'ಸುದೀಪ್‌, ಪುನೀತ್‌ಗೆ ನನ್ನ ಡಾನ್ಸ್‌ ಇಷ್ಟವಾಗಿದೆ'!

By Web DeskFirst Published Jun 25, 2019, 8:45 AM IST
Highlights

ಉಪ್ಪಿ ಮತ್ತು ನಿರ್ದೇಶಕ ಆರ್‌.ಚಂದ್ರು ಕಾಂಬಿನೇಷನ್‌ ಕಮಾಲ್‌ ಮಾಡಿದೆ. ಈ ಜೋಡಿಯ ‘ಐ ಲವ್‌ ಯೂ’ ಚಿತ್ರಕ್ಕೆ ರಾಜ್ಯಾದ್ಯಂತ ಅದ್ಭುತ ರೆಸ್ಪಾನ್ಸ್‌ ಸಿಕ್ಕಿದೆ. ಚಿತ್ರ 25ನೇ ದಿನದತ್ತ ದಾಪುಗಾಲಿಟ್ಟಿದೆ. ಉಪೇಂದ್ರ ಎರಡು ವರ್ಷದ ಗ್ಯಾಪ್‌ ನಂತರ ತೆರೆ ಮೇಲೆ ಬಂದರೂ, ಭರ್ಜರಿ ಆಗಿ ರಂಜಿಸಿದ್ದಾರೆನ್ನುವ ಮಾತುಗಳು ಕೇಳಿ ಬಂದಿವೆ. ಈ ಸಂದರ್ಭದಲ್ಲಿ ಉಪ್ಪಿ ಜತೆಗೆ ಮಾತುಕತೆ.

ದೇಶಾದ್ರಿ ಹೊಸ್ಮನೆ

ನಿಮ್ಮ ಪ್ರಕಾರ ‘ಐ ಲವ್‌ ಯೂ’ಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ?

ಅದ್ಭುತ. ಎಲ್ಲರೂ ಚೆನ್ನಾಗಿದೆ ಅಂತಲೇ ಹೇಳುತ್ತಿದ್ದಾರೆ. ತುಂಬಾ ಜನರು ನನಗೆ ಕಾಲ್‌ ಮಾಡಿ ಮಾತನಾಡಿದ್ದಾರೆ. ಸುದೀಪ್‌, ಪುನೀತ್‌, ನಿರ್ಮಾಪಕ ಮುನಿರತ್ನ ಸೇರಿ ಸಾಕಷ್ಟುಮಂದಿ ಚಿತ್ರರಂಗದ ನಟರು, ನಿರ್ಮಾಪಕರು ಹಾಗೂ ನಿರ್ದೇಶಕರಿಗೂ ಸಿನಿಮಾ ಇಷ್ಟವಾಗಿದೆ. ಅವರೆಲ್ಲ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಫೋನ್‌ ಮೂಲಕ, ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫ್ಯಾನ್ಸ್‌ ಕೂಡ ಖುಷಿ ಆಗಿದ್ದಾರೆ. ರಾಜ್ಯದ ಯಾವ್ಯಾವುದೋ ಊರಿನಿಂದ ಫೋನ್‌ ಮಾಡಿ, ಖುಷಿ ವ್ಯಕ್ತಪಡಿಸಿದ್ದಾರೆ. ಸಿನಿಮಾ ಚೆನ್ನಾಗಿಲ್ಲ ಅಂತ ಯಾರೊಬ್ಬರು ಹೇಳಿಲ್ಲ. ಮತ್ತೊಂದೆಡೆ ನಿರ್ಮಾಪಕ ಕಮ್‌ ನಿರ್ದೇಶಕ ಚಂದ್ರು ಕೂಡ ಕಲೆಕ್ಷನ್‌ ಚೆನ್ನಾಗಿದೆ ಎಂದಿದ್ದಾರೆ. ಇದು ನನ್ನ ಮಟ್ಟಿಗೆ ಸಿನಿಮಾದ ದೊಡ್ಡ ಸಕ್ಸಸ್‌.

ಸಿನಿಮಾ ಈ ಮಟ್ಟದಲ್ಲಿ ಸದ್ದು ಮಾಡಬಹುದು ಎನ್ನುವ ನಿರೀಕ್ಷೆ ಇತ್ತಾ?

