
ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ಕೇವಲ ಯಶಸ್ಸು ಕಾಣುವುದಿಲ್ಲ, ಬದಲಿಗೆ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತವೆ. ಅಂಥ ಸಿನಿಮಾಗಳ ಸಾಲಿನಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ 'ನಾಗರಹಾವು' ಚಿತ್ರಕ್ಕೆ ವಿಶೇಷ ಸ್ಥಾನವಿದೆ. ಈ ಸಿನಿಮಾ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ನಾಯಕನಾಗಿ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟರೆ, ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಜಲೀಲ ಎಂಬ ಪಾತ್ರದ ಮೂಲಕ ಚಿತ್ರರಂಗದಲ್ಲಿ ಹೊಸ ಗುರುತನ್ನು ನೀಡಿತು. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರಾದ ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ನಡುವಿನ ಆಪ್ತ ಸ್ನೇಹಕ್ಕೂ ಇದೇ ಸಿನಿಮಾ ಮುನ್ನುಡಿ ಬರೆಯಿತು.
'ನಾಗರಹಾವು' ಸಿನಿಮಾದಲ್ಲಿ ಜಲೀಲ ಎಂಬ ಪಾತ್ರಕ್ಕೆ ಸೂಕ್ತವಾದ ನಟನ ಹುಡುಕಾಟದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇದ್ದರು. ನಾಯಕಿಯರಾದ ಆರತಿ ಅವರನ್ನು ಚುಡಾಯಿಸುವ, ಸ್ವಲ್ಪ ಪುಂಡನ ಸ್ವಭಾವದ ಯುವಕನ ಪಾತ್ರ ಅದಾಗಿತ್ತು. ಈ ಪಾತ್ರಕ್ಕೆ ವಿಭಿನ್ನ ಲುಕ್ ಮತ್ತು ಖಡಕ್ ವ್ಯಕ್ತಿತ್ವವಿರುವ ನಟನ ಅಗತ್ಯವಿತ್ತು. ಆ ಸಮಯದಲ್ಲಿ ಅಂಬರೀಷ್ ಅವರಿಗೆ ಚಿತ್ರರಂಗದ ನಂಟು ಬೆಳೆದಿತ್ತು. ಆದರೆ ದೊಡ್ಡ ಮಟ್ಟದ ಗುರುತು ಸಿಕ್ಕಿರಲಿಲ್ಲ. ನಟನಾಗುವ ಅವಕಾಶದ ಬಗ್ಗೆ ಸ್ನೇಹಿತರ ಮೂಲಕ ತಿಳಿದುಕೊಂಡ ಅವರು ಮೊದಲು ಆಡಿಷನ್ಗೆ ಹೋಗಲು ಹಿಂದೇಟು ಹಾಕಿದ್ದರಂತೆ. ಪುಟ್ಟಣ್ಣ ಕಣಗಾಲ್ ಅವರ ಶಿಸ್ತಿನ ಬಗ್ಗೆ ತಿಳಿದಿದ್ದ ಅಂಬರೀಷ್ ಅವರನ್ನು ಸ್ನೇಹಿತರು ಒತ್ತಾಯಪೂರ್ವಕವಾಗಿ ಆಡಿಷನ್ಗೆ ಕರೆದುಕೊಂಡು ಹೋಗಿದ್ದರು.
