
ಪ್ರಧಾನಿ ನರೇಂದ್ರ ಮೋದಿ ಅವರ ನೋಟ್ ಬ್ಯಾನ್ ಬಿಸಿ ಸಾಮಾನ್ಯರಿಂದ ಒಳಗೊಂಡು ಶ್ರೀಮಂತರನ್ನು ಬಿಡದೆ ಕಾಡುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಜನರು ನಿತ್ಯದ ಖರ್ಚು ವೆಚ್ಚದ ಹಣಕ್ಕಾಗಿ ಬ್ಯಾಂಕ್'ಗಳ ಮುಂದೆ ಸರದಿ ಸಾಲಿನಲ್ಲಿ ನಿಂತುಕೊಂಡು ತಮ್ಮ ತೊಂದರೆಯನ್ನು ತೋರ್ಪಡಿಸಿಕೊಂಡರೆ, ಕಪ್ಪು ಹಣ ಹೊಂದಿರುವ ಕಾಳಧನಿಕರು ತೆರಿಗೆ ಹಣ ಕಟ್ಟದ ಹಣವನ್ನು ಹೇಗಪ್ಪ ಬಿಳಿ ಮಾಡಿಕೊಳ್ಳುವುದು ಎಂಬ ಧೀರ್ಘ ಚಿಂತನೆಯಲ್ಲಿದ್ದಾರೆ.
ಇದರ ನಡುವೆ ನೋಟ್ ಬ್ಯಾನ್ ಅಂಕುಶ ಚಿತ್ರರಂಗದವರನ್ನು ಬಿಟ್ಟಿಲ್ಲ. ನಟ,ನಿರ್ಮಾಪಕರು ತಮ್ಮ ಮುಂದಿನ ಯೋಜನೆಯನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಪರಿಪೂರ್ಣಗೊಂಡು ಬಿಡುಗಡೆ ಹಂತಕ್ಕೆ ಬಂದಿರುವ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಹೆದರುತ್ತಿದ್ದಾರೆ.
ದೊಡ್ಡ ದೊಡ್ಡ ಸ್ಟಾರ್'ಗಳ ಚಿತ್ರಗಳು ತಿಂಗಳುಗಳ ಕಾಲ ಮುಂದಕ್ಕೆ ಹೋಗುತ್ತಿವೆ. ಇದಕ್ಕೆ ದೊಡ್ಡ ಸ್ಟಾರ್'ಗಳ ಅಭಿನಯದ ಚಿತ್ರಗಳು ತಾಜಾ ಉದಾಹರಣೆ. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಸುದೀಪ್ ಅಭಿನಯದ ಹೆಬ್ಬುಲಿ, ಪುನೀತ್ ಅವರ ರಾಜ್ ಕುಮಾರ್ ಸಿನಿಮಾಗಳು ಜನವರಿ 3 ರಂದು ರಿಲೀಸಾಗುತ್ತಿವೆ. ಮತ್ತೊಬ್ಬ ಸ್ಟಾರ್ ದರ್ಶನ್ ನಟನೆಯ ಸಿನಿಮಾ ಚಕ್ರವರ್ತಿ ಕೂಡ ಫೆಬ್ರವರಿಯಲ್ಲಿ ತೆರೆ ಕಾಣಲಿದೆ.
ಸದ್ಯ ಡಿಸೆಂಬರ್'ನಲ್ಲಿ ಬಿಡುಗಡೆಯಾಗಲಿರುವುದು ಗೋಲ್ಡನ್ ಸ್ಟಾರ್ ಅಭಿನಯದ ಸುಂದರಾಂಗ ಜಾಣ ಮತ್ತು ಅಜಯ್ ರಾವ್, ಲೂಸ್ ಮಾದ ಯೋಗಿ ಹಾಗೂ ಡಾರ್ಲಿಂಗ್ ಕೃಷ್ಣ ನಟಿಸಿರುವ ಜಾನ್ ಜಾನಿ ಜನಾರ್ದನ್ ಚಿತ್ರಗಳು ಮಾತ್ರ. ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿನ ಗಳಿಕೆ ಶೇ.30 ರಷ್ಟು ಕಡಿಮೆಯಾಗಿದೆ. ಮಲ್ಟಿಫ್ಲೆಕ್ಸ್'ಗಳಲ್ಲೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ. ಹಲವು ನಿರ್ಮಾಪಕರು ಸಹ ಆರ್ಥಿಕ ವ್ಯವಸ್ಥೆ ಸರಿಯಾಗುವ ತನಕ ತಮ್ಮ ಹೊಸ ಯೋಜನೆಗಳನ್ನು ಕೈಬಿಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.