ಅಮ್ಮನ ಬಯೋಗ್ರಫಿ ಬರೆಯಲಿದ್ದಾರಂತೆ ಪುನೀತ್ ರಾಜ್ ಕುಮಾರ್

By Suvarna Web DeskFirst Published Jan 26, 2018, 3:53 PM IST
Highlights

ನಟನೆ, ಚಿತ್ರ ನಿರ್ಮಾಣ, ರಿಯಾಲಿಟಿ ಶೋ ನಿರೂಪಣೆ, ಪಿಆರ್'ಕೆ ಆಡಿಯೋ ಸಂಸ್ಥೆ ಜವಾಬ್ದಾರಿಯ ಬಗ್ಗೆ ಪುನೀತ್ ರಾಜ್ ಕುಮಾರ್ ಹೇಳುವುದೇನು?

ಬೆಂಗಳೂರು (ಜ.26): ನಟನೆ, ಚಿತ್ರ ನಿರ್ಮಾಣ, ರಿಯಾಲಿಟಿ ಶೋ ನಿರೂಪಣೆ, ಪಿಆರ್'ಕೆ ಆಡಿಯೋ ಸಂಸ್ಥೆ ಜವಾಬ್ದಾರಿಯ ಬಗ್ಗೆ ಪುನೀತ್ ರಾಜ್ ಕುಮಾರ್ ಹೇಳುವುದೇನು?

ಹೊಸ ಅಲೆ ಸಿನಿಮಾಗಳೇ ಸ್ಫೂರ್ತಿ  

ಅಮ್ಮ 80 ಸಿನಿಮಾಗಳ ನಿರ್ಮಾಪಕರು. ಅವರ ಸಾಧನೆ ಮುಂದೆ ನಾವೇನು ಅಲ್ಲ. ಅತ್ಯಂತ ಕಷ್ಟದ ದಿನಗಳಲ್ಲಿಯೇ ಅವರು ನಿರ್ಮಾಪಕಿ ಆಗಿ ಬೆಳೆದು ಬಂದಿದ್ದು ನಮಗೆಲ್ಲ ಸ್ಫೂರ್ತಿ, ಆದರ್ಶ ಮತ್ತು ಪ್ರೇರಣೆ. ಹಾಗೆ ನೋಡಿದರೆ ನನಗೆ ಸಿನಿಮಾ ನಿರ್ಮಾಣ ಮಾಡ್ಬೇಕು ಅಂತ ಸೀರಿಯಸ್ ಆಗಿ ಅನಿಸಿದ್ದು ಇತ್ತೀಚಿನ ಮೂರ್ನಾಲ್ಕು ವರ್ಷಗಳ ಈಚೆಗೆ. ಅದಕ್ಕೆ ಕಾರಣವಾಗಿದ್ದು ಹೊಸ ಅಲೆಯ ಸಿನಿಮಾಗಳು.

