
ಬೆಂಗಳೂರಿನಲ್ಲಿ ನಡೆದ ಅಮಾನವೀಯ ಹಲ್ಲೆಯಿಂದಾಗಿ ಪ್ರಾಣ ಬಿಟ್ಟ ಪ್ರಾಣಿಪ್ರೇಮಿ ಸುನೀತಾ ಬಗ್ಗೆ ನಟಿ ಪಾರ್ವತಿ ತಿರುವೊತ್ತು ಮಾತನಾಡಿದ್ದಾರೆ. ಲೈಂಗಿಕ ದೌರ್ಜನ್ಯದ ಯತ್ನವನ್ನು ವಿರೋಧಿಸಿದ್ದಕ್ಕೆ ಸುನೀತಾ ಕೊಲೆಯಾದರು ಎಂದು ತಿಳಿದಾಗಿನಿಂದ ನನಗೆ ಅಳು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಪಾರ್ವತಿ ಹೇಳಿದ್ದಾರೆ. ಕೊಲೆಗಾರನನ್ನು ಇನ್ನೂ ಯಾಕೆ ಬಂಧಿಸಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.
"ಸುನೀತಾ ಸುಮ್ಮನೆ ಸಾಯಲಿಲ್ಲ. ಅವಳನ್ನು ಕೊಲೆ ಮಾಡಲಾಗಿದೆ. ನಾನು ಭೇಟಿಯಾದವರಲ್ಲಿಯೇ ಅತ್ಯಂತ ಪ್ರೀತಿಯ, ದಯೆಯುಳ್ಳ ಮಹಿಳೆ ಆಕೆ. ತನ್ನ ಕೊಲೆಗಡುಕನ ಲೈಂಗಿಕ ದೌರ್ಜನ್ಯ ಯತ್ನವನ್ನು ವಿರೋಧಿಸುವಾಗ ಆಕೆ ಕೊಲೆಯಾದಳು ಎಂದು ತಿಳಿದಾಗಿನಿಂದ ನನಗೆ ಅಳು ತಡೆಯಲು ಆಗುತ್ತಿಲ್ಲ. ಆಕೆಯ ಉದ್ಯೋಗದಾತ ಯಾರು? ಯಾರನ್ನು ಇನ್ನೂ ಬಂಧಿಸಿ ನ್ಯಾಯದ ಮುಂದೆ ತಂದಿಲ್ಲ? ಆದರೂ ನಮಗೆ ಈ ಬಗ್ಗೆ ಯಾವುದೇ ಆಶ್ಚರ್ಯ ಇದೆಯೇ?
ಸುನೀತಾಗೆ ಪ್ರೀತಿಯ ಗಂಡ ಮತ್ತು 4 ವರ್ಷದ ಮಗನಿದ್ದ. ಇವರ ಜೊತೆಗೆ, 167 ನಾಯಿಗಳನ್ನು ಆಕೆ ರಕ್ಷಿಸಿ ಪೋಷಿಸುತ್ತಿದ್ದಳು. ನಾಯಿಗಳನ್ನು ರಕ್ಷಿಸಲು ಹೋಗಿ ಈ ಹಿಂದೆ ಆಕೆ ಹಲವು ಬಾರಿ ಹಲ್ಲೆಗೊಳಗಾಗಿದ್ದಳು. ಚಾಕು ಇರಿತ, ತೀವ್ರ ಸುಟ್ಟಗಾಯಗಳನ್ನೆಲ್ಲಾ ಆಕೆ ಮೆಟ್ಟಿನಿಂತಿದ್ದಳು. ಕೊಲೆಗಾರನು ತನ್ನ ಬೀದಿ ನಾಯಿಗಳ ಆಶ್ರಮದಲ್ಲಿ ಉತ್ತಮ ಸಂಬಳದ ಆಫರ್ ನೀಡಿದ್ದ. ಇದರಿಂದ ತನ್ನ ಕುಟುಂಬ ಮತ್ತು ತಾನು ಸಾಕುತ್ತಿದ್ದ ನಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಸುನೀತಾ ಆ ಕೆಲಸ ಒಪ್ಪಿಕೊಂಡಿದ್ದಳು. ಆಕೆಯ ಈ ದಯೆಯೇ ಅವಳ ಸಾವಿಗೆ ಕಾರಣವಾಯಿತೇ? ನನಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ," ಎಂದು ಪಾರ್ವತಿ ನೋವು ತೋಡಿಕೊಂಡಿದ್ದಾರೆ.
ಕಳೆದ ಭಾನುವಾರ ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಲೈಂಗಿಕ ದೌರ್ಜನ್ಯವನ್ನು ತಡೆಯಲು ಯತ್ನಿಸಿದಾಗ ಸುನೀತಾ ಮೇಲೆ ಹಲ್ಲೆ ನಡೆಸಲಾಗಿತ್ತು. ದೇಹದಾದ್ಯಂತ ಗಾಯಗಳಾಗಿ ವೆಂಟಿಲೇಟರ್‌ನಲ್ಲಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಶೆಲ್ಟರ್ ಹೋಂ ಮಾಲೀಕ, ಮಲಯಾಳಿ ದೀಪಕ್ ಕೃಷ್ಣ, ಸುನೀತಾಳ ತಲೆಯನ್ನು ಗೋಡೆ ಮತ್ತು ಕಪಾಟಿಗೆ ಹಲವು ಬಾರಿ ಬಡಿದಿದ್ದ. ನಂತರ ಕೆಳಗೆ ಬಿದ್ದ ಆಕೆಯ ಎದೆಯ ಮೇಲೆ ಪದೇ ಪದೇ ತುಳಿದಿದ್ದ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.