
ಬೆಂಗಳೂರು (ಮೇ. 01): ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಇನ್ನು ‘ಚಾಲಾಕಿ ಸ್ಟಾರ್’. ಹಾಗಂತ ಅವರೇ ಘೋಷಿಸಿಕೊಂಡಿದ್ದಾರೆ. ಇಷ್ಟಕ್ಕೂ ಪ್ರಥಮ್ ತಮಗೆ ತಾವೇ ಚಾಲಕಿ ಸ್ಟಾರ್ ಅಂತ ಬಿರುದು ಕೊಟ್ಟುಕೊಂಡು ಕುಣಿದಾಡಿದ್ದಾದರೂ ಯಾರ ಮುಂದೆ ಗೊತ್ತಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದುರು.
‘ಎಂಎಲ್‌ಎ’ ಚಿತ್ರದ ಆಡಿಯೋ ಸೀಡಿ ಬಿಡುಗಡೆ ವೇಳೆ. ಇದು ಪ್ರಥಮ್ ನಾಯಕನಾಗಿ ಅಭಿನಯಿಸಿರುವ ಎರಡನೇ ಚಿತ್ರ. ಆ ಕಾರ್ಯ ಕ್ರಮಕ್ಕೆ ನಟ ದರ್ಶನ್ ಮುಖ್ಯ ಅತಿಥಿ. ಸ್ವಲ್ಪ ತಡವಾದರೂ ಅಲ್ಲಿಗೆ ಭರ್ಜರಿಯಾಗಿಯೇ ಎಂಟ್ರಿಕೊಟ್ಟರು ದರ್ಶನ್. ನಿಗದಿತ ಕಾರ್ಯಕ್ರಮದಂತೆ ಬಂದವರೇ, ವೇದಿಕೆ ಏರಿ ಆಡಿಯೋ ಬಿಡುಗಡೆಗೊಳಿಸಿದರು. ಅಲ್ಲಿದ್ದವರೆಲ್ಲರೂ ದರ್ಶನ್ ಅಭಿಮಾನಿಗಳು. ವೇದಿಕೆಯೇ ಸಭಾಂಗಣದಂತಾಯಿತು. ಸೆಲ್ಫೀ ಹಾವಳಿಗೆ ಸಿಲುಕಿದ ದರ್ಶನ್ ಇನ್ನೇನು ಅಲ್ಲಿಂದ ಹೊರಡಬೇಕು ಎನ್ನುವಾಗ ಅವರ ಕೈಗೆ ಮೈಕ್ ಕೊಟ್ಟರು ಪ್ರಥಮ್. ಬೇಡ ಎನ್ನಲಾಗದೆ ಎಂದೆರೆಡು ಮಾತನಾಡಿದರು ದರ್ಶನ್.
ತಕ್ಷಣ ಆ ಮೈಕ್ ಪ್ರಥಮ್ ಕೈಗೆ ಬಂತು. ‘ನಮ್ಮ ಆಹ್ವಾನಕ್ಕೆ ಇಲ್ಲ ಎನ್ನದೇ ಇಲ್ಲಿಗೆ ಬಂದು ಆಡಿಯೋ ಸೀಡಿ ಬಿಡುಗಡೆ ಮಾಡಿದ ದರ್ಶನ್ ಅವರಿಗೆ ಅಭಿನಂದನೆ. ನಾನು ಅವರ ಪಕ್ಕಾ ಅಭಿಮಾನಿ. ಅವರು ಚಾಲೆಂಜಿಂಗ್ ಸ್ಟಾರ್, ನಾನು ಚಾಲಾಕಿ ಸ್ಟಾರ್. ಅವರ ಬೆಂಬಲ ನನಗಿದೆ ಎನ್ನುವುದೇ ಖುಷಿ ’ಎಂದು ಹೇಳುವ ಮೂಲಕ ಭರ್ಜರಿ ಬಿಲ್ಡಪ್ ಕೊಟ್ಟರು ಪ್ರಥಮ್. ಅಷ್ಟೇ ಆಗಿದ್ದರೆ ಹೇಗೋ ಸಹಿಸಿಕೊಳ್ಳಬಹುದಾಗಿತ್ತೋ ಏನೋ. ಪ್ರಥಮ್ ಅಲ್ಲಿ ನಟಿ ಸ್ಪರ್ಶ ರೇಖಾ ಹೆಸರು ಪ್ರಸ್ತಾಪಿಸಿದರು.
‘ಸ್ಪರ್ಶ ರೇಖಾ ಅವರು ಹತ್ತು ವರ್ಷ ಲೇಟಾಗಿ ಹುಟ್ಟಬೇಕಿತ್ತು. ಆಗ ನನ್ನ ಜತೆಗೆ ನಾಯಕಿ ಅವರು ನಾಯಕಿ ಆಗಿ ಅಭಿನಯಿಸುವ ಸೌಭಾಗ್ಯ ಸಿಗುತ್ತಿತ್ತು’ ಎಂದು ಕುಹಕ ನಗೆ ಬೀರಿದರು. ಇನ್ನು ಆಡಿಯೋ ಬಿಡುಗಡೆಯಲ್ಲಿ ಪ್ರಥಮ್ ಅವರದ್ದೇ ಮಾತು. ಮೈಕ್ ಹಿಡಿದು ವೇದಿಕೆಯಲ್ಲಿ ನಿಂತಾಗ, ಆನಂತರ ವೇದಿಕೆ ಮುಂಭಾಗ ಬಂದು ಕುಳಿತಾಗ ಪ್ರಥಮ್ ಅವರದ್ದೇ ಕೂಗು. ಕನಿಷ್ಠ ಕಾರ್ಯಕ್ರಮದ ಸೌಜನ್ಯವೂ ಗೊತ್ತಿಲ್ಲದ ಹಾಗೆ ಪ್ರಥಮ್ ನಡೆದುಕೊಂಡಿದ್ದು ಅಲ್ಲಿದ್ದವರಿಗೆ ಕಿರಿಕಿರಿ ತರಿಸಿದ್ದು ಸುಳ್ಳಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.