‘ಭೈರವ ಗೀತ’ ಬಿಸಿಬಿಸಿ ಲಿಪ್ ಲಾಕ್; ಆರ್ ಜಿವಿ ಕೊಟ್ರು ಶಾಕ್

By Kannadaprabha NewsFirst Published Nov 10, 2018, 10:56 AM IST
Highlights

ನಿರ್ದೇಶಕ ರಾಮ್ ಗೋಪಾಲ್ ವರ್ಮಗೂ ನವೀರಾದ ಪ್ರೇಮ ಕಾವ್ಯ ಹೇಳಲು ಬರುತ್ತಾ? ಹಾಗೊಂದು ಸೋಜಿಗಕ್ಕೆ ಕಾರಣವಾಗಿದ್ದು ‘ಭೈರವ ಗೀತ’ ಚಿತ್ರ

ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ಬರುತ್ತಿರುವ ಈ ಚಿತ್ರವಿದು.ಅದರ ಬಗೆಗೆ ತೀವ್ರ ಕುತೂಹಲ ಹುಟ್ಟುವಂತೆ ಮಾಡಿದ್ದು ಆ ಚಿತ್ರದಲ್ಲಿನ ಪ್ರೇಮ ಪ್ರಲಾಪ ! ಡಾಲಿ ಧನಂಜಯ್ ಹಾಗೂ ನಾಯಕಿ ಇರಾ ನಡುವಿನ ಲಿಪ್‌ಲಾಕ್ ದೃಶ್ಯ. ಅದರಾಚೆ ಹಿಂಸೆಯ ವೈಭವೀಕರಣ, ರಕ್ತಪಾತದ ಹಸಿಬಿಸಿ ದೃಶ್ಯ. ಇವೆಲ್ಲವೂ ವರ್ಮ ಸಿನಿಮಾಗಳಲ್ಲಿ ಮಾಮೂಲೇ ಆಗಿದ್ದರೂ, ಈಗ ಎರಡು ಭಾಷೆಯ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ್ದು ವರ್ಮ ಸೃಷ್ಟಿಸಿರುವ ಪ್ರೀತಿಯ ತೀವ್ರತೆ. ಲಿಪ್‌ಲಾಕ್ ದೃಶ್ಯಗಳವರಸೆ. ಅದ್ಯಾಕೆ ಅಂತ ಕೇಳಿದರೆ ವರ್ಮ ಹೇಳಿದ್ದು, ಅದೊಂದು ನೈಜ ಘಟನೆಯ ಸ್ಫೂರ್ತಿಯ ಕತೆ ಅಂತ.

ಆ ದಿನ ಚಿತ್ರದ ಟ್ರೈಲರ್ ಲಾಂಚ್ ಸಂದರ್ಭ ವರ್ಮ ಹೇಳಿದ್ದು ಅದಷ್ಟೇ ಉತ್ತರ, ಸಮಜಾಯಿಷಿ, ಸಮರ್ಥನೆ. ಅದೆನೇ ಇರಲಿ, ವರ್ಮ ನಿರ್ಮಾಣದ ಚಿತ್ರ ಎನ್ನುವುದಕ್ಕಿಂತ ಡಾಲಿ ಖ್ಯಾತಿಯ ಧನಂಜಯ್ ಅಭಿನಯದ ಚಿತ್ರ ಎನ್ನುವ ಕಾರಣಕ್ಕೆ ತೆಲುಗಿನಷ್ಟೇ ಕನ್ನಡದಲ್ಲೂ ದೊಡ್ಡ ಸದ್ದು ಮಾಡುತ್ತಿರುವ ‘ಭೈರವ ಗೀತ ’ಚಿತ್ರ ನವೆಂಬರ್ 22ಕ್ಕೆ ತೆರೆ ಕಾಣುತ್ತಿದೆ. ಚಿತ್ರದ ಬಗೆಗೆ ಕನ್ನಡದಲ್ಲೂ ದೊಡ್ಡ ಕ್ರೇಜ್ ಹುಟ್ಟಿಸುವ ತವಕದಲ್ಲಿರುವ ಚಿತ್ರ ತಂಡ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕನ್ನಡ ಮತ್ತು ತೆಲುಗು ಅವತರಿಣಿಕೆಯ ಟ್ರೈಲರ್ ಲಾಂಚ್ ಮಾಡಿತು. ಆ ದಿನ ಸಂಜೆ 4 ಗಂಟೆಗೆ ನಿಗದಿ ಆಗಿದ್ದ ಕಾರ್ಯಕ್ರಮವದು. ಒಂದೂವರೆ ಗಂಟೆ ತಡವಾಗಿ ಬಂದ ವರ್ಮ, ಅದಕ್ಕೆ ಕಾರಣ ಹೇಳಿದ್ದು ಹೆವಿ ಟ್ರಾಫಿಕ್ ಅಂತ. ಟ್ರೇಲರ್ ಲಾಂಚ್ ನಂತರ ಅವರೇ ಮೊದಲು ಮಾತಿಗೆ ನಿಂತರು.

