಿಂಗ್ ಇರುತ್ತದೆ. ನೀವು ಸ್ಮೋಕ್ ಮಾಡಬೇಕು. ಮೈ ತುಂಬಾ ವಿಭೂಥಿ, ಕುಂಕುಮ ಹಚ್ಚಿಕೊಳ್ಳಬೇಕು ಎಂದು ನಿರ್ದೇಶಕರು ಹೇಳಿದಾಗ ಯೋಚನೆ ಮಾಡಕ್ಕೇ ಒಂದು ತಿಂಗಳು ಸಮಯ ತೆಗೆದುಕೊಂಡೆ. ಕೊನೆಗೂ ಒಪ್ಪಿ, ಮಹಿಳಾ ಅಘೋರಿಗಳ ವಿಡಿಯೋಗಳನ್ನು ನೋಡಿದೆ. ಅವರ ಬಗ್ಗೆ ಬಂದಿದ್ದ ಲೇಖನಗಳು, ಕತೆಗಳನ್ನು ಓದಿದ ನಂತರ ನಿರ್ದೇಶಕರು ಹೇಳಿದ ಮಾಹಿತಿಗಳನ್ನು ಕೇಳಿದ ಮೇಲೆ ನನ್ನ ಪಾತ್ರದ ಬಗ್ಗೆ ಒಂದು ಐಡಿಯಾ ಬಂತು.
ಇಲ್ಲಿ ನಿಮಗೆ ಸವಾಲು ಅನಿಸಿದ್ದು ಏನು?
ಪ್ರತಿ ದಿನ ಮೂರು- ನಾಲ್ಕು ಗಂಟೆ ಸಮಯ ತೆಗೆದುಕೊಂಡು ಮೇಕಪ್ ಮಾಡಿಕೊಳ್ಳಬೇಕಿತ್ತು. ಆದರೆ, ಬ್ರೇಕ್ ಟೈಮ್‌ನಲ್ಲಿ ಮೇಕಪ್ ತೆಗೆಯದೆ ಊಟ ಮಾಡಬೇಕಿತ್ತು. ಇನ್ನೂ ಕ್ಯಾಮೆರಾ ಮುಂದೆ ಬಂದಾಗ ನಿರ್ದೇಶಕರು ಆ್ಯಕ್ಷನ್ ಅಂದಾಗ ಅವರು ಸಾಕು ಎನ್ನುವವರೆಗೂ ಹಣೆಗೆ, ಮೈಗೆ ವಿಭೂತಿ ಹಾಕಿಕೊಳ್ಳುತ್ತ ನಟಿಸಬೇಕಿತ್ತು. ಎಷ್ಟುಕಷ್ಟಆಯಿತು ಎಂದರೆ ನೆನಪಿಸಿಕೊಂಡರೆ ಈಗಲೂ ಭಯ ಆಗುತ್ತದೆ. ಜತೆಗೆ ನಡು ರಾತ್ರಿ ಸ್ಮಶಾನದಲ್ಲಿ ಶೂಟಿಂಗ್ ಮಾಡಿದ್ದು, ಹೆಣ ಸುಡೋ ಸಾಗದಲ್ಲಿ ಬಾಳೆ ಹಣ್ಣು ತಿನ್ನುವ ದೃಶ್ಯದಲ್ಲಿ ನಟಿಸಿದ್ದು ಮಾತ್ರ ದೊಡ್ಡ ಸವಾಲು. 10 ರಿಂದ 15 ದಿನ ಅಘೋರಿ ಗೆಟಪ್‌ನಲ್ಲಿ ನನ್ನ ಪಾತ್ರದ ಚಿತ್ರೀಕರಣ ನಡೆಯಿತು.
ಈ ಚಿತ್ರದ ಕತೆ ಏನು? ನಿಮ್ಮ ಪಾತ್ರ ಯಾಕೆ ಅಘೋರಿ ಆಗಿರುತ್ತದೆ?
ಕತೆ ಬಗ್ಗೆ ಒಂದು ಸಾಲು ಹೇಳಿದರೂ ಗೊತ್ತಾಗುತ್ತದೆ. ಹೀಗಾಗಿ ನೀವು ತೆರೆ ಮೇಲೆ ನೋಡಬೇಕು. ಹಾರರ್ ಟಚ್ ಇರುವ ಸಿನಿಮಾ. ಮುಂದೆ ಏನಾಗುತ್ತದೆ ಅಂತ ಊಹೆ ಮಾಡಕ್ಕೆ ಆಗಲ್ಲ. ಅದೇ ಈ ಚಿತ್ರದ ಕತೆಯ ಶಕ್ತಿ. ಕನ್ನಡದ ಜತೆಗೆ ತೆಲುಗು, ತಮಿಳಿನಲ್ಲೂ ಈ ಸಿನಿಮಾ ಬರುತ್ತಿದೆ. ಈ ಚಿತ್ರದ ನಾಯಕಿ ಕಂ ನಿರ್ಮಾಪಕಿ ಆಗಿದ್ದು ಕೂಡ ತುಂಬಾ ಶ್ರಮ ಹಾಕಿ ಮಾಡಿರುವ ಸಿನಿಮಾ ಅನಿಸುತ್ತಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡುತ್ತೇವೆ.
