ಪಾರ್ಚ್ಡ್ ಸಿನಿಮಾ ವಿಮರ್ಶೆ: ಹೆಣ್ಣಿನ ಶುಷ್ಕ ಬದುಕಿಗೆ ಓಯಸಿಸ್'ನಂತೆ ಹೊಳೆಯುವ ಪಾರ್ಚ್ಡ್

By Internet DeskFirst Published Sep 25, 2016, 2:18 PM IST
Highlights

ಹೆಣ್ಣನ್ನು ಭೋಗದ ಸಂಕೇತಗೊಳಿಸಿರುವ ಬಾಲಿವುಡ್ ಚಿತ್ರಗಳ ನಡುವೆ ಲೀನಾ ಯಾದವ್ ಅವರ ಈ ಚಿತ್ರ ಹೊಸತನದ ಹಾದಿಯತ್ತ ಮುಖ ಮಾಡಿದೆ.

- ಕುಮಾರ್ ಎಸ್., ಕನ್ನಡಪ್ರಭ

ಚಿತ್ರ: ಪಾರ್ಚ್ಡ್
ಭಾಷೆ: ಹಿಂದಿ
ತಾರಾಗಣ: ತನ್ನಿಷ್ಟಾ ಚಟರ್ಜಿ, ರಾಧಿಕಾ ಆಪ್ಟೆ, ಸುರ್ವೀನ್ ಚಾವ್ಲಾ, ಅಡಿಲ್ ಹುಸೇನ್, ಲೆಹರ್ ಖಾನ್ ಸಯಾನಿ ಗುಪ್ತಾ
ನಿರ್ದೇಶನ: ಲೀನಾ ಯಾದವ್,
ನಿರ್ಮಾಣ: ಅಜಯ್ ದೇವಗನ್

Latest Videos

ಕಳೆದ ವಾರ ಬಿಡುಗಡೆಯಾದ ಅನಿರುದ್ಧ್ ಚೌಧರಿ ನಿರ್ದೇಶನದ ಚಿತ್ರ ‘ಪಿಂಕ್’ ಹೆಣ್ಣಿನ ಆಯ್ಕೆಯ ಧ್ವನಿಯನ್ನು ಮೊಳಗಿಸಿತ್ತು. ಅದರ ಇನ್ನೊಂದು ಮುಖವೆನ್ನುವಂತೆ ಲೀನಾ ಯಾದವ್ ನಿರ್ದೇಶನದ ‘ಪಾರ್ಚ್ಡ್’ ಚಿತ್ರ ತೆರೆಗೆ ಬಂದಿದೆ. ಪಿಂಕ್ ಶಿಕ್ಷಿತ, ನಗರದ ಯುವತಿಯರ ಸ್ನೇಹ, ಪ್ರೀತಿ, ಸಂಬಂಧ ಮತ್ತು ಲೈಂಗಿಕತೆ ಆಯ್ಕೆಗಳ ಸ್ವಾತಂತ್ರ್ಯ ಕುರಿತು ಚರ್ಚಿಸುತ್ತದೆ. ನಗರವಾಸಿಗಳು ಈ ವಿಷಯವನ್ನು ಮಾತನಾಡುವಷ್ಟು ತಿಳಿವಳಿಕೆ ಮತ್ತು ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಆದರೆ ಇಂಥ ಮುಕ್ತ ಪರಿಸರದಿಂದ ದೂರ ಬದುಕುತ್ತಿರುವ ಸದಾ ಮುಸುಕಿನಲ್ಲೇ ಇರಬೇಕಾದ ಹಳ್ಳಿ ಮಹಿಳೆಯರ ಬದುಕು ಹೇಗಿರಬಹುದು?

