ರಾಜು ಕನ್ನಡ ಮೀಡಿಯಂ ಚಿತ್ರ ಹೇಗಿದೆ ಗೊತ್ತಾ?

By Suvarna Web DeskFirst Published Jan 20, 2018, 4:25 PM IST
Highlights

ಸಿಂಪಲ್ ಆಗಿ ಹೇಳೋದಾದ್ರೆ ಬದುಕಿನ ಆದ್ಯತೆಗಳನ್ನು ಹುಡುಕ ಹೊರಟ ಕತೆ ಇದು. ಕುಟುಂಬ, ಸ್ನೇಹ, ಉದ್ಯೋಗ, ಪ್ರೀತಿ ಹಾಗೂ ಹಣ. ಇವುಗಳಲ್ಲಿ ಯಾವುದು ಮುಖ್ಯ ಎಂದು ತೋರಿಸಲು ಹೊರಟ ಹಳ್ಳಿ ಹೈದನ ಕಥಾನಕ. ಅದರ ಕೇಂದ್ರ ಬಿಂದುವೇ ರಾಜು ಅಲಿಯಾಸ್ ರಾಜು ಶ್ರೀವಾತ್ಸವ್. ಸಾಧಕನಾಗಬೇಕು, ಪ್ರೀತಿಸಿದವಳೊಂದಿಗೆ ಬದುಕಬೇಕು, ಹಣ ಸಂಪಾದಿಸಬೇಕು ಅಂತೆಲ್ಲ ಬೆಂಗಳೂರು, ಅಮೆರಿಕ ಸುತ್ತು ಹಾಕಿ ಬಂದ ಆತನಿಗೆ ಕೊನೆಯಲ್ಲಿ ಮುಖ್ಯ ಎನಿಸಿದ್ದೇನು ಅನ್ನೋದೇ ಚಿತ್ರದ ಒನ್‌ಲೈನ್ ಸ್ಟೋರಿ.

ಬೆಂಗಳೂರು (ಜ.20): ಸಿಂಪಲ್ ಆಗಿ ಹೇಳೋದಾದ್ರೆ ಬದುಕಿನ ಆದ್ಯತೆಗಳನ್ನು ಹುಡುಕ ಹೊರಟ ಕತೆ ಇದು. ಕುಟುಂಬ, ಸ್ನೇಹ, ಉದ್ಯೋಗ, ಪ್ರೀತಿ ಹಾಗೂ ಹಣ. ಇವುಗಳಲ್ಲಿ ಯಾವುದು ಮುಖ್ಯ ಎಂದು ತೋರಿಸಲು ಹೊರಟ ಹಳ್ಳಿ ಹೈದನ ಕಥಾನಕ. ಅದರ ಕೇಂದ್ರ ಬಿಂದುವೇ ರಾಜು ಅಲಿಯಾಸ್ ರಾಜು ಶ್ರೀವಾತ್ಸವ್. ಸಾಧಕನಾಗಬೇಕು, ಪ್ರೀತಿಸಿದವಳೊಂದಿಗೆ ಬದುಕಬೇಕು, ಹಣ ಸಂಪಾದಿಸಬೇಕು ಅಂತೆಲ್ಲ ಬೆಂಗಳೂರು, ಅಮೆರಿಕ ಸುತ್ತು ಹಾಕಿ ಬಂದ ಆತನಿಗೆ ಕೊನೆಯಲ್ಲಿ ಮುಖ್ಯ ಎನಿಸಿದ್ದೇನು ಅನ್ನೋದೇ ಚಿತ್ರದ ಒನ್‌ಲೈನ್ ಸ್ಟೋರಿ. 

