ಜಗ್ಗೇಶ್‌ಗೆ ಹೆಚ್ಚು ಸಂಭಾವನೆ ಕೊಡಿ, ನನಗೆ ಕಡಿಮೆ ಕೊಡಿ; ರವಿಚಂದ್ರನ್ ಹಾಕಿದ್ದ ಆ ಷರತ್ತಿನ ಹಿಂದಿದೆ ವಿಶೇಷ ಕಾರಣ

Published : Nov 23, 2026, 09:09 AM IST
ravichandran jaggesh gadibidi ganda movie behind the scenes

ಸಾರಾಂಶ

ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ಕೇವಲ ಕಥೆ, ಹಾಡು ಮತ್ತು ಹಾಸ್ಯದಿಂದ ಮಾತ್ರವಲ್ಲ, ಅವುಗಳ ಹಿಂದಿನ ಸ್ವಾರಸ್ಯಕರ ಘಟನೆಗಳಿಂದಲೂ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅಂತಹ ಸಿನಿಮಾಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ನಟ ಜಗ್ಗೇಶ್ ಅಭಿನಯದ 'ಗಡಿಬಿಡಿ ಗಂಡ' ಕೂಡ ಒಂದು.

ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ಕೇವಲ ಕಥೆ, ಹಾಡು ಮತ್ತು ಹಾಸ್ಯದಿಂದ ಮಾತ್ರವಲ್ಲ, ಅವುಗಳ ಹಿಂದಿನ ಸ್ವಾರಸ್ಯಕರ ಘಟನೆಗಳಿಂದಲೂ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅಂತಹ ಸಿನಿಮಾಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ನಟ ಜಗ್ಗೇಶ್ ಅಭಿನಯದ 'ಗಡಿಬಿಡಿ ಗಂಡ' ಕೂಡ ಒಂದು. ಈ ಸಿನಿಮಾ ತೆರೆಕಂಡಾಗ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಸೂಪರ್ ಹಿಟ್ ಆಗಿತ್ತು. ಆದರೆ ಈ ಸಿನಿಮಾದ ಹಿಂದೆ ರವಿಚಂದ್ರನ್ ಪಟ್ಟ ಶ್ರಮ, ಜಗ್ಗೇಶ್ ಸಿನಿಮಾದಲ್ಲಿ ಇರಲೇಬೇಕೆಂದು ಹಾಕಿದ ಷರತ್ತು ಹಾಗೂ ತಂದೆ ಆಸ್ಪತ್ರೆಯಲ್ಲಿದ್ದರೂ ಚಿತ್ರೀಕರಣದಲ್ಲಿ ಭಾಗವಹಿಸಿದ ರವಿಚಂದ್ರನ್ ಅವರ ಕರ್ತವ್ಯನಿಷ್ಠೆಯ ಕಥೆ ಅನೇಕರಿಗೆ ತಿಳಿದಿಲ್ಲ. ಇತ್ತೀಚೆಗೆ ಸಿನಿಮಾ ಹಿಂದಿನ ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡಿರುವ ಕಲಾವಿದರೊಬ್ಬರು ಗಡಿಬಿಡಿ ಗಂಡ ಚಿತ್ರದ ಹಲವು ಕುತೂಹಲಕಾರಿ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಜಗ್ಗೇಶ್ ಇರಲೇಬೇಕು ಎಂದು ಷರತ್ತು ಹಾಕಿದ್ದ ರವಿಚಂದ್ರನ್

