
ಕನ್ನಡ ಚಿತ್ರರಂಗದ ಗಡಿಯನ್ನು ದಾಟಿ ಭಾರತೀಯ ಸಿನಿಮಾರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ‘ಕಾಂತಾರ’ ಸರಣಿಯ ಮುಂದಿನ ಅಧ್ಯಾಯದ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ‘ಕಾಂತಾರ 3’ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ರಿಷಬ್ ಶೆಟ್ಟಿ ಗುಡ್‌ನ್ಯೂಸ್‌ವೊಂದನ್ನು ನೀಡಿದ್ದಾರೆ. ಸಿನಿಮಾ ಖಂಡಿತವಾಗಿಯೂ ಬರಲಿದೆ ಎಂದು ಸ್ಪಷ್ಟಪಡಿಸಿರುವ ಅವರು, ಚಿತ್ರ ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆಗೆ ಮಾತ್ರ ಸಸ್ಪೆನ್ಸ್ ಉಳಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡು ಬಳಿಕ ನಿರ್ದೇಶಕರಾಗಿ ತಮ್ಮದೇ ಶೈಲಿಯನ್ನು ರೂಪಿಸಿಕೊಂಡ ರಿಷಬ್ ಶೆಟ್ಟಿ, ‘ಕಾಂತಾರ’ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿರುವ ಅವರು, ‘ಕಾಂತಾರ ಚಾಪ್ಟರ್ 1’ ಮೂಲಕ ಈ ಕಥಾ ಲೋಕವನ್ನು ಮತ್ತಷ್ಟು ವಿಸ್ತರಿಸಿದ್ದರು.
ಈ ಚಿತ್ರದ ಕೊನೆಯಲ್ಲಿ ‘ಕಾಂತಾರ 3’ ಬಗ್ಗೆ ಸುಳಿವು ನೀಡಲಾಗಿತ್ತು. ಹೀಗಾಗಿ ಮುಂದಿನ ಭಾಗ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಸಹಜವಾಗಿಯೇ ಮೂಡಿತ್ತು. ಇದೀಗ ಕೇರಳದ ತಿರುವನಂತಪುರಂನಲ್ಲಿ ರಿಷಬ್ ಶೆಟ್ಟಿ ನೀಡಿರುವ ಹೇಳಿಕೆ ಆ ನಿರೀಕ್ಷೆಗೆ ಮತ್ತಷ್ಟು ಪುಷ್ಟಿ ನೀಡಿದೆ.
‘ಕಾಂತಾರ 3’ ಬರೋದು ಪಕ್ಕಾ!
ಮಲಯಾಳಂ ನಟಿ ಅಹಾನ ಕೃಷ್ಣ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ತಿರುವನಂತಪುರಂಗೆ ಆಗಮಿಸಿದ್ದ ರಿಷಬ್ ಶೆಟ್ಟಿ, ಶ್ರೀ ಪದ್ಮನಾಭಸ್ವಾಮಿ ಹಾಗೂ ಅಟ್ಟುಕಲ್ ಭಗವತಿ ದೇವಸ್ಥಾನಗಳಿಗೆ ಭೇಟಿ ನೀಡಿದರು. ಈ ವೇಳೆ ಮಾಧ್ಯಮದವರು ‘ಕಾಂತಾರ 3’ ಬಗ್ಗೆ ಪ್ರಶ್ನಿಸಿದಾಗ, ಸಿನಿಮಾ ಖಂಡಿತವಾಗಿಯೂ ಬರಲಿದೆ ಎಂಬುದನ್ನು ರಿಷಬ್ ಶೆಟ್ಟಿ ಖಚಿತಪಡಿಸಿದ್ದಾರೆ.
‘ಕಾಂತಾರ ಚಾಪ್ಟರ್ 1’ನಲ್ಲಿ ಘೋಷಿಸಿದಂತೆ ಸೀಕ್ವೆಲ್ ಮಾಡುತ್ತೇವೆ. ಆದರೆ ಅದು ಯಾವಾಗ ಬರಲಿದೆ, ಹೇಗೆ ಬರಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಸಮಯ ಬಂದಾಗ ಎಲ್ಲವೂ ಗೊತ್ತಾಗಲಿದೆ ಎಂಬರ್ಥದಲ್ಲಿ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ. ಅಂದರೆ ಸಿನಿಮಾ ಬರುತ್ತದೆ ಎನ್ನುವುದು ಖಚಿತ. ಆದರೆ ಕಥೆ ಏನು? ಚಿತ್ರೀಕರಣ ಯಾವಾಗ ಆರಂಭ? ಬಿಡುಗಡೆ ಯಾವಾಗ? ಎಂಬ ಪ್ರಮುಖ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಹೀಗಾಗಿ ‘ಕಾಂತಾರ 3’ ಕುರಿತ ಕುತೂಹಲವನ್ನು ರಿಷಬ್ ಶೆಟ್ಟಿ ಮತ್ತಷ್ಟು ಹೆಚ್ಚಿಸಿದ್ದಾರೆ.