ಆದರೆ, ಭೈರಾದೇವಿ ಹಾಗೂ ದಮಯಂತಿ ಚಿತ್ರಗಳು ಒಂದೇ ರೀತಿ ಇದ್ದಾವಲ್ಲ?
ಚಿತ್ರದ ಪೋಸ್ಟರ್‌ಗಳನ್ನು ನೋಡಿ ನೀವು ಹಾಗೆ ಅಂದುಕೊಂಡಿದ್ದೀರಿ. ಆದರೆ, ಎರಡೂ ಬೇರೆ ಬೇರೆ ಕತೆಗಳು. ದಮಯಂತಿ ಚಿತ್ರದಲ್ಲಿ ನನ್ನದು ಅಮ್ಮನಂತಹ ಪಾತ್ರ. ಇಡೀ ಊರಿಗೆ ನೇರವು ನೀಡುತ್ತ, ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿರುವ ಮಹಿಳೆಯ ಜೀವನದಲ್ಲಿ ನಡೆಯುವ ಘಟನೆಗಳು ಈ ಚಿತ್ರದ್ದು. ಭೈರಾದೇವಿ ಚಿತ್ರದ್ದೇ ಬೇರೆ ಕತೆ. ಎರಡೂ ಚಿತ್ರಗಳ ಟ್ರೇಲರ್ ಬಂದರೆ ನಿಮಗೆ ಗೊತ್ತಾಗುತ್ತದೆ.
ರಾಧಿಕಾಗೂ ತಟ್ಟುತ್ತಾ ಎಲೆಕ್ಷನ್ ಬಿಸಿ? ಇನ್ನುಳಿದವರ ಸಿನಿಮಾನೂ ನೋಡಂಗಿಲ್ಲ!
ದಮಯಂತಿ ಚಿತ್ರದ ಹೇಗೆ ಬಂದಿದೆ?
ತುಂಬಾ ಚೆನ್ನಾಗಿದೆ. ನಿರ್ದೇಶಕ ನವರಸನ್ ಅವರು ಹೊಸ ರೀತಿಯ ಕತೆ ಮಾಡಿಕೊಂಡಿದ್ದಾರೆ. ಕಾಮಿಡಿ ಜತೆಗೆ ಗಂಬೀರವಾಗಿ ಸಾಗುವ ಕತೆ ಇಲ್ಲಿದೆ. ಡೈಲಾಗ್‌ಗಳು ಈ ಚಿತ್ರದ ಹೈಲೈಟ್. ಇಲ್ಲೂ ನಾನೇ ಹೈಲೈಟ್.
ಮತ್ತೆರಡು ಚಿತ್ರಗಳು ಎಲ್ಲಿವರೆಗೂ ಬಂದಿವೆ?
ನನ್ನ ಮತ್ತು ಅರ್ಜುನ್ ಸರ್ಜಾ ಜೋಡಿಯ ‘ಕಾಂಟ್ರಾಕ್ಟ್’ ಚಿತ್ರಕ್ಕೆ ಶೂಟಿಂಗ್ ಮುಗಿದಿದೆ. ಇಲ್ಲೂ ಎಂದಿನಂತೆ ಒಂದು ಗ್ಲಾಮರ್ ಹಾಗೂ ಪವರ್‌ಫುಲ್ ಲೇಡಿ ಪಾತ್ರ ನನ್ನದು. ‘ರಾಜೇಂದ್ರ ಪೊನ್ನಪ್ಪ’ ಶೂಟಿಂಗ್ ಮುಗಿಸಿದ್ದೇನೆ. ಇಲ್ಲೂ ನೀವು ರೆಗ್ಯೂಲರ್ ರಾಧಿಕಾ ಅವರನ್ನು ನೋಡಬಹುದು.
ಬೇರೆ ಚಿತ್ರಗಳು ಒಪ್ಪಿಕೊಂಡಿದ್ದೀರಾ?
ಸದ್ಯಕ್ಕೆ ಯಾವುದೂ ಒಪ್ಪಿಲ್ಲ. ಐತಿಹಾಸಿಕ ಹಿನ್ನೆಲೆ ಕತೆಯನ್ನು ಸಿನಿಮಾ ಮಾಡುವ ಆಸೆ ಇದೆ. ಆದರೆ, ಅಂಥ ಕತೆಯನ್ನು ಆಯ್ಕೆ ಮಾಡಿಕೊಂಡು ಹೇಳುವ ತಂಡ ಬೇಕಿದೆ. ಮುಂದೆ ಐತಿಹಾಸಿಕ ಸಿನಿಮಾ ಮಾಡುವ ಗುರಿ ಇದೆ. ಇದು ನನ್ನ ಹೋಮ್ ಬ್ಯಾನರ್ ಸಿನಿಮಾ ಆಗುತ್ತದೆ.