ಗಡಿಬಿಡಿ ಗಂಡ ಒಂದು ರಿಮೇಕ್ ಸಿನಿಮಾ. ಈ ಚಿತ್ರದ ಪ್ರಾಜೆಕ್ಟ್ ಹಿಡಿದು ನಿರ್ದೇಶಕ ಮತ್ತು ನಿರ್ಮಾಪಕರು ರವಿಚಂದ್ರನ್ ಅವರನ್ನು ಭೇಟಿಯಾದಾಗ, ಅವರು ಮೊದಲೇ ಒಂದು ಷರತ್ತು ಹಾಕಿದ್ದರಂತೆ. ಈ ಸಿನಿಮಾದಲ್ಲಿ ಜಗ್ಗೇಶ್ ಇರಲೇಬೇಕು. ಅವರು ನಟಿಸಿದರೆ ಮಾತ್ರ ನಾನು ಡೇಟ್ಸ್ ಕೊಡುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದರಂತೆ. ಅಷ್ಟೇ ಅಲ್ಲ, ಬೇಕಾದರೆ ಜಗ್ಗೇಶ್ ಅವರಿಗೆ ಹೆಚ್ಚಿನ ಸಂಭಾವನೆ ಕೊಡಿ, ನನಗೆ ಕಡಿಮೆ ಕೊಟ್ಟರೂ ಪರವಾಗಿಲ್ಲ. ಆದರೆ ಈ ಸಿನಿಮಾದಲ್ಲಿ ಜಗ್ಗೇಶ್ ನಟಿಸಲೇಬೇಕು ಎಂದು ರವಿಚಂದ್ರನ್ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

ಆ ಸಮಯದಲ್ಲಿ ಜಗ್ಗೇಶ್ ನಾಯಕ ನಟನಾಗಿ ಗುರುತಿಸಿಕೊಂಡಿದ್ದರು. ತರ್ಲೆ ನನ್ನ ಮಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದ್ದ ಅವರು, ಪೋಷಕ ಪಾತ್ರಗಳನ್ನು ಮಾಡುವ ಆಸಕ್ತಿ ಹೊಂದಿರಲಿಲ್ಲ. ಆದರೂ ರವಿಚಂದ್ರನ್ ಅವರ ಒತ್ತಾಯದ ಮೇರೆಗೆ ಜಗ್ಗೇಶ್ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು. ಇದಕ್ಕೆ ಪ್ರಮುಖ ಕಾರಣ ರವಿಚಂದ್ರನ್ ಅವರ ಮೇಲಿದ್ದ ಗೌರವ ಮತ್ತು ಅಭಿಮಾನ. ತಮ್ಮ ಆರಂಭದ ದಿನಗಳಲ್ಲಿ ಸಂಗ್ರಾಮ, ರಣಧೀರ ಸಿನಿಮಾಗಳ ಮೂಲಕ ಅವಕಾಶ ನೀಡಿದ್ದ ರವಿಚಂದ್ರನ್ ಅವರ ಸಹಾಯವನ್ನು ಜಗ್ಗೇಶ್ ಎಂದಿಗೂ ಮರೆತಿರಲಿಲ್ಲ. ಹೀಗಾಗಿ ರವಿಚಂದ್ರನ್ ಕೇಳಿದಾಗ ತಕ್ಷಣವೇ ಒಪ್ಪಿಕೊಂಡಿದ್ದರು.

ತಂದೆ ಆಸ್ಪತ್ರೆಯಲ್ಲಿದ್ದರೂ ಶೂಟಿಂಗ್‌ಗೆ ಹಾಜರಾಗುತ್ತಿದ್ದ ರವಿಚಂದ್ರನ್

ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ತಂದೆಯ ಆರೋಗ್ಯದ ಬಗ್ಗೆ ಚಿಂತೆಯಿದ್ದರೂ, ಸಿನಿಮಾ ನಿರ್ಮಾಣದ ಜವಾಬ್ದಾರಿ ಮತ್ತು ನಟನೆಯ ಕೆಲಸವನ್ನು ಅವರು ಒಟ್ಟಿಗೆ ನಿಭಾಯಿಸಬೇಕಾಗಿತ್ತು. ಪ್ರತಿದಿನ ಬೆಳಗಿನ ಜಾವ 4ರಿಂದ 4.30ರ ಸುಮಾರಿಗೆ ಎದ್ದು ಈಶ್ವರಿ ಆಫೀಸ್‌ಗೆ ತೆರಳಿ ನಿರ್ಮಾಣ ಮತ್ತು ನಿರ್ದೇಶನಕ್ಕೆ ಸಂಬಂಧಿಸಿದ ಕೆಲಸಗಳನ್ನು ಮುಗಿಸುತ್ತಿದ್ದರು. ಬಳಿಕ ಬೆಳಗ್ಗೆ 6 ಗಂಟೆಗೆ ಆಸ್ಪತ್ರೆಗೆ ಹೋಗಿ ತಂದೆಯನ್ನು ಭೇಟಿಯಾಗುತ್ತಿದ್ದರಂತೆ. ಅವರೊಂದಿಗೆ ಒಂದರಿಂದ ಎರಡು ಗಂಟೆಗಳ ಕಾಲ ಸಮಯ ಕಳೆದು ಆರೋಗ್ಯ ವಿಚಾರಿಸಿಕೊಂಡು ನಂತರ ಗಡಿಬಿಡಿ ಗಂಡ ಚಿತ್ರದ ಶೂಟಿಂಗ್‌ಗೆ ತೆರಳುತ್ತಿದ್ದರಂತೆ.

