ವಿಷ್ಣು ಸ್ಮಾರಕ ಏಕೆ ನಿರ್ಮಾಣವಾಗುತ್ತಿಲ್ಲ?

By Web DeskFirst Published Sep 23, 2018, 11:33 AM IST
Highlights

ಕನ್ನಡದ ಮೇರುನಟ ವಿಷ್ಣುವರ್ಧನ್ ದಿವಂಗತರಾಗಿ ಒಂಬತ್ತು ವರ್ಷಗಳ ನಂತರವೂ ವಿಷ್ಣು ಪುಣ್ಯಭೂಮಿ ವಿವಾದಾಸ್ಪದವಾಗಿಯೇ ಉಳಿದುಕೊಂಡಿದೆ. ವಿಷ್ಣುವರ್ಧನ್ ಕಾಲಾನಂತರ ಐದು ಮುಖ್ಯಮಂತ್ರಿಗಳು ಬಂದು ಹೋಗಿದ್ದರೂ ವಿಷ್ಣುವರ್ಧನ್ ಅವರನ್ನು ಮಣ್ಣುಮಾಡಿದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ಸಮಾಧಿ ಸ್ಥಳವನ್ನು ವಿಷ್ಣುವರ್ಧನ್ ಪುಣ್ಯಭೂಮಿ ಎಂದು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿದೆ

ಬೆಂಗಳೂರು (ಸೆ. 23): ಪ್ರಭಾವಿ ರಾಜಕಾರಣಿ ಅಂಬರೀಷ್ ಅವರ ಆಪ್ತಮಿತ್ರ, ಕನ್ನಡ ಚಿತ್ರರಸಿಕರ ಕಣ್ಮಣಿ, ಕನ್ನಡ ಚಿತ್ರರಂಗವನ್ನು 37 ವರ್ಷಗಳ ಕಾಲ ಆಳಿದ ಮೇರುನಟ, ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಖ್ಯಾತ ನಟ, ಅತ್ಯುತ್ತಮ ನಟ ಎಂದು ಏಳು ಬಾರಿ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪುರಸ್ಕೃತ, ಜೀವಮಾನದ ಸಾಧನೆಗಾಗಿ ಡಾ| ರಾಜ್‌ಕುಮಾರ್ ಪ್ರಶಸ್ತಿಗೆ ಭಾಜನರಾದ ವಿಷ್ಣುವರ್ಧನ್ ಅವರ ಸಮಾಧಿಯನ್ನು ಒಂಬತ್ತು ವರ್ಷಗಳ ನಂತರವೂ ಸರ್ಕಾರ ಸ್ಮಾರಕವನ್ನಾಗಿ ರೂಪಿಸುತ್ತಿಲ್ಲ ಎಂದು ವಿಷ್ಣುವರ್ಧನ್ ಅಭಿಮಾನಿಗಳು ನೊಂದಿದ್ದಾರೆ.

ವಿವಾದ ಆರಂಭವಾಗಿದ್ದು ಏಕೆ?

ವಿಷ್ಣುವರ್ಧನ್ 2009 ರ ಡಿಸೆಂಬರ್ 30 ರಂದು ನಿಧನ ಹೊಂದಿದಾಗ ಅವರ ಅಂತ್ಯ ಕ್ರಿಯೆಯನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಡೆಸುವುದಕ್ಕೆ ಯಡಿಯೂರಪ್ಪ ಸರ್ಕಾರವೇ ಅನುಮತಿ ನೀಡಿತ್ತು. ಅಲ್ಲಿಯೇ ವಿಷ್ಣುವರ್ಧನ್ ಸ್ಮಾರಕವನ್ನೂ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿತ್ತು. ಅದಕ್ಕೆ ಬೇಕಾದ ಸಿದ್ಧತೆಗಳೂ ನಡೆದಿದ್ದವು.

ಅಭಿಮಾನ್ ಸ್ಟುಡಿಯೋದ ಎರಡು ಎಕರೆ ಜಾಗವನ್ನು ನೀಡುವುದಾಗಿ ಭರವಸೆ ನೀಡಿತ್ತು. ಸರ್ಕಾರ ವಿಷ್ಣುವರ್ಧನ್ ಸ್ಮಾರಕಕ್ಕೆ 10 ಕೋಟಿ ರು. ಘೋಷಿಸಿತ್ತು. ನಂತರ ವಿಷ್ಣು ಸ್ಮಾರಕದ ಕೆಲಸ ವಿಳಂಬವಾಗುವುದಕ್ಕೆ ವಾಸ್ತುದೋಷ ಕಾರಣ ಎಂದು ಹೇಳಿ ಅದನ್ನು ಸ್ಥಳಾಂತರಿಸುವ ಯತ್ನವೂ 2013 ರಲ್ಲಿ ನಡೆದಿತ್ತು.

