Actor Dileep Raj: ಆರಿದ ದೀಪ ದಿಲೀಪ, ಸ್ಟೋರಿ ಮಾಡೋಣ ಬಾರೋ, ಕಥೆಗಾರರು ಬಂದಿದ್ದಾರೆ!

Published : May 14, 2026, 08:11 AM IST
Dileep Raj

ಸಾರಾಂಶ

ನಟ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಸ್ಯಾಂಡಲ್‌ವುಡ್ ಮತ್ತು ಕಿರುತೆರೆಗೆ ಆಘಾತವನ್ನುಂಟುಮಾಡಿದೆ. 'ಹಿಟ್ಲರ್ ಕಲ್ಯಾಣ'ದ ಜೆಕೆ ಪಾತ್ರದಿಂದ ಮನೆಮಾತಾಗಿದ್ದ ಅವರು, ತಮ್ಮ ಬಹುಮುಖ ಪ್ರತಿಭೆ, ನಟನೆ, ನಿರ್ದೇಶನ, ಮತ್ತು ಡಬ್ಬಿಂಗ್ ಮೂಲಕ ಜನಪ್ರಿಯರಾಗಿದ್ದರು. ಅವರ ವೃತ್ತಿಜೀವನದ ಪಯಣ, ಕೊನೆಯ ಚಿತ್ರ 'ಲವ್ ಮಾಕ್‌ಟೇಲ್‌ 3' ಮತ್ತು ಗಣ್ಯರ ನುಡಿನಮನಗಳ ಕುರಿತು ಈ ಲೇಖನ ಬೆಳಕು ಚೆಲ್ಲುತ್ತದೆ.

‘ಅಪ್ಪಾ.. ನೋಡೋ, ಕಥೆಗಾರರು ಬಂದಿದ್ದಾರೆ, ಸ್ಟೋರಿ ಮಾಡಾಣ ಬಾರೋ.. ಸ್ಟೋರಿ ಡಿಸ್ಕಸ್‌ ಮಾಡ್ಬೇಕು ಅಂತಿದ್ಯಲ್ಲಾ, ನೋಡು ಬಂದಿದ್ದಾರೆ..’

ನಿದ್ದೆ ಹೋದ ಪತಿಯನ್ನು ಎಬ್ಬಿಸುವಂತೆ ಪತ್ನಿ ಶ್ರೀವಿದ್ಯಾ ದಿಲೀಪ್‌ ಭುಜ ಹಿಡಿದು ಅಲ್ಲಾಡಿಸುತ್ತಿದ್ದರೆ, ಇನ್ನೇನು ಎದ್ದುಬಂದು ಶೇಕ್‌ಹ್ಯಾಂಡ್‌ ಮಾಡಿ ಕಥೆಗಾರರನ್ನು ಮಾತನಾಡಿಸುತ್ತಾರೆ ದಿಲೀಪ್‌ ರಾಜ್‌ ಎನ್ನುವಂತಿತ್ತು ಸನ್ನಿವೇಶ.

ದುರದೃಷ್ಟ! ಸದಾ ಹೊಸ ಸ್ಟೋರಿಗೆ ಕಾತರಿಸುತ್ತಿದ್ದ ದಿಲೀಪ್‌ ಅಷ್ಟರಲ್ಲಾಗಲೇ ಹೊಸ ಕಥೆಯೊಂದರ ಅನ್ವೇಷಣೆಯಲ್ಲಿ ಬಾರದ ಲೋಕದತ್ತ ಪ್ರಯಾಣ ಬೆಳೆಸಿದ್ದರು.

