
'ಭೂಮಿಪುತ್ರ' ಮೇಲೆ ರಾಧಿಕಾ ಮುಸಿಸು ಇಂಥದ್ದೊಂದು ಸುದ್ದಿ ಗಾಂಧಿನಗರದಲ್ಲಿ ತಣ್ಣಗೆ ಹರಿದಾಡುತ್ತಿದೆ. ಅದು ‘ಭೂಮಿಪುತ್ರ' ಚಿತ್ರದ ಸುತ್ತ. ಏನು ವಿವಾದ? ಮಾಜಿ ಮುಖ್ಯಮಂತ್ರಿ ಜೀವನಾಧಾರಿತ ಚಿತ್ರ ‘ಭೂಮಿಪುತ್ರ'. ಎಚ್ ಡಿ ಕುಮಾರಸ್ವಾಮಿ ಅವರ ಬಯೋಪಿಕ್ ಇದು. ಅರ್ಜುನ್ ಸರ್ಜಾ ಹೀರೋ. ಒಬ್ಬ ರಾಜಕಾರಣಿ ಬದುಕಿನ ಸಿನಿಮಾ ಎಂದ ಮೇಲೆ ವಾದ-ವಿವಾದ, ಪರ- ವಿರೋಧಗಳು ಇದ್ದೇ ಇರುತ್ತವೆ. ಎಚ್‌ಡಿಕೆ ಅವರು ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಆಡಳಿತ ಪಯಣವನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ‘ಭೂಮಿಪುತ್ರ' ಸಿನಿಮಾ ಶುರು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಏನೆಲ್ಲ ತೋರಿಸುತ್ತಾರೆ ಎಂಬುದು ಸದ್ಯಕ್ಕೆ ಗುಟ್ಟಾಗಿರುವ ವಿಷಯ.
ರಾಧಿಕಾ ಕತೆ ಇದೆಯೇ?: ಆದರೆ, ಈ ಸಿನಿಮಾ ಒಳಗೊಂಡಿರುವ ಕತೆ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರಂತೆ. ರಾಧಿಕಾ ಅವರ ಈ ಮುನಿಸು ಯಾಕೆ? ‘ಭೂಮಿಪುತ್ರ' ಸಿನಿಮಾ ಹೇಳಲು ಹೊರಟಿರುವ ಎಚ್‌ಡಿಕೆ ಅವರ ಜೀವನ ಕತೆಯಲ್ಲಿ ರಾಧಿಕಾ ಅವರ ಪಾತ್ರ ಇರುತ್ತದೆ, ಇದ್ದರೆ ಹೇಗಿರುತ್ತದೆ, ಇಲ್ಲದಿದ್ದರೆ ಯಾಕೆ ಇರಲ್ಲ ಎನ್ನುವ ಪ್ರಶ್ನೆಗಳ ಸುತ್ತ ರಾಧಿಕಾ ಮುನಿಸು ಎದ್ದಿದೆ ಎನ್ನಲಾಗುತ್ತಿದೆ. ತುಂಬಾ ಹಿಂದೆಯೇ ಮಾಧ್ಯಮಗಳಿಗೆ ರಾಧಿಕಾ ಅವರೇ ಹೇಳಿಕೊಂಡಂತೆ ಕುಮಾರಸ್ವಾಮಿ ಹಾಗೂ ರಾಧಿಕಾ ಇಬ್ಬರೂ ಸತಿಪತಿ. ಈಗ ನಾರಾಯಣ್ ಅವರು ಹೇಳಲು ಹೊರಟಿರುವ ‘ಭೂಮಿಪುತ್ರ'ದಲ್ಲಿ ಈ ಅಂಶ ಇದೆಯೋ ಇಲ್ಲವೋ ಎಂಬುದರ ಬಗ್ಗೆ ರಾಧಿಕಾ ಕುತೂಹಲ ತಾಳಿದ್ದಾರಂತೆ. ಕೆಲವು ಮಾಹಿತಿಗಳ ಪ್ರಕಾರ, ‘ಭೂಮಿಪುತ್ರ' ಚಿತ್ರದಲ್ಲಿ ಕುಮಾರಸ್ವಾಮಿ ಅವರ ಜತೆಗಿನ ತಮ್ಮ ಜೀವನದ ಪುಟಗಳನ್ನು ಹೇಳುತ್ತಿಲ್ಲ. ಆ ಕಾರಣಕ್ಕೆ ಚಿತ್ರಕಥೆ ಬಗ್ಗೆ ರಾಧಿಕಾ ಬೇಸರ ಮಾಡಿಕೊಂಡಿದ್ದಾರೆಂಬುದು ಸದ್ಯದ ಸುದ್ದಿ. ಈ ಬಗ್ಗೆ ಕೇಳಲು ರಾಧಿಕಾ ಅವರನ್ನು ಸಂಪರ್ಕಿಸಲು ‘ಕನ್ನಡಪ್ರಭ' ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಎಸ್. ನಾರಾಯಣ್ ಅವರು ಹೇಳಿದ್ದೇನು?
