
ಬೆಂಗಳೂರು[ಸೆ.20]: ಹ್ಯಾಟ್ರಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಅದ್ಧೂರಿ ವೆಚ್ಚದ ಚಿತ್ರ ದಿ ವಿಲನ್ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದಿರುವ ವಿಲನ್ ಕನ್ನಡ ಸಿನಿಮಾ ಉದ್ಯಮದಲ್ಲಿ ಇಲ್ಲಿಯವರೆಗೂ ಯಾವ ಸಿನಿಮಾನೂ ಮಾಡದ ದಾಖಲೆಯನ್ನು ಮಾಡುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. ಈಗಾಗಲೇ ಬಿಡುಗಡೆಗೂ ಮೊದಲೇ ವಿತರಣೆಯ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.
50 ಕೋಟಿಗೆ ಮಾರಾಟವಾದ ವಿತರಣೆಯ ಹಕ್ಕು
ದಿ ವಿಲನ್ ವಿತರಣೆಯ ಹಕ್ಕು ರಾಜ್ಯದಲ್ಲಿ 50 ಕೋಟಿಗೆ ಮಾರಾಟವಾಗಿದೆ. ಒಟ್ಟು ನಾಲ್ವರು ಸಿನಿಮಾದ ಹಕ್ಕುಗಳನ್ನು ಪಡೆದುಕೊಂಡಿದ್ದು ನಿರ್ಮಾಪಕ ಜಾಕ್ ಮಂಜು ಬೆಂಗಳೂರು,ತುಮಕೂರು, ಕೋಲಾರದ ಚಿತ್ರ ವಿತರಣೆಯ ಹಕ್ಕು ಪಡೆದಿದ್ದಾರೆ. ಎನ್. ಕುಮಾರ್ ಅವರು ಮಂಡ್ಯ,ಮೈಸೂರು,ಕೂರ್ಗ್ ಮತ್ತು ಹಾಸನದ ಹಕ್ಕು ಖರೀದಿಸಿದ್ದಾರೆ. ಹುಬ್ಬಳ್ಳಿ-ಧಾರವಾಡದ ವಿತರಣೆಯ ಹಕ್ಕೂ ಇವರ ಬಳಿಯೇ ಇದೆ. ಇನ್ನು ಹೈದ್ರಾಬಾದ್ ಕರ್ನಾಟಕದ ವಿತರಣೆಯ ಹಕ್ಕನ್ನು ರಾಜಶೇಖರಪ್ಪ ಹಾಗೂ ಶಿವಮೊಗ್ಗದ ಕಡೆಯ ಹಕ್ಕುಗಳನ್ನು ಪೈ ಅವರು ಕೊಂಡುಕೊಂಡಿದ್ದಾರೆ. ಇವೆಲ್ಲ ಹಕ್ಕುಗಳ ಒಟ್ಟು ಮೊತ್ತ 50 ಕೋಟಿ ಆಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
100 ಕೋಟಿ ಕ್ಲಬ್, 1 ಸಾವಿರ ಚಿತ್ರ ಮಂದಿರಗಳಲ್ಲಿ ಬಿಡುಗಡೆ
ಅಕ್ಟೋಬರ್ 18 ರಂದು ಬಿಡುಗಡೆಯಾಗುವ ವಿಲನ್ ಚಿತ್ರ ದೇಶ ವಿದೇಶಗಳಲ್ಲಿ 1 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ಬಾಚಲಿದೆ ಎನ್ನುವ ಮಾತುಗಳು ಗಾಂಧಿನಗರದಿಂದ ಕೇಳಿ ಬರುತ್ತಿದೆ. ಸಿನಿಮಾ ಮಂದಿಯ ಭವಿಷ್ಯದಂತೆ ಹಾಗೇನಾದರೂ 100 ಕೋಟಿ ಗಳಿಕೆ ಕಂಡರೆ ಶತ ಕೋಟಿ ದಾಟಿದ ಮೊದಲ ಕನ್ನಡ ಚಿತ್ರ ಎನ್ನುವ ಶ್ರೇಯಸ್ಸು ವಿಲನ್ ಚಿತ್ರದ ಪಾಲಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.