ಕೊನೆಯದಾಗಿ ಅಭಿನಯಿಸಿದ ‘ಲವ್‌ ಮಾಕ್‌ಟೇಲ್‌ 3’ ಸಿನಿಮಾದಲ್ಲಿ ದಿಲೀಪ್‌ರಾಜ್‌ ಅವರದು ಮಗುವಿಗಾಗಿ ಹಂಬಲಿಸುವ ತಾಯಿಯೊಬ್ಬಳ ಪರ ವಾದಿಸಿ ಸೋಲುವ ಲಾಯರ್‌ ಪಾತ್ರ. ಆ ಪಾತ್ರಕ್ಕೆ ಸೆನ್ಸಿಬಲ್‌ ಆಗಿ ಜೀವ ತುಂಬುತ್ತಲೇ ಪ್ರೇಕ್ಷಕನ ಮನಸ್ಸು ಗೆದ್ದಿದ್ದರು ದಿಲೀಪ್‌. ಈಗ ಅದೇ ಲಾಯರ್‌ ಪಾತ್ರಧಾರಿ ಸಾವಿನೆದುರು ವಾದಿಸಿ ಸೋತಿದ್ದಾರೆ. ಆದರೆ ಅವರ ಸೆನ್ಸಿಬಲ್‌ ವ್ಯಕ್ತಿತ್ವ ಎಷ್ಟರ ಮಟ್ಟಿಗೆ ಗೆದ್ದಿದೆ ಅನ್ನುವುದಕ್ಕೆ ಅವರ ಅಂತಿಮ ದರ್ಶನಕ್ಕೆ ಬಂದ ಜನಪ್ರವಾಹವೇ ಸಾಕ್ಷಿಯಂತಿವೆ.

ದಿಲೀಪ್‌ ವ್ಯಕ್ತಿತ್ವವನ್ನು ಬಣ್ಣಿಸುವ ಹಿರಿಯ ನಿರ್ದೇಶಕ ಟಿ.ಎನ್‌.ಸೀತಾರಾಮ್‌, ‘ಅವನ ಬಳಿ ನಾಲ್ಕು ಜನ್ಮಕ್ಕಾಗುವಷ್ಟು ಎನರ್ಜಿ ಇತ್ತು. ಪ್ರತೀ ನಿಮಿಷ ಏನಾದರೊಂದು ಹೊಸತು ಮಾಡುತ್ತಿದ್ದ. ನಾನು ನಿರ್ದೇಶಿಸಿದ್ದ ಮಳೆಬಿಲ್ಲು ಧಾರಾವಾಹಿಯಲ್ಲಿ ಮುಖ್ಯಪಾತ್ರ ಮಾಡಿದ್ದ. ಎಂಥಾ ಟೆನ್ಶನ್‌ನ ಸ್ಥಿತಿ ಇದ್ದರೂ ಈತನದು ಸದಾ ನಗು ಮುಖ. ಆತ ಇದ್ದಲ್ಲಿ ನಗುವಿಗೆ ಕೊರತೆ ಇರಲಿಲ್ಲ. ಆದರೆ ಇನ್ಯಾವತ್ತೂ ನಗದೇ ಇರುವ ಥರ ಇವತ್ತು ಮಲಗಿದ್ದಾನೆ’ ಎಂದಿದ್ದಾರೆ.

ಗೋಲ್ಡನ್‌ಸ್ಟಾರ್‌ ಗಣೇಶ್‌, ‘ದಿಲೀಪ್‌ ಅದ್ಭುತ ಮನುಷ್ಯ. ಸೊಗಸಾದ ಪರ್ಫಾರ್ಮರ್‌. 2000ನೇ ಇಸವಿಯಲ್ಲಿ ನಾವೆಲ್ಲ ಕಾಲೇಜ್‌ ಮುಗಿಸಿ ಜೊತೆಗೇ ಮನರಂಜನಾ ಕ್ಷೇತ್ರಕ್ಕೆ ಬಂದವರು. ನಮ್ಮದು ಚಿಕ್ಕ ತಂಡ ಇತ್ತು. ದಿಲೀಪ್‌ಗೆ ಮೊದಲು ಸೀರಿಯಲ್‌ನಲ್ಲಿ ಪಾತ್ರ ಸಿಕ್ಕಿತು. ನಮಗೆಲ್ಲ ಖುಷಿ ಆಗಿತ್ತು. ಆಮೇಲೆ ಎಲ್ಲರೂ ಬೆಳೆಯುತ್ತ ಹೋದೆವು. ಮೊನ್ನೆ ಹದಿನೈದು ದಿನ ಹಿಂದೆ ಅವರ ಜೊತೆ ಮಾತನಾಡಿದ್ದೆ. ಈಗ ಈ ಸುದ್ದಿ ಬಂದಿದೆ. ನನಗೆ ಇನ್ನೂ ಈ ಶಾಕ್‌ನಿಂದ ಚೇತರಿಸಿಕೊಳ್ಳಲಾಗುತ್ತಿಲ್ಲ’ ಎಂದು ಗೆಳೆಯನ ಅಗಲಿಕೆಯ ನೋವು ತೋಡಿಕೊಂಡಿದ್ದಾರೆ.

