ಚಮಕ್ ಚಮತ್ಕಾರ; ಮಿಕ್ಕಿದ್ದು ಲೆಕ್ಕಾಚಾರ

By Suvarna Web DeskFirst Published Jan 12, 2018, 11:48 AM IST
Highlights

ಐ ಆ್ಯಮ್ ಸೇಫ್..! - ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಹೀಗೆಂದು  ನಕ್ಕರು. ಎಷ್ಟಾಯ್ತು ಕಲೆಕ್ಷನ್ ಎನ್ನುವ ಪ್ರಶ್ನೆಗೆ ಅವರು ಕೊಟ್ಟ ಚಮಕ್ ಅದಾಗಿತ್ತು. ಹೋಗ್ಲಿ ಅಂದಾಜು ಗಳಿಕೆಯಾದ್ರೂ ಎಷ್ಟಾಗಿರಬಹುದು? ಅವರಿಗೆ ಎದುರಾಗಿದ್ದು ಮತ್ತೊಂದು ಪ್ರಶ್ನೆ. ಹಾಗಂತ ಅವರು ಹೇಳಿಬಿಡುತ್ತಾರಾ? ಆಗಲೂ ಅವರು ಕೊಟ್ಟಿದ್ದು ಚಮಕ್.‘ತೃಪ್ತಿ ಜತೆಗೆ ಸಂತೃಪ್ತಿಯೂ ಆಗಿದೆ.

ಬೆಂಗಳೂರು (ಜ.12): ಐ ಆ್ಯಮ್ ಸೇಫ್..! - ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಹೀಗೆಂದು  ನಕ್ಕರು. ಎಷ್ಟಾಯ್ತು ಕಲೆಕ್ಷನ್ ಎನ್ನುವ ಪ್ರಶ್ನೆಗೆ ಅವರು ಕೊಟ್ಟ ಚಮಕ್ ಅದಾಗಿತ್ತು. ಹೋಗ್ಲಿ ಅಂದಾಜು ಗಳಿಕೆಯಾದ್ರೂ ಎಷ್ಟಾಗಿರಬಹುದು? ಅವರಿಗೆ ಎದುರಾಗಿದ್ದು ಮತ್ತೊಂದು ಪ್ರಶ್ನೆ. ಹಾಗಂತ ಅವರು ಹೇಳಿಬಿಡುತ್ತಾರಾ? ಆಗಲೂ ಅವರು ಕೊಟ್ಟಿದ್ದು ಚಮಕ್.‘ತೃಪ್ತಿ ಜತೆಗೆ ಸಂತೃಪ್ತಿಯೂ ಆಗಿದೆ.

ಮುಂದೆ ಸಾಕಷ್ಟು ಬಾರಿ ಭೇಟಿ ಮಾಡುವುದು ಇದ್ದೇ ಇದೆ. ಆಗ ಸಿಎ ಜತೆಗೆ ಬಂದು ಪೂರ್ತಿ ಲೆಕ್ಕ ಬಹಿರಂಗ ಪಡಿಸುತ್ತೇನೆ’  ಅಂದ್ರು. ಅಂದ ಹಾಗೆ, ಈ ಚಂದ್ರಶೇಖರ್ ಬೇರಾರು  ಅಲ್ಲ , ‘ಚಮಕ್ ’ಚಿತ್ರದ ನಿರ್ಮಾಪಕರು.

ಕಳೆದ ವಾರ  ರಿಲೀಸ್ ಆದ ‘ಚಮಕ್ ’ಚಿತ್ರಕ್ಕೆ ರಾಜ್ಯಾದ್ಯಂತ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ನಟ ಗಣೇಶ್ ಅಭಿಮಾನಿಗಳು  ಥ್ರಿಲ್ ಆಗಿದ್ದಾರೆ. ಗಣೇಶ್ ಅವರ ಪ್ರಸೂತಿ ತಜ್ಞನ ಹೊಸ ಅವತಾರ ಜನರನ್ನು ರಂಜಿಸಿದೆ. ನಿರ್ಮಾಪಕರ ಮುಖದಲ್ಲೂ ನಗು ಅರಳಿದೆ. ಸಿಂಪಲ್ ಸುನಿ ಸೈಲೆಂಟ್ ಆಗಿ  ಸಕ್ಸಸ್ ನಿರ್ದೇಶಕ ಅನ್ನೋ ಸ್ಥಾನವನ್ನೂ ಸೇಫ್  ಮಾಡಿಕೊಂಡಿದ್ದಾರೆ. ಈ ಖುಷಿ ಹಂಚಿಕೊಳ್ಳುವುದಕ್ಕಾಗಿಯೇ ಚಿತ್ರ ತಂಡ ಕರೆದಿದ್ದ ಸಕ್ಸಸ್ ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕ ಗಣೇಶ್, ನಾಯಕಿ ರಶ್ಮಿಕಾ ಮಂದಣ್ಣ, ನಿರ್ದೇಶಕ ಸಿಂಪಲ್ ಸುನಿ ಕೂಡ ಹಾಜರಿದ್ದರು. ಆದರೂ ಈಗ  ಮೊದಲು ಮಾತನಾಡುವ ಸರದಿ ನಿರ್ಮಾಪಕರದ್ದು. ಯಾಕಂದ್ರೆ ಕಲೆಕ್ಷನ್ ಅವರದ್ದೇ ಅಲ್ವಾ? ನಿರ್ದೇಶಕರು ಹೇಳುವ  ಮುನ್ನವೇ ನಿರ್ಮಾಪಕ ಚಂದ್ರಶೇಖರ್ ಮೈಕ್ ಹಿಡಿದೇ ಕೂತಿದ್ದರು.

