
ಮುಂಬೈ (ಜ.22): ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಕಳೆದ ವರ್ಷದ ಕೊನೆಯಲ್ಲಿ ತಮ್ಮ ವೈಯಕ್ತಿಕ ಜೀವನದಿಂದಾಗಿ ಸಾಕಷ್ಟು ಸುದ್ದಿಯಲ್ಲಿದ್ದರು. ಇನ್ನೇನು ಮದುವೆಯ ಹೊಸ್ತಿಲಲ್ಲಿ ಇದ್ದಾಗಲೇ ಪತಿಯಾಗಬೇಕಿದ್ದ ಪಲಾಶ್ ಮುಚ್ಚಾಲ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದರು. ಕೊನೆಗೆ ಈ ಮದುವೆ ನಡೆಯೋದೇ ಇಲ್ಲ ಎಂದಿದ್ದರು. ಸ್ಮೃತಿ ಜೀವನದಲ್ಲಿ ಆದ ಈ ವಿಚಾರದಿಂದ ಎಲ್ಲರೂ ಆಘಾತಗೊಂಡಿದ್ದರು. ಮದುವೆಯ ದಿನನೇ ಸ್ಮೃತಿ ಮಂಧನಾ ಅವರ ತಂದೆಗೆ ಹೃದಯಾಘಾತವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿಯೇ ವಿವಾಹದ ದಿನ ಆದ ಘಟನೆಯ ಬಗ್ಗೆ ಮಾಹಿತಿ ನೀಡಿ, ಮದುವೆ ಮುರಿದುಬಿದ್ದಿದ್ದನ್ನು ದೃಢಪಡಿಸಿದ್ದರು. ಈಗ ಪಲಾಶ್ ಮುಚ್ಚಾಲ್ ಅವರ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಿದ್ದು, ಅವರ ವಿರುದ್ಧ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಲಾಶ್ ಮುಚ್ಚಾಲ್ ವಿರುದ್ಧ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ಆರ್ಥಿಕ ವಂಚನೆಯ ದೂರು ದಾಖಲಾಗಿದೆ. ಸ್ಮೃತಿ ಮಂಧನಾ ಅವರ ಬಾಲ್ಯದ ಗೆಳೆಯ ವಿಜ್ಞಾನ್ ಮಾನೆ, ಪಲಾಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸಾಂಗ್ಲಿಯ ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ವಿಜ್ಞಾನ್ ಮಾನೆ, ಸಾಂಗ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪಲಾಶ್ ಮುಚ್ಚಾಲ್ ವಿರುದ್ಧ ಆರ್ಥಿಕ ವಂಚನೆ ದೂರು ದಾಖಲಿಸಿದ್ದಾರೆ. ಸಾಂಗ್ಲಿಯಲ್ಲಿ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಯುವಕ ವಿಜ್ಞಾನ್ ಮಾನೆ, ಸಂಗೀತ ನಿರ್ದೇಶಕ ಪಲಾಶ್ ಮುಚ್ಚಾಲ್ ವಿರುದ್ಧ ಒಟ್ಟು 40 ಲಕ್ಷ ರೂಪಾಯಿಗಳ ಆರ್ಥಿಕ ವಂಚನೆ ಆರೋಪ ಹೊರಿಸಿದ್ದಾರೆ. ಆರಂಭದಲ್ಲಿ ಅವರು 'ನಜರಿಯಾ' ಚಿತ್ರವನ್ನು ನಿರ್ದೇಶಿಸುವುದಾಗಿ ಮತ್ತು ಚಿತ್ರದ ನಿರ್ಮಾಪಕರಾಗಿ ಅದರಲ್ಲಿ ಹೂಡಿಕೆ ಮಾಡಬೇಕೆಂದು ಹೇಳಿದ್ದರು. ಚಿತ್ರವು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ನಂತರ, 25 ಲಕ್ಷ ರೂಪಾಯಿಗಳ ಹೂಡಿಕೆಯಲ್ಲಿ 12 ಲಕ್ಷ ರೂಪಾಯಿಗಳವರೆಗೆ ಸಂಭಾವನೆ ಪಡೆಯುವುದಾಗಿ ಪಲಾಶ್ ವಿಜ್ಞಾನ್ ಮಾನೆಗೆ ತಿಳಿಸಿದ್ದರು.
ಇದರ ನಡುವೆ, ವಿಜ್ಞಾನ್ ಮಾನೆ ತಮ್ಮ ದೂರಿನಲ್ಲಿ, ಈ ಚಿತ್ರದಲ್ಲಿ ತಮಗೂ ಕೆಲಸ ನೀಡುವುದಾಗಿ ಹೇಳಿದ್ದಾರೆ. ಪಲಾಶ್ ನನ್ನಿಂದ ಒಟ್ಟು 40 ಲಕ್ಷ ರೂಪಾಯಿಗಳನ್ನು ಕಾಲಕಾಲಕ್ಕೆ ಪಡೆದು ನನ್ನ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ವಿಜ್ಞಾನ್ ಮಾನೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಆರ್ಥಿಕ ವಂಚನೆಗೆ ಸಂಬಂಧಿಸಿದಂತೆ ವಿಜ್ಞಾನ್ ಮಾನೆ ಪಲಾಶ್ ಮುಚ್ಚಾಲ್ ವಿರುದ್ಧ ಐಪಿಸಿ 406, 420 ರ ಅಡಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿದಾಗ, ಅವರು ದೂರು ಮಾತ್ರ ದಾಖಲಿಸಿದ್ದಾರೆ ಮತ್ತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.