ತಾಳ್ಮೆ ಕಳೆದುಕೊಳ್ಳದ ದಿಲೀಪ್ ರಾಜ್

2005ನೇ ಇಸವಿಯಲ್ಲಿ ದಿಲೀಪ್‌ರಾಜ್‌ ‘ಬಾಯ್‌ಫ್ರೆಂಡ್‌’ ಅನ್ನುವ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಾಗ ಅವರಲ್ಲಿದ್ದದ್ದು ಸಿನಿಮಾರಂಗದಲ್ಲಿ ನಾಯಕನಾಗಿ ಮಿಂಚುವ ಉತ್ಸಾಹ. ಆದರೆ ಈ ಮನರಂಜನಾ ಕ್ಷೇತ್ರ ಅವರ ಜೊತೆಗೆ ಕಣ್ಣಾಮುಚ್ಚಾಲೆ ಆಡಿದ್ದೇ ಹೆಚ್ಚು. ದಿಲೀಪ್‌ ತಾಳ್ಮೆ ಕಳೆದುಕೊಳ್ಳದೇ ಧಾರಾವಾಹಿಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಷ್ಟರಲ್ಲಿ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಮಿಲನ’ ಸಿನಿಮಾದಲ್ಲಿ ಖಳನಾಯಕನ ಪಾತ್ರ ಸಿಗುತ್ತದೆ. ಗೋಮುಖ ವ್ಯಾಘ್ರನಂಥಾ ಆ ಪಾತ್ರ ದಿಲೀಪ್‌ ನಟನೆಯ ತಾಕತ್ತನ್ನು ಇಂಡಸ್ಟ್ರಿಗೆ ಪರಿಚಯಿಸುತ್ತದೆ. ಆಮೇಲೆ ಒಂದಿಷ್ಟು ಸಿನಿಮಾ ಆಫರ್‌ಗಳು ಬಂದರೂ ಅವು ಈ ನಟನ ಪ್ರತಿಭೆಗೆ ನೀರೆರೆದದ್ದು ಕಡಿಮೆ. ಹಾಗೆಂದು ಅಪರೂಪದ ಪಾತ್ರಗಳಲ್ಲಿ ದಿಲೀಪ್‌ ನಟಿಸಿದ್ದಾರೆ. ಪೂರ್ಣಚಂದ್ರ ಮೈಸೂರು ಅವರ ‘ಆರ್ಕೆಸ್ಟ್ರಾ ಮೈಸೂರು’, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಎಂಬ ಕೇಶವಮೂರ್ತಿ ನಿರ್ದೇಶನದ ಬ್ರಿಡ್ಜ್‌ ಮಾದರಿಯ ಸಿನಿಮಾಗಳಲ್ಲಿ ಇವರದು ಪ್ರಬುದ್ಧ ನಟನೆ.

