ಪ್ರತಿಭೆ, ಸನ್ನಡತೆ, ಸಜ್ಜನಿಕೆಯ ಪ್ಯಾಕೇಜ್‌ ಎಸ್‌ಪಿಬಿ: ರಮೇಶ್ ಅರವಿಂದ್‌

By Kannadaprabha NewsFirst Published Sep 26, 2020, 12:18 PM IST
Highlights

SPB ಅಪ್ಪುಗೆಯ ಬಿಸಿ ಇನ್ನೂ ನನ್ನಲ್ಲಿದೆ| ನನ್ನ ಅನೇಕ ಸಿನಿಮಾಗಳಿಗೆ ಎಸ್‌ಪಿಬಿ ಹಾಡಿದ್ದಾರೆ| ಎಸ್‌ಪಿಬಿ ಧ್ವನಿಗೆ ಲಿಪ್‌ ಸಿಂಕ್‌ ಮಾಡುವ ಅವಕಾಶ ನನಗೆ ಸಿಕ್ಕಿದೆ| ಹಲವು ತಮಿಳು ಸಿನಿಮಾಗಳಲ್ಲಿ ನಾನೂ ಅವರೂ ಜತೆಗೆ ನಟಿಸಿದ್ದೇವೆ| 

ಬೆಂಗಳೂರು(ಸೆ.26): ನಾನು ನಿರ್ದೇಶಿಸಿ ನಟಿಸುತ್ತಿರುವ ‘100’ ಚಿತ್ರದ ಒಂದು ಹಾಡನ್ನು ಎಸ್‌ಪಿಬಿ ಹಾಡಿದರೆ ಚೆನ್ನಾಗಿರುತ್ತದೆ, ನೀವು ಒಮ್ಮೆ ಕೇಳಿ ಅಂತ ಸಂಗೀತ ನಿರ್ದೇಶಕ ರವಿ ಹೇಳಿದರು. ನಾನು ಅವರಿಗೆ ಟ್ಯೂನ್‌ ಕಳುಹಿಸಿದೆ. ಅದನ್ನು ಕೇಳಿ ಅವರು ಫೋನ್‌ ಮಾಡಿದರು. ರಮೇಶ್‌, ಈ ಹಾಡನ್ನು ನಾನು ಹಾಡಬಹುದು. ಆದರೆ ಈ ಹಾಡಿನ ರೇಂಜ್‌ ಬೇರೆ ಇದೆ. ಈ ರೇಂಜ್‌ಗೆ ತಕ್ಕ ಧ್ವನಿ ಎಂದರೆ ಕೈಲಾಶ್‌ ಖೇರ್‌ ಅವರದು. ಅವರ ಬಳಿ ಹಾಡಿಸಿದರೆ ನ್ಯಾಚುರಲ್‌ ಆಗಿರುತ್ತದೆ. ನಾನು ಹಾಡಿದರೆ ಸ್ವಲ್ಪ ಕೃತಕ ಅನ್ನಿಸುತ್ತದೆ’ ಎಂದು ಎಸ್‌ಪಿಬಿ ಅವರ ನೆನಪನ್ನು ನಟ, ನಿರ್ದೇಶಕ ರಮೇಶ್‌ ಅರವಿಂದ್ ಅವರು ಮೆಲುಕು ಹಾಕಿದ್ದಾರೆ. 

ನಲವತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಒಬ್ಬ ವ್ಯಕ್ತಿ ಈ ಮಾತು ಹೇಳುತ್ತಾರೆ ಎಂದರೆ ಅವರು ಎಷ್ಟುದೊಡ್ಡ ವ್ಯಕ್ತಿ. ನಾನು ಅವರಿಗೆ ಆಮೇಲೆ ಸುದೀರ್ಘ ಮೆಸೇಜ್‌ ಬರೆದು ನೀವು ಇಷ್ಟವಾಗುವುದೇ ಇದಕ್ಕೆ ಎಂದೆ.
ಅವರು ನನ್ನ ಅನೇಕ ಸಿನಿಮಾಗಳಿಗೆ ಹಾಡಿದ್ದಾರೆ. ಅವರ ಧ್ವನಿಗೆ ಲಿಪ್‌ ಸಿಂಕ್‌ ಮಾಡುವ ಅವಕಾಶ ನನಗೆ ಸಿಕ್ಕಿದೆ. ಹಲವು ತಮಿಳು ಸಿನಿಮಾಗಳಲ್ಲಿ ನಾನೂ ಅವರೂ ಜತೆಗೆ ನಟಿಸಿದ್ದೇವೆ. ‘ಮನದಿಲ್‌ ಉರುತಿ ವೇಂಡುಮ್‌’ ಚಿತ್ರದಲ್ಲಿ ಅವರು ಡಾಕ್ಟ್ರು. ಬೇರೆಲ್ಲರಿಗೂ ಸಿಗರೇಟ್‌ ಸೇದಬೇಡಿ ಅಂತಿರುತ್ತಾರೆ. ಆದರೆ ಅವರ ಕೈಯಲ್ಲಿ ಯಾವಾಗಲೂ ಸಿಗರೇಟ್‌ ಇರುತ್ತದೆ. ಅವರ ಜತೆ ನಟಿಸಿದ ಇನ್ನೊಂದು ಸಿನಿಮಾ ‘ಕೇಳಡಿ ಕಣ್ಮಣಿ’. ಅದರಲ್ಲಿ ಅವರಿಗೆ ರಾಧಿಕಾ ಜೋಡಿ. ನನಗೆ ಅಂಜು ಜೋಡಿ. ಈ ಚಿತ್ರವಂತೂ ಭಾರಿ ದೊಡ್ಡ ಜನಪ್ರಿಯತೆ ಪಡೆದಿತ್ತು. ಆ ಸಿನಿಮಾದಲ್ಲಿ ಅವರು ಮೊದಲ ಬಾರಿಗೆ ಬ್ರೆತ್‌ಲೆಸ್‌ ಹಾಡು ಹಾಡಿದ್ದರು.