ಅಭಿಮಾನ್ ಸ್ಟುಡಿಯೋ ಮಾಲಿಕರು ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿದ್ದಾರೆ ಎಂಬ ಕಾರಣಕ್ಕೆ ಸರ್ಕಾರ ಮೈಲಸಂದ್ರದ ಬಳಿ ಎರಡು ಎಕರೆ ಜಮೀನು ನೀಡುವ ಆದೇಶ ಹೊರಡಿಸಿತು. ಆದರೆ ಆ ಜಮೀನು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಬಫರ್ ವಲಯದ ವ್ಯಾಪ್ತಿಗೆ ಬರುತ್ತದೆ ಎಂದು ಹೈಕೋರ್ಟ್ ಸರ್ಕಾರಿ ಆದೇಶವನ್ನು ರದ್ದುಗೊಳಿಸಿತ್ತು.

ಸ್ಮಾರಕ ದಿಢೀರನೆ ಮೈಸೂರಿಗೆ ಶಿಫ್ಟ್

2015 ರಲ್ಲಿ ಜಮೀನು ವಿವಾದ ಬಗೆಹರಿದು, ಅಭಿಮಾನ್ ಸ್ಟುಡಿಯೋ ಮಾಲಿಕರು ಜಿಲ್ಲಾಧಿಕಾರಿಗಳಿಗೆ ಲಿಖಿತ ಸಮ್ಮತಿ ಪತ್ರ ನೀಡಿದ್ದೂ ವರದಿಯಾಗಿತ್ತು. ಅದಾಗಿ 2 ವರ್ಷಗಳ ಕಾಲ ಯಾವುದೇ ಬೆಳವಣಿಗೆ ನಡೆಯದೇ ಹೋದಾಗ ಭಾರತಿ ವಿಷ್ಣುವರ್ಧನ್ ಅವರ ಒತ್ತಾಯಕ್ಕೆ ಮಣಿದು ಸರ್ಕಾರವು ವಿಷ್ಣು ಸ್ಮಾರಕಕ್ಕೆ ಮೈಸೂರಿನ ಎಚ್.ಡಿ. ಕೋಟೆ ರಸ್ತೆಯಲ್ಲಿರುವ ಹಾಲಾಳುವಿನ ಉದ್ಬೂರು ಕ್ರಾಸ್ ಬಳಿ ಜಮೀನು ನೀಡಿತ್ತು.

2016 ರ ಡಿಸೆಂಬರ್ ೬ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷ್ಣುವರ್ಧನ್ ಸ್ಮಾರಕಕ್ಕೆ ಶಂಕುಸ್ಥಾಪನೆ ಮಾಡುವುದೆಂದು ನಿರ್ಧಾರ ಆಗಿತ್ತು. ಆದರೆ ಮುನ್ನಾದಿನ ಜಯಲಲಿತಾ ನಿಧನರಾದರು. ಸರ್ಕಾರಿ ಕಾರ್ಯಕ್ರಮ ರದ್ದಾಯಿತು. ಆದರೆ ವಿಷ್ಣು ವರ್ಧನ್ ಕುಟುಂಬಸ್ಥರು ಆ ಜಾಗದಲ್ಲಿ ಭೂಮಿಪೂಜೆ ನಡೆಸಿದ್ದರು. ಅದಾಗಿ ಕೆಲವೇ ದಿನಕ್ಕೆ ಆ ಜಮೀನಿಗೆ ಸಂಬಂಧಿಸಿದಂತೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. 