ಫಸ್ಟ್‌ ಟೈಮ್‌ ಚಂದ್ರು ನನ್ನನ್ನು ಭೇಟಿ ಮಾಡಿ ಕತೆ ಹೇಳಿದ್ದಾಗಲೇ ಅಂಥದ್ದೊಂದು ಕಾನ್ಫಿಡೆನ್ಸ್‌ ಇತ್ತು. ಈ ಚಿತ್ರ ಗೆದ್ದೇ ಗೆಲ್ಲುತ್ತೆ ಅಂತ ನಾನು, ಚಂದ್ರುಗೆ ಆಗಲೇ ಹೇಳಿದ್ದೆ. ಅದೇನೋ ನನಗೆ ಕತೆಯಲ್ಲಿ ಹೊಸತಾದ ಅಂಶಗಳು ಕಾಣಿಸಿದ್ದವು. ಅಲ್ಲಿ ತನಕ ನಾನು ಪ್ರೀತಿ, ಪ್ರೇಮದ ಬಗ್ಗೆ ಹೇಳಿದ್ದ ಅಂಶಗಳಿಗಿಂತ ತುಂಬಾ ಭಿನ್ನವಾದ ನಿರೂಪಣೆ ಇಲ್ಲಿತ್ತು. ನಿರ್ದೇಶಕರು ಸೃಷ್ಟಿಸಿದ್ದ ಪಾತ್ರಗಳೇ ವಿಶೇಷ ಎನಿಸಿದ್ದವು. ಪ್ರತಿ ಪಾತ್ರಗಳಿಗೂ ಪ್ರಾಮುಖ್ಯತೆ ಇತ್ತು. ಇದೆಲ್ಲ ಕಾರಣಕ್ಕೆ ಸಿನಿಮಾ ಗೆಲ್ಲುತ್ತೆ ಎನ್ನುವ ನಿರೀಕ್ಷೆ ಸಿನಿಮಾ ಶುರುವಾಗುವ ಮುನ್ನವೇ ನನಗಿತ್ತು.

ಕಲೆಕ್ಷನ್‌ನಲ್ಲಿಯೂ ಕಿಕ್ಕೇರಿಸಿದ ಐ ಲವ್ ಯೂ!

ನಿಮ್ಮ ಪಾತ್ರ ಮತ್ತು ನಟನೆಗೆ ಪ್ರೇಕ್ಷಕರಿಂದ ಫೀಡ್‌ಬ್ಯಾಕ್‌ ಹೇಗಿದೆ?

ಸಿನಿಮಾ ನೋಡಿ ಬಂದು ನನ್ನೊಂದಿಗೆ ಮಾತನಾಡಿದವರೆಲ್ಲ ಒಂದೊಂದು ಬಗೆಯಲ್ಲಿ ಮೆಚ್ಚುಗೆ ಹೇಳಿದ್ದಾರೆ. ನೀವು ತುಂಬಾ ಯಂಗ್‌ ಆಗಿ, ಕ್ಯೂಟ್‌ ಆಗಿ ಕಾಣಿಸುತ್ತಿದ್ದೀರಾ ಅಂತ ಕೆಲವರು ಹೇಳಿದರೆ, ಇನ್ನು ಕೆಲವರು ನಿಮ್ಮ ಲವಲವಿಕೆಯ ಅಭಿನಯ ನೋಡಿದಾಗ ನಿಮ್ಮದೇ ‘ಎ’ ಮತ್ತು ‘ಉಪೇಂದ್ರ’ ಸಿನಿಮಾಗಳು ನೆನಪಾದವು ಅಂದಿದ್ದಾರೆ. ಸುದೀಪ್‌ ಅವರಿಗೆ ಡಾನ್ಸ್‌ ಇಷ್ಟವಾಗಿದೆ. ಪುನೀತ್‌ ಕೂಡ ಹಾಗೆ ಹೇಳಿದ್ದಾರೆ. ನಮ್ಮ ಅಕ್ಕನ ಮಗ ನಿರಂಜನ್‌, ‘ನನಗಿಂತ ಯಂಗ್‌ ಆಗಿ ಕಾಣಿಸುತ್ತಿದ್ದೀರಿ’ ಅಂತ ಹೇಳಿದ. ಅದೇನೋ, ಹೇಗೋ ನಂಗಂತೂ ಗೊತ್ತಿಲ್ಲ. ಪ್ರೇಕ್ಷಕರ ಪಾಲಿಗೆ ನಾನು ಹೀಗೆಲ್ಲ ಕಾಣಿಸುತ್ತಿದ್ದೇನಾ ಅಂತ ನಾನೇ ಅಚ್ಚರಿ ಪಟ್ಟಿದ್ದೇನೆ. ಇದೆಲ್ಲ ಕ್ರೆಡಿಟ್‌ ಹೋಗಬೇಕಿರುವುದು ನಿರ್ದೇಶಕ ಚಂದ್ರು ಅವರಿಗೆ.