ಮೈಕ್ ಸಿಕ್ಕರೆ ಅವರು ಸ್ವಲ್ಪ ಮಾತನಾಡುವುದು ಹೆಚ್ಚು. ಅವತ್ತು ಕೂಡ ಹಾಗೆಯೇ ಆಯಿತು. ನೇರವಾಗಿ ಚಿತ್ರದ ಸಕ್ಸಸ್ ಸಮಾಚಾರಕ್ಕೆ ಬರುವ ಮುನ್ನ ತಮ್ಮ ಪರಿಚಯ, ವೃತ್ತಿ, ಅವರ ಸ್ಟೈಲ್ ಎಲ್ಲವನ್ನು ಹೇಳಿಕೊಂಡರು. ಆಮೇಲೆ ಹೇಳಿದ್ದು ಚಿತ್ರದ ಕಲೆಕ್ಷನ್ ವಿಚಾರ. ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತಾಯಿತು. ಹೋಗ್ಲಿ ಆಗಾದ್ರೂ ಅವರು ಕಲೆಕ್ಷನ್ ಎಷ್ಟು, ಏನು ಅಂತಾ ಹೇಳಿದ್ರಾ, ಖಂಡಿತಾ ಇಲ್ಲ. ‘ನಾನು  ಏನೇ ಮಾಡಿದ್ರು ಪಕ್ಕಾ ವೃತ್ತಿಪರವಾಗಿ ಮಾಡಿ ತೋರಿಸುವ ಸ್ವಭಾವ. ಅದು ನನ್ನ ಮೊದಲ ಚಿತ್ರದಲ್ಲೂ ಸಾಬೀತಾಗಿದೆ. ಪ್ರಜಾಪ್ರಭುತ್ವದ ಹಾಗೆ ಸಿನಿಮಾ. ನಿರ್ಮಾಪಕ, ನಿರ್ದೇಶಕರ ಜತೆಗೆ ಇಲ್ಲಿ ಎಲ್ಲರೂ ಮುಖ್ಯವಾಗುತ್ತಾರೆ.ಅವರೆಲ್ಲರ ಶ್ರಮ ಸಾರ್ಥಕವಾಗಿದೆ. ಸಿನಿಮಾ ಗೆದ್ದಿದೆ. ಎಲ್ಲಾ ಕಡೆಗಳಲ್ಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಸದ್ಯಕ್ಕೆ ನಾನು ಸೇಫ್. ನಿರ್ಮಾಣಕ್ಕೆ ಹಾಕಿದ ಬಂಡವಾಳ ಕೈ ಸೇರುವ ಎಲ್ಲಾ ನಂಬಿಕೆಯಿದೆ. ಇನ್ನೇನು ಅದು ನನ್ನನ್ನು ಬಂದು ಸೇರುವ  ದಾರಿಯಲ್ಲಿದೆ’ಎಂದರು.

ಈಗ ಬಂದಿದ್ದಾರೂ ಎಷ್ಟು?

