
ತಮ್ಮ ಆತ್ಮಚರಿತ್ರೆ 'ಖುಲ್ಲಂ ಖುಲ್ಲಾ'ದಲ್ಲಿ, ನಟ ರಿಷಿ ಕಪೂರ್ ಒಂದು ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದರು. 1993ರ ಮುಂಬೈ ಸರಣಿ ಸ್ಫೋಟಕ್ಕೂ ಮುನ್ನ ದುಬೈನಲ್ಲಿ ತಾವು ದಾವೂದ್ ಇಬ್ರಾಹಿಂನನ್ನು ಎರಡು ಬಾರಿ ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದರು. ಈ ಭೇಟಿಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದರು.
ಬಾಲಿವುಡ್‌ನ ದಿವಂಗತ ನಟ ರಿಷಿ ಕಪೂರ್ ತಮ್ಮ ನೇರ ನುಡಿಗಳಿಗೆ ಹೆಸರುವಾಸಿಯಾಗಿದ್ದರು. ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅಷ್ಟೇ ಖುಲ್ಲಂ ಖುಲ್ಲಾ ಆಗಿ ಮಾತನಾಡುತ್ತಿದ್ದರು. ತಮ್ಮ ಆತ್ಮಚರಿತ್ರೆ 'ಖುಲ್ಲಂ ಖುಲ್ಲಾ'ದಲ್ಲಿ ಅವರು ಒಂದು ಸ್ಫೋಟಕ ಸತ್ಯವನ್ನು ಬಹಿರಂಗಪಡಿಸಿದ್ದರು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೂ ಮುನ್ನ, ಅಂದರೆ 1980ರ ದಶಕದ ಕೊನೆಯಲ್ಲಿ, ಅವರು ದುಬೈನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಎರಡು ಬಾರಿ ಭೇಟಿಯಾಗಿದ್ದರಂತೆ.
ದುಬೈನಲ್ಲಿ ಅನಿರೀಕ್ಷಿತ ಆಹ್ವಾನ
1988ರಲ್ಲಿ ರಿಷಿ ಕಪೂರ್ ಒಂದು ಸಂಗೀತ ಕಾರ್ಯಕ್ರಮಕ್ಕಾಗಿ ದುಬೈಗೆ ಹೋಗಿದ್ದರು. ಅಲ್ಲಿ ಏರ್‌ಪೋರ್ಟ್‌ನಲ್ಲಿ ಇಳಿದ ತಕ್ಷಣ, ಅಪರಿಚಿತ ವ್ಯಕ್ತಿಯೊಬ್ಬ ಅವರ ಬಳಿ ಬಂದು ಫೋನ್ ಒಂದನ್ನು ಕೈಗಿತ್ತ. ಫೋನಿನ ಆ ಕಡೆ ಇದ್ದಿದ್ದು ದಾವೂದ್ ಇಬ್ರಾಹಿಂ. ಆತ ರಿಷಿ ಕಪೂರ್ ಅವರನ್ನು ಟೀ ಕುಡಿಯಲು ಆಹ್ವಾನಿಸಿದ್ದ.
ಈ ಅನಿರೀಕ್ಷಿತ ಆಹ್ವಾನದಿಂದ ಕುತೂಹಲಗೊಂಡ ರಿಷಿ, ಅದಕ್ಕೆ ಒಪ್ಪಿಕೊಂಡರು. ಅವರ ಪ್ರಕಾರ, ಅವರನ್ನು ಒಂದು ಐಷಾರಾಮಿ ಕಾರಿನಲ್ಲಿ ಒಂದು ಖಾಸಗಿ ಸ್ಥಳಕ್ಕೆ ಕರೆದೊಯ್ಯಲಾಯಿತು. ದಾರಿ ಯಾವುದು ಎಂದು ಗೊತ್ತಾಗದಂತೆ ಸುತ್ತು ಬಳಸಿ ಕರೆದುಕೊಂಡು ಹೋಗಲಾಗಿತ್ತು. ಈ ಭೇಟಿ ಸುಮಾರು ಗಂಟೆಗಳ ಕಾಲ ನಡೆಯಿತಂತೆ. ಇಬ್ಬರೂ ಸಾಮಾನ್ಯ ವಿಷಯಗಳ ಬಗ್ಗೆ ಮಾತನಾಡಿಕೊಂಡಿದ್ದರು.
