
ಬೆಂಗಳೂರು (ಅ. 24): ಪ್ರಸಿದ್ಧಿಗಾಗಿ ಮೀಟೂ ಅಭಿಯಾನವನ್ನು ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಬಲವಾಗಿ ವಿರೋಧಿಸಿದ್ದಾರೆ. ಅನ್ನ ಕೊಟ್ಟಿರುವ ಚಿತ್ರರಂಗಕ್ಕೆ ಕೆಲವರು ಪ್ರಸಿದ್ಧಿಗಾಗಿ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ದೂರಿದ್ದಾರೆ.
ಆ್ಯಕ್ಟಿವಿಸ್ಟ್ ನಟಿಯರು ಆರಂಭದಲ್ಲಿ ದುಡ್ಡಿಗಾಗಿ, ಅವಕಾಶಕ್ಕಾಗಿ ಅನೇಕರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಈಗ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇವು ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಮೀಟೂ ಅಭಿಯಾನದ ವಿರುದ್ಧ ಸಿಡಿದು ಬಿದ್ದು ಆಡಿರುವ ಮಾತುಗಳು. ಮಹಿಳೆಯರಿಗೆ ನಿಜವಾಗಿಯೂ ಕಿರುಕುಳ ನೀಡಿದವರ ವಿರುದ್ಧ ಹೋರಾಟ ಮಾಡುವುದನ್ನು ಸಮರ್ಥಿಸಿಕೊಂಡಿರುವ ಹರ್ಷಿಕಾ, ಪ್ರಸಿದ್ಧಿಗಾಗಿ ಸುಳ್ಳುಸುಳ್ಳೇ ಮೀ ಟೂ ಆರೋಪ ಮಾಡಿರುವವರ ವಿರುದ್ಧ ಭಾರಿ ಸಿಟ್ಟು ಮಾಡಿಕೊಂಡಿದ್ದಾರೆ. ಕೆಲವು ಆ್ಯಕ್ಟಿವಿಸ್ಟ್ ನಟಿಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಆರಂಭದ ಹಂತದಲ್ಲಿ ಎಲ್ಲಕ್ಕೂ ಹೊಂದಾಣಿಕೆ ಮಾಡಿಕೊಂಡು, ಈಗ ತಾನು ಜಗತ್ತಿನ ಮಹಿಳೆಯರನ್ನು ಕಾಪಾಡುವ ಪೋಸ್ ಕೊಡುತ್ತಿರುವವರನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದು ಹೋರಾಟದ ಸರಿಯಾದ ವಿಧಾನವಲ್ಲ ಎಂದಿದ್ದಾರೆ. ಹರ್ಷಿಕಾ ಪೂಣಚ್ಚ ಈ ಮಾತುಗಳು ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ತಾವು ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವ ಪತ್ರದಲ್ಲಿ ಕೆಲವು ಘಟನೆಗಳನ್ನು ಹೇಳಿರುವ ಅವರು ಯಾವುದೇ ನಟಿಯ ಹೆಸರನ್ನು ಬಹಿರಂಗಪಡಿಸಿಲ್ಲ.
ನಟಿಯಾಗಿರುವ ನನ್ನನ್ನೂ ಕೆಲವರು ಫೇವರ್‌ಗಳನ್ನು ಕೇಳಿದ್ದಾರೆ. ಆದರೆ ತಾನು ತುಂಬಾ ಸ್ಪಷ್ಟವಾಗಿ ಅವರ ಮಾತುಗಳನ್ನು ತಿರಸ್ಕರಿಸಿದ್ದೇನೆ. ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿರುವ ನನ್ನ ವಿರುದ್ಧ ಯಾರೊಬ್ಬರೂ ಬೆರಳು ತೋರಿಸುವಂತೆ ನಾನು ಬದುಕಿಲ್ಲ. ತುಂಬಾ ಸ್ವಚ್ಛವಾಗಿ ಬದುಕಿದ್ದೇನೆ. ನನ್ನ ನೇರವಂತಿಕೆಯಿಂದ ಸೂಪರ್‌ಸ್ಟಾರ್‌ಗಳ ಜೊತೆಗೆ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶದಿಂದ ನಾನು ವಂಚಿತಳಾಗಿರಬಹುದು. ಆದರೆ ನಾನೊಬ್ಬಳು ಹ್ಯಾಪಿ ಪರ್ಸನ್.
ಈಗಲೂ ಚಿತ್ರರಂಗದ ಎಲ್ಲರ ಜೊತೆ ಒಳ್ಳೆಯ ಸಂಬಂಧ ಇರಿಸಿಕೊಂಡಿದ್ದೇನೆ ಎಂದು ಹರ್ಷಿಕಾ ಹೇಳಿದ್ದಾರೆ. ನನ್ನ ಮಾತುಗಳನ್ನು ಕೆಲವರು ವಿರೋಧಿಸಬಹುದು. ಆದರೆ ಸತ್ಯ ಸತ್ಯವೇ. ಕೆಲವು ಪುರುಷರು ಕೆಟ್ಟವರಾಗಿದ್ದು, ಅವರ ಇಚ್ಛೆಗೆ ತಕ್ಕಂತೆ ವರ್ತಿಸಲು ನಟಿಯರನ್ನು ಬಲವಂತ ಮಾಡಬಹುದು. ಆದರೆ ಯಾರೂ ಅತ್ಯಾಚಾರ ಮಾಡುವುದಿಲ್ಲ. ಮೃಗಗಳಂತೆ ವರ್ತಿಸುವುದಿಲ್ಲ. ನಟಿಯರು ನಿರ್ಭಿಡೆಯಿಂದ ನೋ ಎಂದು ಸ್ಪಷ್ಟವಾಗಿ ಹೇಳಿ ಅಲ್ಲಿಂದ ಎದ್ದು ನಡೆಯುವ ಸ್ವಾತಂತ್ರ್ಯ ಎಲ್ಲರಿಗೂ ಇದ್ದೇ ಇದೆ.
ಎರಡು ಕೈ ಇದ್ದರೇನೇ ಚಪ್ಪಾಳೆ ಅನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದಿರುವ ಹರ್ಷಿಕಾ ಎಲ್ಲಾ ಆ್ಯಕ್ಟಿವಿಸ್ಟ್ ನಟಿಯರಲ್ಲಿ ಸತ್ಯವಾಗಿ ವರ್ತಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.