ಆದರೂ ಸಿನಿಮಾದಲ್ಲಿ ಸರಿಯಾದ ಅವಕಾಶ ಸಿಗದ ಸಮಯದಲ್ಲಿ ಸೀರಿಯಲ್‌ ಕ್ಷೇತ್ರ ಇವರ ಕೈ ಹಿಡಿಯುತ್ತದೆ. ‘ಮಳೆಬಿಲ್ಲು’ ಧಾರಾವಾಹಿಯ ಆದಿತ್ಯ, ‘ಪ್ರೀತಿ ಇಲ್ಲದ ಮೇಲೆ’ಯ ಕಿಶೋರ್‌, ‘ಪುರುಷೋತ್ತಮ’ದ ಪುರುಷೋತ್ತಮ, ಕೊನೆಗೆ ‘ಹಿಟ್ಲರ್‌ ಕಲ್ಯಾಣ’ದ ಜೆಕೆಯನ್ನು ಜನ ತೆರೆದ ತೋಳಿಂದ ಆಲಂಗಿಸಿಕೊಳ್ಳುತ್ತಾರೆ.

2021ರಿಂದ 2024ರವರೆಗೆ ಪ್ರಸಾರವಾದ ‘ಹಿಟ್ಲರ್‌ ಕಲ್ಯಾಣ’ ಧಾರಾವಾಹಿಯ ನಂತರವಂತೂ ಜನ ಇವರನ್ನು ಜೆಕೆ ಎಂದೇ ಗುರುತಿಸುತ್ತಾರೆ.

ಈ ಧಾರಾವಾಹಿಯಲ್ಲಿ ಇವರ ತಾಯಿ ಪಾತ್ರ ನಿರ್ವಹಿಸಿದ್ದ ವಿದ್ಯಾಮೂರ್ತಿ, ‘ಹಿಟ್ಲರ್‌ ಕಲ್ಯಾಣದ ನಂತರ ನನ್ನನ್ನು ಎಲ್ಲರೂ ಜೆಕೆ ತಾಯಿ ಅಂತಲೇ ಗುರುತಿಸುತ್ತಿದ್ದರು. ಈಗ ಜೆಕೆಯೇ ಸ್ಕ್ರೀನ್‌ನಿಂದ ಹೊರನಡೆದಿದ್ದಾರೆ’ ಎಂದು ಕಂಬನಿ ಮಿಡಿದಿದ್ದಾರೆ.

ಸಾವಿನ ಸುದ್ದಿ ದಿಗ್ಭ್ರಮೆ

ಇದರಲ್ಲಿ ನಾಯಕಿ ಪಾತ್ರ ಮಾಡಿ ಈಗ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಮಲೈಕಾ ವಸುಪಾಲ್‌, ‘ಸರ್‌ ನಿಮ್ಮ ನಿರ್ದೇಶನದಲ್ಲಿ ಮೂಡಿಬಂದಿದ್ದ ಧಾರಾವಾಹಿ ಮೂಲಕ ನಾನು ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟೆ. ನಿಮ್ಮ ಸಾವಿನ ಸುದ್ದಿ ದಿಗ್ಭ್ರಮೆ ಮೂಡಿಸಿದೆ’ ಎಂದಿದ್ದಾರೆ.

ಇನ್ನೊಂದೆಡೆ ದಿಲೀಪ್‌ ಡಬ್ಬಿಂಗ್‌ ಕಲಾವಿದನಾಗಿಯೂ ಗಮನಸೆಳೆದವರು. ನಿರ್ದೇಶಕ ಕೆ.ಎಂ ಚೈತನ್ಯ ಈ ಬಗ್ಗೆ ಬರೆಯುತ್ತ, ‘2005ರಲ್ಲಿ ‘ಕಿಚ್ಚು’ ಎಂಬ ಧಾರಾವಾಹಿ ನಿರ್ಮಿಸಿ ನಿರ್ದೇಶನ ಮಾಡಿದಾಗ ಆ ಧಾರಾವಾಹಿಯ ಮುಖ್ಯ ಪಾತ್ರ ನಿರ್ವಹಿಸಿದ್ದು ದಿಲೀಪ್. ನನ್ನ ‘ಆ ದಿನಗಳು’ ಸಿನೆಮಾಗೆ ಚೇತನ್ ನಟಿಸಿದ ಪಾತ್ರಕ್ಕೆ ದಿಲೀಪ್ ತನ್ನ ಧ್ವನಿ ನೀಡಿ ಸಹಾಯ ಮಾಡಿದರು. ಅವರ ಪ್ರತಿಭೆಗೆ ಇನ್ನೂ ಹೆಚ್ಚು ಅವಕಾಶಗಳು ಅವರಿಗೆ ಸಿಗಬೇಕಿತ್ತು’ ಎಂದಿದ್ದಾರೆ.