ಅವರ ಮಾತುಗಳ ನಡುವೆ ಕೇಳಿಬಂದಿದ್ದು ಈ ಪ್ರಶ್ನೆ. ಅಷ್ಟು  ಲೆಕ್ಕಾಚಾರ ಹೇಳೋದಕ್ಕೆ ನನಗೆ ಬರೋದಿಲ್ಲ. ನಾವು ನಿಮ್ಮನ್ನು ಸಾಕಷ್ಟು ಬಾರಿ ಭೇಟಿ ಮಾಡುವುದು ಬಾಕಿಯಿದೆ. 50 ನೇ ದಿನ, 75 ದಿನಗಳ ಜತೆಗೆ ಶತದಿನಕ್ಕೂ ಭೇಟಿ ಮಾಡುತ್ತೇನೆ. ಆಗ ಜತೆಗೆ ಸಿಎ ಕರೆದುಕೊಂಡು ಬಂದು ನಿಜವಾದ ಕಲೆಕ್ಷನ್ ಲೆಕ್ಕ ಕೊಡುತ್ತೇನೆ. ಸತ್ಯ ಹೇಳುವುದಕ್ಕೆ ನಾನೇನು ಭಯಪಡಲ್ಲ. ಅವತ್ತು ಸತ್ಯ ಏನು ಅನ್ನೋದು ನಿಮಗೆಲ್ಲ ಗೊತ್ತಾಗುತ್ತೆ ’ ಅಂದ್ರು.  ಕಲೆಕ್ಷನ್ ಕತೆ ಏನೇ ಇರಲಿ, ಸಿನಿಮಾ ಗೆದ್ದಿದೆ. ನಟ ಗಣೇಶ್ ಮುಖದಲ್ಲಿ ನಗು ಅರಳಿದೆ. ಸಿಂಪಲ್ ಸುನಿ ಕಾಂಬಿನೇಷನ್ ವರ್ಕೌಟ್ ಆಗಿದೆ. ಜತೆಗೆ ಹೊಸ ಬಗೆಯ ಕತೆಯಲ್ಲಿ ಬಂದಿದ್ದು, ಜತೆಗೆ ಪ್ರಸೂತಿ  ತಜ್ಞನಾಗಿ ಕಾಣಿಸಿಕೊಂಡಿದ್ದು ಪ್ರೇಕ್ಷಕರನ್ನು ರಂಜಿಸಿದೆ. ಅದು ಅವರಿಗೆ ಹೊಸ ಉತ್ಸಾಹ ನೀಡಿದೆ. ‘ಗೆಲ್ಲಬೇಕು ಅಂತಲೇ ನಾವು ಸಿನಿಮಾ ಮಾಡುತ್ತೇವೆ. ನಮಗೆ ಗೊತ್ತಾಗದ ಕಾರಣಗಳಿಗೆ ಪ್ರೇಕ್ಷಕರು ನಮ್ಮ ಹಣೆಬರಹ ಬರೆಯುತ್ತಾರೆ. ಆದರೆ ಈ ಸಿನಿಮಾ ಅವರಿಗೆ ಹಿಡಿಸಿದೆ. ಅದೃಷ್ಟ ಅನ್ನೋದು ಕೈ ಹಿಡಿದಿದೆ. ರಾಜ್ಯದ ಮೂಲೆ ಮೂಲೆಗಳಿಂದ  ಅಭಿಮಾನಿಗಳು ಫೋನ್ ಮಾಡಿ ವಿಶ್ ಮಾಡುತ್ತಿದ್ದಾರೆ. ಖುಷಿ ಆಗುತ್ತಿದೆ. ನಮ್ಮನ್ನೆ  ನಂಬಿ ಹಣ ಹಾಕಿದ ನಿರ್ಮಾಪಕರು ಖುಷಿ ಆಗಿದ್ದಾರೆಂದರೆ ಅದಕ್ಕಿಂತ ಖುಷಿ ನಮಗೆ ಬೇರೊಂದಿಲ್ಲ’ ಎಂದರು

ನಟ ಗಣೇಶ್. ನಟಿ ರಶ್ಮಿಕಾ ಗೆದ್ದ ಖುಷಿಯಲ್ಲಿ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ರು. ನಿರ್ದೇಶಕ ಸಿಂಪಲ್ ಸುನಿ ತಮ್ಮ ಮೇಲೆ ವಿಶ್ವಾಸವಿಟ್ಟು ಚಿತ್ರದ ನಿರ್ಮಾಣಕ್ಕೆ ಹಣ  ಹಾಕಿದ ಚಂದ್ರಶೇಖರ್ ಅವರಿಗೆ ಒಳ್ಳೆದಾಗಿದೆ. ಅದಕ್ಕಿಂತ ಹೆಚ್ಚು ಮಾತನಾಡಬೇಕಿಲ್ಲ ಎಂದರು.  ಹೀಗೆ ಪ್ರತಿಯೊಬ್ಬರು ಚಮಕ್ ಗೆಲುವನ್ನು ತಮ್ಮದೇ ರೀತಿಯಲ್ಲಿ ಬಣ್ಣಿಸಿದರು. ವಿಶ್ಲೇಷಿಸಿದರು. ಖುಷಿ  ಹಂಚಿಕೊಂಡರು. ಈಗ ಚಿತ್ರ ಎರಡನೇ ವಾರಕ್ಕೆ ಕಾಲಿಡುತ್ತಿದೆ. ಚಿತ್ರ ಮಂದಿರಗಳ ಸಂಖ್ಯೆ ಸ್ವಲ್ಪ ಕಡಿಮೆ ಆಗುತ್ತಿದೆ. ಜತೆಗೆ ಕೆನಡಾ.  ಅಮೆರಿಕ ಸೇರಿದಂತೆ ವಿವಿಧೆಡೆಗಳಲ್ಲಿ ಚಮಕ್ ಬಿಡುಗಡೆ ಆಗಿದೆ. ಅಲ್ಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆಯಂತೆ. ಇಷ್ಟು ವಿವರಗಳ ಮೂಲಕ ಚಮಕ್ ಗೆಲುವಿನ ಮಾತುಗಳ  ಸುದ್ದಿಗೋಷ್ಠಿಗೆ ತೆರೆ ಬಿದ್ದಿತ್ತು.

 

click me!