
ಒಬ್ಬ ಜೈ, ಇನ್ನೊಬ್ಬ ಶ್ರೀ, ಮತ್ತೊಬ್ಬ ರಾಮ್ ಮೂವರೂ ಕೆಲಸದ ಒತ್ತಡದಿಂದ ಹೊರಗೆ ಬಂದು ಮೂರು ದಿನ ಎಲ್ಲಾದರೂ ಸುತ್ತಾಡಿಕೊಂಡು ಬರಬೇಕು ಎಂದು ಕಾರು ಹತ್ತುವ ವೇಳೆಯಲ್ಲಿ ಹಿತ ಮತ್ತು ಜಾನಕಿ ಒಟ್ಟಾಗುತ್ತಾರೆ. ಈ ಐವರೂ ಸೇರಿ ಬಾದಾಮಿ, ಮಂಗಳೂರು, ಹುಬ್ಬಳ್ಳಿ ಸುತ್ತಾಡುವಾಗ ಹುಟ್ಟುವ ಮತ್ತು ಹುಟ್ಟಿದ ಪ್ರೀತಿಗಳ ಥರಾವರಿ ಕಥನವೇ ಒಂಥರಾ ಬಣ್ಣಗಳು.
ಪ್ರೇಕ್ಷಕನ ಕಣ್ಣಿಗೆ ಇಲ್ಲಿ ನಾನಾ ಬಣ್ಣಗಳ ದರ್ಶನವಾಗುತ್ತೆ. ಯಾರು ಯಾರ ಗೆಳತಿ, ಯಾರೊಂದಿಗೆ ಲವ್ವಾಗಿದೆ ಎಂದು ತೀರ್ಮಾನಕ್ಕೆ ಬರುವ ಹೊತ್ತಿಗೆ ಅಲ್ಲಿ ಇನ್ನೇನೋ ಆಗಿರುತ್ತೆ. ಮೂವರು ನಾಯಕರಿದ್ದಾಗ ಅವರಿಗೆ ಇಬ್ಬರೇ ನಾಯಕಿಯರು ಬಂದರೆ ಒಬ್ಬ ನಾಯಕ ಪ್ರೀತಿಯಿಂದ ವಂಚಿತನಾಗ ಬೇಕಾಗುತ್ತದೆ ಅಲ್ಲವೇ? ಅದೇ ಇಲ್ಲಾಗಿರುವುದು. ಆದರೆ ಜೈ ಶ್ರೀ ರಾಮ್ ಮೂವರಲ್ಲಿ ಹಿತ ಯಾರಿಗೆ ಮನಸ್ಸು ಕೊಟ್ಟಳು, ಜಾನಕಿಗೆ ಯಾರ ಮೇಲೆ ಒಲವು ಹುಟ್ಟಿತು ಎಂದು ತಿಳಿಯುವ ಸಹಜ ಕುತೂಹಲಕ್ಕೆ ಕೊನೆಯವರೆಗೂ ಸ್ಪಷ್ಟ ಉತ್ತರ ಸಿಕ್ಕದು. ಅಷ್ಟರ ಮಟ್ಟಿಗೆ ಸಸ್ಪೆನ್ಸ್ ಕಾಪಾಡಿಕೊಂಡಿದ್ದಾರೆ ನಿರ್ದೇಶಕ ಸುನೀಲ್ ಭೀಮರಾವ್.
ಚಿತ್ರದ ಕತೆ ಏನು ಎಂದು ಹುಡುಕುತ್ತಾ ಹೊರಟರೆ ಉತ್ತರ ದೊರೆಯುವುದು ತುಸು ಕಷ್ಟವೇ. ಆದರೆ ಚಿತ್ರಕತೆ, ಸಂಗೀತ, ಸಿನಿಮಾಟೋಗ್ರಫಿ, ಸುಂದರ ಲೊಕೇಶನ್‌ಗಳು, ಒಳ್ಳೆಯ ಸಂಭಾಷಣೆ ಚಿತ್ರವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಿರ್ವಹಿಸಿವೆ. ಆದರೆ ಪ್ರೀತಿ ಹುಟ್ಟುವ ವೇಳೆಗೆ ಮತ್ತಷ್ಟು ಭಾವ ತೀವ್ರತೆ ನೀಡಿ, ಸೂಕ್ಷ್ಮಗಳಿಗೆ ಒತ್ತು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಇಲ್ಲಿ ಮಾತಿನ ವೇಗದ ಭರಕ್ಕೆ ಪ್ರೀತಿಯ ಮೌನ ಹಿಂದೆ ಸರಿದಿದೆ.
ಟ್ರಿಪ್ ಹೆಸರನ್ನು ಹೊತ್ತುಕೊಂಡು ಸಾಗುವ ಪಯಣ ಅಸಲಿಗೆ ಪ್ರೀತಿಯ ಕಡೆಗೆ ಸಾಗುತ್ತಿದೆ ಎಂದು ತಿಳಿಯುವುದು ಕೊನೆಯಲ್ಲಿಯೇ. ಅಷ್ಟರಲ್ಲಿ ಒಂದು ಪ್ರೀತಿ ಹುಟ್ಟುತ್ತೆ. ಮತ್ತೊಂದು ಪ್ರೀತಿ ಹುಟ್ಟುವ ವೇಳೆಗೇ ಕೊನೆಯುಸಿರೆಳೆಯುತ್ತೆ. ಹೀಗೆ ಮೂರು ಭಿನ್ನ ನೆಲೆಯ ಪ್ರೀತಿಗಳು ಒಟ್ಟಾಗಿ ಸೇರಿದರೆ ಆಗುವುದು ಒಂಥರಾ ಬಣ್ಣಗಳು. ಎಲ್ಲರೂ ನಟನೆಯಲ್ಲಿ ಚೆಂದಾಚೆಂದ. ಭರತ್ ಸಂಗೀತ, ಮನೋಹರ್ ಜೋಶಿ ಕ್ಯಾಮರಾದಲ್ಲಿ ಬಾದಾಮಿ, ಹುಬ್ಬಳ್ಳಿ, ಲಿಂಗನಮಕ್ಕಿ ಹಿನ್ನೀರು ಚೆಂದ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.