ಹಾಗೆ ನೋಡಿದರೆ ‘ಆ ದಿನಗಳು’, ‘ಮೈನಾ’ದಂಥಾ ಸಿನಿಮಾಗಳಲ್ಲಿ ನಟ ಚೇತನ್‌ಗೆ ದಿಲೀಪ್‌ ಅದೆಷ್ಟು ಸೊಗಸಾಗಿ ಧ್ವನಿ ನೀಡಿದ್ದರು ಎಂದರೆ ಬಹಳ ಮಂದಿ ಅದು ಚೇತನ್‌ ಅವರದೇ ಧ್ವನಿ ಎಂದು ತಿಳಿದಿದ್ದರು.

ಇದರ ಜೊತೆಗೆ ದಿಲೀಪ್‌ ಪತ್ನಿ ಒಡಗೂಡಿ ಸೀರಿಯಲ್‌ ನಿರ್ಮಾಣಕ್ಕೂ ಮುಂದಾಗುತ್ತಾರೆ. ಇವರ ನಿರ್ಮಾಣದ ‘ಕೃಷ್ಣ ರುಕ್ಕು’, ‘ಬ್ರಹ್ಮಗಂಟು’ ಧಾರಾವಾಹಿಗಳು ಜನರ ಮನರಂಜಿಸುತ್ತಿವೆ.

ಇವೆಲ್ಲದರ ಮಧ್ಯೆ ದೀಪ ಆರಿದೆ. ಪ್ರಭೆ ಮಾತ್ರ ಬೆಳಗುತ್ತಿದೆ.

ದಿಲೀಪ್ ಒಳ್ಳೆಯ ನಟ, ನಿರ್ದೇಶಕ, ನಿರ್ಮಾಪಕ ಎಲ್ಲದಕ್ಕೂ ಮಿಗಿಲಾಗಿ ಒಬ್ಬ ಒಳ್ಳೆಯ ಮನುಷ್ಯ. ಭೇಟಿಯಾದ ಸಂದರ್ಭಗಳು ಬೆರಳೆಣಿಕೆಯಷ್ಟಾದರೂ ಮನಸ್ಸಿನಲ್ಲಿ ಕೂತ ವ್ಯಕ್ತಿತ್ವದ ಭಾವ ಮಾಸಿಹೋಗಲಾರದು.

- ರಿಷಬ್‌ ಶೆಟ್ಟಿ

ದಿಲೀಪ್ ರಾಜ್ ಅವರ ಅಗಲಿಕೆ ಮನಸ್ಸಿಗೆ ಆಘಾತ ತಂದಿದೆ. ಅವರು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ರೀತಿ, ಅವರ ಭಾಷೆಯ ಮೇಲಿನ ಹಿಡಿತ ಮತ್ತು ಮಾತನಾಡುವ ಶೈಲಿ ಕೇಳಲು ತುಂಬಾ ಸೊಗಸಾಗಿತ್ತು.

- ಶಿವರಾಜ್‌ಕುಮಾರ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಹಿಳಾ ನಿರ್ದೇಶಕಿಯನ್ನು ಮನೆಗೆ ಕರೆಸಿ ಬೈದಿದ್ಯಾಕೆ ಅಲ್ಲು ಅರ್ಜುನ್? ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ನಟಿ ಮಾತ್ರ ಅಲ್ಲ, ಬ್ಯುಸಿನೆಸ್ ಕ್ವೀನ್ Sunny Leone… 100ಕೋಟಿ ಸಾಮ್ರಾಜ್ಯದ ಒಡತಿ ಈಕೆ