
ಬೆಂಗಳೂರು (ಜ.12): ನಾನು ಚಿತ್ರರಂಗಕ್ಕೆ ಬಂದು ಇಂದಿಗೆ 25 ವರ್ಷಗಳಾಯಿತು... ಹೀಗೆ ತಮ್ಮ ಪಯಣವನ್ನು ಹೇಳಿಕೊಂಡಿದ್ದು ನಟ ಸಾಯಿ ಕುಮಾರ್.
ಅದು ‘ಜವ’ ಚಿತ್ರದ ಪತ್ರಿಕಾಗೋಷ್ಟಿ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ ವಾರ ಅಥವಾ ಮುಂದಿನ ವಾರ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಈ ಎರಡೂ ವಾರಗಳಲ್ಲಿ ತುಂಬಾ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತಿರುವ ಕಾರಣ ‘ಜವ’ ತನ್ನ ಬಿಡುಗಡೆಯ ಭಾಗ್ಯವನ್ನು ಮುಂದಕ್ಕೆ ಹಾಕಿಕೊಂಡಿದೆ. ಆ ವಿಷಯವನ್ನು ಹಂಚಿಕೊಳ್ಳುವ ಜತೆಗೆ ಮತ್ತೆ ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎನ್ನುವುದನ್ನು ಹೇಳಿಕೊಳ್ಳುವುದಕ್ಕೆ ಸಿನಿಮಾ ತಂಡ ಮಾಧ್ಯಮಗಳ ಮುಂದೆ ಬಂತು. ಹೌದು, ‘ಜವ’ ಮುಂದಿನ ತಿಂಗಳು 2 ಕ್ಕೆ ತೆರೆಗೆ ಬರುತ್ತಿದೆ. ಇದೊಂದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಿನಿಮಾ. ಈ ಅಂಶಗಳನ್ನು ಪುಷ್ಠೀಕರಣ ಮಾಡುವಂತೆ ಚಿತ್ರದ ಟ್ರೈಲರ್ ಕೂಡ ಇದೆ. ಟ್ರೈಲರ್ ಪ್ರದರ್ಶನದ ನಂತರ ಸಿನಿಮಾ ಕುರಿತು ಚಿತ್ರತಂಡದ ಮಾತು.
‘ನಾನು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಮತ್ತೆ ಮತ್ತೆ ಪೊಲೀಸ್ ಪಾತ್ರ ಮಾಡಿರುವೆ. ಆದರೆ, ಇತ್ತೀಚಿನ ದಿನಗಳಲ್ಲಿ ಸೈಕಾಲಜಿಕಲ್ ಹಾಗೂ ಥ್ರಿಲ್ಲರ್ ಸಿನಿಮಾಗಳ ಟ್ರೆಂಡ್ ಹೆಚ್ಚಾಗಿದೆ. ಹೀಗಾಗಿ ನನಗೆ ‘ಜವ’ ಚಿತ್ರದ ಮೇಲೆ ವಿಶೇಷವಾದ ಆಸಕ್ತಿ ಇದೆ. ನಾನು ಇಲ್ಲಿ ಪೊಲೀಸ್ ಪಾತ್ರ ಮಾಡಿದ್ದರೂ ಪಾತ್ರ ಭಿನ್ನವಾಗಿದೆ’ ಎಂದರು ಸಾಯಿಕುಮಾರ್. ಚಿತ್ರವನ್ನು ನಿರ್ದೇಶನ ಮಾಡಿರುವುದು ಅಭಯ್‌ಚಂದ್ರ. ‘ನನಗಿದು ಮೊದಲ ನಿರ್ದೇಶನದ ಅನುಭವ. ನಾನೇ ಕತೆ ಬರೆದು ನಿರ್ದೇಶಿಸಿರುವೆ.
ಚಿತ್ರದ ಕತೆ ಏನು?
ಪಾತ್ರಧಾರಿಗಳು ಹೇಗಿರುತ್ತವೆ ಎಂಬುದನ್ನು ನೀವು ಸಿನಿಮಾದಲ್ಲೇ ನೋಡಬೇಕು. ಆದರೆ, ತಾಂತ್ರಿಕವಾಗಿ ಸಿನಿಮಾ ತುಂಬಾ ಅದ್ಭುತವಾಗಿದೆ. ಹಾಲಿವುಡ್ ಚಿತ್ರಗಳಿಗೆ ನೀಡಿದಂತೆ ಹಿನ್ನೆಲೆ ಸಂಗೀತ ಸಂಯೋಜನೆ ಮಾಡಲಾಗಿದೆ’ ಎಂಬುದು ಅಭಯ್‌ಚಂದ್ರ ಮಾತು. ಆ ಮೂಲಕ ಚಿತ್ರದ ಕತೆ ಕುರಿತು ಕೇಳಿದರೆ ಅದರ ತಾಂತ್ರಿಕತೆ ಬಗ್ಗೆ ಮಾತನಾಡಿ ಸುಮ್ಮನಾದರು ನಿರ್ದೇಶಕರು. ಅಭಯ್ ಚಂದ್ರ ಸೋದರ ವಿನಯ್ ಚಂದ್ರ ಅವರು ಈ ಚಿತ್ರಕ್ಕೆ ಸಂಗೀತ ಮಾಡಿದ್ದಾರೆ. ಯಮಧರ್ಮರಾಯನಿಗೆ ಜವ ಎಂದು ಕರೆಯುತ್ತಾರೆ. ಚಿತ್ರದ ಹೆಸರಿನ ಈ ಅರ್ಥಕ್ಕೆ ತಕ್ಕಂತೆ ಸಂಗೀತ ಸಂಯೋಜನೆ ಮಾಡಲಾಗಿದೆಯಂತೆ. ಭವಾನಿ ಪ್ರಕಾಶ್ ಅವರು ಚಿತ್ರದಲ್ಲೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ‘ಜವ’ ಸಿನಿಮಾ ಎಲ್ಲ ಸಿನಿಮಾಗಳಂತೆ ಇರಲ್ಲ ಎಂದರು. ವಚನ್ ಶೆಟ್ಟಿ ಹಾಗೂ ವೀರೇಂದ್ರ ವಿದ್ಯಾರ್ಥ್ ಚಿತ್ರದ ನಿರ್ಮಾಪಕರು. ಒಳ್ಳೆಯ ಸಿನಿಮಾ ಮಾಡಿದ್ದೇವೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲ ಇರಲಿ ಎಂದರು. ಅಕ್ಷತಾ, ಮದನ್ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.