ಓಲ್ಡ್ ವೈನ್  ಇನ್ ನ್ಯೂ ಬಾಟೆಲ್ ಎನ್ನುವ ಮಾತನ್ನು ಚಿತ್ರಕ್ಕೆ ಅನ್ವಯ ಮಾಡಿಕೊಂಡರೆ  ತುಂಬಾ ಸೂಕ್ತವಾಗಿರುತ್ತದೆ. ಏಕೆಂದರೆ ಹೊಸದೇನೂ ಇಲ್ಲ ಎನ್ನಿಸುವ ಕತೆಯನ್ನು ಇಂದಿನ ಪರಿಸ್ಥಿತಿಗೆ ಹೊಂದುವಂತೆ ಎಣೆದಿದ್ದಾರೆ ನಿರ್ದೇಶಕ ನರೇಶ್. ಬಡ ಕುಟುಂಬದಲ್ಲಿ ಹುಟ್ಟಿದ ರಾಜು ಕನ್ನಡ ಮೀಡಿಯಂ ವಿದ್ಯಾರ್ಥಿ. ಶಾಲೆಗೆ ಹೋಗುವಾಗಲೇ ಅಂದಗಾತಿಯೊಬ್ಬಳಿಗೆ ಮನಸ್ಸು ಕೊಡುತ್ತಾನೆ. ಏಕಾಏಕಿ ಆ ಹುಡುಗಿ ಮನೆಯವರು ಊರು ಖಾಲಿ ಮಾಡಿದಾಗ ಬೆಳೆದು ದೊಡ್ಡದಾಗಬೇಕಿದ್ದ ಪ್ರೀತಿಯೊಂದು ಮೊಳಕೆಯಲ್ಲಿಯೇ ಬಾಡಿ ಹೋಗುತ್ತೆ. ಆಗ ಆತನಿಗೆ ಪ್ರೀತಿಗಿಂತ ಕುಟುಂಬ ಮುಖ್ಯ ಎನಿಸುತ್ತೆ. ಆ ಕುಟುಂಬವೂ ಒಮ್ಮೆ ಬೇಡ ಎನಿಸುತ್ತೆ. ಅಮ್ಮನ ಆರೋಗ್ಯ ಕೈ ಕೊಟ್ಟು ಆಸ್ಪತ್ರೆಗೆ ದಾಖಲಾದಾಗ ಸಾಕಷ್ಟು ಹಣ ಆಸ್ಪತ್ರೆಯ ಖರ್ಚಿಗೆ ಬೇಕಾಗುತ್ತೆ. ಅಣ್ಣ,ಅತ್ತಿಗೆ ಮುಖ ತಿರುವುತ್ತಾರೆ. ಆಗ ಆತನ ಆಪತ್ಕಾಲಕ್ಕೆ ಗೆಳೆಯರು ಸಾಥ್ ನೀಡುತ್ತಾರೆ. ಆಗ ಕುಟುಂಬಕ್ಕಿಂತ ಸ್ನೇಹ ಮುಖ್ಯ ಎನಿಸುತ್ತೆ. ಅಲ್ಲಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಾಗ ಇಂಗ್ಲಿಷ್ ಕಗ್ಗಂಟಾಗಿ ಕಾಡುತ್ತದೆ. ಆದರೆ ಆತನ ಕನ್ನಡದ ಪ್ರೀತಿ ಇಂಗ್ಲಿಷ್ ವ್ಯಾಮೋಹಿಗಳನ್ನು ಪರಿವರ್ತಿಸುತ್ತದೆ. ಚಿತ್ರ ಶೀರ್ಷಿಕೆಗೆ ಇಲ್ಲಿ ನ್ಯಾಯ ದೊರಕಿದೆ. ಮೊದಲರ್ಧದ ಇದಿಷ್ಟು ಪಯಣ ಸೊಗಸಾಗಿ ಕಾಣಿಸಿದ್ದರಲ್ಲಿ  ಕಿರಣ್ ರವೀಂದ್ರನಾಥ್ ಸಂಗೀತ, ಶೇಖರ್ ಚಂದ್ರ ಕ್ಯಾಮರಾದ ಜತೆಗೆ ನಿರ್ದೇಶಕರೇ ಬರದೆ ಸಂಭಾಷಣೆ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ.