ಒಂದು ಹಾಡಿಗಾಗಿ ರಾತ್ರಿಯಿಡೀ ಅಭ್ಯಾಸ ಮಾಡಿದ್ದ ರವಿಚಂದ್ರನ್

'ಗಡಿಬಿಡಿ ಗಂಡ' ಸಿನಿಮಾದಲ್ಲಿ ಬರುವ 'ನೀನು ನೀನೇ ನಾನು ನಾನೇ' ಹಾಡು ವಿಶೇಷ ಗಮನ ಸೆಳೆಯುತ್ತದೆ. ಈ ಹಾಡಿನಲ್ಲಿ ರವಿಚಂದ್ರನ್ ಮತ್ತು ಹಿರಿಯ ನಟ ತೈ ನಾಗೇಶ್ ಅವರ ಅಭಿನಯದ ನಡುವೆ ಉತ್ತಮ ಪೈಪೋಟಿ ಕಾಣಿಸುತ್ತದೆ. ಹಾಡಿನ ಚಿತ್ರೀಕರಣಕ್ಕೂ ಹಿಂದಿನ ರಾತ್ರಿ ರವಿಚಂದ್ರನ್ ಸಾಕಷ್ಟು ಅಭ್ಯಾಸ ಮಾಡಿದ್ದರಂತೆ. ಇದನ್ನು ಗಮನಿಸಿದ ಅವರ ಪತ್ನಿ, ಯಾವಾಗಲೂ ಹಾಡಿಗೆ ಇಷ್ಟೊಂದು ಅಭ್ಯಾಸ ಮಾಡದ ನೀವು ಇಂದು ಯಾಕೆ ಇಷ್ಟೊಂದು ಪ್ರಾಕ್ಟೀಸ್ ಮಾಡುತ್ತಿದ್ದೀರಿ ಎಂದು ಕೇಳಿದ್ದರಂತೆ. ಅದಕ್ಕೆ ರವಿಚಂದ್ರನ್, ಈ ಹಾಡಿನಲ್ಲಿ ಸ್ವರಗಳ ಏರಿಳಿತ ಹೆಚ್ಚಿದೆ. ತೈ ನಾಗೇಶ್ ಅವರಂತಹ ಅದ್ಭುತ ನಟನ ಎದುರು ಲಿಪ್ ಸಿಂಕ್ ಸರಿಯಾಗಿ ಬರಬೇಕು. ಹೀಗಾಗಿ ಹೆಚ್ಚು ಅಭ್ಯಾಸ ಮಾಡುತ್ತಿದ್ದೇನೆ ಎಂದು ಹೇಳಿದ್ದರಂತೆ.

ಹಾಡಿನಲ್ಲಿ ತೈ ನಾಗೇಶ್ ಅವರು ಅಹಂಕಾರ ಮತ್ತು ಗರ್ವದಿಂದ ವರ್ತಿಸುವ ಸಂಗೀತ ವಿದ್ವಾಂಸರ ಪಾತ್ರದಲ್ಲಿ ಕಾಣಿಸಿಕೊಂಡರೆ, ರವಿಚಂದ್ರನ್ ಅವರು ಸರಳತೆ ಮತ್ತು ಸಾತ್ವಿಕತೆಯಿಂದ ಅಭಿನಯಿಸಬೇಕಿತ್ತು. ನಿರ್ದೇಶಕರು ಕೂಡ ರವಿಚಂದ್ರನ್ ಅವರಿಗೆ ಮುಖದಲ್ಲಿ ಮೃದುಭಾವ ಇರಲಿ, ಹಾಡಿನ ಲಿಪ್ ಸಿಂಕ್ ಮಾತ್ರ ನಿಖರವಾಗಿರಲಿ ಎಂದು ಸೂಚಿಸಿದ್ದರಂತೆ. ಈ ಸಣ್ಣ ಸಣ್ಣ ವಿಚಾರಗಳಿಗೆ ಗಮನ ಕೊಟ್ಟಿದ್ದರಿಂದಲೇ ಹಾಡಿನ ದೃಶ್ಯ ವಿಶೇಷವಾಗಿ ಮೂಡಿಬಂದಿತ್ತು.