ದಾವೂದ್ ಒಬ್ಬ ಸಭ್ಯ ಅತಿಥೇಯನಂತೆ ವರ್ತಿಸಿದ. 'ನಿನಗೆ ಏನಾದರೂ ಸಹಾಯ ಬೇಕಿದ್ದರೆ ಕೇಳು' ಎಂದು ಹೇಳಿದ್ದನಂತೆ. ಆ ಸಮಯದಲ್ಲಿ ದಾವೂದ್‌ಗೆ ಭಯೋತ್ಪಾದನೆಯ ನಂಟು ಇರಲಿಲ್ಲ. ಹಾಗಾಗಿ ಈ ಭೇಟಿ ತಮಗೆ ಅಸಹಜ ಎನಿಸಲಿಲ್ಲ ಎಂದು ರಿಷಿ ಕಪೂರ್ ಬರೆದುಕೊಂಡಿದ್ದಾರೆ.
ಮರುವರ್ಷ ಆಕಸ್ಮಿಕವಾಗಿ ಮತ್ತೆ ಭೇಟಿ
ದಾವೂದ್ ಜೊತೆಗಿನ ಎರಡನೇ ಭೇಟಿ ಆಕಸ್ಮಿಕವಾಗಿ ನಡೆದಿತ್ತು. 1989ರಲ್ಲಿ ರಿಷಿ ಕಪೂರ್ ತಮ್ಮ ಪತ್ನಿ ನೀತು ಕಪೂರ್ ಜೊತೆ ದುಬೈನಲ್ಲಿ ಶಾಪಿಂಗ್ ಮಾಡುತ್ತಿದ್ದರು. ಆಗ ಒಂದು ಶೂ ಅಂಗಡಿಯಲ್ಲಿ ದಾವೂದ್ ಇಬ್ರಾಹಿಂ ಅಚಾನಕ್ಕಾಗಿ ಎದುರಾದ. ಆತ್ಮಚರಿತ್ರೆಯ ಪ್ರಕಾರ, ದಾವೂದ್ ತಕ್ಷಣವೇ ರಿಷಿ ಅವರನ್ನು ಗುರುತಿಸಿ, ಪ್ರೀತಿಯಿಂದ ಮಾತನಾಡಿಸಿದ. ಈ ಮಾತುಕತೆ ಕೆಲವೇ ನಿಮಿಷಗಳಲ್ಲಿ ಮುಗಿಯಿತು. 'ನಿನಗೆ ಬೇಕಾದ್ದನ್ನು ಖರೀದಿಸು, ನಾನು ಹಣ ಕೊಡುತ್ತೇನೆ' ಎಂದು ದಾವೂದ್ ಹೇಳಿದಾಗ, ರಿಷಿ ಕಪೂರ್ ಅದನ್ನು ನಯವಾಗಿ ನಿರಾಕರಿಸಿದ್ದರಂತೆ.
'ಖುಲ್ಲಂ ಖುಲ್ಲಾ' ಪುಸ್ತಕದಲ್ಲಿ ರಿಷಿ ಕಪೂರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 'ನಾನು ಮುಚ್ಚಿಡಲು ಏನೂ ಇರಲಿಲ್ಲ, ಅದಕ್ಕೇ ಈ ಭೇಟಿಗಳ ಬಗ್ಗೆ ಬರೆದೆ' ಎಂದು ಅವರು ಹೇಳಿದ್ದಾರೆ. ಈ ಭೇಟಿಗಳು 1993ರ ಮುಂಬೈ ಸ್ಫೋಟಕ್ಕೂ ಮುನ್ನ ನಡೆದಿದ್ದವು ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ಆ ಸ್ಫೋಟದ ನಂತರವೇ ದಾವೂದ್ ಇಬ್ರಾಹಿಂ ಭಾರತದ ಮೋಸ್ಟ್ ವಾಂಟೆಡ್ ಪಾತಕಿಯಾದ ಮತ್ತು ನಂತರ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ. ರಿಷಿ ಕಪೂರ್ ಅವರ ಈ ನೆನಪುಗಳು, ದಶಕಗಳ ನಂತರವೂ ಚರ್ಚೆಯಲ್ಲಿರುವ ಬಾಲಿವುಡ್ ಇತಿಹಾಸದ ಒಂದು ಅಪರೂಪದ ಅಧ್ಯಾಯಕ್ಕೆ ಕನ್ನಡಿ ಹಿಡಿಯುತ್ತವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.