ಸುದೀಪ್ ಮಧ್ಯಸ್ಥಿಕೆಯೂ ವಿಫಲ

2017 ರಲ್ಲಿ ವಿಷ್ಣುವರ್ಧನ್ ಅಭಿಮಾನಿಗಳ ಒತ್ತಾಯದ ಮೇರೆಗೆ ನಟ ಕಿಚ್ಚ ಸುದೀಪ್ ಅವರು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷ್ಣು ಸಮಾಧಿ ಸ್ಥಳವನ್ನು ಪುಣ್ಯಭೂಮಿ ಮಾಡುವಂತೆ ಕೋರಿದ್ದರು. ಸಿದ್ದರಾಮಯ್ಯ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವರದಿಯಾಗಿತ್ತು. ಇದಲ್ಲದೇ, ವಿಷ್ಣು ಸ್ಮಾರಕ ನಿರ್ಮಾಣದ ಜಾಗವನ್ನು ಸರ್ಕಾರ ಉಚಿತವಾಗಿ ಕೊಡಬೇಕಾಗಿಲ್ಲ, ಕನ್ನಡ ಚಿತ್ರರಂಗವೇ ಆ ಭೂಮಿಯನ್ನು ಖರೀದಿ ಮಾಡಲಿದೆ.

ಸಮಾಧಿ ಸ್ಥಳಾಂತರ ಮಾಡದೇ ಅದನ್ನು ಪುಣ್ಯಭೂಮಿಯನ್ನಾಗಿ ಘೋಷಿಸಿ ಎಂದು ಸುದೀಪ್ ಮನವಿ ಮಾಡಿದ್ದರು. ನಟ ಯಶ್ ಕೂಡ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ನೆರವಾಗುವುದಾಗಿ ತಿಳಿಸಿದ್ದರು. ಇದಾಗಿ ಎರಡು ವರ್ಷ ಕಳೆದರೂ ವಿಷ್ಣು ಪುಣ್ಯಭೂಮಿಯ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ವಿಷ್ಣು ಹುಟ್ಟುಹಬ್ಬ ಬಂದಾಗ ಈ ಕುರಿತು ಚರ್ಚೆಗಳು ನಡೆದು, ತಣ್ಣಗಾಗುತ್ತಿವೆ.

ಸಿಎಂ ಕುಮಾರಸ್ವಾಮಿ ಮನಸ್ಸು ಮಾಡುತ್ತಾರಾ?

ಸಾಹಸಸಿಂಹ ವಿಷ್ಣುವರ್ಧನ್ ಅವರ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ ಸಿಎಂ ಎಚ್.ಡಿ. ಕುಮಾರಸ್ವಾಮಿ ಈಗ ಮುಖ್ಯಮಂತ್ರಿ. ವಿಷ್ಣುವರ್ಧನ್ ಮತ್ತು ಕುಮಾರಸ್ವಾಮಿ ಒಳ್ಳೆಯ ಗೆಳೆಯರೂ ಆಗಿದ್ದರು.  ಅವರ ಅಧಿಕಾರಾವಧಿಯಲ್ಲಾದರೂ ಈ ಸಮಸ್ಯೆ ಬಗೆಹರಿದು, ವಿಷ್ಣು ಪುಣ್ಯತಿಥಿಯ ಹತ್ತನೇ ವರ್ಷಾರಂಭದ ಹೊತ್ತಿಗೆ ವಿಷ್ಣು ಪುಣ್ಯಭೂಮಿ ಸಿದ್ಧವಾಗುತ್ತದೆ ಎಂಬ ನಂಬಿಕೆಯಲ್ಲಿ ವಿಷ್ಣು ಅಭಿಮಾನಿಗಳಿದ್ದಾರೆ.

ಈ ಸಮಸ್ಯೆ ಈಗಲೇ ಇತ್ಯರ್ಥವಾಗದು!

ಸರ್ಕಾರಿ ಮೂಲಗಳ ಪ್ರಕಾರ, ವಿಷ್ಣು ಪುಣ್ಯಭೂಮಿ ವಿವಾದ ಮತ್ತು ವಿಷ್ಣು ಸ್ಮಾರಕ ವಿವಾದ ಸದ್ಯದಲ್ಲೇ ಮುಗಿಯುವುದು ಕಷ್ಟ. ಅಭಿಮಾನ್ ಸ್ಟುಡಿಯೋದಲ್ಲಿರುವ ಜಾಗವನ್ನು ಪುಣ್ಯಭೂಮಿಗೆ ಕೊಡುವ ವಿಚಾರದಲ್ಲಿ ನಟ ಬಾಲಕೃಷ್ಣ ಸಂಬಂಧಿಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಮೈಸೂರಿನಲ್ಲಿರುವ ಸ್ಮಾರಕದ ಜಾಗದ ವಿಚಾರವಾಗಿ ರೈತರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಈ ಎರಡೂ ಜಾಗಗಳೂ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿವೆ. ಸರ್ಕಾರ ಮಧ್ಯಸ್ಥಿಕೆ ವಹಿಸಿ, ನ್ಯಾಯಾಲಯದ ಮೆಟ್ಟಿಲು ಏರಿರುವ ವ್ಯಕ್ತಿಗಳ ಮನ ಒಲಿಸಿದರೆ ಮಾತ್ರ ಈ ವಿವಾದ ಬಗೆಹರಿದು ವಿಷ್ಣು ಪುಣ್ಯಭೂಮಿ ಮತ್ತು ಸ್ಮಾರಕದ ಕನಸು ಕೈಗೂಡುತ್ತದೆ.