ಅಲ್ಲಿಂದ ದ್ವಿತೀಯಾರ್ಧ ಪ್ರೇಕ್ಷಕರ ಗಮನ ಸೆಳೆದಿದ್ದು ನಟ ಕಿಚ್ಚ ಸುದೀಪ್ ಆಗಮನದ ಕಾರಣಕ್ಕೆ. ಅವರೊಬ್ಬ ಬಹುದೊಡ್ಡ ಬಿಸಿನೆಸ್ ಮ್ಯಾನ್. ಕನ್ನಡದಲ್ಲಿಯೇ ಓದಿ, ದೊಡ್ಡ ಸಾಧಕನಾದ ವ್ಯಕ್ತಿ. ಹೆಸರು ದೀಪಕ್ ಚಕ್ರವರ್ತಿ. ಸಾಧನೆ ಮಾಡಬೇಕು ಅಂತ ಹೊರಟ ರಾಜುಗೆ ಪ್ರೋತ್ಸಾಹಿಸಿ, ಬೆನ್ನು ತಟ್ಟಿದ್ದು  ಉದ್ಯಮಿ ದೀಪಕ್ ಚಕ್ರವರ್ತಿ. ಆ ಪಾತ್ರದಲ್ಲಿ ನಟ ಸುದೀಪ್ ನಟನೆಯ ಖದರ್ ಜೋರಾಗಿದೆ. ಕಂಚಿನ ಕಂಠ ಆಕರ್ಷಣೆ ಹುಟ್ಟಿಸುತ್ತೆ. ದೀಪಕ್ ಚಕ್ರವರ್ತಿ ಮಾತಿನಿಂದಲೇ ಸ್ಫೂರ್ತಿಯಾದ ರಾಜು, ಉದ್ಯಮಿಯಾಗಿ ಬೆಳೆದು ಬೃಹತ್  ಪ್ರಮಾಣದ ಡೀಲ್‌'ಗೆ ಅಂತ ಅಮೆರಿಕಕ್ಕೆ ಹಾರುತ್ತಾನೆ. ಆ ಹೊತ್ತಿಗೆ ನಾಯಕಿ  ನಿಶಾಳನ್ನು ಗಾಢವಾಗಿ ಪ್ರೀತಿಸುತ್ತಿರುತ್ತಾನೆ. ಆಕೆಯನ್ನು ಮಡದಿಯನ್ನಾಗಿ ಸ್ವೀಕರಿಸಿ, ಚೆನ್ನಾಗಿ ಬಾಳುವ ಕನಸು ಕಾಣುತ್ತಾನೆ. ಆದರೆ ಆತ ಅಮೆರಿಕದಿಂದ ವಾಪಸ್ ಭಾರತಕ್ಕೆ ಬರುವಾಗ ವಿಮಾನ ಅಪಘಾತಕ್ಕೀಡಾಗುತ್ತದೆ. ಕತೆಗೆ ಆ ಘಟನೆ ಇನ್ನೊಂದು ಟ್ವಿಸ್ಟ್ ನೀಡುತ್ತದೆ. ಕತೆಯ ಈ ಜರ್ನಿ ಚೆನ್ನಾಗಿದೆ. ಮುಂದಿನದು ಐಲ್ಯಾಂಡ್ ಸನ್ನಿವೇಶ. ಅದೇ ಚಿತ್ರದಲ್ಲಿ ಸುಮಾರು 15 ನಿಮಿಷ ಕಾಲ ಬರುತ್ತೆ. ಅಷ್ಟು ಸನ್ನಿವೇಶ ಅನಗತ್ಯ ಎನಿಸುತ್ತದೆ. ಅದನ್ನು ಟ್ರಿಮ್ ಮಾಡಿದರೆ ಚಿತ್ರ ಸರಗವಾಗಿ ನೋಡಿಸಿಕೊಂಡು ಹೋಗಲಿದೆ. ಅಂಥದೊಂದು ಸಿಂಪಲ್ ಕತೆಗೆ ಸಂಭಾಷಣೆಯೇ ಜೀವಾಳ. ಛಾಯಾಗ್ರಹಣ ಕಣ್ಣು ತಂಪಾಗಿಸುತ್ತದೆ. ಎರಡು ಹಾಡುಗಳು ಮನಸ್ಸು ಉಲ್ಲಾಸ ಗೊಳಿಸುತ್ತವೆ.

ಕಲಾವಿದರ ಅಭಿನಯಕ್ಕೆ ಬಂದರೆ, ಕಚಗುಳಿ ಇಡುವ ಸಂಭಾಷಣೆಯಲ್ಲಿ ಗುರುನಂದನ್ ಅಭಿನಯ, ಮಾತಿನ ಶೈಲಿ ಎಲ್ಲವೂ ಇಷ್ಟ. ಐಲ್ಯಾಂಡ್‌ನಲ್ಲಿ ಸಿಲುಕಿ, ಗಡ್ಡದಾರಿಯಾದಾಗ ಅವರನ್ನು ಆ ಪಾತ್ರದಲ್ಲಿ ನೋಡುವುದಕ್ಕೂ  ಅಸಾಧ್ಯ. ಆಶಿಕಾ ರಂಗನಾಥ್ ಆರಂಭದಲ್ಲಿನ ಒಂದಷ್ಟು ಸಮಯದಲ್ಲಿ ಬಂದುಹೋದರೂ, ಬಹುಕಾಲ ಮನದಲ್ಲಿ ಉಳಿಯುತ್ತಾರೆ. ಆವಂತಿಕಾ ಶೆಟ್ಟಿ  ಅಭಿನಯದಲ್ಲಿ ಆಪ್ತವಾಗುತ್ತಾರೆ. ಸಾಧು ಕೋಕಿಲ, ಕುರಿ ಪ್ರತಾಪ್ ಅಭಿನಯ ಚಿತ್ರವನ್ನು ಪ್ರಯಾಸದಿಂದ ಪಾರು ಮಾಡುತ್ತದೆ. ನಟ ಸುದೀಪ್ ಈ ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್. ‘ಫಸ್ಟ್ ರ‌್ಯಾಂಕ್ ರಾಜು’ ಚಿತ್ರದ ಸಕ್ಸಸ್ ನಂತರ  ನಿರ್ದೇಶಕ ನರೇಶ್ ಮತ್ತು ನಟ ಗುರುನಂದನ್ ಜೋಡಿ ಮತ್ತೊಮ್ಮೆ ಮ್ಯಾಜಿಕ್ ಮಾಡಲು ಪ್ರಯಾಸ ಪಟ್ಟಿದೆ.

 

ರಾಜು ಕನ್ನಡ  ಮೀಡಿಯಂ ಚಿತ್ರದ ಸ್ಟಿಲ್ಸ್'ಗಾಗಿ ಇಲ್ಲಿ ಕ್ಲಿಕ್ಕಿಸಿ

 

click me!