'ಪಿಂಕ್' ಸಿನಿಮಾ ವಿಮರ್ಶೆ: ಬದುಕಿನ ಬಣ್ಣಗಳ ಪಿಂಕ್ ಕಲಾಕೃತಿ

By Internet DeskFirst Published Sep 19, 2016, 5:43 AM IST
Highlights

ಲಾಯರ್ ಪಾತ್ರದಲ್ಲಿ ಅಮಿತಾಭ್, ಸಂತ್ರಸ್ತೆ ಪಾತ್ರದಲ್ಲಿ ತಾಪ್ಸಿ ನಟನೆ ನೋಡುಗರನ್ನ ಭಾವುಕರನ್ನಾಗಿಸಿದರೆ, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಪಿಯೂಶ್ ಮಿಶ್ರಾ ಕೆಂಡದಂಥ ಕೋಪ ತರಿಸುತ್ತಾರೆ. ಆಮಟ್ಟಿಗೆ ಎಲ್ಲರ ನಟನೆ ಅದ್ಭುತ. ತನ್ನ ಮನೆ ಹೆಣ್ಣುಮಕ್ಕಳು ಸಂಪ್ರದಾಯಸ್ಥರು. ಉಳಿದ ಹೆಣ್ಮಕ್ಕಳೆಲ್ಲಾ ಹೆಂಗೆಂಗೋ ಎಂದು ಭಾವಿಸುವ ಪುರುಷ ಪ್ರಧಾನ ಸಮಾಜ ಮತ್ತು ಸಮಾಜದ ಈ ಭಾವನೆಯ ಕೇಂದ್ರ ಬಿಂದುವಾಗಿರುವ ಮಹಿಳೆಯರು ತಪ್ಪದೇ ಒಮ್ಮೆ ಪಿಂಕ್ ನೋಡಲೇಬೇಕು.

ವಿಮರ್ಶಕರು: ಬಸವರಾಜ್ ಕೆ.ಜಿ., ಕನ್ನಡಪ್ರಭ

ಚಿತ್ರ: ಪಿಂಕ್
ಭಾಷೆ: ಹಿಂದಿ
ತಾರಾಗಣ: ಅಮಿತಾಭ್ ಬಚ್ಚನ್, ತಾಪ್ಸಿ ಪನ್ನು, ಕೀರ್ತಿ ಕುಲಹರಿ, ಪ್ರಿಯಾಷ್ ಮಿಶ್ರ, ಧೃತಿಮನ್ ಚಟರ್ಜಿ
ನಿರ್ದೇಶನ: ಅನಿರುದ್ಧ ರಾಯ್ ಚೌಧರಿ
ನಿರ್ಮಾಣ: ರಶ್ಮಿ ಶರ್ಮಾ
ಸಂಗೀತ: ಶಂತನು ಮೊಯಿತ್ರಾ
ಛಾಯಾಗ್ರಹಣ: ಅಭಿಕ್ ಮುಖ್ಯೋಪ್ಯಾಧ್ಯಾಯ

ವಿಷಯ ಹೊಸತೇನಲ್ಲ. ನಿತ್ಯ ನಮ್ಮ ನಡುವೆ ನಡೆಯುವಂಥದ್ದೇ. ಆದರೆ ಅರ್ಥೈಸುವ ಬಗೆ, ವಿವರಣೆಯ ಆಳ, ಅಗಲ ಸ್ವಲ್ಪ ವಿಶಾಲ. ಪರಿಣಾಮಕಾರಿ. ಈ ಪೀಳಿಗೆಯ ಜೀನ್ಸ್, ಶಾರ್ಟ್ಸ್ ಧರಿಸುವ ಮಾಡರ್ನ್ ಹುಡುಗೀರ ಬಗೆಗಿನ ಸಮಾಜದ ದೃಷ್ಟಿಕೋನ ಬಿಂಬಿಸುವ ಪ್ರಯತ್ನ ಸಾಕಷ್ಟು ಸಿನಿಮಾಗಳಲ್ಲಿ ನಡೆದಿದೆ. ಅದೇ ಯತ್ನವನ್ನ ‘ಪಿಂಕ್’ ಮಾಡಿದೆ. ಸಿನಿಮಾ ಆರಂಭವಾಗುವುದು ಒಂದು ರಾಕ್ ಕಾನ್ಸರ್ಟ್ ಮೂಲಕ. ಆದರೆ ತೆರೆ ಮೇಲೆ ಏನೂ ಇರದು. ಕೇಳುವುದು ಕೇವಲ ಧ್ವನಿಯಷ್ಟೇ. ಅಲ್ಲಿ ನಡೆಯುವ ಒಂದು ಘಟನೆ ಮೇಲೆ ಇಡೀ ಸಿನಿಮಾ ನಡೆಯುತ್ತದೆ.