‘ಚಿತ್ರದ ಸ್ಕ್ರಿಪ್ಟ್ ವರ್ಕ್ ನನ್ನದೇ. ಅತ್ಯಾಸಕ್ತಿಯ ಕತೆಯನ್ನು ಹೇಳ ಹೊರಟಿದ್ದೇನೆ. ಇಂತಹ ಕತೆ ಆಯ್ಕೆ ಮಾಡಿಕೊಂಡಿದ್ದು ಇದೇ ಮೊದಲು. ನೈಜ ಘಟನೆಗಳು ಈ ಕತೆಗೆ ಸ್ಫೂರ್ತಿ. ನೈಜ ಘಟನೆಯ ಕತೆ. ಹಾಗೆಯೇ ಅದನ್ನು ತೆರೆಗೆ ತಂದಿದ್ದಾರೆ ನಿರ್ದೇಶಕರು. ಕೆಲವು ಸನ್ನಿವೇಶಗಳು ಬೇಕಿತ್ತಾ, ಬೇಡವಾ ಎನ್ನುವುದು ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ಇದು ಉತ್ತಮ ಸಿನಿಮಾವಾಗುತ್ತದೆ’ ಎಂದು ನಿರ್ದೇಶಕರಷ್ಟೇ ವಿಶ್ವಾಸದ ಮಾತುಗಳನ್ನು ಹೇಳಿದರು. ಆದಾಗಲೇ ಚಿತ್ರದ ಪೋಸ್ಟರ್ ಮತ್ತು ಟೀಸರ್‌ಗಳಲ್ಲಿ ಕಂಡ ಚಿತ್ರದ ರೋಚಕ ಸನ್ನಿವೇಶಗಳೇ ಟ್ರೇಲರ್‌ನಲ್ಲೂ ಅಬ್ಬರಿಸಿದವು. 

 ಕಣ್ಣ ಮುಂದಿದ್ದ ಅದೇ ಸನ್ನಿವೇಶಗಳಿಗೆ ಉತ್ತರವಾಗುವ ಹಾಗೆ ಮಾತನಾಡುತ್ತಾ ಹೋದರು ವರ್ಮ. ನಿರ್ದೇಶಕ ಸಿದ್ಧಾರ್ಥ ಮೈಕ್ ಹಿಡಿದು ಮಾತಿಗೆ ನಿಂತರು. ೨೨ ವರ್ಷದ ನನ್ನಂತಹ ಹೊಸಬನಿಗೆ ವರ್ಮ, ನಿರ್ದೇಶನದ ಅವಕಾಶ ನೀಡಿದ್ದೇ ವಿಶೇಷ ಎಂದರು. ಯಾಕಿಷ್ಟು ಹಿಂಸೆ, ಏನೀದರ ಕತೆ ಅಂತ ಪತ್ರಕರ್ತರ ಕಡೆಯಿಂದ ತೂರಿಬಂದ ಪ್ರಶ್ನೆಗಳಿಗೆ ಉತ್ತರ ನೀಡಲು ಮೈಕ್ ಹಿಡಿದರು ಧನಂಜಯ್.‘ನನ್ನ ಕರಿಯರ್‌ನ ದೊಡ್ಡ ಚಿತ್ರವಿದು. ತುಂಬ ರಗಡ್ ಆಗಿ ಕಾಣಿಸಿಕೊಂಡಿದ್ದೇನೆ. ಮುಂಗೋಪಿ, ಪ್ರೀತಿ ವಿಷಯದಲ್ಲಿ ಅಷ್ಟೇ ಶಾಂತ ಸ್ವಭಾವದ ಪಾತ್ರ ನಿಭಾಯಿಸಿದ್ದೇನೆ’ಎಂದರು ಧನಂಜಯ

ಕನ್ನಡ ಸೇರಿ ತೆಲುಗು, ತಮಿಳು, ಹಿಂದಿಯಲ್ಲಿ ಸಿನಿಮಾ ತೆರೆಕಾಣುತ್ತಿರುವುದರಿಂದ ಧನಂಜಯ ಮೊಗದಲ್ಲಿ ಖುಷಿ ಇತ್ತು. ಕನ್ನಡಿಗ ಬಾಲರಾಜ್ವಾಡಿ ಕನ್ನಡದ ಜತೆಗೆ ಇದೇ ಮೊದಲು ನಾಲ್ಕು ಭಾಷೆಯಲ್ಲಿ ತೆರೆ ಮೇಲೆ ಬರುತ್ತಿರುವುದಕ್ಕೆ ಖುಷಿ ಪಟ್ಟರು. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ‘ಭೈರವ ಗೀತ’ ಚಿತ್ರದ ಕನ್ನಡ ಮತ್ತು ತೆಲುಗು ಟ್ರೇಲರ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದಾರೆ. ಭಾಸ್ಕರ್ ರಾಶಿ ಬಂಡವಾಳ ಹೂಡಿದ್ದಾರೆ.

click me!