ಹಂಸಲೇಖ ಸಾಹಿತ್ಯಕ್ಕೆ ಎಸ್‌ಪಿಬಿ ಧ್ವನಿಯ ಮೋಡಿ

ಈ ಸಿನಿಮಾದ ಹಾಡುಗಳ ಬಗ್ಗೆ ಮಾತನಾಡುವಾಗ ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಗಾನಗಾರುಡಿಗ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಕೊಡುಗೆಯನ್ನು ಮರೆಯುವಂತಿಲ್ಲ. 'ನೀನು ನೀನೇ ನಾನು ನಾನೇ' ಹಾಡಿನಲ್ಲಿ ಎರಡು ವಿಭಿನ್ನ ಭಾವಗಳನ್ನು ಎಸ್‌ಪಿಬಿ ತಮ್ಮ ಧ್ವನಿಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಒಂದು ಕಡೆ ಗರ್ವದಿಂದ ಹಾಡುವ ಧಾಟಿ, ಮತ್ತೊಂದು ಕಡೆ ಮೃದುವಾಗಿ ಹಾಡುವ ಶೈಲಿ. ಎರಡೂ ಭಾವಗಳನ್ನು ಒಂದೇ ಹಾಡಿನಲ್ಲಿ ವಿಭಿನ್ನವಾಗಿ ತೋರಿಸಿರುವುದು ವಿಶೇಷ.

ಹಾಸ್ಯ, ಪ್ರೀತಿ, ಸಂಗೀತದ ಸಂಗಮವಾಗಿದ್ದ ಗಡಿಬಿಡಿ ಗಂಡ

'ಗಡಿಬಿಡಿ ಗಂಡ' ಕೇವಲ ಹಾಸ್ಯ ಸಿನಿಮಾವಾಗಿರಲಿಲ್ಲ. ಇದರಲ್ಲಿ ಪ್ರೀತಿ, ರೊಮ್ಯಾನ್ಸ್ ಮತ್ತು ಸಂಗೀತಕ್ಕೂ ವಿಶೇಷ ಸ್ಥಾನವಿತ್ತು. ರಮ್ಯಕೃಷ್ಣ ಅವರ ಹಾಡು ಸೇರಿದಂತೆ ಹಲವು ಹಾಡುಗಳು ಆ ಕಾಲದಲ್ಲಿ ಜನರ ಬಾಯಲ್ಲಿ ಗುನುಗುತ್ತಿದ್ದವು. ಜಗ್ಗೇಶ್ ಅವರ ಕಾಮಿಡಿ ಟೈಮಿಂಗ್, ರವಿಚಂದ್ರನ್ ಅವರ ಅಭಿನಯ, ತೈ ನಾಗೇಶ್ ಅವರ ಪಾತ್ರ ಹಾಗೂ ಹಂಸಲೇಖ ಅವರ ಸಂಗೀತ ಎಲ್ಲವೂ ಸೇರಿ ಸಿನಿಮಾವನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ಮಾಡಿದ್ದವು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತುಳು ಸಿನಿಮಾ ನಿರ್ದೇಶಕ ಸೂರಜ್ ಬೋಳಾರ್ ನಿಧನ; ಇಂದು ಅಂತ್ಯಕ್ರಿಯೆ
ಈ ನಟಿಗೆ ಹಾಡು ಹಾಡಿದ್ರೆ 2 ದಿನ ರೆಸ್ಟ್ ತಗೋಬೇಕಿತ್ತು: ಗಾಯಕಿ ಕೆ ಎಸ್ ಚಿತ್ರಾ ಕಾಮೆಂಟ್ಸ್ ವೈರಲ್