ಎಷ್ಟೇ ಬ್ಯುಸಿ ಆಗಿದ್ದರೂ ಹೊಸಬರ ಸಿನಿಮಾ ನೋಡುವುದು ನನಗಿರುವ ಅಭ್ಯಾಸ. ‘ರಂಗಿತರಂಗ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಯು ಟರ್ನ್’, ‘ಒಂದು ಮೊಟ್ಟೆಯ ಕತೆ’ ಚಿತ್ರಗಳನ್ನು ಎರಡಕ್ಕಿಂತ ಹೆಚ್ಚು ಬಾರಿ ನೋಡಿದೆ. ಅಷ್ಟು ಸಣ್ಣ ಬಜೆಟ್‌ನಲ್ಲೂ ಒಂದೊಳ್ಳೆ ಕತೆ, ನವಿರಾದ ನಿರೂಪಣೆ, ಅಚ್ಚುಕಟ್ಟಾದ ನಿರ್ಮಾಣ, ಮನಸ್ಸಿಗೆ ಮುದ ನೀಡುವ ಸಂಭಾಷಣೆ ಮತ್ತು ಸಂಗೀತದೊಂದಿಗೆ ಸ್ಟಾರ್‌ಗಳೇ ಇಲ್ಲದ ಹೊಸ ಅಲೆಯ ಸಿನಿಮಾಗಳು ಪ್ರೇಕ್ಷಕರನ್ನು ಮುಟ್ಟಲು ಸಾಧ್ಯವಾಗಿದ್ದು ನನಗೊಂದು ಪ್ರೇರಣೆ ನೀಡಿತು. ಆ ರೀತಿಯ ಸಿನಿಮಾಗಳೇ ಯಾಕೆ ಟ್ರೆಂಡ್ ಆಗಬಾರದು  ಅಂತೆಲ್ಲ ಯೋಚಿಸುತ್ತಿದ್ದಾಗ ಶುರುವಾಗಿದ್ದು ಪಿಆರ್‌ಕೆ ಪ್ರೊಡಕ್ಷನ್ ಹೌಸ್. ಆಡಿಯೋ ಕಂಪನಿ ದುಡ್ಡು ಮಾಡೋದಕ್ಕಲ್ಲ. ಚಿತ್ರ ನಿರ್ಮಾಣಕ್ಕಾಗಿ ಪಿಆರ್‌ಕೆ ಪ್ರೊಡಕ್ಷನ್ ಶುರುವಾದ ಹಾಗೆಯೇ ಪಿಆರ್‌ಕೆ ಆಡಿಯೋ ಕಂಪನಿ ಶುರುವಾಗಿದ್ದು. ಅಚಾನಕ್ ಅಂತಾರಲ್ಲ ಹಾಗೆ ಶುರು ಮಾಡಿದೆವು. ಅದಕ್ಕೆ ಪ್ರೇರಣೆ ಅಪ್ಪಾಜಿ!

ಅವರು ಹಾಡುತ್ತಿದ್ದ ದಿನಗಳಲ್ಲಿ ನನಗೊಂದು ಆಸೆಯಿತ್ತು. ಹಾಡುಗಳು ಜನರ ಮನೆ ಮನೆ ತಲುಪಬೇಕು ಅಂತ. ಯಾಕಂದ್ರೆ ಆ ಹೊತ್ತಿಗೆ ಅದು ಕಷ್ಟದ ಸಂದರ್ಭ. ಆಗ ಆಡಿಯೋ ಸೀಡಿ ಅಂದ್ರೆ ಟೇಪ್ ರೆಕಾರ್ಡರ್ ಸಿಸ್ಟಮ್. ಅದು ಮಾರುಕಟ್ಟೆಗೆ ಬಂದು ಸಂಗೀತ ಪ್ರಿಯರಿಗೆ ಸಿಗಬೇಕು, ಅವರು ಅದನ್ನು ಕೇಳಬೇಕು ಅನ್ನೋ ಹೊತ್ತಲ್ಲಿ ಒಂದಷ್ಟು ದಿನಗಳೇ ಕಳೆದು ಹೋಗುತ್ತಿದ್ದವು. ಇವತ್ತು ಹಾಗಿಲ್ಲ, ಎಲ್ಲವೂ ಡಿಜಿಟಲ್. ತುಂಬಾ ಫಾಸ್ಟ್ ಆಗಿದೆ ಆಡಿಯೋ ಜಗತ್ತು. ಈ ಹೊತ್ತಲ್ಲಿ ಆಡಿಯೋ ಹಕ್ಕು ಪಡೆಯುವುದಂದ್ರೆ ಲಾಭಕ್ಕಿಂತ ನಷ್ಟ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಷ್ಟಾಗಿಯೂ ನಾವು ಆಡಿಯೋ ಕಂಪನಿ ಶುರು ಮಾಡಿದ್ದು ನಮ್ಮದೇ ಸಿನಿಮಾಗಳ ಆಡಿಯೋ ಸೀಡಿಗಳನ್ನು ಹೊರ ತರೋಣ  ಅಂತ ಹಾಗೆ ಶುರು ಮಾಡಬೇಕು ಅಂದಾಗ ನಿರ್ಮಾಪಕ ಎಂ.ಎನ್ ಕುಮಾರ್ ‘ಅಂಜನಿ ಪುತ್ರ’ ಚಿತ್ರದ ಆಡಿಯೋ ಹಕ್ಕು  ಕೊಟ್ಟರು. ಅದೇ ಆಡಿಯೋ ಕಂಪನಿಗೆ ಮೊದಲ ವೇದಿಕೆ ಆಯಿತು. ಆನಂತರ ‘ಟಗರು’ ಆಡಿಯೋ ಹೊರ ಬಂತು. ಮುಂದೆ ‘ಕವಲುದಾರಿ’ ಹಾಗೂ ‘ಮಾಯಾ ಬಜಾರ್’ ನಮ್ಮದೇ ಸಂಸ್ಥೆಯಡಿ ಆಡಿಯೋ ಹೊರ ಬರುತ್ತೆ.