‘ಅಧಾರರಹಿತವಾದ ಇಂಥ ಸುದ್ದಿಗಳಿಗೆ ನಾನು ಪ್ರತಿಕ್ರಿಯೆ ನೀಡಲಾರೆ. ಸದ್ಯಕ್ಕೆ ಭೂಮಿಪುತ್ರ ಸಿನಿಮಾ ಚಿತ್ರಕಥೆಯ ಹಂತದಲ್ಲಿದೆ. ಒಬ್ಬ ನಿರ್ದೇಶಕನಾಗಿ ಈ ಚಿತ್ರದ ಮೂಲಕ ಏನು ಹೇಳುತ್ತಿದ್ದೇನೆ ಎಂಬುದನ್ನು ಚಿತ್ರದ ನಿರ್ಮಾಪಕ, ನಾಯಕ ಹಾಗೂ ಕುಮಾರಸ್ವಾಮಿ ಅವರಿಗೆ ಮಾತ್ರ ನಾನು ಉತ್ತರಿಸಬೇಕು. ನಾನು ಮಾಡಿಕೊಳ್ಳುತ್ತಿರುವ ಕತೆ ಆ ಮೂವರಿಗೇ ಸರಿಯಾಗಿ ಗೊತ್ತಿಲ್ಲ. ಹಾಗಿದ್ದ ಮೇಲೆ ನನ್ನ ಸಿನಿಮಾ ಒಳಗೊಂಡಿರುವ ಚಿತ್ರಕಥೆ ಬಗ್ಗೆ ಯಾರೋ ಬೇಸರ ಮಾಡಿಕೊಂಡರು ಅನ್ನುವುದರಲ್ಲಿ ಅರ್ಥವಿದೆಯೇ? ನನ್ನ ಸಿನಿಮಾದಲ್ಲಿ ಯಾವ ಅಂಶಗಳು ಇರಬೇಕು, ಯಾವುದು ಇರಬಾರದು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಚಿತ್ರದ ನಿರ್ದೇಶಕನಾಗಿ ನನಗೆ ಮಾತ್ರ ಇದೆ. ಹೀಗಾಗಿ ಸಿನಿಮಾ ಶುರುವಾಗುವ ಮುನ್ನವೇ ಚಿತ್ರದಲ್ಲಿ ಅದಿಲ್ಲ, ಇದಿಲ್ಲ ಅನ್ನುವವರಿಗೆಲ್ಲ ನಾನು ಸಮಾಧಾನ ಹೇಳಲಿಕ್ಕಾಗೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಸಿನಿಮಾ ಮಾಡುತ್ತಿರುವುದು ಯಾರನ್ನೋ ವೈಭವೀಕರಣ ಮಾಡಿ, ಮತ್ತೊಬ್ಬರಿಗೆ ನೋವು ಕೊಡುವುದಕ್ಕಲ್ಲ. ಒಂದು ಸ್ಫೂರ್ತಿದಾಯಕ ಚಿತ್ರವನ್ನು ಮಾಡುತ್ತಿದ್ದೇನೆ. ಅಲ್ಲದೆ ಇದೊಂದು ಇತಿಹಾಸ. ನನ್ನ ಪ್ರಕಾರ ಇತಿಹಾಸ ತುಂಬಾ ಶುದ್ಧವಾಗಿರಬೇಕು. ಇದರ ಹೊರ ತಾಗಿ ಬೇರೆ ಯಾವ ಮಾತು ಗಳಿಗೂ ನಾನು ಕಿವಿ ಕೊಡಲ್ಲ' ಎನ್ನುತ್ತಾರೆ ಎಸ್ ನಾರಾಯಣ್.
ವರದಿ: ಕನ್ನಡಪ್ರಭ, ಸಿನಿವಾರ್ತೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.