ಮಿನಲ್ ಅರೋರಾ (ತಾಪ್ಸಿ ಪನ್ನು), ಫಲಕ್ ಅಲಿ (ಕೃತಿ ಕುಲ್ಹರಿ) ಮತ್ತು ಆ್ಯಂಡ್ರಿಯಾ (ಆ್ಯಂಡ್ರಿಯಾ ತಾರೆಂಗ್) ಸಾಧಾರಣ ವೃತ್ತಿಯ, ಇಂಡಿಪೆಂಡೆಂಟ್ ಯುವತಿಯರು. ಹೀಗೇ ಒಂದು ವೀಕೆಂಡ್ ರಾಕ್ ಪಾರ್ಟಿಯಲ್ಲಿ ಇವರಿಗೆ ರಾಜ್‌ವೀರ್ ಸಿಂಗ್ (ಅಂಗದ್ ಬೇಡಿ) ಹಾಗೂ ಇತರ ಇಬ್ಬರು ಯುವಕರ ಪರಿಚಯವಾಗುತ್ತದೆ. ಆರೂ ಜನ ಒಟ್ಟಿಗೆ ತಿಂದು, ಕುಡಿದು ಖುಷಿಪಡುತ್ತಾರೆ. ಇಷ್ಟಕ್ಕೇ ಸುಮ್ಮನಾಗದ ರಾಜ್‌ವೀರ್, ಮಿನಲ್ ಜತೆ ಅಸಭ್ಯವಾಗಿ ವರ್ತಿಸುತ್ತಾನೆ. ಅವನಿಂದ ತಪ್ಪಿಸಿಕೊಳ್ಳಲು ಆಕೆ ಬಾಟಲ್‌ನಿಂದ ಹೊಡೆದ ಏಟು ಅವನ ಕಣ್ಣ ಬಳಿ ಬೀಳುತ್ತದೆ. ಇಬ್ಬರು ಗೆಳೆಯರು ರಾಜ್‌'ವೀರ್‌'ನನ್ನ ಆಸ್ಪತ್ರೆಗೆ ಸೇರಿಸುತ್ತಾರೆ. ಮೂವರೂ ಯುವತಿಯರು ಮನೆಗೆ ಮರಳುತ್ತಾರೆ.

ಆದರೆ ಪ್ರಭಾವಿ ರಾಜಕಾರಣಿಯ ಮಗ ರಾಜ್‌ವೀರ್, ವಿಷಯವನ್ನು ಇಷ್ಟಕ್ಕೇ ಬಿಡದೆ ಯುವತಿಯರ ಮೇಲೆ ಕೇಸ್ ಹಾಕಿ ಬೀದಿಗೆ ತರಲು ಮುಂದಾಗುತ್ತಾನೆ. ಈ ನಡುವೆ ಆತನ ಸ್ನೇಹಿತರು ಮಿನಲ್‌ಗೆ ಕರೆ ಮಾಡಿ ಬೆದರಿಸುತ್ತಾರೆ. ಕಾರಣ, ಮಿನಲ್ ಪೊಲೀಸ್ ಠಾಣೆಯಲ್ಲಿ ರಾಜ್‌ವೀರ್ ಹಾಗೂ ಇತರ ಇಬ್ಬರ ಮೇಲೆ ಕೇಸು ದಾಖಲಿಸುತ್ತಾಳೆ. ಇದನ್ನು ತಿಳಿದ ರಾಜ್‌ವೀರ್ ತನ್ನ ತಂದೆಯ ಪ್ರಭಾವ ಬಳಸಿ ಯುವತಿಯರ ವಿರುದ್ಧ ಕೊಲೆ ಯತ್ನ ಮತ್ತು ವೇಷ್ಯಾವಾಟಿಕೆ ಕೇಸು ದಾಖಲಿಸುತ್ತಾರೆ. ಸಹಜವಾಗೇ ಯುವತಿಯರ ಕೇಸ್ ಮೂಲೆಗೆಸೆಯುವ ಪೊಲೀಸರು ಪ್ರಭಾವಿಯ ಪರ ನಿಲ್ಲುತ್ತಾರೆ. ಮಿನಲ್ ಜೈಲು ಸೇರುತ್ತಾಳೆ. ಕೇಸು ಕೋರ್ಟ್ ಮೆಟ್ಟಿಲೇರುತ್ತದೆ.

