
'ಜನ ನಾಯಗನ್' ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎಂಬ ವರದಿಗಳು ಬಂದ ಕೆಲವೇ ಗಂಟೆಗಳಲ್ಲಿ, ಚಿತ್ರದ ನಾಯಕಿ ಪೂಜಾ ಹೆಗ್ಡೆ ಪೈರಸಿ ವಿರುದ್ಧ ಧ್ವನಿ ಎತ್ತಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದ ಹಲವು ತಾರೆಯರ ಜೊತೆ ಸೇರಿರುವ ಪೂಜಾ, ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಧಿಕೃತ ಬಿಡುಗಡೆಗಾಗಿ ಕಾಯುವಂತೆ ಮತ್ತು ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
'ಮನಸ್ಸಿಗೆ ತುಂಬಾ ನೋವಾಗಿದೆ' ಎಂದ ಪೂಜಾ ಹೆಗ್ಡೆ
ಶನಿವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೂಜಾ ಹೆಗ್ಡೆ, ಒಂದು ಸಿನಿಮಾ ಮಾಡಲು ಎಷ್ಟು ಶ್ರಮ, ತ್ಯಾಗ ಮತ್ತು ಕಷ್ಟವಿರುತ್ತದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಲೀಕ್ ಆಗಿರುವುದು ಇಡೀ ತಂಡಕ್ಕೆ "ಮನಸ್ಸಿಗೆ ನೋವುಂಟು ಮಾಡಿದೆ" ಎಂದು ಅವರು ಬರೆದುಕೊಂಡಿದ್ದಾರೆ. "ನನ್ನ ಪ್ರೀತಿಯ ಪ್ರೇಕ್ಷಕರೇ, ಒಂದು ಸಿನಿಮಾ ಅಂದ್ರೆ ಅದು ಅದೆಷ್ಟೋ ಗಂಟೆಗಳ ಶ್ರಮ, ಸೃಜನಾತ್ಮಕ ಸವಾಲುಗಳು, ವೈಯಕ್ತಿಕ ತ್ಯಾಗಗಳು ಮತ್ತು ನಿಮಗೆ ಅತ್ಯುತ್ತಮ ಅನುಭವ ನೀಡಬೇಕೆಂದು ಪ್ರತಿದಿನ ಕೆಲಸ ಮಾಡಿದ ಒಂದು ತಂಡದ ಫಲ.
ನಮ್ಮ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿರೋದನ್ನು ನೋಡಿದ್ರೆ ತುಂಬಾ ಬೇಜಾರಾಗುತ್ತೆ. ಇದು ನನಗಷ್ಟೇ ಅಲ್ಲ, ಇದಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಅಷ್ಟೇ ನೋವು ಕೊಡುತ್ತೆ," ಎಂದು ಅವರು ಹೇಳಿದ್ದಾರೆ. ಪೈರಸಿಯಿಂದಾಗಿ ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞನಿಗೆ ಸಿಗಬೇಕಾದ ಗೌರವ ಸಿಗುವುದಿಲ್ಲ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ. ಜೊತೆಗೆ, ನಟ ವಿಜಯ್ ಅವರ ಕೊನೆಯ ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ಸರಿಯಾದ ರೀತಿಯಲ್ಲಿ ಸಂಭ್ರಮಿಸೋಣ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. "ಸಿನಿಮಾವನ್ನು ಅಕ್ರಮವಾಗಿ ಹಂಚಿಕೊಳ್ಳುವುದನ್ನು ನೋಡಲು ಕಷ್ಟವಾಗುತ್ತದೆ.
ಇದು ಕೇವಲ ಕಲೆಕ್ಷನ್ ವಿಚಾರವಲ್ಲ, ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞನಿಗೆ ಸಿಗಬೇಕಾದ ಗೌರವವನ್ನು ಕಸಿದುಕೊಳ್ಳುತ್ತದೆ. ಅಷ್ಟಕ್ಕೂ, ವಿಜಯ್ ಸರ್ ಅವರ ಕೊನೆಯ ಸಿನಿಮಾವನ್ನು ನಾವೆಲ್ಲರೂ ಒಟ್ಟಾಗಿ ದೊಡ್ಡ ಪರದೆಯ ಮೇಲೆ ಸರಿಯಾದ ರೀತಿಯಲ್ಲಿ ಸಂಭ್ರಮಿಸಬೇಕಲ್ಲವೇ? ಹಾಗಾಗಿ, ಸರಿಯಾದ ದಾರಿಯಲ್ಲೇ ನೋಡೋಣ. ಸ್ವಲ್ಪ ಕಾಯೋಣ. ಸಿನಿಮಾ ಸರಿಯಾದ ಸಮಯಕ್ಕೆ ಬಿಡುಗಡೆಯಾಗಲಿದೆ. ಪೈರಸಿಯನ್ನು ಪ್ರೋತ್ಸಾಹಿಸುವುದು ಬೇಡ. ಆಗ ಮಾತ್ರ ಸಿನಿಮಾ ಮತ್ತು ಕಲೆ ಉಳಿಯಲು ಸಾಧ್ಯ. ಪ್ರೀತಿಯೊಂದಿಗೆ, ಕಲೆ. ಕಲಾವಿದರು. ತಂತ್ರಜ್ಞರು," ಎಂದು ಪೂಜಾ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ, ಚಿತ್ರದ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ ಕೂಡ ಒಂದು ಹೇಳಿಕೆ ಬಿಡುಗಡೆ ಮಾಡಿತ್ತು. ಲೀಕ್ ಆದ ದೃಶ್ಯಗಳನ್ನು ಹಂಚಿಕೊಳ್ಳಬೇಡಿ ಅಥವಾ ನೋಡಬೇಡಿ ಎಂದು ಜನರಲ್ಲಿ ಮನವಿ ಮಾಡಿತ್ತು. ಚಿತ್ರದ ಕೆಲವು ಭಾಗಗಳು, ಮತ್ತು ಕೆಲವು ಕಡೆಗಳಲ್ಲಿ ಬಹುತೇಕ ಪೂರ್ತಿ ಸಿನಿಮಾವನ್ನೇ ಸೋಶಿಯಲ್ ಮೀಡಿಯಾ ಮತ್ತು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಕ್ರಮವಾಗಿ ಹರಿಬಿಡಲಾಗಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿತ್ತು.
ಇದೊಂದು ಗಂಭೀರ ಡಿಜಿಟಲ್ ಪೈರಸಿ ಪ್ರಕರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಂಡ ಹೇಳಿದೆ. ರಾಜಕೀಯಕ್ಕೆ ಪೂರ್ಣವಾಗಿ ಧುಮುಕುವ ಮುನ್ನ ವಿಜಯ್ ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿರುವ 'ಜನ ನಾಯಗನ್', ಸೆನ್ಸಾರ್ ಸಮಸ್ಯೆಗಳಿಂದಾಗಿ ಈಗಾಗಲೇ ಬಿಡುಗಡೆಯಲ್ಲಿ ವಿಳಂಬ ಎದುರಿಸಿದೆ. ಈ ಚಿತ್ರವು ಈ ಹಿಂದೆ ಜನವರಿ 9 ರಂದು ಪೊಂಗಲ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗುವ ನಿರೀಕ್ಷೆಯಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.