ಕಲೆಕ್ಷನ್‌ ಹೇಗಿದೆ?

ಕಲೆಕ್ಷನ್‌ ವಿಚಾರದಲ್ಲೂ ‘ಐ ಲವ್‌ ಯೂ’ ಚಿತ್ರ ಗೆದ್ದಿದೆ. ನಿರ್ದೇಶಕ ಚಂದ್ರು ನನ್ನ ಬಳಿ ಹೇಳಿರುವ ಮಾಹಿತಿ ಪ್ರಕಾರ ಅದ್ಭುತ ಕಲೆಕ್ಷನ್‌ ಆಗಿದೆಯಂತೆ. ಇದರ ಎಂಟ್ರಿಯೇ ಎಕ್ಸಾ$್ಟರ್ಡಿನರಿ ಆಗಿತ್ತು. ಏಕಕಾಲದಲ್ಲೇ 350ಕ್ಕೂ ಹೆಚ್ಚು ಥಿಯೇಟರ್‌ ಅಂದ್ರೆ, ಕಲೆಕ್ಷನ್‌ ಹೇಗಿರಬಹುದು ಅಂತ ನೀವೇ ಅಂದಾಜಿಸಿಕೊಳ್ಳಿ.

ಪ್ರಿಯಾಂಕಾ ಉಪೇಂದ್ರ ಸಿನಿಮಾ ನೋಡಿದ್ರಾ? ನೋಡಿದ್ದರೆ, ಅವರ ರೆಸ್ಪಾನ್ಸ್‌ ಹೇಗಿತ್ತು?

ಇಲ್ಲ, ಅವರಿನ್ನು ಸಿನಿಮಾ ನೋಡಿಲ್ಲ. ಅವರೀಗ ದೇವಕಿ ಚಿತ್ರದ ಪ್ರಮೋಷನ್‌ ಕಡೆ ಹೆಚ್ಚು ಗಮನ ಹರಿಸಿರುವ ಕಾರಣಕ್ಕೆ ಇನ್ನು ಸಿನಿಮಾ ನೋಡಲು ಆಗಿಲ್ಲ. ಆದರೆ ಒಂದಷ್ಟುಸನ್ನಿವೇಶಗಳನ್ನು ಬಿಡಿ ಬಿಡಿಯಾಗಿ ನೋಡಿದ್ದಾರೆ. ಅವೆಲ್ಲವನ್ನು ನೋಡಿದ ನಂತರ ಮತ್ತು ಪ್ರೇಕ್ಷಕರ ಅಭಿಪ್ರಾಯ ಕೇಳಿ ತುಂಬಾ ಖುಷಿ ಆಗಿದ್ದಾರೆ. ನನ್ನ ಪಾತ್ರದ ಬಗ್ಗೆ ಬಂದ ಕಾಮೆಂಟ್‌ ಮತ್ತು ಫೀಡ್‌ಬ್ಯಾಕ್‌ ಅವರಿಗೆ ಖುಷಿ ಕೊಟ್ಟಿದೆ.

ಚಿತ್ರದ ತೆಲುಗಿನ ವರ್ಷನ್‌ಗೆ ಹೇಗಿದೆ ರೆಸ್ಪಾನ್ಸ್‌?

ಅಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ರಿಲೀಸ್‌ ನಂತರ ನಾನು ಅಲ್ಲಿಗೆ ಹೋಗಿಲ್ಲ. ಆದರೆ ನಿರ್ದೇಶಕ ಚಂದ್ರು ಜತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರು ನೀಡಿದ ಮಾಹಿತಿ ಪ್ರಕಾರ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಿದೆಯಂತೆ. ಈಗ ಮತ್ತೆ ಇನ್ನಷ್ಟುಚಿತ್ರಮಂದಿರಗಳು ಸೇರ್ಪಡೆ ಆಗುತ್ತಿವೆ ಅಂತಿದ್ದಾರೆ.

ಫ್ಯಾಮಿಲಿ ಆಡಿಯನ್ಸ್‌ಗೆ ಸ್ವಲ್ಪ ಮುಜುಗರ ಎನ್ನುವ ಮಾತುಗಳ ಬಗ್ಗೆ ಏನ್‌ ಹೇಳ್ತೀರಾ?

ನಾನು ಆಗಲೇ ಹೇಳಿದೆ, ಸಿನಿಮಾ ನೋಡಿ ಬಂದು ನನಗೆ ಕಾಲ್‌ ಮಾಡಿ ಮಾತನಾಡಿದವರಲ್ಲಿ ಬಹುತೇಕರು ಕುಟುಂಬಸ್ಥರೇ. ಅವರು ಎಲ್ಲಿಯೂ ಸಿನಿಮಾ ನೋಡಿ ಮುಜುಗರ ಎನಿಸಿತು, ಆ ಸನ್ನಿವೇಶ ಬೇಡವಾಗಿತ್ತು ಎನ್ನುವಂತಹ ಯಾವುದೇ ಪಾಯಿಂಟ್‌ ಮಾತನಾಡಿಲ್ಲ. ಅವರಿಗೇ ಸಿನಿಮಾ ಹಿಡಿಸಿದೆ ಅಂದ್ಮೇಲೆ ಮುಜುಗರದ ಮಾತುಗಳ ಬಗ್ಗೆ ನಾನೇನು ಹೇಳಲಿ. ಇದೊಂದು ಯೂತ್‌ಫುಲ್‌ ಸಿನಿಮಾ, ಫುಲ್‌ ಆ್ಯಕ್ಷನ್‌ ಸಿನಿಮಾ, ರೊಮಾಂಟಿಕ್‌ ಸಿನಿಮಾ ಅಂತೆಲ್ಲ ಇದ್ದರೂ ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾ ಅಂತೆನಿಸುವುದು ಕ್ಲೈಮ್ಯಾಕ್ಸ್‌ ನೋಡಿದಾಗ.

ಚಿತ್ರ ವಿಮರ್ಶೆ: ಐ ಲವ್‌ ಯೂ

ಚಿತ್ರದಲ್ಲಿ ನಿಮಗೆ ಇಷ್ಟವಾದ ಸೀನ್‌ ಯಾವುದು?