ಮಿನಲ್ ಜೈಲು ಸೇರಿದ ನಂತರ ಮುಂದೇನು ಮಾಡಬೇಕೆಂದು ತಿಳಿಯದೆ ಕಂಗಾಲಾದ ಯುವತಿಯರ ನೆರವಿಗೆ ಬರುವುದು ಬೈಪೊಲಾರ್ ಡಿಸಾರ್ಡರ್ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಖ್ಯಾತ ವಕೀಲ ದೀಪಕ್ ಸೆಹಗಲ್ (ಅಮಿತಾಭ್ ಬಚ್ಚನ್). ತನ್ನ ಕ್ಲೆ ಂಟರ್ ಪರವಾಗಿ ವಕಾಲತ್ತು ವಹಿಸುವ ಸೆಹಗಲ್, ಕ್ರಾಸ್ ಎಕ್ಸಾಮಿನ್‌ಗೂ ಹೆಚ್ಚು ಹೇಳುವುದು ಸಮಾಜದಲ್ಲಿ ಮಹಿಳೆಯರು ಹೇಗಿರಬೇಕು. ಅವರ ನಡವಳಿಕೆಗಳಿಗಿರುವ ಕಟ್ಟಳೆಗಳೇನು ಎಂಬುದನ್ನ. ಆ ಮೂಲಕ ಸಮಾಜನದ ನಿಲುವನ್ನ ಟೀಕಿಸುತ್ತಾರೆ. ಈ ವಯಸ್ಸಾದ ವಕೀಲ ಯುವತಿಯರಿಗೆ ನ್ಯಾಯ ಕೊಡಿಸುತ್ತಾನಾ ಎಂದು ತಿಳಿಯಲು ಸಿನಿಮಾ ನೋಡಬೇಕು.

ಲಾಯರ್ ಪಾತ್ರದಲ್ಲಿ ಅಮಿತಾಭ್, ಸಂತ್ರಸ್ತೆ ಪಾತ್ರದಲ್ಲಿ ತಾಪ್ಸಿ ನಟನೆ ನೋಡುಗರನ್ನ ಭಾವುಕರನ್ನಾಗಿಸಿದರೆ, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಪಿಯೂಶ್ ಮಿಶ್ರಾ ಕೆಂಡದಂಥ ಕೋಪ ತರಿಸುತ್ತಾರೆ. ಆಮಟ್ಟಿಗೆ ಎಲ್ಲರ ನಟನೆ ಅದ್ಭುತ. ತನ್ನ ಮನೆ ಹೆಣ್ಣುಮಕ್ಕಳು ಸಂಪ್ರದಾಯಸ್ಥರು. ಉಳಿದ ಹೆಣ್ಮಕ್ಕಳೆಲ್ಲಾ ಹೆಂಗೆಂಗೋ ಎಂದು ಭಾವಿಸುವ ಪುರುಷ ಪ್ರಧಾನ ಸಮಾಜ ಮತ್ತು ಸಮಾಜದ ಈ ಭಾವನೆಯ ಕೇಂದ್ರ ಬಿಂದುವಾಗಿರುವ ಮಹಿಳೆಯರು ತಪ್ಪದೇ ಒಮ್ಮೆ ಪಿಂಕ್ ನೋಡಲೇಬೇಕು.

click me!