ಇದೆಲ್ಲ  ಒಂದು ದಾಖಲೆ ಇರಲಿ ಎನ್ನುವ ಕಾರಣಕ್ಕೆ ಹೊರತು ಹಣ  ಮಾಡುವುದಕ್ಕೆ ಅಲ್ಲ. ಇಲ್ಲಿ ನನಗೆ ಕೆಲಸ ಕಡಿಮೆ ನಿರ್ಮಾಣ ಮತ್ತು ಆಡಿಯೋ ಕಂಪನಿ ಅಂತ ಬಂದಾಗ ಅಶ್ವಿನಿ ಅವರೇ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಕುಮಾರ್ ಅಂತ ಮತ್ತೊಬ್ಬರು ಇದ್ದಾರೆ. ಅವರಿಗೆ ಸ್ವಾಮಿ ಕೂಡ ಸಾಥ್ ನೀಡುತ್ತಾರೆ. ‘ಕವಲುದಾರಿ’ಗೆ ಅವರೇ ನಿರ್ವಹಣೆ. ಈಗ ‘ಮಾಯಾ ಬಜಾರ್’ಗೆ ಗೋವಿಂದಣ್ಣ ಇದ್ದಾರೆ. ಅವರೇ ಇವೆಲ್ಲವನ್ನು ನೋಡಿಕೊಂಡು ಬರುತ್ತಾರೆ. ಒಂದು ಕಾಲದಲ್ಲಿ ಅಮ್ಮ ಒಬ್ಬರೇ ಏಕಕಾಲದಲ್ಲಿ ಮೂರು ಸಿನಿಮಾಗಳ ನಿರ್ಮಾಣದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದು ದನ್ನು ನಾನು ಕಂಡಿದ್ದೇನೆ. ಒಂದು ಕಡೆ ಅಪ್ಪಾಜಿ ಸಿನಿಮಾ, ಮತ್ತೊಂದು ಕಡೆ ಶಿವಣ್ಣನ ಸಿನಿಮಾ, ಮಗದೊಂದು ಕಡೆ ರಾಘಣ್ಣ ಸಿನಿಮಾ. ಹೀಗೆ ಮೂರು ಸಿನಿಮಾಗಳ ನಿರ್ಮಾಣದ ಜವಾಬ್ದಾರಿಗೆ ಅವರು ಓಡಾಡುತ್ತಿದ್ದ ರೀತಿ ನೆನಪಿಸಿಕೊಂಡರೆ ಅವರು ದೊಡ್ಡ ಶಕ್ತಿಯಂತೆ ಕಾಣುತ್ತಾರೆ.

ಅಮ್ಮನ ಬಯೋಗ್ರಫಿ ಬರೀಬೇಕು...