ಕನ್ನಡಿಗರ ಪ್ರೀತಿ ನೆನೆದೆರೆ ಕಣ್ಣೀರು ಬರುತ್ತೆ: ತಮಿಳು, ಆಂಧ್ರದಲ್ಲೂ ಇದನ್ನೇ ಹೇಳಿದ್ದ ಎಸ್‌ಪಿಬಿ!

ನಮ್ಮದು ಸೃಜನಶೀಲ ಕ್ಷೇತ್ರ. ಇಲ್ಲಿ ಬಹಳ ಜನ ಪ್ರತಿಭಾವಂತರು ಸಿಗುತ್ತಾರೆ. ಆದರೆ ಪ್ರತಿಭೆ ಜತೆಗೆ ಸನ್ನಡತೆ, ವಿನಯ, ಸಜ್ಜನಿಕೆ ಎಲ್ಲವೂ ಸೇರಿ ಒಂದು ಪ್ಯಾಕೇಜ್‌ ಸಿಗುವುದು ಬಹಳ ಬಹಳ ಅಪರೂಪ. ಕಲಾವಿದರಾಗಿ ನಮ್ಮೆಲ್ಲರಿಗೂ ನಡವಳಿಕೆ ವಿಚಾರದಲ್ಲಿ ಒಂದು ಜವಾಬ್ದಾರಿ ಇರುತ್ತದೆ. ಅದನ್ನು ಎಲ್ಲರೂ ಮೆಚ್ಚುವಂತೆ ಕಾಪಾಡಿಕೊಂಡು ಬಂದವರು ಎಸ್‌ಪಿಬಿ. ಅವರನ್ನು ಭೇಟಿ ಮಾಡಿದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆ ಭಾವ ಇರುತ್ತದೆ.

ಎಸ್‌ಪಿಬಿ ಎಂದಾಗ ನನಗೆ ಎರಡು ಚಿತ್ರ ಕಣ್ಮುಂದೆ ಬರುತ್ತದೆ. ಒಂದು ಡ್ಯುಯೆಟ್‌ ಸಿನಿಮಾದ ‘ಎನ್‌ ಕಾದಲೈ ಕಾದಲೈ’ ಎಂಬ ಹಾಡಿನ ದೃಶ್ಯ. ಆ ಚಿತ್ರದಲ್ಲಿ ಅಣ್ಣ ಮತ್ತು ನಾನು ಒಂದೇ ಹುಡುಗಿಯನ್ನು ಪ್ರೀತಿಸಿರುತ್ತೇವೆ, ಅದು ಗೊತ್ತಾದಾಗ ಬರುವ ಹಾಡು ಅದು. ಎಸ್‌ಪಿಬಿ ಆ ಹಾಡನ್ನು ಎಷ್ಟು ಭಾವಪೂರ್ಣವಾಗಿ ಹಾಡುತ್ತಾರೆ ಎಂದರೆ ಇವತ್ತು ಹಾಡಿದರೂ ಜನರು ಕಣ್ಣೀರು ಹಾಕುತ್ತಾರೆ. ನನ್ನನ್ನೂ ಜನ ಆ ದೃಶ್ಯದಲ್ಲಿ ಇಷ್ಟಪಟ್ಟರು. ಅವರ ಧ್ವನಿಗೆ ತಕ್ಕಂತೆ ನಟಿಸಿದ್ದೇ ಅದಕ್ಕೆ ಕಾರಣ.

ಇನ್ನೊಂದು ದೃಶ್ಯ ಅವರ ಜತೆಗಿನ ‘ವೀಕೆಂಡ್‌ ವಿತ್‌ ರಮೇಶ್‌’ ಕಾರ್ಯಕ್ರಮದ ಅಂತಿಮ ಕ್ಷಣ. ಆ ಕಾರ್ಯಕ್ರಮದ ಚಿತ್ರೀಕರಣ ಮುಗಿಸಿದ ನಂತರ ಅವರು ನನ್ನ ಹತ್ತಿರ ಬಂದು ‘ಇದು ನಾನು ನನ್ನ ಜೀವನದಲ್ಲಿ ಎದುರಿಸಿದ ಬೆಸ್ಟ್‌ ಇಂಟವ್ರ್ಯೂ ಕಣೋ’ ಎಂದು ಗಟ್ಟಿಯಾಗಿ ತಬ್ಬಿಕೊಂಡರು. ಆ ಬೆಚ್ಚಗಿನ ಭಾವ ಇನ್ನೂ ನನ್ನಲ್ಲಿದೆ. ಕೊನೆಯವರೆಗೂ ಇರುತ್ತದೆ.
 

click me!