ರಿಷಬ್ ಶೆಟ್ಟಿಯ ಮುಂದಿನ ಸಿನಿಮಾ ಯಾವುದು?
‘ಕಾಂತಾರ 3’ ಮಾತ್ರವಲ್ಲ, ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ರಿಷಬ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಅವರು ‘ಜೈ ಹನುಮಾನ್’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಎರಡು ಹಂತದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಶೂಟಿಂಗ್ ಉತ್ತಮವಾಗಿ ಸಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ‘ಕಾಂತಾರ 3’ಗಿಂತ ಮೊದಲು ರಿಷಬ್ ಶೆಟ್ಟಿಯ ಅಭಿಮಾನಿಗಳ ಗಮನ ‘ಜೈ ಹನುಮಾನ್’ನತ್ತ ನೆಟ್ಟಿದೆ.
ಕೇರಳದ ಪ್ರೇಕ್ಷಕರಿಗೆ ರಿಷಬ್ ಶೆಟ್ಟಿ ಧನ್ಯವಾದ
ಕೇರಳದಲ್ಲಿ ರಿಷಬ್ ಶೆಟ್ಟಿ ಹಾಗೂ ‘ಕಾಂತಾರ’ ಸರಣಿಗೆ ಸಿಕ್ಕಿರುವ ಪ್ರೀತಿಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಮಲಯಾಳಂ ಪ್ರೇಕ್ಷಕರು ತಮ್ಮ ಕೆಲಸವನ್ನು ಮೆಚ್ಚಿ ಬೆಂಬಲಿಸುತ್ತಿರುವುದಕ್ಕೆ ಧನ್ಯವಾದ ತಿಳಿಸಿರುವ ರಿಷಬ್, ಕನ್ನಡ ಮತ್ತು ಮಲಯಾಳಂ ಚಿತ್ರರಂಗಗಳ ನಡುವೆ ಉತ್ತಮ ಬಾಂಧವ್ಯವಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಸಿನಿಮಾಗಳ ತಾಂತ್ರಿಕ ತಂಡದಲ್ಲೂ ಕೇರಳದ ಹಲವು ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
2022ರಲ್ಲಿ ಬಿಡುಗಡೆಯಾದ ‘ಕಾಂತಾರ’ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ, ಕೇರಳದಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಬಳಿಕ 2025ರಲ್ಲಿ ಬಿಡುಗಡೆಯಾದ ‘ಕಾಂತಾರ ಚಾಪ್ಟರ್ 1’ಗೂ ಮಲಯಾಳಂ ಪ್ರೇಕ್ಷಕರಿಂದ ಉತ್ತಮ ಸ್ವಾಗತ ಸಿಕ್ಕಿತ್ತು. ‘ಕಾಂತಾರ ಚಾಪ್ಟರ್ 1’ನಲ್ಲಿ ಕೇರಳದ ಸಾಂಪ್ರದಾಯಿಕ ಕಳರಿಪಯಟ್ಟು ಕಲೆಯ ಬಳಕೆಯೂ ಗಮನ ಸೆಳೆದಿತ್ತು. ಅಲ್ಲಿನ ತಂಡ ರಿಷಬ್ ಶೆಟ್ಟಿ ಸೇರಿದಂತೆ ಕಲಾವಿದರಿಗೆ ತರಬೇತಿ ನೀಡಿತ್ತು.
ಮಲಯಾಳಂನ ಹಿರಿಯ ನಟ ಜಯರಾಂ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ಕಾಂತಾರ 3’ ಕೂಡ ಬರಲಿದೆ ಎಂಬ ರಿಷಬ್ ಶೆಟ್ಟಿಯ ಮಾತು, ಈ ಸರಣಿಯ ಮುಂದಿನ ಕಥೆ ಹೇಗಿರಲಿದೆ ಎಂಬ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಮಾ ಯಾವಾಗ ಆರಂಭವಾಗಲಿದೆ ಎಂಬುದನ್ನು ಮಾತ್ರ ರಿಷಬ್ ಶೆಟ್ಟಿ ಸದ್ಯಕ್ಕೆ ರಹಸ್ಯವಾಗಿಯೇ ಉಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.