ಅಮ್ಮ ನಮಗೆಲ್ಲ ಶಕ್ತಿ ದೇವತೆ. ಅವರು ನಿರ್ಮಾಪಕಿಯಾಗಿ ಏನೆಲ್ಲ ಅನುಭವ ಗಳಿಸಿದರು, ಅ ಸ್ಥಾನಕ್ಕೆ ಹೇಗೆ ಬೆಳೆದು ಬಂದರು, ಏನೆಲ್ಲ ಸವಾಲು ಎದುರಿಸಿದರು ಅದೆಲ್ಲ ಒಂದು ಇತಿಹಾಸ. ನಾನು ಕಂಡಂತೆ ಅವರ ಬದುಕಿನ ಪ್ರಮುಖ ಘಟ್ಟಗಳನ್ನು ದಾಖಲು ಮಾಡಬೇಕು. ಅದೊಂದು ಬಯೋಗ್ರಫಿ ರೂಪದಲ್ಲಿ ಇರಬೇಕು ಅಂತ ಯೋಚಿಸುತ್ತಿದ್ದೇನೆ. ಆ ಪುಸ್ತಕದಲ್ಲಿ ಏನೆಲ್ಲ ಬರಬೇಕು ಅನ್ನೋದು ತಲೆಯಲ್ಲಿದೆ. ಅದು ಬರಹ ರೂಪಕ್ಕೆ ಬರಬೇಕಿದೆ. ಅದಕ್ಕೊಂದಷ್ಟು ಸಮಯ ಬೇಕು. ಇಷ್ಟರಲ್ಲಿಯೇ ಅದಕ್ಕೊಂದು ಸಮಯ ನಿಗದಿ ಮಾಡಿಕೊಂಡು ಬರವಣೆಗೆ ಶುರು ಮಾಡುವ ಯೋಚನೆ ಇದೆ. ಇನ್ನೊಂದು ತಿಂಗಳಲ್ಲಿ ವಜ್ರೇಶ್ವರಿ ಕಟ್ಟಡ ಪೂರ್ಣ ನಮ್ಮ ಅಷ್ಟು ಸಿನಿಮಾ ಬದುಕಿಗೆ ಕಾರಣವಾಗಿದ್ದು ವಜ್ರೇಶ್ವರಿ ಸಂಸ್ಥೆ. ಈ ಸಂಸ್ಥೆಯ ಕಟ್ಟಡ ನಿರ್ಮಾಣ ಒಂದು ಹಂತಕ್ಕೆ ಬಂದಿದೆ. ಇನ್ನೊಂದು ತಿಂಗಳಲ್ಲಿ ಅದು ಪೂರ್ಣಗೊಳ್ಳುತ್ತೆ.

ಅಮ್ಮ ಹೋಗಿ ವರ್ಷ ಆಗಿಲ್ಲ. ಹಾಗಾಗಿ ಅದು ಪೂರ್ಣಗೊಂಡರೂ ಪೂಜೆ ಮಾಡುವಂತಿಲ್ಲ. ಅದು ಮೂರು ಅಂತಸ್ತಿನ ಕಟ್ಟಡ. ಅದರ ಒಂದು ಫ್ಲೋರ್‌ನಲ್ಲಿ ನಮ್ಮೆಲ್ಲ ಸಂಸ್ಥೆಯ ಚಟುವಟಿಕೆಗಳು ಬರಲಿವೆ. ಅಲ್ಲಿಯೇ ಪಿಆರ್‌'ಕೆ ಪ್ರೊಡಕ್ಷನ್ ಹೌಸ್, ಪಿಆರ್‌ಕೆ ಆಡಿಯೋ ಕಂಪನಿ ಇರಲಿದೆ. ಮುಖ್ಯವಾಗಿ ವಜ್ರೇಶ್ವರಿ ಸಂಸ್ಥೆ ಅಲ್ಲಿಯೇ ಇರಲಿದೆ. ಉಳಿದ ಫ್ಲೋರ್ ಏನೇನು ಇರಬೇಕು ಅನ್ನೋದು ಇನ್ನು ಫೈನಲ್ ಆಗಿಲ್ಲ.

 

click me!