ಏನು ಮಾಡಬಹುದು?

ವಿಷ್ಣು ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ವಿಷ್ಣುವರ್ಧನ್ ಸಮಾಧಿ ಸ್ಥಳದಲ್ಲಿ ವಿಷ್ಣುವರ್ಧನ್ ಪುಣ್ಯಭೂಮಿ ಇರಬೇಕು ಎಂದು ಒತ್ತಾಯಿಸುತ್ತಿದ್ದಾರೆ. ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ನಡೆದ ಜಾಗದಲ್ಲೇ 100 ಗಿ 100 ಜಾಗವನ್ನು ಪುಣ್ಯಭೂಮಿಗೆ ಬಿಟ್ಟುಕೊಟ್ಟರೆ ಸಾಕು.

ಸಮಾಧಿಯನ್ನು ಸ್ಥಳಾಂತರ ಮಾಡಬಾರದು ಎನ್ನುವುದು ವಿಷ್ಣುವರ್ಧನ್ ಅಭಿಮಾನಿಗಳು ಮತ್ತು ಚಿತ್ರರಸಿಕರ ಅಭಿಪ್ರಾಯ. ಇದೇ ಅಭಿಪ್ರಾಯವನ್ನು ಚಿತ್ರರಂಗವೂ ಹೊಂದಿದೆ. ಅದಕ್ಕೆ ಚಿತ್ರರಂಗ ನೀಡುತ್ತಿರುವ ಕಾರಣಗಳು:

1. ವಿಷ್ಣುವರ್ಧನ್ ಅವರನ್ನು ದಹನ ಮಾಡಿದ ಜಾಗದಲ್ಲಿ ಸಮಾಧಿ ನಿರ್ಮಾಣ ಆಗಿದೆ.

2. ಈಗ ಆ ಜಾಗದಲ್ಲಿರುವ ಸಮಾಧಿಯನ್ನು ಒಡೆಯುವುದಕ್ಕೆ ಸಾಧ್ಯವಿಲ್ಲ. ಭಾವನಾತ್ಮಕವಾದ ವಿರೋಧ ವ್ಯಕ್ತವಾಗುತ್ತದೆ.
3. ಆ ಜಾಗವನ್ನು ಮಾಲಿಕರು ಮಾರಾಟ ಮಾಡಲು ಯತ್ನಿಸಿದರೂ, ಕೊಳ್ಳುವವರು ಮುಂದೆ ಬರುವುದಿಲ್ಲ.
4. ಆ ಜಾಗದಲ್ಲಿ ಮನೆ ಕಟ್ಟಿದರೆ ಯಾರೂ ಕೊಳ್ಳುವುದಕ್ಕೆ ಬರುವುದಿಲ್ಲ. ಈಗಾಗಲೇ ಅದು ವಿಷ್ಣು ಸಮಾಧಿ ಸ್ಥಳ ಎಂದು ಪ್ರಸಿದ್ಧವಾಗಿದೆ.
5. ಹೀಗಾಗಿ ಆ ಜಾಗದಲ್ಲಿ ವಿಷ್ಣುವರ್ಧನ್ ಸಮಾಧಿ ಬಿಟ್ಟು ಬೇರೇನೂ ಮಾಡುವಂತಿಲ್ಲ. ಹೀಗಾಗಿ ಅದನ್ನು ಹಾಗೆಯೇ ಬಿಡುವ ಬದಲು ಪುಣ್ಯಭೂಮಿ ಎಂದು ಘೋಷಿಸುವುದು ಸೂಕ್ತ.

click me!