ಈ ಪ್ರಶ್ನೆಗೆ ಲೀನಾ ಯಾದವ್ ಉತ್ತರ ಹುಡುಕಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ರಾಜಸ್ಥಾನದ ಹಳ್ಳಿಯೊಂದರಲ್ಲಿ ಬದುಕುವ ನಾಲ್ಕು ಭಿನ್ನ ವಯೋಮಾನದ ಮಹಿಳೆಯರ ಕಥೆಯೇ ಪಾರ್ಚ್ಡ್. ವಿಧವೆಯಾದ ರಾಣಿ, ಮದುವೆಯಾದರೂ ಇನ್ನೂ ತಾಯಿಯಾಗದ ಲಜ್ಜೋ, ದೇಹವನ್ನು ಇತರರ ರಂಜನೆಗೆ ಒಡ್ಡಿಕೊಳ್ಳುವ ಬಿಜ್ಲಿ, ರಾಣಿಯ ಮಗನ ಕೈಹಿಡಿದು ಬರುವ ಪುಟ್ಟ ಹುಡುಗಿಯರು ತಮ್ಮ ಸ್ವಾತಂತ್ರ್ಯಕ್ಕೆ ಹೇಗೆ ಹಂಬಲಿಸುತ್ತಾರೆ, ಹೇಗೆ ಕಟ್ಟುಪಾಡುಗಳನ್ನು ಮೀರಿ ರೆಕ್ಕೆ ಬಿಚ್ಚಿ ಹಾರುತ್ತಾರೆ ಎಂಬುದನ್ನು ಕಟ್ಟಿಕೊಡುತ್ತಾರೆ.

ಲೈಂಗಿಕತೆಯ ಸುತ್ತಲೂ ಸುತ್ತುವ ಇಲ್ಲಿನ ಕಥೆ ಗಂಡಿನ ಆಕ್ರಮಣ, ಯಜಮಾನ್ಯವನ್ನು ಧಿಕ್ಕರಿಸುವ ದಿಟ್ಟತನ ತೋರುತ್ತವೆ. ರಾಣಿ ವಿಧವೆ, ಆದರೆ ಮೊಬೈಲ್‌ನಲ್ಲಿ ಅನಾಮಿಕ ಗಂಡಿನೊಂದಿಗೆ ಮಾತಾಡುತ್ತಾ, ತನ್ನ ಮನದಾಸೆಯನ್ನು ಹಂಚಿಕೊಂಡು ಸಂತೈಸಿಕೊಳ್ಳುತ್ತಾಳೆ, ಗಂಡನಿಂದ ದಿನವೂ ಹೊಡೆಸಿಕೊಳ್ಳುವ ಲಜ್ಜೊಗೆ ಮಗುವಾಗದೇ ಇದ್ದಾಗ, ಬಿಜಲಿ ಮೂಲಕ ಪರಪುರುಷನ ಸಂಗಕ್ಕೆ ಸಿದ್ಧಳಾಗುತ್ತಾಳೆ, ಗರ್ಭ ಧರಿಸುತ್ತಾಳೆ. ತನ್ನ ದೇಹವನ್ನು ನೃತ್ಯ ಮತ್ತು ರಂಜನೆಗೆ ಒಡ್ಡಿಕೊಳ್ಳುವ ಬಿಜಲಿ, ತನ್ನ ಇಚ್ಛೆಗೆ ವಿರುದ್ಧವಾಗಿ ಯಾರೊಂದಿಗೆ ಸಖ್ಯ ಬೆಳೆಸದ ತನ್ನ ಇಬ್ಬರು ಗೆಳತಿಯರಿಗೆ ಧೈರ್ಯ ತುಂಬುತ್ತಾ ಸ್ವತಂತ್ರದ ಆಸೆ ಬಿತ್ತುತ್ತಾ ತಾನೂ ತನ್ನ ವೃತ್ತಿಯಿಂದ ಬಿಡುಗಡೆಗೆ ಹಂಬಲಿಸುತ್ತಾಳೆ. ಇವರ ನಡುವೆ ಇರುವ ಪುಟ್ಟ ಹುಡುಗಿ ರಾಣಿಯ ಸೊಸೆ ಕೂಡ ತನ್ನ ಸಹಪಾಠಿ ಸ್ನೇಹಿತನ ಜೊತೆಗೆ ಹೊರಟು ಹೋಗುತ್ತಾಳೆ.