ಖಂಡಿತವಾಗಿಯೂ ನನಗೆ ಇಷ್ಟವಾಗಿದ್ದು ಕ್ಲೈಮ್ಯಾಕ್ಸ್‌. ಇದನ್ನು ಕತೆ ಕೇಳಿದಾಗಲೇ ಹೇಳಿದ್ದೆ. ಚಿತ್ರ ನೋಡಿದಾಗಲೂ ಹೇಳುತ್ತಿದ್ದೇನೆ. ನಾನೆಷ್ಟೇ ಸಿನಿಮಾ ಮಾಡಿದ್ದರೂ, ಇಂತಹ ಕ್ಲೈಮ್ಯಾಕ್ಸ್‌ ನಿರೀಕ್ಷೆ ಮಾಡಿರಲಿಲ್ಲ. ಕತೆ ಕೇಳಿ ಎದ್ದಾಗ ಒಂದು ಕ್ಷಣ ಅಚ್ಚರಿ ಪಟ್ಟಿದ್ದೆ. ಅದು ಈಗಲೂ ಆಗುತ್ತಿದ್ದೆ. ಕ್ಲೈಮ್ಯಾಕ್ಸ್‌ ಅಲ್ಟಿಮೆಟ್‌. ಸಿನಿಮಾ ಫ್ಯಾಮಿಲಿಗೆ ಇಷ್ಟಆಗೋದೇ ಇಲ್ಲ. ಪ್ರೀತಿ, ಪ್ರೇಮ ಅಂತೆಲ್ಲ ನಾವು ಇರುವ ಸುಖ ಬಿಟ್ಟು , ಇರದಿದ್ದನ್ನು ಹುಡುಕುತ್ತಾ ಹೊರಡುತ್ತೇವೆ. ನಮ್ಮನ್ನು ಪ್ರೀತಿಸುವವರನ್ನು ಬಿಟ್ಟು, ನಾವು ಪ್ರೀತಿಸುವವರನ್ನು ಹುಡುಕುತ್ತಿರುತ್ತೇವೆ. ಆದರೆ ನೆಮ್ಮದಿ ಇರುವುದು ನಮ್ಮನ್ನು ಪ್ರೀತಿಸುವವರ ಬಳಿ ಎನ್ನುವುದು ನಮಗೆ ಅರ್ಥವಾಗುವುದು ಆ ಪ್ರೀತಿಯ ಬೆಲೆ ಗೊತ್ತಾದಾಗಲೇ. ಅಂತಹ ಸಂದೇಶ ಈ ಸಿನಿಮಾದಲ್ಲಿದೆ. ಇದು ಫ್ಯಾಮಿಲಿ ಸಬ್ಜೆಕ್ಟ್ ಅಲ್ವಾ?

ರಚಿತಾ ಪ್ರಚೋದಕ ಪ್ರಶ್ನೆಗೆ ಭಾವುಕರಾಗಿರಬಹುದು!

ರಚಿತಾರಾಮ್‌ ಬೋಲ್ಡ್‌ ಆಗಿ ಕಾಣಿಸಿಕೊಂಡು ತಪ್ಪು ಮಾಡಿಬಿಟ್ಟೆಅಂದಿದ್ದಾರಲ್ಲ?

ಇಲ್ಲ, ಹಾಗೇನು ಇಲ್ಲ. ಅವರು ತಪ್ಪು ಮಾಡಿಬಿಟ್ಟೆಅಂತ ಹೇಳಿಕೊಳ್ಳುವಂತಹ ಯಾವುದೇ ಸನ್ನಿವೇಶ ಅಲ್ಲಿ ಇಲ್ಲ. ಕೆಲವರು ಪ್ರಚೋದಕ ಪ್ರಶ್ನೆ ಕೇಳಿದಾಗ ಅವರು ಭಾವುಕರಾಗಿ ಮಾತನಾಡಿರಬಹುದು ಅಷ್ಟೇ. ಆದರೆ ಅವರ ತಾಯಿಯೇ ಸಿನಿಮಾ ನೋಡಿ ಮೆಚ್ಚುಗೆಯ ಮಾತು ಹೇಳಿದ್ದಾರೆ. ಇಡೀ ಸಿನಿಮಾದ ಕುರಿತು ಅವರು ಆಡಿದ ಮಾತುಗಳನ್ನು ಹೈಲೈಟ್ಸ್‌ ಮಾಡದೆ, ಕೆಲವರು ಅವರು ನಟಿಸಿದ ಹಾಡಿನ ಸನ್ನಿವೇಶಗಳ ಬಗ್ಗೆಯೇ ಮಾತನಾಡುತ್ತಿರುವ ಕಾರಣಕ್ಕೆ ಇದೆಲ್ಲ ಗೊಂದಲ ಆಗಿದೆ. ಅದು ಬಿಟ್ಟರೆ ಅವರಿಗೂ ಇಲ್ಲಿ ಒಳ್ಳೆಯ ಪಾತ್ರವಿದೆ. ಫ್ಯಾಮಿಲಿ ಆಡಿಯನ್ಸ್‌ಗೆ ಅವರು ಇಷ್ಟವಾಗುತ್ತಾರೆ. ನನ್ನ ಬಳಿಯೇ ಅವರ ಪಾತ್ರವನ್ನು ಹಲವರು ಮೆಚ್ಚಿಕೊಂಡು ಮಾತನಾಡಿದ್ದಾರೆ.

click me!