Om ನನ್ನ ನೆಚ್ಚಿನ ಸಿನಿಮಾ: ಉಪ್ಪಿ ನಿರ್ದೇಶನ, ಶಿವಣ್ಣ ಅಭಿನಯವನ್ನು ಕೊಂಡಾಡಿದ ಪೃಥ್ವಿರಾಜ್

Published : Jul 16, 2026, 09:24 PM IST
Prithviraj Sukumaran

ಸಾರಾಂಶ

Om Kannada Movie: ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರಾಗಿರುವ ಖ್ಯಾತ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಮತ್ತೊಮ್ಮೆ ಕನ್ನಡ ಸಿನಿಮಾಗಳ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಮಲಯಾಳಂ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಮತ್ತೊಮ್ಮೆ ಕನ್ನಡ ಸಿನಿಮಾಗಳ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತಮ್ಮ ಮುಂಬರುವ 'ಖಲೀಫಾ' ಚಿತ್ರದ ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ, ಕನ್ನಡದ ಸಾರ್ವಕಾಲಿಕ ನೆಚ್ಚಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಅವರು ಯಾವುದೇ ಯೋಚನೆಯಿಲ್ಲದೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್‌ನ 'ಓಂ' ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರಾಗಿರುವ ಪೃಥ್ವಿರಾಜ್ ಸುಕುಮಾರನ್, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ನಟನಾಗಿ ಮತ್ತು ನಿರ್ದೇಶಕರಾಗಿ ವಿಶಿಷ್ಟ ಗುರುತನ್ನು ಪಡೆದಿದ್ದಾರೆ. ಸಿನಿಮಾಗಳ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಅವರು, ವಿವಿಧ ಭಾರತೀಯ ಭಾಷೆಗಳ ತಮ್ಮ ನೆಚ್ಚಿನ ಚಿತ್ರಗಳ ಬಗ್ಗೆ ಮಾತನಾಡುವ ವೇಳೆ ಕನ್ನಡದ 'ಓಂ' ಚಿತ್ರದ ಹೆಸರನ್ನು ಹೆಮ್ಮೆಯಿಂದ ಉಲ್ಲೇಖಿಸಿದರು.

'ಓಂ' ಚಿತ್ರದ ಕುರಿತು ಮಾತನಾಡಿದ ಪೃಥ್ವಿರಾಜ್, "ನನ್ನ ಸಾರ್ವಕಾಲಿಕ ನೆಚ್ಚಿನ ಕನ್ನಡ ಸಿನಿಮಾಗಳಲ್ಲಿ 'ಓಂ' ಕೂಡ ಒಂದು. ಉಪೇಂದ್ರ ಅವರು ಕಥೆ ಬರೆದು ನಿರ್ದೇಶಿಸಿರುವ ರೀತಿ ಅದ್ಭುತವಾಗಿದೆ. ಜೊತೆಗೆ ಒನ್ ಅಂಡ್ ಓನ್ಲಿ ಶಿವರಾಜ್‌ಕುಮಾರ್ ಅವರ ಅಭಿನಯ ಈ ಸಿನಿಮಾವನ್ನು ನನ್ನ ಆಲ್‌ಟೈಮ್ ಫೇವರಿಟ್ ಚಿತ್ರಗಳಲ್ಲಿ ಒಂದಾಗಿಸಿದೆ" ಎಂದು ಪ್ರಶಂಸಿಸಿದರು. ಸಂದರ್ಶನದಲ್ಲಿ ಇತರ ಭಾಷೆಗಳ ತಮ್ಮ ನೆಚ್ಚಿನ ಸಿನಿಮಾಗಳನ್ನೂ ಪೃಥ್ವಿರಾಜ್ ಹಂಚಿಕೊಂಡರು.

ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಅಭಿನಯದ 'ದೀವಾರ್', ತೆಲುಗಿನಲ್ಲಿ 'ಬಾಹುಬಲಿ', ತಮಿಳಿನಲ್ಲಿ ಕಮಲ್ ಹಾಸನ್ ಹಾಗೂ ಶಿವಾಜಿ ಗಣೇಶನ್ ಅಭಿನಯದ 'ತೇವರ್ ಮಗನ್', ಮಲಯಾಳಂನಲ್ಲಿ ಮಮ್ಮುಟ್ಟಿ ನಟನೆಯ 'ಬೂತಕ್ಕಣ್ಣಾಡಿ' ತಮ್ಮ ಮೆಚ್ಚಿನ ಚಿತ್ರಗಳೆಂದು ತಿಳಿಸಿದರು. ಇಲ್ಲಿಯವರೆಗೆ ಪೃಥ್ವಿರಾಜ್ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸದಿದ್ದರೂ, ಕನ್ನಡ ಚಿತ್ರರಂಗದೊಂದಿಗೆ ಅವರ ನಂಟು ವಿಶೇಷವಾಗಿದೆ. ಯಶ್ ಅಭಿನಯದ 'ಕೆಜಿಎಫ್' ಚಿತ್ರವನ್ನು ಕೇರಳದಲ್ಲಿ ವಿತರಣೆ ಮಾಡಿದ್ದ ಅವರು, ಹಲವು ಬಾರಿ ಕನ್ನಡ ನಿರ್ದೇಶಕರು ಹಾಗೂ ಇಲ್ಲಿನ ಕಥೆ ಹೇಳುವ ಶೈಲಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಆಗಸ್ಟ್ 20ರಂದು ತೆರೆಗೆ

ಇನ್ನು ವೃತ್ತಿಜೀವನದ ವಿಚಾರಕ್ಕೆ ಬಂದರೆ, ಪೃಥ್ವಿರಾಜ್ ಅಭಿನಯದ ನಿರ್ದೇಶಕ ವೈಶಾಖ್ ಅವರ ಆಕ್ಷನ್ ಥ್ರಿಲ್ಲರ್ 'ಖಲೀಫಾ' ಸಿನಿಮಾ ಆಗಸ್ಟ್ 20ರಂದು ತೆರೆಗೆ ಬರಲು ಸಜ್ಜಾಗಿದೆ. ಇದರ ಜೊತೆಗೆ, ಎಸ್.ಎಸ್. ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ಜಾಗತಿಕ ಸಾಹಸಮಯ ಚಿತ್ರ 'ವಾರಣಾಸಿ'ಯಲ್ಲೂ ಅವರು ಪ್ರಮುಖ ಪ್ರತಿನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

1995ರಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆದ 'ಓಂ' ಸಿನಿಮಾ ಬಿಡುಗಡೆಯಾಗಿ ಸುಮಾರು ಮೂರು ದಶಕಗಳಾದರೂ ಅದರ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ದೇಶದ ವಿವಿಧ ಚಿತ್ರರಂಗಗಳ ನಟರು, ನಿರ್ದೇಶಕರು ಇಂದಿಗೂ ಆ ಚಿತ್ರವನ್ನು ಮೆಚ್ಚಿಕೊಂಡು ಮಾತನಾಡುತ್ತಿರುವುದು ಉಪೇಂದ್ರ ಅವರ ನಿರ್ದೇಶನ ಹಾಗೂ ಶಿವರಾಜ್‌ಕುಮಾರ್ ಅವರ ಅಭಿನಯದ ಶಾಶ್ವತ ಪ್ರಭಾವಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

150 ಅಡಿಯಿಂದ ಜಿಗಿತ, 30 ನಿಮಿಷ ನೇತಾಟ: 'ರಾವಣ್' ಶೂಟಿಂಗ್‌ನ ಭಯಾನಕ ಸತ್ಯ ಬಿಚ್ಚಿಟ್ಟ ಐಶ್ವರ್ಯಾ ರೈ ಡ್ಯೂಪ್!
15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಸ್ಟಾರ್ ಜೋಡಿ: ಮಗಳಿಗಾಗಿ ಒಂದಾಗಿಯೇ ಇರ್ತಾರಂತೆ!