ಅಂಬರೀಷ್ ಅವರ ಲುಕ್ ಮತ್ತು ಖಡಕ್ ಸ್ಟೈಲ್ ಪುಟ್ಟಣ್ಣ ಕಣಗಾಲ್ ಅವರಿಗೆ ಇಷ್ಟವಾಗಿತ್ತು. ಅಂಬರೀಷ್ ಅವರೇ ಹೇಳಿಕೊಂಡಿರುವ ಪ್ರಕಾರ, ಅವರನ್ನು ನೋಡಲು ಕರೆಸಿದಾಗ ರ್ಯಾಂಪ್ ಮೇಲೆ ನಡೆದುಕೊಂಡು ಬಂದು ಡೈಲಾಗ್ ಹೇಳುವಂತೆ ಸೂಚಿಸಲಾಗಿತ್ತು. ಅಂದಿನ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರ ಸ್ಟೈಲ್ ಜನಪ್ರಿಯವಾಗಿದ್ದರಿಂದ, ಅಂಬರೀಷ್ ಅವರ ಲುಕ್ ಕೂಡ ಗಮನ ಸೆಳೆದಿತ್ತು. ಅವರ ಅಭಿನಯ ಮತ್ತು ಡೈಲಾಗ್ ಹೇಳುವ ರೀತಿಯನ್ನು ಮೆಚ್ಚಿದ ಪುಟ್ಟಣ್ಣ ಜಲೀಲನ ಪಾತ್ರಕ್ಕೆ ಆಯ್ಕೆ ಮಾಡಿದರು. ಈ ಪಾತ್ರಕ್ಕಾಗಿ ಅಂಬರೀಷ್ ಅವರಿಗೆ 500 ರೂಪಾಯಿ ಸಂಭಾವನೆ ಸಿಕ್ಕಿತ್ತು ಎಂದು ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿದ್ದರು. 'ನಾಗರಹಾವು' ಅವರ ಅಭಿನಯದ ಮೊದಲ ಸಿನಿಮಾ ಅಲ್ಲದಿದ್ದರೂ, ಮೊದಲು ಬಿಡುಗಡೆಯಾಗಿ ಅವರಿಗೆ ದೊಡ್ಡ ಗುರುತನ್ನು ತಂದುಕೊಟ್ಟ ಸಿನಿಮಾ ಇದೇ ಆಗಿತ್ತು.
'ನಾಗರಹಾವು' ಚಿತ್ರದ ಮೂಲಕವೇ ವಿಷ್ಣುವರ್ಧನ್ ಮತ್ತು ಅಂಬರೀಷ್ ಮೊದಲ ಬಾರಿಗೆ ಮುಖಾಮುಖಿಯಾದರು. ಸಿನಿಮಾದಲ್ಲಿ ವಿಷ್ಣುವರ್ಧನ್ ರಾಮಾಚಾರಿ ಪಾತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡರೆ, ಅಂಬರೀಷ್ ಜಲೀಲನ ಪಾತ್ರದಲ್ಲಿ ಖಳನಟನಾಗಿ ಮಿಂಚಿದ್ದರು. ಚಿತ್ರದ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆಯತೊಡಗಿತು. ವಿಷ್ಣುವರ್ಧನ್ ಅವರ ಹಾಸ್ಯಪ್ರಜ್ಞೆ ಮತ್ತು ಸ್ನೇಹಪರ ಸ್ವಭಾವ ಅಂಬರೀಷ್ ಅವರಿಗೆ ಬಹಳ ಇಷ್ಟವಾಗಿತ್ತು. ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಇಬ್ಬರೂ ಒಂದೇ ಕೋಣೆಯಲ್ಲಿ ಉಳಿದುಕೊಳ್ಳುವ ಸಂದರ್ಭವೂ ಬಂದಿತ್ತು. ಈ ಒಡನಾಟ ಅವರ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ನಂತರ ಚಿತ್ರೀಕರಣ ಬೆಂಗಳೂರಿಗೆ ಸ್ಥಳಾಂತರವಾದಾಗಲೂ ಅಂಬರೀಷ್, ವಿಷ್ಣುವರ್ಧನ್ ಅವರ ಮನೆಗೆ ಹೋಗಿ ಸಮಯ ಕಳೆಯುತ್ತಿದ್ದರು. ಇಬ್ಬರೂ ಗಂಟೆಗಟ್ಟಲೆ ಹರಟೆ ಹೊಡೆಯುತ್ತಾ, ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಾ ಖುಷಿಯಿಂದ ಇರುತ್ತಿದ್ದರು.
ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ವ್ಯಕ್ತಿತ್ವಗಳು ವಿಭಿನ್ನವಾಗಿದ್ದವು. ವಿಷ್ಣುವರ್ಧನ್ ಶಾಂತ ಸ್ವಭಾವದವರಾಗಿದ್ದರೆ, ಅಂಬರೀಷ್ ತಮ್ಮ ನೇರ ನಡೆನುಡಿ, ತುಂಟತನ ಮತ್ತು ಜಾಲಿ ಸ್ವಭಾವದಿಂದ ಗುರುತಿಸಿಕೊಂಡಿದ್ದರು. ಆದರೆ ಈ ಭಿನ್ನತೆ ಅವರ ಸ್ನೇಹಕ್ಕೆ ಎಂದಿಗೂ ಅಡ್ಡಿಯಾಗಲಿಲ್ಲ. 'ನಾಗರಹಾವು' ಚಿತ್ರದ ಮೊದಲ ಪ್ರಿಂಟ್ ಪ್ರದರ್ಶನದ ವೇಳೆ ಚಿತ್ರವನ್ನು ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದ ಸುದ್ದಿಯನ್ನು ಅಂಬರೀಷ್ ಅವರು ವಿಷ್ಣುವರ್ಧನ್ ಅವರಿಗೆ ತಿಳಿಸಿದ್ದರಂತೆ. ಸಿನಿಮಾ ಬಿಡುಗಡೆಯಾದ ಬಳಿಕ ಇಬ್ಬರೂ ಚಿತ್ರಮಂದಿರಗಳಿಗೆ ತೆರಳಿ ಪ್ರೇಕ್ಷಕರ ಪ್ರತಿಕ್ರಿಯೆ ಗಮನಿಸುತ್ತಿದ್ದರು ಎಂಬುದನ್ನೂ ಅವರ ಸ್ನೇಹದ ನೆನಪುಗಳಲ್ಲಿ ಉಲ್ಲೇಖಿಸಲಾಗಿದೆ.
ಮುಂದೆ ಇಬ್ಬರೂ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದರು. ಅದರಲ್ಲೂ 2001ರಲ್ಲಿ ಬಿಡುಗಡೆಯಾದ 'ದಿಗ್ಗಜರು' ಚಿತ್ರದಲ್ಲಿ ಸ್ನೇಹಿತರಾಗಿ ಕಾಣಿಸಿಕೊಂಡ ಇವರ ಜೋಡಿಯನ್ನು ಪ್ರೇಕ್ಷಕರು ಬಹಳ ಇಷ್ಟಪಟ್ಟರು.
ವಿಷ್ಣುವರ್ಧನ್ 2009ರಲ್ಲಿ ನಿಧನರಾದಾಗ ಅಂಬರೀಷ್ ತಮ್ಮ ಆತ್ಮೀಯ ಗೆಳೆಯನ ಅಂತ್ಯಕ್ರಿಯೆಯ ಜವಾಬ್ದಾರಿಗಳಲ್ಲಿ ಮುಂಚೂಣಿಯಲ್ಲಿದ್ದರು. ಅವರ ಸ್ನೇಹ ಕೇವಲ ಸಿನಿಮಾ ಸೆಟ್ಗೆ ಸೀಮಿತವಾಗಿರಲಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಹೀಗೆ 'ನಾಗರಹಾವು' ಸಿನಿಮಾ ಒಂದೆಡೆ ಕನ್ನಡ ಚಿತ್ರರಂಗಕ್ಕೆ ಇಬ್ಬರು ದಿಗ್ಗಜರನ್ನು ನೀಡಿದರೆ, ಮತ್ತೊಂದೆಡೆ ಇಂದಿಗೂ ಅಭಿಮಾನಿಗಳು ನೆನಪಿಸಿಕೊಳ್ಳುವ ಅಪರೂಪದ ಸ್ನೇಹವೊಂದಕ್ಕೂ ಕಾರಣವಾಯಿತು. ಜಲೀಲನಾಗಿ ಬಂದ ಅಂಬರೀಷ್ ಮುಂದೆ ರೆಬೆಲ್ ಸ್ಟಾರ್ ಆಗಿ ಬೆಳೆದರು. ರಾಮಾಚಾರಿಯಾಗಿ ಮಿಂಚಿದ ವಿಷ್ಣುವರ್ಧನ್ ಸಾಹಸಸಿಂಹನಾಗಿ ಕನ್ನಡಿಗರ ಮನದಲ್ಲಿ ಶಾಶ್ವತ ಸ್ಥಾನ ಪಡೆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.