ಲೀನಾ ಒಂದೆಡೆ ಮಹಿಳೆಗಿರುವ ಆರ್ಥಿಕ ಸ್ವಾತಂತ್ರ್ಯದ ಸಾಧ್ಯತೆಯನ್ನು ತೋರುತ್ತಾ, ಆಧುನಿಕತೆ ನೀಡುವ ಆತ್ಮವಿಶ್ವಾಸ, ಪರ್ಯಾಯ ಆಲೋಚನೆಗಳ ಸಾಧ್ಯತೆಗಳನ್ನೂ ತೋರಿಸುತ್ತಾರೆ (ಮೊಬೈಲ್ ವೈಬ್ರೇಟರ್) ಇದೊಂದಿದ್ದರೆ ಗಂಡಿನ ಅಗತ್ಯವೇ ಇಲ್ಲ ಎಂದು ಲಜ್ಜೊ ಬಾಯಲ್ಲಿ ಹೇಳಿಸುತ್ತಾರೆ.

ಜನ್ಮಜಾತವಾದ ಧಾರ್ಷ್ಟ್ಯ, ಅಸಹಾಯಕತೆಯಲ್ಲಿ ಹುಟ್ಟುವ ಕ್ರೌರ್ಯದಿಂದ ಗಂಡಸರು ರಾಕ್ಷಸರಾಗಿ ಬಿಡುತ್ತಾರೆ ಎನ್ನುವುದನ್ನು ಲೀನಾ ಒತ್ತಿ ಹೇಳುತ್ತಾರೆ. ಅದಕ್ಕೇ ರಾಣಿ ಇನ್ನು ಹರೆಯಕ್ಕೆ ಕಾಲಿಟ್ಟು, ಮದುವೆಯಾದ ಆದ ತನ್ನ ಗುಲಾಬ್, ಕುಡಿದು, ವೇಶ್ಯೆಯರ ಸಂಗದಲ್ಲಿ ಕಳೆದು ಹೋಗುತ್ತಿರುವಾಗ, ಹೇಳುವ ಮಾತು ಸಿನಿಮಾದ ಒಂದು ಸಾಲಿನ ಘೋಷದಂತೆ ಕೇಳಿಸುತ್ತದೆ: ‘ಗಂಡಸಾಗುವುದು ಬಿಡು, ಮೊದಲು ಮನುಷ್ಯನಾಗು’.

ಕ್ಲೀಷೆಯ ಸೂತ್ರಗಳು, ಮಾತುಗಳಿಲ್ಲದೆ, ತೀರಾ ಖಾಸಗಿಯಾದ ಲೈಂಗಿಕ ವಿಚಾರಗಳನ್ನು ಹಳ್ಳಿಯ ಹೆಣ್ಣುಮಕ್ಕಳು ಮುಕ್ತವಾಗಿ ಮಾತನಾಡುತ್ತಾರೆನ್ನುವುದನ್ನು ಬಿಚ್ಚಿಡುತ್ತಾ, ಹೆಣ್ಣು ತನ್ನ ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ, ಅರಸುವ ಪರಿಯನ್ನು ಪಾರ್ಚ್ಡ್ ಅನಾವರಣ ಮಾಡುತ್ತದೆ.

ರಸಲ್ ಕಾರ್ಪೆಂಟರ್ ಅವರ ಸಿನಿಮಾಟೋಗ್ರಫಿ, ಹಿತೇಶ್ ಸೋನಿಕ್ ಅವರ ಹಿನ್ನೆಲೆಯ ಸಂಗೀತ ಚಿತ್ರ ಆಸ್ವಾದನೆಯನ್ನು ಹೆಚ್ಚಿಸುತ್ತವೆ. ಹೆಣ್ಣನ್ನು ಭೋಗದ ಸಂಕೇತಗೊಳಿಸಿರುವ ಬಾಲಿವುಡ್ ಚಿತ್ರಗಳ ನಡುವೆ ಲೀನಾ ಯಾದವ್ ಅವರ ಈ ಚಿತ್ರ ಹೊಸತನದ ಹಾದಿಯತ್ತ ಮುಖ ಮಾಡಿದೆ.

(ರೇಟಿಂಗ್ 4/5)

click me!